ನೋಣದ ಕುರಿತು ಈಗಾ ಸಿನಿಮಾ ಸೇರಿದಂತೆ ಪ್ರಾಣಿ ಪಕ್ಷಿಗಳ ಕುರಿತ ಹಲವು ಸಿನಿಮಾಗಳು ಸದ್ದು ಮಾಡಿದೆ. ಇದೀಗ ಕಾಗೆ ಕುರಿತ ವಿಶೇಷ ಸಿನಿಮಾ ರಾವೆನ್ ಟ್ರೇಲರ್ ಅನಾವರಣಗೊಂಡಿದೆ. ಏನಿದು ಹೊಸ ಕತೆ?

ಬೆಂಗಳೂರು (ಅ.01) ಕನ್ನಡದಲ್ಲಿ ವಿವಿಧ ಪ್ರಾಣಿ ಹಾಗೂ ಪಕ್ಷಿಗಳನ್ನು ಕೇಂದ್ರವಾಗಿಟ್ಟಿಕೊಂಡು ನಿರ್ಮಾಣವಾಗಿರುವ ಸಾಕಷ್ಟು ಚಿತ್ರಗಳು ಬಂದಿದೆ. ಆದರೆ, ಇಲ್ಲಿಯವರೆಗೂ ಕಾಗೆಯನ್ನು ಪ್ರಧಾನವಾಗಿಟ್ಟಿಕೊಂಡು ಮಾಡಿರುವ ಚಿತ್ರ ಹೆಚ್ಚು ಬಂದಿಲ್ಲ. ವಿಶ್ವ ಪ್ರೊಡಕ್ಷನ್ಸ್ ಲಾಂಛನದಲ್ಲಿ ವಿಶ್ವನಾಥ್ ಜಿ.ಪಿ ಅವರು "ರಾವೆನ್" ಚಿತ್ರವನ್ನು ನಿರ್ಮಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಭರವಸೆಯ ನಿರ್ಮಾಣ ಸಂಸ್ಥೆಯಾಗಿ ವಿಶ್ವ ಪ್ರೊಡಕ್ಷನ್ಸ್ ಹೆಜ್ಜೆ ಇಟ್ಟಿದೆ. ವೇದ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಕಾಗೆಯೇ ನಾಯಕ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಹಾಗೂ ಶೀರ್ಷಿಕೆ ಗೀತೆ ಅನಾವರಣ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈ ಚಿತ್ರದ ಟ್ರೇಲರ್ ಅನಾವರಣ ಮಾಡಿದರು

ಪಿತೃಪಕ್ಷ ಸಂದರ್ಭದಲ್ಲೇ ಕಾಗೆ ಕುರಿತ ಸಿನಿಮಾ ಟ್ರೇಲರ್ ರಿಲೀಸ್

ಕಾಗೆಯ ಕುರಿತ ಈ ಸಿನಿಮಾದ ಕತೆ, ಹೆಸರು ಎಲ್ಲವೂ ಆಕರ್ಷಕವಾಗಿದೆ. ಪಿತೃಪಕ್ಷ ಆರಂಭವಾಗಿದೆ. ಇದರ ನಡುವೆ ಕಾಗೆ ಕುರಿತ ಸಿನಿಮಾದ ಟ್ರೇಲರ್ ಅನಾವರಣಗೊಂಡಿರುವುದು ಸೂಕ್ತವಾಗಿದೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಧ್ರುವ ಸರ್ಜಾ ಹಾರೈಸಿದ್ದಾರೆ. ಡಿ.ಎಸ್ ಮ್ಯಾಕ್ಸ್ ನ ದಯಾನಂದ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ - ನಿರ್ಮಾಪಕ ಭಾ.ಮ ಹರೀಶ್ ಹಾಗೂ ರಶ್ಮಿ ಅವರು ಶೀರ್ಷಿಕೆ ಗೀತೆ ಬಿಡುಗಡೆ ಮಾಡಿದರು. ಕಾಗೆ ಈ ಚಿತ್ರದ ಪ್ರಮುಖ ಪಾತ್ರಧಾರಿ. ಕಾಗೆಗೂ,‌ ಪಿತೃಪಕ್ಷಕ್ಕೂ ನಂಟಿದೆ. ಹಾಗಾಗಿ ಪಿತೃಪಕ್ಷದ ಸಂದರ್ಭದಲ್ಲೇ ಈ ಚಿತ್ರದ ಟ್ರೇಲರ್ ಹಾಗೂ ಶೀರ್ಷಿಕೆ ಗೀತೆ ಬಿಡುಗಡೆಯಾಗಿರುವುದು ವಿಶೇಷ.

ರಾವೆನ್ ಹೆಸರಿನ ಸಿನಿಮಾ

“ರಾವೆನ್” ಎಂದರೆ ಕಾಗೆಯ ಹೆಸರು. ಸಾಮಾನ್ಯವಾಗಿ ಕಾಗೆ ತಾಕಿದ್ದರೆ ಸ್ನಾನ ಮಾಡಬೇಕು. ಅದು ವಾಹನದ ಮೇಲೆ ಕೂತರೆ ವಾಹನವನ್ನೇ ಬದಲಿಸಬೇಕು. ಕಾಗೆ ಮನೆಯೊಳಗೆ ಬರಬಾರದು. ಇದು ಶ್ರಾದ್ಧಕ್ಕೆ ಮಾತ್ರ ಮೀಸಲಾದ ಪಕ್ಷಿ. ಹೀಗೆ ಅನೇಕ ನಂಬಿಕೆಗಳು ರೂಡಿಯಲ್ಲಿದೆ.‌ ಆದರೆ ಕಾಗೆಗಿರುವ ಒಳ್ಳೆಯ ಗುಣ ಬೇರೆ ಪಕ್ಷಿಗಳಲ್ಲಿ ನೋಡುವುದು ಕಡಿಮೆ. ಒಂದು ಹಿಡಿ ಅನ್ನ ಸಿಕ್ಕರೆ ತನ್ನ ಎಲ್ಲಾ ಬಳಗವನ್ನು ಕರೆದು ತಿನ್ನುವ ಪ್ರಾಣಿ ಕಾಗೆ ಮಾತ್ರ. ಇಂತಹ ಕಾಗೆಯನ್ನೇ ಪ್ರಧಾನವಾಗಿಟ್ಟಿಕೊಂಡು ಈ ಚಿತ್ರ ನಿರ್ಮಾಣವಾಗಿದೆ. ತಾಂತ್ರಿಕವಾಗಿ ನಮ್ಮ ಚಿತ್ರ ಹೆಚ್ಚು ಶ್ರೀಮಂತವಾಗಿದೆ. ಸಿಜಿ ವರ್ಕ್ ಎಲ್ಲರ ಗಮನ ಸೆಳೆಯುತ್ತದೆ. ಸದ್ಯ ಚಿತ್ರದ ಎಲ್ಲಾ ಚಟುವಟಿಕೆಗಳು ಪೂರ್ಣಗೊಂಡಿದ್ದು, ನವೆಂಬರ್ ನಲ್ಲಿ ತೆರೆಗೆ ಬರಲಿದೆ. ಇದೊಂದು ಕಾಲ್ಪನಿಕ ಕಥೆ. ದಿಲೀಪ್ ಪೈ ಹಾಗೂ ದೇವ್ ದೇವಯ್ಯ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ‌. ಸ್ವಪ್ನ ಶೆಟ್ಟಿಗಾರ್, ರಾಣಿ, ಸುಚೇಂದ್ರ ಪ್ರಸಾದ್, ಲೀಲಾ ಮೋಹನ್, ದಿನೇಶ್ ಮಂಗಳೂರು, ವಿಶ್ವನಾಥ್ ಜಿ ಪಿ, ಚೈತ್ರಾ ರಾಮ್, ರಾಘವೇಂದ್ರ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಇದು ನನ್ನ ನಿರ್ದೇಶನದ ಎರಡನೇ ಚಿತ್ರ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ ಎಂದು ನಿರ್ದೇಶಕ ವೇದ್ ಹೇಳಿದ್ದಾರೆ.

ನಾನು, ಉದ್ಯಮಿ ಹಾಗು ಕನ್ನಡಪರ ಹೋರಾಟಗಾರ ಎಂದು ಮಾತು ಆರಂಭಿಸಿದ ನಿರ್ಮಾಪಕ ವಿಶ್ವನಾಥ್, ನಮ್ಮ ಚಿತ್ರದ ಟ್ರೇಲರ್ ಹಾಗೂ ಶೀರ್ಷಿಕೆ ಗೀತೆ ಅನಾವರಣ ಮಾಡಿಕೊಟ್ಟ ಧ್ರುವ ಸರ್ಜಾ, ದಯಾನಂದ್, ಭಾ.ಮ.ಹರೀಶ್ ಹಾಗೂ ರಶ್ಮಿ ಅವರಿಗೆ ಧನ್ಯವಾದ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಹಾಗಾಗಿ ಚಿತ್ರ ನಿರ್ಮಾಣಕ್ಕೆ ಮುಂದಾದೆ. ನವೆಂಬರ್ ನಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಕನ್ನಡ, ಚೈನೀಸ್ ಹಾಗೂ ಕೊರಿಯನ್ ಭಾಷೆಗಳಲ್ಲಿ ಈ ಚಿತ್ರ ತೆರೆಗೆ ಬರಲಿದೆ. ತೆಲುಗು, ತಮಿಳು ಮುಂತಾದ ಭಾಷೆಗಳಿಗೂ ಡಬ್ ಆಗಲಿದೆ. ನಮ್ಮ ದೇಶದಲ್ಲಷ್ಟೇ ಅಲ್ಲದೆ ವಿದೇಶದಲ್ಲೂ ಈ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ. ಇಂದು ಬಿಡುಗಡೆಯಾದ ಶೀರ್ಷಿಕೆ ಗೀತೆಯನ್ನು ನಾನೇ ಬರೆದಿದ್ದೇನೆ. ಚಿತ್ರದಲ್ಲಿ ನಟಿಸಿದ್ದೇನೆ ಎಂದರು.

ಬಹಳ ದಿನಗಳ ನಂತರ ಈ ಚಿತ್ರದಲ್ಲಿ ನಟಿಸಿದ್ದೇನೆ.‌ ಕಾಗೆ ಶನಿಮಹಾತ್ಮನ ವಾಹನ. ಅಂಥಹ ಕಾಗೆ ಕುರಿತಾದ ಚಿತ್ರವಿದು. ಈ ಚಿತ್ರದ ನಿಜವಾದ ನಾಯಕ ಕಾಗೆ‌. ನಾನು ಅದರ ಸಹ ಪಾತ್ರಧಾರಿ ಎಂದು ನಾಯಕ ದಿಲೀಪ್ ಪೈ ಹೇಳಿದ್ದಾರೆ. ದಿಲೀಪ್ ಅವರು ಹೇಳಿದ ಹಾಗೆ ಕಾಗೆಯೇ ಈ ಚಿತ್ರದ ನಿಜವಾದ ಹೀರೋ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ನಟ ದೇವ್ ದೇವಯ್ಯ.

ನಾಯಕಿ ಸ್ವಪ್ನ ಶೆಟ್ಟಿಗಾರ್, ಸಂಗೀತ ನಿರ್ದೇಶಕ MAD D, ನಟಿ ಚೈತ್ರಾ ರಾಮ್ ಹಾಗೂ ಛಾಯಾಗ್ರಾಹಕ ರಾಕೇಶ್ ಸಿ ತಿಲಕ್ ಮುಂತಾದವರು ಚಿತ್ರದ ಕುರಿತು ಮಾಹಿತಿ ನೀಡಿದರು. ಗಾಯಕ ಚೇತನ್ ನಾಯಕ್ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು