ಅಪ್ಪು ಸರ್ ನೀವು ಇನ್ನು ಮುಂದೆ ಇಲ್ಲ ಎಂಬುದನ್ನು ನಮ್ಮ ಮನಸ್ಸು ಒಪ್ಪಿಕೊಳ್ಳುತ್ತಿಲ್ಲ. ಇದು ನಂಬಲಾಗದ ವಿಷಯವಾಗಿದೆ. ನೀವು ಇಲ್ಲದ ಚಿತ್ರರಂಗ ಬರಡಾಗಿದೆ. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ ರಾಧಿಕಾ ಪಂಡಿತ್.

ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಬಾರದ ಲೋಕಕ್ಕೆ ಪಯಣಿಸಿರುವುದು ಎಲ್ಲರನ್ನೂ ಆಘಾತಕ್ಕೆ ದೂಡಿದೆ. ಚಿತ್ರರಂಗದ ತಾರೆಯರು ಕೂಡ ಪುನೀತ್‌ರನ್ನು ನೆನೆದು ಭಾವುಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ನಡುವೆ ಸ್ಯಾಂಡಲ್‌ವುಡ್‌ನ ಸಿಂಡ್ರೆಲಾ ಎಂದೇ ಖ್ಯಾತರಾದ ನಟಿ ರಾಧಿಕಾ ಪಂಡಿತ್ (Radhika Pandit)​ ಪುನೀತ್ ನೆನೆದು ಭಾವನಾತ್ಮಕ ಬರಹವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಹೌದು! ರಾಧಿಕಾ ಪಂಡಿತ್ ಪುನೀತ್ ನಿಧನ ಹೊಂದಿ 13 ದಿನಗಳ ಬಳಿಕ ತಮ್ಮ ಫೇಸ್‌ಬುಕ್ (FaceBook) ಖಾತೆಯಲ್ಲಿ, 'ಅಪ್ಪು ಸರ್ ನೀವು ಇನ್ನು ಮುಂದೆ ಇಲ್ಲ ಎಂಬುದನ್ನು ನಮ್ಮ ಮನಸ್ಸು ಒಪ್ಪಿಕೊಳ್ಳುತ್ತಿಲ್ಲ. ಇದು ನಂಬಲಾಗದ ವಿಷಯವಾಗಿದೆ. ನೀವು ಇಲ್ಲದ ಚಿತ್ರರಂಗ ಬರಡಾಗಿದೆ. ನಿಮ್ಮೊಟ್ಟಿಗೆ ಕೆಲಸ ಮಾಡುವ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಮಗೆಲ್ಲ ನೆನಪಿನಲ್ಲಿ ನೀವೀಗ ಎಂದಿಗಿಂತ ಸನಿಹ' ಎಂದು ಬರೆದುಕೊಂಡು ಅಪ್ಪು ಜೊತೆಗೆ ಇರುವ ಕೆಲವು ಫೋಟೋಗಳನ್ನು ಶೇರ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. ರಾಧಿಕಾ ಪಂಡಿತ್, ಪುನೀತ್ ಜೊತೆ 'ಹುಡುಗರು' (Hudugaru) ಮತ್ತು ದೊಡ್ಮನೆ ಹುಡ್ಗ' (Dodmane Huduga) ಚಿತ್ರದಲ್ಲಿ ತೆರೆಹಂಚಿಕೊಂಡಿದ್ದರು. 

Sakrebailu Elephant Camp: ಮರಿಗೆ ಪುನೀತ್ ರಾಜ್‌ಕುಮಾರ್ ಹೆಸರು

ರಾಧಿಕಾ ಹಂಚಿಕೊಂಡಿರುವ ಈ ಪೋಸ್ಟ್‌ಗೆ ನೆಟ್ಟಿಗರು, ನೀವು ದೊಡ್ಮನೆ ಹುಡುಗ ಸಿನಿಮಾದಲ್ಲಿ ನಟಿಸಿದ್ದೀರಿ, ಪುನೀತ್ ಅವರ ಬಗ್ಗೆ ಪೋಸ್ಟ್​ ಮಾಡೋಕೆ ಇಷ್ಟು ದಿನ ಬೇಕಾಯಿತೇ, ಅಂತಿಮ ದರ್ಶನ ಏಕೆ ಪಡೆದಿಲ್ಲ, ಈಗ ಪುನೀತ್‌ರನ್ನ ನೆನಪಿಸಿಕೊಂಡು ಪೋಸ್ಟ್ ಹಾಕುತ್ತಿದ್ದೀರಾ, ಇದು ಸರಿನಾ, ಎಂದು ರಾಧಿಕಾಗೆ ಖಾರವಾಗಿ ಅಭಿಮಾನಿಗಳು ಪ್ರಶ್ನೆ ಮಾಡಿದ್ದರು. ಇದಕ್ಕೆ ರಾಧಿಕಾ ಕೂಡಾ ಸಮಾಧಾನವಾಗಿಯೇ ನೆಟ್ಟಿಗರಿಗೆ ಉತ್ತರಿಸಿದ್ದಾರೆ. 

ಇನ್ನು ಪುನೀತ್ ರಾಜ್‌ಕುಮಾರ್ ನಿಧನ ಹೊಂದಿದ ನಂತರ ಸ್ಯಾಂಡಲ್​ವುಡ್​ನ ಬಹುತೇಕ ತಾರೆಯರು, ರಾಜಕಾರಣಿಗಳು ಅವರ ಅಂತಿಮ ದರ್ಶನ ಪಡೆದು ಬಂದಿದ್ದರು. ಆದರೆ, ರಾಧಿಕಾ ಪಂಡಿತ್ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಅಪ್ಪು ಬಗ್ಗೆ ಅವರು ಯಾವುದೇ ಪೋಸ್ಟ್​ ಕೂಡ ಹಾಕಿರಲಿಲ್ಲ. ಮುಖ್ಯವಾಗಿ ರಾಧಿಕಾ ಪಂಡಿತ್, ಪುನೀತ್ ನಿಧನರಾದಾಗ ಅವರ ನಿವಾಸಕ್ಕೆ ಭೇಟಿ ನೀಡಿ ಎರಡು ಗಂಟೆ ಇದ್ದರು ಎಂದು ಪುನೀತ್ ಮನೆಯವರೇ ಹೇಳಿದ್ದಾರೆ. ಅಲ್ಲದೇ ಸಿನಿಮಾ ಪತ್ರಕರ್ತರು ಅಲ್ಲಿ ರಾಧಿಕಾ ಅವರನ್ನು ಮಾತನಾಡಿಸಿದಾಗ ಅವರು ಯಾವುದೇ ತರಹದ ಪ್ರತಿಕ್ರಿಯೆಯನ್ನು ಈಗ ಕೊಡುವುದಕ್ಕೆ ಆಗುವುದಿಲ್ಲ ಎಂದಿದ್ದಾರಂತೆ.

ಅಪ್ಪು ಅಗಲುವ ಹಿಂದಿನ ರಾತ್ರಿ ಆದದ್ದೇ ಬೇರೆ, ಮಗಳನ್ನು ರೌಂಡ್ಸ್ ಕರೆದೊಯ್ಯಲೇ ಇಲ್ಲ

'ಜೀವನದಲ್ಲಿ ಆದಷ್ಟು ಒಬ್ಬರ ಮೇಲೆ ಕೋಪ ಇದ್ರು ಪ್ರೀತಿ ಹಂಚಿ, ತಾಳ್ಮೆಯಿರಲಿ. ನಾನು ಅಂತಿಮ ದರ್ಶನ ಪಡೆದೆನೋ ಇಲ್ವೋ ಎಂಬುದು ಅವರ ಕುಟುಂಬಕ್ಕೆ ತಿಳಿದಿದೆ, ನಮಗೆ ತಿಳಿದಿದೆ. ಕ್ಯಾಮೆರಾ ಮುಂದೆ ಬಂದು ಮಾತನಾಡುವ ಶಕ್ತಿ ನನಗಿರಲಿಲ್ಲ. ಕ್ಯಾಮೆರಾ ಮುಂದೆ ಬಂದು ಮಾತನಾಡದೆ ಇರುವುದು ದೊಡ್ಡ ತಪ್ಪು ಎಂದು ನಾನು ಭಾವಿಸಲಿರಲಿಲ್ಲ. ಅವರ ಮೇಲಿರುವ ಪ್ರೀತಿಗೆ ನೀವು ಹೀಗೆ ಮಾತನಾಡುತ್ತಿರುವುದು ಸಹಜ. ಅಪ್ಪು ಸರ್ ಅಗಲಿಕೆ ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಾದ ನಿಮಗೆ ಎಷ್ಟು ನೋವು ನೀಡುತ್ತಿದೆಯೋ, ಅಷ್ಟೇ ನೋವು ನನಗೂ ನಮ್ಮ ಕುಟುಂಬಕ್ಕೂ ಆಗಿದೆ. ನಮ್ಮೆಲ್ಲರ ನೆಚ್ಚಿನ ಅಪ್ಪು ಸರ್ ಅಗಲಿಕೆ ಎಂದೆಂದಿಗೂ ನಮ್ನನ್ನು ಕಾಡುತ್ತಲೇ ಇರುತ್ತದೆ' ಎಂದು ಬರೆದುಕೊಂಡು ನೆಟ್ಟಿಗರ ಪ್ರಶ್ನೆಗೆ ರಾಧಿಕಾ ಪಂಡಿತ್ ಉತ್ತರಿಸಿದ್ದಾರೆ.