ಅಜಯ್ ರಾವ್ ಹಾಗೂ ಜಾಕಿ ಕಾಂಬಿನೇಶನ್ ಸಿನಿಮಾ ಶೋಕಿವಾಲ ಏಪ್ರಿಲ್ 29ರಂದು ರಿಲೀಸ್‌ಗೆ ಸಜ್ಜಾಗಿದೆ.
ಅಜಯ್ ರಾವ್ ನಟನೆಯ ‘ಶೋಕಿವಾಲ’ ಚಿತ್ರದ ಟೀಸರ್‌ಗೆ ನೋಡುಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಶ್ರೀ ರಾಮನವಮಿ ಹಬ್ಬದಂದು ನಟ ಪುನೀತ್‌ರಾಜ್‌ಕುಮಾರ್ ಹಾಗೂ ಡಾ ರಾಜ್‌ಕುಮಾರ್ ಅವರ ಸ್ಮಾರಕದ ಬಳಿ ಚಿತ್ರತಂಡದಿಂದಲೇ ಬಿಡುಗಡೆ ಆದ ಟೀಸರ್ ಇದಾಗಿದ್ದು, ಜಾಕಿ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇವರಿಗೆ ಇದು ಮೊದಲ ನಿರ್ದೇಶನದ ಸಿನಿಮಾ. ಸದ್ಯಕ್ಕೆ ಟೀಸರ್‌ಗೆ ಒಳ್ಳೆಯ ಪ್ರತಿಕ್ರಿಯೆ ಬರುತ್ತಿರುವ ಹಿನ್ನೆಲೆಯಲ್ಲಿ ಚಿತ್ರದ ಬಿಡುಗಡೆಯ ದಿನಾಂಕವನ್ನೂ ಚಿತ್ರತಂಡ ಘೋಷಿಸಿದೆ. ಏಪ್ರಿಲ್ 29ರಂದು ರಾಜ್ಯಾದ್ಯಾಂತ ಸಿನಿಮಾ ತೆರೆಗೆ ಬರಲಿದೆ. ‘ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಅಜಯ್ ರಾವ್ ಅವರ ಹಿಂದಿನ ಚಿತ್ರಗಳಿಗಿಂತಲೂ ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರು ನೋಡಿ ಗೆಲ್ಲಿಸುತ್ತಾರೆಂಬ ನಂಬಿಕೆ ಇದೆ. ಇದು ಹಳ್ಳಿ ಸೊಗಡಿನ ಕತೆಯಾಗಿದೆ. ಹೀಗಾಗಿ ಎಲ್ಲರಿಗೂ ಈ ಚಿತ್ರದ ಕತೆ ಇಷ್ಟವಾಗಲಿದೆ’ ಎನ್ನುತ್ತಾರೆ ಜಾಕಿ.
ಚಿತ್ರದ ನಾಯಕಿಯಾಗಿ ಸಂಜನಾ ಆನಂದ್ ನಟಿಸಿದ್ದಾರೆ. ಉಳಿದಂತೆ ಶರತ್ ಲೋಹಿತಾಶ್ವ , ಗಿರೀಶ್ ಶಿವಣ್ಣ , ತಬಲಾ ನಾಣಿ, ಮುನಿರಾಜ್, ಪ್ರಮೋದ್ ಶೆಟ್ಟಿ, ಅರುಣ ಬಾಲರಾಜ್, ವಾಣಿ, ಚಂದನ, ಲಾಸ್ಯ, ನಾಗರಾಜಮೂರ್ತಿ ಮುಂತಾದವರು ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಶ್ರೀಧರ್ ವಿ ಸಂಭ್ರಮ… ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಜಯಂತ್ ಕಾಯ್ಕಿಣಿ, ನಾಗೇಂದ್ರಪ್ರಸಾದ್, ಚೇತನ್ ಕುಮಾರ್ ಅವರು ಹಾಡುಗಳಿಗೆ ಸಾಹಿತ್ಯ ನೀಡಿದ್ದಾರೆ. ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ. ಚಂದ್ರಶೇಖರ್ ಚಿತ್ರವನ್ನು ನಿರ್ಮಿಸಿದ್ದಾರೆ.
#LockDown ಆಗಿರುವ ಅಜಯ್ ರಾವ್ ಮಗಳ ಮುಖಕ್ಕೆ ಮಾಡಿರುವ ಅವಾಂತರ ನೋಡಿ!
'ಶೋಕಿವಾಲ' ಪಕ್ಕಾ ಹಳ್ಳಿ ಸೊಗಡಿನ ಚಿತ್ರವಾಗಿದ್ದು, ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಲಾಂಛನದಲ್ಲಿ ಟಿ.ಆರ್.ಚಂದ್ರಶೇಖರ್ ಅವರು ನಿರ್ಮಿಸುತ್ತಿದ್ದಾರೆ. ಲಕ್ಕಿ, ಸಂತು ಸ್ಟ್ರೇಟ್ ಫಾರ್ವಡ್, ಕೆಜಿಎಫ್ ಸಿನಿಮಾಗಳಿಗೆ ಸಹ ನಿರ್ದೇಶಕರಾಗಿದ್ದ ಜಾಕಿ (Jocky) ಮೊದಲ ಬಾರಿಗೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಕಂಪ್ಲಿಟ್ ಆಗಿ ಡಬ್ಬಿಂಗ್ ಸಹ ಮುಕ್ತಾಯವಾಗಿದೆ. ಡಬ್ಬಿಂಗ್ (Dubbing) ಸಮಯದಲ್ಲಿ ಚಿತ್ರವನ್ನು ವೀಕ್ಷಿಸಿದ ಚಿತ್ರದ ಕಲಾವಿದರು 'ಚಿತ್ರ ಉತ್ತಮವಾಗಿ ಮೂಡಿಬಂದಿದೆ' ಎಂದು ತಿಳಿಸಿದ್ದಾರೆ. ಚನ್ನಪಟ್ಟಣ, ಹೊಂಗನೂರು, ವಿರೂಪಾಕ್ಷಪುರ, ಶ್ರೀರಂಗಪಟ್ಟಣ, ಮಂಡ್ಯ, ಮೈಸೂರು, ತುಮಕೂರು, ಮಾಗಡಿ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.
ಕೃಷ್ಣ ಹೆಸರಲ್ಲಿ ನೂರು ಸಿನಿಮಾ ಬಂದ್ರೂ ಮಾಡ್ತೀನಿ: ಅಜಯ್ ರಾವ್
'ನಿರ್ಮಾಪಕರಿಗೆ ನಾನು 50 ದಿನದಲ್ಲಿ ಚಿತ್ರದ ಚಿತ್ರೀಕರಣ ಮಾಡಿ ಮುಗಿಸುತ್ತೇನೆ ಎಂದು ಹೇಳಿದ್ದೆ, ತೊಂದರೆ ಇಲ್ಲ ನಿಮ್ಮ ಮೇಲೆ ತುಂಬ ನಂಬಿಕೆ ಇದೆ ಮಾಡಿ ಎಂದು ನಿರ್ಮಾಪಕರು ಹೇಳಿದರು. 45 ದಿನಕ್ಕೆ ಸಿನಿಮಾ ಶೂಟಿಂಗ್ ಮುಗಿಸಿದ್ದೇನೆ, ನಿರ್ಮಾಪಕರಿಗೆ ಖುಷಿಯಾಗಿದೆ. ನಿರ್ಮಾಪಕರ ನಿರ್ದೇಶಕ ನೀನು ಅಂತ ಟಿ.ಆರ್.ಚಂದ್ರಶೇಖರ್ ಅವರು ನನಗೆ ಹೇಳಿದ್ದಾರೆ' ಎಂದು ಚಿತ್ರದ ನಿರ್ದೇಶಕ ಜಾಕಿ ಈ ಹಿಂದೆ ತಿಳಿಸಿದ್ದಾರೆ. ಮೊದಲ ಬಾರಿಗೆ ಅಜಯ್ ರಾವ್ ಹಳ್ಳಿ ಹುಡುಗನಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಸಂಜನಾ ಆನಂದ್ ಅವರೂ ಕೂಡ ಹಳ್ಳಿ ಹುಡುಗಿಯಾಗಿ ಮಿಂಚಿದ್ದಾರೆ.
