ರಮೇಶ್ ಅರವಿಂದ್ ನಟನೆಯ ‘ದೈಜಿ’ ಸಿನಿಮಾ 2027ರ ಜನವರಿ 14ರಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಲಿದೆ. ಸೂರ್ಯಕಾಂತಿ ಹೂವು ಮತ್ತು ಮಗುವಿನ ಜನನದ ಸುತ್ತ ಚಿತ್ರದ ನಿಗೂಢ ಕಥೆ ಸಾಗಲಿದೆ.
ರಮೇಶ್ ಅರವಿಂದ್ (Ramesh Aravind) ಹಾಗೂ ರಾಧಿಕಾ ನಾರಾಯಣ್ (Radhika Narayan) ನಟನೆಯ ‘ದೈಜಿ’ (Daiji Movie) ಚಿತ್ರದ ಮತ್ತೊಂದು ಕುತೂಹಲಕಾರಿ ಪೋಸ್ಟರ್ ಜೊತೆಗೆ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ (Daiji Movie Release Date) ಮಾಡಲಾಗಿದೆ. ಮುಂದಿನ ವರ್ಷ ಜನವರಿ 14 ರಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ಅದ್ದೂರಿಯಾಗಿ ಸಿನಿಮಾ ತೆರೆಗೆ ಬರುತ್ತಿದೆ. ಇದಕ್ಕಿಂತ ವಿಶೇಷ ಎಂದರೆ ಈ ಚಿತ್ರದ ಕತೆ ಏನೆಂಬ ಗುಟ್ಟು ಬಿಟ್ಟುಕೊಡುವ ಮೂಲಕ ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ ಮೂಡಿಸಲಾಗಿದೆ.
ದೈಜಿ ಚಿತ್ರದಲ್ಲಿ ಏನಿದೆ?
ಸಂಕ್ರಾಂತಿ ಎಂದರೆ ಸೂರ್ಯನ ಆರಾಧನೆ, ಸುಗ್ಗಿಯ ಸಂಭ್ರಮ, ಹೊಸ ಆರಂಭಗಳ ಹಬ್ಬ. ಇಂಥ ಶುಭ ಸಂದರ್ಭದಲ್ಲಿ ಜೀವನ, ಜನನ ಮತ್ತು ನಿಗೂಢ ಶಕ್ತಿಗಳ ಸುತ್ತ ಕುತೂಹಲಕಾರಿ ಕತೆಯನ್ನು ಒಳಗೊಂಡ ಚಿತ್ರವಿದು. ಸೂರ್ಯನ ಪಥ ಬದಲಾಗುವ ದಿನ ಸೂರ್ಯಕಾಂತಿಯ ಹೂವಿನ ನಿಗೂಢತೆಯನ್ನು (Sunflower Mystery) ಹೇಳಲಿದೆ. ಹೀಗಾಗಿ ಚಿತ್ರದ ಕಥೆಯಲ್ಲಿ ಸೂರ್ಯಕಾಂತಿ ಹೂವು ಪ್ರಮುಖ ಪಾತ್ರ ವಹಿಸಲಿದೆ.
ಸೂರ್ಯಕಾಂತಿ, ಮಗುವಿನ ಜನನದ ಸುತ್ತಲಿನ ನಿಗೂಢತೆ ಅನಾವರಣಗೊಳಿಸುವ ಈ ಚಿತ್ರದಲ್ಲಿ ಕುತೂಹಲಕಾರಿ ಅರ್ಥವನ್ನು ಪಡೆದುಕೊಂಡಿದೆ. ಸೂರ್ಯ, ಭೂಮಿ, ಗಗನ ಹೆಸರಿನ ಪಾತ್ರಗಳು ಪ್ರಕೃತಿಯ ಮೂರು ಮೂಲಭೂತ ಅಂಶಗಳನ್ನು ಪ್ರತಿನಿಧಿಸುತ್ತವೆ ಎಂಬುದು ನಿರ್ದೇಶಕ ಆಕಾಶ್ ಶ್ರೀವತ್ಸ (Director Akash Srivatsa) ವಿವರಣೆ.
ತಾರಾಬಳಗದಲ್ಲಿ ಯಾರ್ಯಾರಿದ್ದಾರೆ?
ಇದು ರಮೇಶ್ ಅರವಿಂದ್ ಅವರ 106ನೇ ಸಿನಿಮಾ. ರವಿ ಕಶ್ಯಪ್ ಹಾಗೂ ಸುಧಾ ಕಶ್ಯಪ್ ನಿರ್ಮಿಸಿದ್ದಾರೆ. ದಿಗಂತ್, ಅವಿನಾಶ್, ಬಿ.ಎಂ. ಗಿರಿರಾಜ್, ಅಲೆಕ್ಸಾಂಡರ್ ಟೈಲರ್ ಹಾಗೂ ಸ್ಯಾಂಡಿ ಹಿಗಿನ್ಸ್ ಮುಂತಾದವರು ನಟಿಸಿದ್ದಾರೆ. ಜುಡಾ ಸ್ಯಾಂಡಿ, ನಕುಲ್ ಅಭಯಂಕರ್ ಹಾಗೂ ಸಚಿನ್ ಬಸ್ರೂರ್ ಸಂಗೀತ, ಶ್ರೀಶ ಕುದುವಳಿ ಛಾಯಾಗ್ರಹಣ ಚಿತ್ರಕ್ಕಿದೆ.
















