ಇದೀಗ ಅಜಯ್‌ ಹಾಗೂ ಅಪೂರ್ವ ಕಾಂಬಿನೇಶನ್‌ನಲ್ಲಿ ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರ ‘ಕೃಷ್ಣ ಟಾಕೀಸ್‌’ ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರ ಏಪ್ರಿಲ್‌ 9ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಸಿನಿಮಾದ ಟ್ರೇಲರ್‌ ಲಾಂಚ್‌ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮಾತನಾಡಿದ ಅಜಯ್‌ ರಾವ್‌, ‘ಕೃಷ್ಣ ಟೈಟಲ್‌ನಲ್ಲಿ ಸ್ಯಾಂಡಲ್‌ವುಡ್‌ಗೆ ಬಂದು 20 ವರ್ಷಗಳಾದವು. ಸಾಕಷ್ಟುಚಿತ್ರಗಳಲ್ಲಿ ಅಭಿನಯಿಸಿದ್ದರೂ ಈ ಥರದ ಜಾನರ್‌ನಲ್ಲಿ ಮಾಡಿರಲಿಲ್ಲ. ಒಬ್ಬ ಜರ್ನಲಿಸ್ಟ್‌ ಆಗಿದ್ದು ಒಂದು ರಹಸ್ಯವೊಂದನ್ನು ಭೇದಿಸುವ ಪಾತ್ರ. ಚಿತ್ರದ ಕತೆ ಕುತೂಹಲ ಕೆರಳಿಸುವಂತಿದೆ. ಜನರ ಸ್ಪಂದನೆ ಹೇಗಿರಬಹುದು ಅನ್ನೋದರ ಬಗೆಗೂ ಸಾಕಷ್ಟುಕುತೂಹಲವಿದೆ’ ಎಂದರು.

ಹುಟ್ಟುಹಬ್ಬದ ದಿನವೇ ರಚಿತಾಗೆ 'ಲವ್ ಯು ರಚ್ಚು' ಹೇಳಿದ ಅಜಯ್; ರೊಮ್ಯಾನ್ಸ್‌ ಫೋಟೋ ವೈರಲ್!

ಈ ಚಿತ್ರದ ನಿರ್ದೇಶನದ ಜೊತೆಗೆ ಕತೆಯನ್ನೂ ಸಿದ್ಧಪಡಿಸಿದವರು ನಿರ್ದೇಶಕ ವಿಜಯಾನಂದ್‌. ಅವರು ಮಾತನಾಡುತ್ತಾ, ‘2017ರ ಹೊತ್ತಿಗೆ ನಡೆದು ಒಂದು ಘಟನೆ ನನ್ನನ್ನ ಬಹಳ ಕಾಡುತ್ತಿತ್ತು. ಅದನ್ನೇ ಚಿತ್ರವಾಗಿಸಿದೆ. ಕತೆ ವಿಸ್ತರಿಸುವಾಗ ಅಜಯ್‌ ರಾವ್‌ ಅವರೇ ಕಣ್ಮುಂದೆ ಬರುತ್ತಿದ್ದರು. ಹೀಗಾಗಿ ಈ ಪಾತ್ರಕ್ಕಾಗಿ ಅವರನ್ನೇ ಮೊದಲು ಸಂಪರ್ಕಿಸಿದೆ. ಗ್ರೀನ್‌ ಸಿಗ್ನಲ್‌ ಸಿಕ್ಕಾಗ ಖುಷಿಯಾಯ್ತು. ಇದು ನನಗೆ ಆತ್ಮತೃಪ್ತಿ ಕೊಟ್ಟಚಿತ್ರ’ ಎಂದರು.

ಹಾಸ್ಯನಟ ಚಿಕ್ಕಣ್ಣ ಈ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿದ್ದಾರೆ. ಅವರು ಮಾತನಾಡಿ, ‘ಈವರೆಗೆ ನಾನು ನಟಿಸಿದ್ದು ಹಾಸ್ಯ ಚಿತ್ರಗಳಲ್ಲಿ. ಆದರೆ ಕೃಷ್ಣ ಟಾಕೀಸ್‌ನಲ್ಲಿ ನನ್ನ ಪಾತ್ರಕ್ಕೆ ಹಾಸ್ಯದ ಜೊತೆಗೆ ಎಮೋಶನಲ್‌ ಟಚ್‌ ಸಹ ಇದೆ. ಮಹಿಳೆಯರಿಗೂ ಈ ಸಿನಿಮಾಗೂ ಹತ್ತಿರದ ಸಂಬಂಧವಿದೆ’ ಎಂದರು.

ನಟ ಅಜಯ್ ರಾವ್ ಮಗಳ 2ನೇ ಹುಟ್ಟುಹಬ್ಬದ ಸಂಭ್ರಮ; ಫೋಟೋಸ್ ನೋಡಿ!

ನಿರ್ಮಾಪಕ ಗೋವಿಂದರಾಜು ಆಲೂರು ಅವರಿಗೆ ಟೀಮ್‌ ಎಲ್ಲೂ ನಿರ್ಮಾಪಕರಿಗೆ ಹೊರೆಯಾಗದಂತೆ ಚಿತ್ರ ಮಾಡಿದ ಬಗ್ಗೆ ಖುಷಿ ಇತ್ತು. ಕಾರ್ಯನಿರ್ವಾಹಕ ನಿರ್ಮಾಪಕ ನಿರಂತ್‌, ಸಂಗೀತ ನಿರ್ದೇಶಕ ಶ್ರೀಧರ್‌ ಸಂಭ್ರಮ್‌, ನಾಯಕಿ ಅಪೂರ್ವ, ನಟ ಯಶ್‌ ಶೆಟ್ಟಿ, ಡಿಓಪಿ ಮಾಡಿರುವ ಅಭಿಷೇಕ್‌ ಕಾಸರಗೋಡು, ಗೀತ ರಚನಕಾರ ಪ್ರಮೋದ್‌ ಮರವಂತೆ, ಗಾಯಕ ವಿಹಾನ್‌ ಪಾಲ್ಗೊಂಡಿದ್ದರು.