ಕೊಡಗಿನ ಯೋಧನೊಬ್ಬನ ದೇಶಭಕ್ತಿಯ ಕಥೆಯನ್ನು ಹೊಂದಿರುವ ಈ ಚಿತ್ರ, ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಮತ್ತೆ ನೆನಪಾಗುತ್ತಿದೆ. ಇದು ಕನ್ನಡದ ಯೋಧನೊಬ್ಬನ ಸಿನಿಮಾ, ವಿಷ್ಣುವರ್ಧನ್‌ಗೆ ಸಾಹಸಸಿಂಹ ಎಂಬ ಬಿರುದನ್ನು ಅನ್ವರ್ಥಗೊಳಿಸಿದ ಚಿತ್ರ. ಇದಕ್ಕೀಗ 35 ವರ್ಷವೂ ತುಂಬಿದೆ.
ಸಾಹಸಸಿಂಹ ವಿಷ್ಣುವರ್ಧನ್ ನಟನೆಯ, ಎಸ್. ರಾಜೇಂದ್ರ ಸಿಂಗ್ ಬಾಬು ನಿರ್ಮಾಣ ಹಾಗೂ ನಿರ್ದೇಶನದ ʼಮುತ್ತಿನ ಹಾರʼ ಸಿನಿಮಾ ನೀವು ನೋಡಿರಬಹುದು. ಕರ್ನಾಟಕದ ನಿಸರ್ಗದ ಸಿರಿ ಕೊಡಗಿನ ವೀರ ಯೋಧನೊಬ್ಬನ ಕತೆ ಹೊಂದಿರುವ ಈ ಸಿನಿಮಾ ಬಂದಾಗ ಕರ್ನಾಟಕದ ಜನತೆ ಅದನ್ನು ನೋಡಿ ರೋಮಾಂಚಿತರಾಗಿದ್ದರು. ಕೊಡವ ನೆಲದ ಯೋಧರು, ಅಲ್ಲಿನ ಶ್ರೀಮಂತ ದೇಶಭಕ್ತ ಹೋರಾಟದ ಜನತೆಯ ಪರಿಚಯ ಮತ್ತೊಮ್ಮೆ ರಾಜ್ಯದ ಜನತೆಗೆ ಆಗಿತ್ತು. ಇದೀಗ ಭಾರತ- ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಅದು ಮತ್ತೊಮ್ಮೆ ನೆನಪಾದರೆ ಆಶ್ಚರ್ಯವಿಲ್ಲ. ಹಾಗೇ ಆ ಫಿಲಂ ಬಂದು ಈ ವರ್ಷಕ್ಕೆ 35 ವರ್ಷ ಭರ್ತಿಯಾಗುತ್ತದೆ ಎಂಬುದೂ ಅದನ್ನು ನೆನೆಯಲು ಇನ್ನೊಂದು ಕಾರಣ.
ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್, ಸುಹಾಸಿನಿ ಮಣಿರತ್ನಂ ಅಭಿನಯದ 'ಮುತ್ತಿನ ಹಾರ' ಕನ್ನಡದ ಕಲ್ಟ್ ಕ್ಲಾಸಿಕ್ ಸಿನಿಮಾಗಳಲ್ಲಿ ಒಂದು. 1990ರಲ್ಲಿ ತೆರೆಕಂಡ 'ಮುತ್ತಿನ ಹಾರ' ಚಿತ್ರಕ್ಕೆ ಹಂಸಲೇಖ ಸಂಯೋಜಿಸಿದ್ದ ಹಾಡುಗಳೂ ಇಂದಿಗೂ ಜನಜನಿತ. ಸೈನಿಕನೊಬ್ಬನ ಕುಟುಂಬದ ಕುರಿತ ಕಥೆಯನ್ನು ತೆರೆಮೇಲೆ ಅದ್ಭುತವಾಗಿ ತರಲಾಗಿತ್ತು. ಇದರ ಶೂಟಿಂಗ್ ಕಾಶ್ಮೀರದಲ್ಲಿ ನಡೆದಿತ್ತು. ಇದರ ಶೂಟಿಂಗ್ ಅನ್ನು 120ಕ್ಕೂ ಅಧಿಕ ದಿನಗಳ ಕಾಲ ಮಾಡಲಾಗಿತ್ತು. ಆಗಿನ ಕಾಲಕ್ಕೆ ಇದರ ಬಜೆಟ್ ಕೂಡ ದುಬಾರಿ ಎನಿಸಿತ್ತು.
ಕಾಶ್ಮೀರದಂತಹ ಜಾಗದಲ್ಲಿ ತುಂಬಾ ರಿಸ್ಕ್‌ಗಳನ್ನು ತೆಗೆದುಕೊಂಡು ಶೂಟಿಂಗ್ ಮಾಡಲಾಗಿತ್ತು. ಅದಕ್ಕಾಗಿ ಅಪಾರ ಹಣವನ್ನು ತೆರಲಾಗಿತ್ತು. ಉನ್ನತ ಅಧಿಕಾರಿಗಳ ಅನುಮತಿ ಪಡೆಯುವುದು ಸುಲಭದ ಮಾತಾಗಿರಲಿಲ್ಲ. 100 ಯುದ್ಧ ಟ್ಯಾಂಕ್‌ಗಳು, 1000 ಸೈನಿಕರು, 150 ಟ್ರಕ್‌ಗಳು, 100 ಜೀಪ್‌ಗಳು, ಗನ್‌ಗಳು, ಮಿಲಿಟರಿ ಸಮವಸ್ತ್ರಗಳು ಇವೆಲ್ಲವನ್ನೂ ಸೈನ್ಯದ ಅನುಮತಿ ಪಡೆದು ಬಳಸಲಾಗಿತ್ತು. ಇದಕ್ಕಾಗಿ ಆಗಿನ ಕಾಲದಲ್ಲೇ 10 ಲಕ್ಷ ರೂ. ವಿಮೆ ಹಣವನ್ನು ರಾಜೇಂದ್ರ ಸಿಂಗ್ ಬಾಬು ಕಟ್ಟಿದ್ದರು. ಯುದ್ಧದ ದೃಶ್ಯಗಳನ್ನು ನೈಜವಾಗಿ ಬರುವಂತೆ, ಬಹಳ ಕಷ್ಟಪಟ್ಟು ಚಿತ್ರೀಕರಿಸಲಾಗಿತ್ತು. ಸ್ಟಂಟ್‌ಗಳು ರಿಯಲ್ ಆಗಿದ್ದವು. ವಿಷ್ಣು ಪ್ಯಾರಾಶೂಟ್ ಬಳಸಿ ಮಾಡಿದ್ದ ಸ್ಟಂಟ್‌ವೊಂದು ಸರಿಯಾಗಿ ಆಗದೇ ಇದ್ದಿದ್ದರಿಂದ ವಿಷ್ಣು ಬೆನ್ನಿಗೆ ಪಟ್ಟಾಗಿತ್ತು ಕೂಡ. ಇಷ್ಟೆಲ್ಲಾ ರಿಸ್ಕ್‌ಗಳೊಂದಿಗೆ ಮುತ್ತಿನ ಹಾರ ಸಿನಿಮಾವನ್ನು ಮಾಡಲಾಗಿತ್ತು.
ಅದರ ಕತೆ ಸಿನಿಮಾ ನೋಡಿದವರಿಗೆ ನೆನಪಿರಬಹುದು- ಕೊಡಗಿನ ಯೋಧ ಅಚ್ಚಪ್ಪ, ಗಡಿ ಕಾಯುವ ಸೈನಿಕನಾಗಿರುತ್ತಾನೆ. ಆತನ ಬದುಕಿನಲ್ಲಿ ಸಂಭವಿಸುವ ದುರಂತ ಕಥೆಯನ್ನು ಮುತ್ತಿನ ಹಾರದಲ್ಲಿ ನೋಡಬಹುದಾಗಿದೆ. ಸೈನಿಕ ಅಚ್ಚಪ್ಪನಾಗಿ ವಿಷ್ಣು, ಆತನ ಪತ್ನಿ ಪಾತ್ರದಲ್ಲಿ ಸುಹಾಸಿನಿ ಅತ್ಯದ್ಭುತವಾಗಿ ನಟಿಸಿದ್ದರು. ರಾಜಸ್ಥಾನದಲ್ಲೂ ಶೂಟಿಂಗ್ ಮಾಡಲಾಗಿತ್ತು. ಈ ಚಿತ್ರದ ಆರಂಭದ ದೃಶ್ಯಕ್ಕೆ ಪಾರ್ವತಮ್ಮ ರಾಜ್‌ಕುಮಾರ್ ಕ್ಲ್ಯಾಪ್ ಮಾಡಿದ್ದರು ಎಂಬ ಮಾಹಿತಿ ಇದೆ. ಸಿನಿಮಾದಲ್ಲಿ ವಿಷ್ಣುವರ್ಧನ್, ಸುಹಾಸಿನಿ, ಅಶ್ವತ್ಥ್ ಜೊತೆಗೆ ಮಾ. ಆನಂದ್, ರಾಮ್‌ಕುಮಾರ್, ಪ್ರಕಾಶ್ ರಾಜ್, ಸಿಹಿ ಕಹಿ ಚಂದ್ರು, ಮುಖ್ಯಮಂತ್ರಿ ಚಂದ್ರು ಮುಂತಾದರು ನಟಿಸಿದ್ದರು.
ಇದಕ್ಕೆ ಕನ್ನಡದ ಅತ್ಯುತ್ತಮ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳು ಸಿಕ್ಕಿದ್ದವು. ಅತ್ಯುತ್ತಮ ಪೋಷಕ ನಟ ರಾಜ್ಯ ಪ್ರಶಸ್ತಿಯನ್ನು ಕೆ ಎಸ್ ಅಶ್ವತ್ಥ್, ಛಾಯಾಗ್ರಹಣಕ್ಕಾಗಿ ಡಿ ವಿ ರಾಜಾರಾಮ್‌ಗೆ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ, ಸುಹಾಸಿನಿಗೆ ಅತ್ಯುತ್ತಮ ನಟಿ ಫಿಲ್ಮ್‌ಫೇರ್ ಪ್ರಶಸ್ತಿ ಸಿಕ್ಕಿತ್ತು. ಈ ಸಿನಿಮಾಕ್ಕೆ ಕಥೆ ಬರೆದವರು ವಿ ಎಂ ಜೋಶಿ ಅವರು. ವಿಷ್ಣುವರ್ಧನ್ ಚಿತ್ರ ಜೀವನದಲ್ಲಿ ಮುತ್ತಿನ ಹಾರ ಚಿತ್ರ ವಿಶೇಷ. ಈ ಚಿತ್ರದ ಒಂದು ದೃಶ್ಯಕ್ಕೆ ವಿಷ್ಣು ರಿಯಲ್ ಆಗಿಯೇ ತಲೆ ಬೋಳಿಸಿಕೊಂಡಿದ್ದರು.
ಕೊಡವ ಭಾಷೆಯಲ್ಲಿ ಒಂದು ಹಾಡನ್ನು ಮಾಡಿದ್ದು ಒಂದು ವಿಶೇಷ. "ಮಡಿಕೇರಿ ಸಿಪಾಯಿ...ʼ ಎಂಬ ಇದರ ಪದ್ಯ ನಿಮಗೆ ನೆನಪಿರಬಹುದು. ಈ ಪದ್ಯಕ್ಕೊಂದು ಹಿನ್ನೆಲೆ ಇದೆ. ಸಿನಿಮಾದ ಹಾಡುಗಳನ್ನು ಸಿದ್ಧಪಡಿಸುವಾಗ ಒಮ್ಮೆ ನಿರ್ದೇಶಕ ಬಾಬು ಹಾಗೂ ಗೀತ ನಿರ್ದೇಶಕ ಹಂಸಲೇಖ ಮಡಿಕೇರಿಯಲ್ಲಿ ತಂಗಿದ್ದರಂತೆ. ಆಗ ಕೊಡಗಿನ ಸ್ಥಳೀಯ ಹೆಣ್ಣುಮಕ್ಕಳನ್ನು ಕರೆಸಿ ಅವರಿಂದ ಸ್ಥಳೀಯ ಹಾಡುಗಳನ್ನು ಹಾಡಿಸಿದರು. ಅದರಲ್ಲಿ ಈ ʼಮಡಿಕೇರಿ ಸಿಪಾಯಿʼ ಎಂಬ ಪದ ಸಿಕ್ಕಿತು. ಅದನ್ನು ಬಳಸಿಕೊಂಡು, ಕೊಡವ ಭಾಷೆಯನ್ನೂ ಅದರಲ್ಲಿ ಬಳಸಿಕೊಂಡು ಪದ್ಯ ಬರೆದು ಸಂಗೀತ ಹಾಕಿದರು ಹಂಸಲೇಖ.
ಚಿತ್ರರಂಗ ಗೆಲ್ಲಿಸುವ ಐಡಿಯಾಗಳು: ಖ್ಯಾತ ನಿರ್ದೇಶಕರು ನೀಡಿದ ಗೆಲುವಿನ ಸೂತ್ರ
'ದೇವರು ಹೊಸೆದ ಪ್ರೇಮದ ದಾರ' ಹಾಡನ್ನು ಎಂ. ಬಾಲಮುರಳಿಕೃಷ್ಣ ಅವರಿಂದ ಹಾಡಿಸಿದ್ದು ಮತ್ತೊಂದು ವಿಶೇಷ. ಇಂದಿಗೂ ಆ ಹಾಡನ್ನು ಕೇಳಿದಾಗ ಅದರಲ್ಲಿ ಭಾವ ತುಂಬಿದ ಗಾಯನ ನಮ್ಮನ್ನು ತಲೆದೂಗುವಂತೆ ಮಾಡುತ್ತದೆ. ಆರಂಭದಲ್ಲಿ ಈ ಹಾಡನ್ನು ಹಾಡುವುದಕ್ಕೆ ಬಾಲಮುರಳಿಕೃಷ್ಣ ಒಪ್ಪಿರಲಿಲ್ಲ. ಕೊನೆಗೆ ಹಾಗೋ ಹೀಗೋ ಮಾಡಿ ಅವರನ್ನು ಒಪ್ಪಿಸಿದ್ದರು ಹಂಸಲೇಖ ಮತ್ತು ಸಿಂಗ್ ಬಾಬು. ಒಟ್ಟಾರೆ, ಒಬ್ಬ ಸೈನಿಕನ ಬದುಕು ಹೇಗಿರುತ್ತದೆ. ಆತನ ಜೀವನದಲ್ಲಿ ದೇಶ ಸೇವೆ ಮತ್ತು ದೇಶ ಭಕ್ತಿ ಹೇಗಿರುತ್ತದೆ ಅಂತ ತಿಳಿಯೋಕೆ ಮುತ್ತಿನ ಹಾರ ದಿ ಬೆಸ್ಟ್ ಚಿತ್ರ ಅಂತಲೇ ಹೇಳಬಹುದು.
14ನೇ ವಯಸ್ಸಲ್ಲಿ ಅಮ್ಮನನ್ನು ಕಳೆದುಕೊಂಡ ಕೆಜಿಎಫ್ ನಟಿ... ಬಿಚ್ಚಿಟ್ರು ಕಣ್ಣೀರ ಕಥೆ


