ಸಹಾಯಕ ನಿರ್ದೇಶಕ ಸೋಮು ಗೌಡರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಚಿತ್ರರಂಗದಲ್ಲಿ ಅನುಭವಿಗಳಾಗಿದ್ದ ಅವರು, ಸ್ವಂತ ಚಿತ್ರ ನಿರ್ದೇಶಿಸುವ ಕನಸಿನಲ್ಲಿದ್ದರು. ತಾಯಿ ಕಳೆದುಕೊಂಡ ಎರಡು ವರ್ಷಗಳ ನಂತರ, ಮಾಗಡಿ ರಸ್ತೆಯ ಮನೆಯಲ್ಲಿ ಏಕಾಂಗಿಯಾಗಿದ್ದ ಸೋಮು ಗೌಡರ ಆಕಸ್ಮಿಕ ಮರಣ ಚಿತ್ರರಂಗಕ್ಕೆ ನಷ್ಟ.
ಕೆಲ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ, ಈಗ ಕಥೆ ಕೂಡ ರೆಡಿ ಮಾಡಿಟ್ಟುಕೊಂಡು, ನಿರ್ಮಾಪಕರ ಹುಡುಕಾಟದಲ್ಲಿದ್ದ ಸೋಮು ಗೌಡ ಅವರು ನಿಧನರಾಗಿದ್ದಾರೆ. ಹೌದು, ಮಲಗಿದ್ದ ಸೋಮು ಅಲ್ಲಿಯೇ ಪ್ರಾಣ ಬಿಟ್ಟಿದ್ದಾರಂತೆ. ಈ ಬಗ್ಗೆ ಸಂಭಾಷಣೆಕಾರ ಮಾಸ್ತಿ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ಸಂಜೆ ಬಾಂಡ್ ರವಿ ಚಿತ್ರದ ನಿರ್ದೇಶಕ ಪ್ರಜ್ವಲ್ ಫೋನ್ ಮಾಡಿದ್ದ . ಹೇಳು ಪ್ರಜ್ವಲ್ ಅಂದೆ ನಡುಗುವ ಧ್ವನಿಯಲ್ಲಿ ' ಸಾರ್ ಸೋಮಣ್ಣ ಹೋಗ್ಬಿಟ್ಟರಂತೆ ' ಅಂದ ! ಎದೆ ದಡ್ ಅಂತು..... ಏನಾಗಿತ್ತಂತೆ ಪ್ರಜ್ವಲ್ ಅಂದೆ. ಗೊತ್ತಿಲ್ಲ ಸಾರ್ ಬೆಳಗ್ಗೆಯಿಂದ ಫೋನ್ ಮಾಡಿದ್ರು ತೆಗೆದಿಲ್ಲ ಅಂತ ಹೋಗಿ ಮನೇಲಿ ನೋಡಿದಾರೆ. ಮಲಗಿದ್ದವರು ಮಲಗಿದ್ದಂಗೆ ಪ್ರಾಣ ಬಿಟ್ ಬಿಟ್ಟಿದಾರೆ. ಹಾರ್ಟ್ ಅಟ್ಯಾಕ್ ಅನ್ಸುತ್ತೆ ಸಾರ್ ಅಂತ ಹೇಳಿ ಫೋನಿಟ್ಟ.
' ಸೋಮುಗೌಡ ' ಚಿತ್ರರಂಗದ ಬಹುತೇಕರಿಗೆ ಚಿರಪರಿಚಿತ . ಸಭ್ಯಸ್ಥ , ಸ್ಪೂರದ್ರೂಪಿ, ವಿಚಾರವಂತ, ವಿದ್ಯಾವಂತ. ಸಿನಿಮಾದ ಸಂಪೂರ್ಣ ಕೆಲಸ ಅರೆದು ಕುಡಿದಿದ್ದ. ಎಸ್ ಮಹೇಂದರ್, ರಾಮ್ ನಾರಾಯಣ್, ಕಾಂತಾ ಕನ್ನಲ್ಲಿ ಮೊದಲಾದ ನಿರ್ದೇಶಕರ ಬಳಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದಂತಹ ಅನುಭವಿ.
ಒಂದು ಕಥೆ ಬರ್ಕೊಂಡು ಸಿನಿಮಾ ನಿರ್ದೇಶನ ಮಾಡ್ಬೇಕು ಅಂತ ನಿರ್ಮಾಪಕರ ಹುಡುಕಾಟದಲ್ಲಿದ್ದ . ಸದಾ ಲವಲವಿಕೆಯಿಂದ ಪಟ ಪಟ ಅಂತ ಮಾತಾಡ್ತಾ ಇದ್ದ ವ್ಯಕ್ತಿ. ಹುಡುಕ್ತಿದೀನಿ ಸಾರ್ ಪ್ರೊಡ್ಯೂಸರ್ ಸಿಕ್ಕಿದ್ರೆ ಸಿನಿಮಾ ಮಾಡ್ತೀನಿ ! ಹುಡುಗಿ ಸಿಕ್ಕಿದ್ರೆ ಮದುವೆ ಆಗ್ತೀನಿ ಅಂತ ತಮಾಷೆ ಮಾಡ್ತಿದ್ದ.
ತಂದೆ ಇರಲಿಲ್ಲ. ಅಮ್ಮ ಇ ಎಸ್ ಐ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ರು, ಅವರು ರಿಟೈರ್ಡ್ಡ್ ಆದ್ಮೇಲೆ ಮಾಗಡಿ ರಸ್ತೆಯಲ್ಲಿ ಒಂದು ಮನೆ ಕಟ್ಕೊಂಡು ಅಮ್ಮ ಮಗ ಇಬ್ರು ವಾಸ ಮಾಡ್ತಿದ್ರು. ಮನೆಗೊಂದು ಸೊಸೆ ತರೋದು ಅಮ್ಮನ ಬಹುದೊಡ್ಡ ಕನಸು ಆಗಿತ್ತು . ಹೀಗೆ ಎರಡು ವರ್ಷದ ಹಿಂದೆ ಅಮ್ಮ ಸಹ ತೀರ್ಕೊಂಡ್ರು, ಇವತ್ತು ಸೋಮಣ್ಣ ಸಹ ಹೋಗ್ಬಿಟ್ಟ. ಆಸೆಪಟ್ಟು ಕಷ್ಟಪಟ್ಟು ಕಟ್ಕೊಂಡ ಮನೇಲಿ ಅಮ್ಮನೂ ಇಲ್ಲ ಸೋಮಣ್ಣನೂ ಇಲ್ಲ. ಒಂದು ಸಿಗರೇಟ್ ಸೇದಲಿಲ್ಲ, ಒಂದು ಗುಟುಕು ವಿಸ್ಕಿ ಕುಡೀಲಿಲ್ಲ, ಒಂದು ತುಂಡು ಮಾಂಸ ತಿನ್ನಲಿಲ್ಲ, ಒಂದು ಚಟ ಮಾಡ್ಲಿಲ್ಲ. ಶಿಸ್ತಾಗಿ ಬದುಕಿದ್ದ ಜೀವ ಅದು. ಆದ್ರೆ ವಿಧಿ ತುಂಬಾನೇ ಕಷ್ಟ ಕೊಟ್ಟು ಕರ್ಕೊಂಡು ಹೋಗ್ಬಿಟ್ಟಿದೆ


