ಚಿತ್ರರಂಗವನ್ನು ಮತ್ತೆ ಗೆಲುವಿನ ಪಥದಲ್ಲಿ ಕರೆದೊಯ್ಯಲು ಬೇಕಾಗುವ ಕೆಲವು ಐಡಿಯಾಗಳನ್ನು ಖ್ಯಾತ ನಿರ್ದೇಶಕರು ನೀಡಿದ್ದಾರೆ.
ಚಿತ್ರರಂಗ ಸೋಲುತ್ತಿದೆ. ಸೋಲುಗಳಿಂದ ಕಂಗೆಟ್ಟಿದೆ. ಪರಿಹಾರ ಕಾಣದೇ ಇದ್ದರೆ ಮತ್ತಷ್ಟು ಬಸವಳಿಯಲಿದೆ. ಈ ನಿಟ್ಟಿನಲ್ಲಿ ಚಿತ್ರರಂಗವನ್ನು ಮತ್ತೆ ಗೆಲುವಿನ ಪಥದಲ್ಲಿ ಕರೆದೊಯ್ಯಲು ಬೇಕಾಗುವ ಕೆಲವು ಐಡಿಯಾಗಳನ್ನು ಖ್ಯಾತ ನಿರ್ದೇಶಕರು ನೀಡಿದ್ದಾರೆ.
ಒಂದು ವರ್ಷದವರೆಗೂ ಥಿಯೇಟರ್ ಬಿಟ್ಟು ಬೇರೆ ಕಡೆ ಸಿನಿಮಾ ಸಿಗಬಾರದು: ಕೆ.ಎಂ. ಚೈತನ್ಯ
1. ನಿರ್ಮಾಪಕರು ಅಥವಾ ಸರ್ಕಾರ ಧೈರ್ಯ ಮಾಡಿ ಒಂದು ಹೊಸ ರೂಲ್ಸ್ ತರಬೇಕಿದೆ. ಆ ರೂಲ್ಸ್ ಪ್ರಕಾರ ಸಿನಿಮಾ ಥಿಯೇಟರ್‌ನಲ್ಲಿ ಬಿಡುಗಡೆಗೊಂಡ ಒಂದು ವರ್ಷದ ತನಕ ಬೇರೆ ಎಲ್ಲೂ ಚಿತ್ರ ನೋಡಲು ಸಿಗಬಾರದು. ಅಂದರೆ ಓಟಿಟಿ, ಟೀವಿ ಸೇರಿದಂತೆ ಯಾವುದೇ ಡಿಜಿಟಲ್ ಪ್ಲಾಟ್‌ಫಾರಂಗಳಲ್ಲಿ ಸಿನಿಮಾ ನೋಡಲು ಸಿಗಬಾರದು. ಕೇವಲ ಚಿತ್ರಮಂದಿರಗಳಿಗೇ ಬಂದು ಚಿತ್ರ ನೋಡಬೇಕು.
2. 50 ರಿಂದ 100 ಸೀಟುಗಳನ್ನು ಒಳಗೊಂಡ ಜನತಾ ಟಾಕೀಸ್‌ಗಳನ್ನು ನಿರ್ಮಾಣ ಮಾಡಬೇಕು. ಈ ಚಿತ್ರಮಂದಿರಗಳು ಕನ್ನಡ ಸಿನಿಮಾಗಳ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿರಬೇಕು. ಈ ಜನತಾ ಚಿತ್ರಮಂದಿರಗಳಲ್ಲಿ ಸಣ್ಣ ಸಣ್ಣ ಮಳಿಗೆಗಳೂ ಇರಬೇಕು. ಕೈಗೆಟುಕುವ ಬೆಲೆಯಲ್ಲಿ ಈ ಮಳಿಗೆಗಳಲ್ಲಿ ಆಹಾರ ಪದಾರ್ಥಗಳು ಸಿಗಬೇಕು. ಸರ್ಕಾರವೇ ಅವುಗಳನ್ನು ನಡೆಸುವಂತಿರಬೇಕು.
ಕನ್ನಡಕ್ಕಾಗಿ ಕಠಿಣ ನಿರ್ಧಾರ: ಕುಲದಲ್ಲಿ ಕೀಳ್ಯಾವುದೋ ಚಿತ್ರದ ಸೋನು ನಿಗಮ್ ಹಾಡಿಗೆ ಗೇಟ್ ಪಾಸ್
3. ಬಾಹುಬಲಿಯಂತಹ ಅದ್ದೂರಿ ಚಿತ್ರಗಳಿಗೆ ಮಾತ್ರ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಿದ್ದಾರೆ. ಲಾರ್ಜರ್ ದ್ಯಾನ್ ಲೈಫ್ ಚಿತ್ರಗಳನ್ನು ದೊಡ್ಡ ಪರದೆಯಲ್ಲಿ ನೋಡಬೇಕು ಎಂದುಕೊಳ್ಳುವ ಪ್ರೇಕ್ಷಕರೇ ಈಗ ಇರೋದು. ಇದು ತಪ್ಪಲ್ಲ. ಆದರೆ, ಕಂಟೆಂಟ್ ಚೆನ್ನಾಗಿರುವ ದೇಸಿ ಸೊಗಡಿನ ಚಿತ್ರಗಳನ್ನೂ ಥಿಯೇಟರ್‌ಗಳಲ್ಲಿ ನೋಡಬೇಕು.
4. ಈಗಿನ ಪರಿಸ್ಥಿತಿಯಲ್ಲಿ ದುಡ್ಡು ಹಾಕಿ ಸಿನಿಮಾ ಮಾಡುತ್ತಿರುವುದು ಚಿತ್ರರಂಗ ಮಾಡುತ್ತಿರುವ ಬಹು ದೊಡ್ಡ ಸಾಹಸ ಎಂಬುದು ನನ್ನ ಅಭಿಪ್ರಾಯ. ಯಾಕೆಂದರೆ ತಾವು ಹೂಡಿಕೆ ಮಾಡಿದ್ದಕ್ಕೆ ಎಷ್ಟು ಲಾಭ ಬರುತ್ತದೆ ಎನ್ನುವ ಭರವಸೆ ಇಲ್ಲದಿದ್ದರೂ ಸಿನಿಮಾ ಮಾಡುತ್ತಿದ್ದಾರೆ. ಇದಕ್ಕಿಂತ ಇನ್ನೇನು ಮಾಡಕ್ಕೆ ಸಾಧ್ಯ ಎಂಬುದು ನನ್ನ ಪ್ರಶ್ನೆ.
ಎಲ್ಲ ಒಗ್ಗಟ್ಟಾಗಿ ವಿಷನ್ ಇಟ್ಟುಕೊಂಡು ಕೆಲಸ ಮಾಡಬೇಕಿದೆ: ರೂಪಾ ರಾವ್
- ಈಗ ಸಿನಿಮಾ ಮಾಡೋರು ಜಾಸ್ತಿ ನೋಡೋರು ಕಡಿಮೆ ಆಗಿದ್ದಾರೆ. ಕಳೆದ ವಾರ ವಿವಿಧ ಭಾಷೆಗಳ 70 ಕ್ಕೂ ಹೆಚ್ಚು ಸಿನಿಮಾಗಳು ಬೆಂಗಳೂರಲ್ಲಿ ಪ್ರದರ್ಶನ ಕಾಣುತ್ತಿದ್ದವು. ಕನ್ನಡದ ಆರೇಳು ಚಿತ್ರಗಳೂ ಇವುಗಳಲ್ಲಿದ್ದವು. ಥೇಟರಿಗೆ ಬರುವ ಸೀಮಿತ ಸಂಖ್ಯೆಯ ಜನ ಇಷ್ಟು ಅಗಾಧ ಸಂಖ್ಯೆಯ ಸಿನಿಮಾಗಳಲ್ಲಿ ಯಾವುದನ್ನು ಅಂತ ಕಣ್ತುಂಬಿಸಿಕೊಳ್ಳುತ್ತಾರೆ..
- ಓಟಿಟಿ ಹುಟ್ಟಿ ಜನಪ್ರಿಯವಾದಾಗ, ನಾವೆಲ್ಲ ಇನ್ನುಮೇಲೆ ಸ್ವತಂತ್ರವಾಗಿ ಕಥೆ ಕೇಳಬಹುದು, ನಮಗೆಲ್ಲ ಒಂದೊಳ್ಳೆ ಅವಕಾಶ ಅಂದುಕೊಂಡೆವು. ಆದರೆ ಹಾಗಾಗಲಿಲ್ಲ. ಅದು ಬೇರೆಯೇ ನೆಲೆಯಲ್ಲಿ ವಿಸ್ತರಿಸಿತು. ಈಗ ಓಟಿಟಿ ಬಂದು 5 ವರ್ಷ ಆಗಿದೆ. ಇದರಿಂದ ಥೇಟರಿಗೆ ಬರುವ ಜನ ಸ್ಪ್ರೆಡ್ ಆಗಿದ್ದಾರೆ. ಹಾಗೆಂದು ಅವರು ಓಟಿಟಿಯಲ್ಲಿ ದುಡ್ಡಕೊಟ್ಟು ಸಿನಿಮಾ ನೋಡೋದೂ ಕಡಿಮೆ, ಫ್ರೀ ಸಿನಿಮಾ ನೋಡೋದೆ ಜಾಸ್ತಿ. ನನ್ನ ಹತ್ರ ಒಂದಿಷ್ಟು ಜನ ಯೂಟ್ಯೂಬ್‌ಗೆ ಯಾವಾಗ ಸಿನಿಮಾ ಬಿಡ್ತೀರಿ ಮೇಡಂ ಅಂತ ಕೇಳ್ತಾರೆ.
- ಹಾಗೆಂದು ಇದೇ ಮನಸ್ಥಿತಿಯೇ ಯಾವಾಗಲೂ ಇರುತ್ತೆ ಅಂತ ಹೇಳೋದಕ್ಕಾಗಲ್ಲ. ಓಟಿಟಿ ಬಂದ ಹೊಸತರಲ್ಲಿ ಜನರಿಗೆ ಅದರ ಬಗ್ಗೆ ರುಚಿ ಹತ್ತೋದು ಸಹಜವೇ. ಆದರೆ ಜನ ಎಷ್ಟು ದಿನ ಅಂತ ಮೊಬೈಲ್‌ನಲ್ಲಿ ಸಿನಿಮಾ ನೋಡ್ಕೊಂಡು ಕೂರ್ತಾರೆ. ಮನುಷ್ಯ ಸಂಘಜೀವಿ. ಆತ ಜನ ಸಮೂಹದ ಜೊತೆ ಕೂರಲೇ ಬೇಕು. ಆ ಕಾಲವೂ ಬರುತ್ತೆ. ಅಲ್ಲಿವರೆಗೆ ಕಾಯಬೇಕಿದೆ.
- ನನಗನಿಸೋದು ಇದೊಂದು ಟ್ರಾನ್ಸ್‌ಮಿಶನ್ ಸಮಯ. ಈಗ ಇಳಿತದಲ್ಲಿದ್ದೇವೆ. ಇದು ಏರುವ ತನಕ ಕಾಯದೇ ವಿಧಿಯಿಲ್ಲ. ಈ ಪ್ರೊಸೆಸ್‌ನಲ್ಲಿ ತಡೆದು ನಿಲ್ಲೋರು ಚಿತ್ರರಂಗದಲ್ಲಿ ಉಳೀತಾರೆ. ಉಳಿದವರು ಕೊಚ್ಚಿಕೊಂಡು ಹೋಗುತ್ತಾರೆ.
- ವಿತರಣೆ ಮತ್ತು ಪ್ರದರ್ಶನ ಸಿನಿಮಾದ ಬಹುಮುಖ್ಯ ಅಂಗ. ಈಗ ಪ್ರದರ್ಶನ ಅನ್ನುವುದು ಬಾಟಲ್ ನೆಕ್ ಆಗಿದೆ. ಹೊಸ ಅಲೆಗೆ ಪ್ರದರ್ಶಕ ಕ್ಷೇತ್ರ ಹೇಗೆ ಸ್ಪಂದಿಸುತ್ತದೆ ಎನ್ನುವುದು ಮುಖ್ಯವಾಗುತ್ತದೆ. ಮಲ್ಟಿಪ್ಲೆಕ್ಸ್‌ಗಳಂಥಾ ದೈತ್ಯ ಪ್ರದರ್ಶನ ಸಂಸ್ಥೆಗಳ ಬ್ಯುಸಿನೆಸ್ ಐಡಿಯಾ ಪ್ರಾಫಿಟ್ ಕಡೆಗಾ ಸಿನಿಮಾರಂಗವನ್ನು ಉಳಿಸುವ ಕಡೆಗೇ ಅನ್ನುವುದನ್ನು ಗಮನಿಸಬೇಕು. ಸಿನಿಮಾರಂಗವನ್ನು ಉಳಿಸುವ ಕಡೆ ಗಮನ ಕೊಡಬೇಕಾದ್ದು ಈ ಹೊತ್ತಿನ ತುರ್ತು.
- ತೆಲುಗಿನಲ್ಲಿ ಬಂದ ಆಹಾ ಓಟಿಟಿ ಈಗ ತಮಿಳಿಗೂ ವಿಸ್ತರಿಸಿಕೊಂಡಿದೆ. ಈ ಥರದ ಪ್ರಯತ್ನ ನಮ್ಮಲ್ಲಿ ಸಾಧ್ಯ ಆಗಬೇಕಿದೆ. ನಮ್ಮ ನೆಲಕ್ಕೆ ನಮ್ಮದೇ ಓಟಿಟಿ ಬಂದು, ಅದನ್ನು ಗೆಲುವಿನತ್ತ ಮುನ್ನಡೆಸುವ ಹೊಣೆಗಾರಿಕೆಯೂ ಇದೆ. ಆಗ ಚಿತ್ರರಂಗಕ್ಕೆ ಚೈತನ್ಯ ಬರುತ್ತದೆ.
- ಸಾಮುದಾಯಿಕ ನೆಲೆಯಲ್ಲಿ ಚಿತ್ರರಂಗದ ಚಿಂತನೆ ಬೆಳೆಯಬೇಕು. ಎಲ್ಲ ಜೊತೆಯಾಗಿ ಒಂದು ವಿಷನ್ ಇಟ್ಟುಕೊಂಡು ಕೆಲಸ ಮಾಡಬೇಕು. ಇದಕ್ಕೆಲ್ಲ ಒಂದು ಸಮರ್ಥ ನಾಯಕತ್ವ ಬೇಕು. ನಂಗೆ ಪ್ರಾಫಿಟ್ ಆದರೆ ಸಾಕು ಅನ್ನುವುದಕ್ಕಿಂತ ನನ್ನ ಗಳಿಕೆಯಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದರೂ ಪರವಾಗಿಲ್ಲ ಚಿತ್ರರಂಗದ ಬೆಳವಣಿಗೆ ಮುಖ್ಯವಾಗಬೇಕು ಎಂಬ ದೃಷ್ಟಿಕೋನದ ಅಗತ್ಯ ಇದೆ.
ಡಿ ಸೆಂಟ್ರಲೈಸೇಶನ್ ಆಗಬೇಕಿದೆ: ನಟೇಶ್ ಹೆಗಡೆ
- ಮೊದಲನೆಯದಾಗಿ ಸಿನಿಮಾ ಚೆನ್ನಾಗಿದ್ದರೆ ಜನ ನೋಡ್ತಾರೆ ಅನ್ನುವುದು ಸತ್ಯ. ನಮ್ಮಲ್ಲಿ ಸಿನಿಮಾ ಚೆನ್ನಾಗಿದ್ದು ಸೋತು ಹೋಗಿವೆ ಅನ್ನೋದು ನನ್ನ ಗಮನಕ್ಕೆ ಬಂದಿಲ್ಲ. ಸಿನಿಮಾದ ಸ್ಟಾಂಡರ್ಡ್ ವೀಕ್ಷಕರ ನಿರೀಕ್ಷೆಗಿಂತ ಕೆಳಗಿದ್ದಾಗಲೇ ಚಿತ್ರಗಳು ಸೋತಿವೆ.
- ಸಿನಿಮಾಗಳ ಸರ್ವಚಟುವಟಿಕೆಗಳೂ ಬೆಂಗಳೂರನ್ನೇ ಕೇಂದ್ರೀಕರಿಸಿಕೊಂಡಿವೆ. ಇದು ಡಿಸೆಂಟ್ರಲೈಸೇಶನ್ ಆಗಬೇಕು.
- ಕೇರಳ, ತಮಿಳ್ನಾಡುಗಳಂತೆ ಸಿನಿಮಾ ನಮ್ಮ ಜೀವನದ ಭಾಗವಾಗಿಲ್ಲ. ಆ ರಾಜ್ಯಗಳಲ್ಲೆಲ್ಲ ಚಿತ್ರರಂಗದ ಬೆಳವಣಿಗೆಗೆ ಜನರ ವೀಕ್ಷಣೆಯ ಪ್ರಮಾಣ ಹೆಚ್ಚಿರುವುದು ಮತ್ತು ಸಿನಿಮಾ ಅವರ ಬದುಕಿನ ಭಾಗವಾಗಿರುವುದು ಮುಖ್ಯ ಕಾರಣ. ಅದು ನಮ್ಮಲ್ಲಿ ಆಗಬೇಕಿದೆ.
- ನಮ್ಮಲ್ಲಿ ಒಂದು ಗೇಟ್ ಕೀಪಿಂಗ್ ಇದೆ. ಸಿನಿಮಾ ಶುರು ಮಾಡೋದಕ್ಕೂ ಮೊದಲೇ ಇದು ಮಿಡ್ ಬಜೆಟ್, ಇದು ಜಾಸ್ತಿ ಬಜೆಟ್, ಇದು ಆರ್ಟ್, ಇದು ಕಮರ್ಷಿಯಲ್ ಎಂದೆಲ್ಲ ವಿಭಾಗೀಕರಣ ಮಾಡುತ್ತೇವೆ. ಸೋ ಕಾಲ್ಡ್ ಕಮರ್ಷಿಯಲ್ ಸಿನಿಮಾಗಳು ಎರಡು ರುಪಾಯಿ ಗಳಿಕೆಯನ್ನೂ ಮಾಡುವುದಿಲ್ಲ, ಆ ಮಾತು ಬೇರೆ. ನನ್ನ ಪ್ರಕಾರ ಜನರಿಗೆ ಸಿನಿಮಾದಲ್ಲಿ ಕೆಥಾರ್ಸಿಸ್ ಅನ್ನೋದು ಆಗಿಯೇ ಆಗುತ್ತೆ. ಅದಕ್ಕೆ ಈ ವಿಭಾಗೀಕರಣ ಬೇಕಿಲ್ಲ.
ರಾಮ್ ಪೋತಿನೇನಿ-ಭಾಗ್ಯಶ್ರೀ ಡೇಟಿಂಗ್? 'BB' ಎಂದು ಕರೆದು ಗಾಸಿಪ್ ಹೆಚ್ಚಿಸಿದ ನಟ
- ಓಟಿಟಿಗೆ ನಮ್ಮಲ್ಲಿಂದು ಸಮರ್ಥ ಪ್ರತಿನಿಧಿಗಳಿಲ್ಲ. ನಮ್ಮ ಸ್ಥಿತಿಗತಿ ಬಗ್ಗೆ ಅವರಲ್ಲಿ ತಿಳಿವಳಿಕೆ ಮೂಡಿಸುವವರಿಲ್ಲ. ಹೀಗಾಗಿ ಅವರಿನ್ನೂ ಬೆಂಗಳೂರಿನವರು ಬೇರೆ ಭಾಷೆಯ ಸಿನಿಮಾಗಳನ್ನೇ ನೋಡುತ್ತಾರೆ ಎಂಬ ತತ್ವಕ್ಕೆ ಬದ್ಧರಾಗಿದ್ದಾರೆ. ಇದು ಮೂರ್ಖತನ. ಕೇವಲ ಬೆಂಗಳೂರಿಂದ ಇಡೀ ರಾಜ್ಯದ ಜನರ ಸಿನಿಮಾ ನೋಡುವ ಮನಸ್ಥಿತಿಯನ್ನು ಜಡ್ಜ್ ಮಾಡುವುದು ತಪ್ಪು.
- ಜನ ಥೇಟರಿಗೆ ವಿಮುಖವಾದ ಪ್ರಕ್ರಿಯೆ ಕಳೆದ 15 ವರ್ಷಗಳಿಂದ ನಡೆಯುತ್ತಲೇ ಇದೆ. ಇವೆಲ್ಲ ಒಂದಕ್ಕೊಂದು ಕೊಂಡಿಗಳ ಹಾಗೆ ಒಂದು ಕಳಚಿದರೆ ಎಲ್ಲ ಕಳಚುತ್ತ ಬರುತ್ತವೆ. ಸದ್ಯ ನಾವು ಇದನ್ನು ಜೋಡಿಸುತ್ತ ಬರಬೇಕಿದೆ.


