ಯಶ್‌ ಅಭಿನಯದ ‘ಟಾಕ್ಸಿಕ್’ ಸಿನಿಮಾದ ಬಗ್ಗೆ ಪರ-ವಿರೋಧದ ಚರ್ಚೆ ನಡೆಯುತ್ತಿರುವ ನಡುವೆ ಕಿಚ್ಚ ಸುದೀಪ್‌ ಮತ್ತು ಉಪೇಂದ್ರ ಚಿತ್ರತಂಡಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ‘ಟಾಕ್ಸಿಕ್’ನ ವಿಭಿನ್ನ ಪ್ರಯತ್ನವನ್ನು ಸುದೀಪ್‌ ಮೆಚ್ಚಿಕೊಂಡಿದ್ದು, ಉಪೇಂದ್ರ ಕೂಡ ಸಿನಿಮಾ ನೋಡಿ ಹೊಸ ಅನುಭವ ಎಂದಿದ್ದಾರೆ.

‘ಟಾಕ್ಸಿಕ್’ ಸಿನಿಮಾ ಬಿಡುಗಡೆಯಾದ ಬಳಿಕ ಪರ-ವಿರೋಧದ ಚರ್ಚೆಗಳು ಜೋರಾಗಿವೆ. ಅದರಲ್ಲೂ ಉತ್ತರ ಭಾರತದಲ್ಲಿ ಸಿನಿಮಾಗೆ ಬಂದ ನೆಗೆಟಿವ್‌ ಪ್ರತಿಕ್ರಿಯೆಗಳು ಹಾಗೂ ತೆಲುಗು-ತಮಿಳು ವಲಯದಲ್ಲಿ ನಡೆದ ಟ್ರೋಲ್‌ಗಳ ನಡುವೆ, ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳಿಂದ ನಿರೀಕ್ಷಿತ ಮಟ್ಟದ ಬೆಂಬಲ ಸಿಗುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಇದೀಗ ಈ ಚರ್ಚೆಗೆ ಮತ್ತೊಂದು ತಿರುವು ಸಿಕ್ಕಿದೆ.

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ‘ಟಾಕ್ಸಿಕ್’ ಸಿನಿಮಾವನ್ನು ಮೆಚ್ಚಿಕೊಂಡು ಈಗಾಗಲೇ ರಿಯಲ್‌ ಸ್ಟಾರ್‌ ಉಪೇಂದ್ರ ಮಾತನಾಡಿದ್ದರು. ಇದರ ಬೆನ್ನಲ್ಲೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಕೂಡ ಯಶ್‌ ಹಾಗೂ ಇಡೀ ‘ಟಾಕ್ಸಿಕ್’ ತಂಡಕ್ಕೆ ಮನಸಾರೆ ಶುಭ ಹಾರೈಸಿದ್ದಾರೆ. ಸುದೀಪ್‌ ಅವರ ಈ ಮಾತುಗಳು ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿವೆ.

‘ಸಿದ್ಧಸೂತ್ರದ ಸಿನಿಮಾ ಮಾಡೋ ಸುಲಭ ದಾರಿ ಹಿಡಿಯಲಿಲ್ಲ’

ಯಶ್‌ ಅವರನ್ನು ಉದ್ದೇಶಿಸಿ ಮಾತನಾಡಿರುವ ಸುದೀಪ್‌, ಹಿಂದಿನ ಬ್ಲಾಕ್‌ಬಸ್ಟರ್‌ ಯಶಸ್ಸಿನ ನಂತರ ಅದೇ ರೀತಿಯ ಸಿದ್ಧಸೂತ್ರದ ಸಿನಿಮಾಗಳನ್ನು ಮಾಡುವ ಸುಲಭ ದಾರಿಯನ್ನು ಆಯ್ಕೆ ಮಾಡದೆ, ವಿಭಿನ್ನವಾಗಿ ಯೋಚಿಸಿ ಹೊಸ ಪ್ರಯತ್ನ ಮಾಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾನ್ಯ ಕಮರ್ಷಿಯಲ್‌ ಸಿನಿಮಾಗಳ ಚೌಕಟ್ಟಿನಿಂದ ಹೊರಬಂದು ಹೊಸ ರೀತಿಯ ಕಥೆಯನ್ನು ಪ್ರೇಕ್ಷಕರ ಮುಂದೆ ಇಡುವುದಕ್ಕೆ ವಿಶೇಷ ಮನಸ್ಥಿತಿ, ಬದ್ಧತೆ ಮತ್ತು ಅಪಾರ ಧೈರ್ಯ ಬೇಕು. ‘ಟಾಕ್ಸಿಕ್’ ಒಂದು ಶ್ಲಾಘನೀಯ ಪ್ರಯತ್ನ ಎಂದು ಸುದೀಪ್‌ ಹೇಳಿದ್ದಾರೆ.

‘ಟಾಕ್ಸಿಕ್‌ ಹಲವು ವಿಚಾರಗಳ ಬಗ್ಗೆ ಚರ್ಚೆಗೆ ದಾರಿ ಮಾಡಿಕೊಡುತ್ತದೆ’

ಸಿನಿಮಾದಲ್ಲಿ ಕುತೂಹಲ ಮೂಡಿಸುವ ಹಲವು ಅಂಶಗಳಿವೆ. ಜೊತೆಗೆ ಆರೋಗ್ಯಕರ ಚರ್ಚೆ ಹಾಗೂ ಕಲಿಕೆಗೆ ಅವಕಾಶ ಮಾಡಿಕೊಡುವ ವಿಚಾರಗಳೂ ಇವೆ ಎಂದು ಸುದೀಪ್‌ ಅಭಿಪ್ರಾಯಪಟ್ಟಿದ್ದಾರೆ. ಸಾಂಪ್ರದಾಯಿಕ ಚೌಕಟ್ಟನ್ನು ಮೀರಿ ಹೊಸ ಪ್ರಯೋಗ ಮಾಡಲು ಧೈರ್ಯ ತೋರಿಸಿದ್ದಕ್ಕೆ ಅಭಿನಂದನೆಗಳು. ಸ್ನೇಹಿತ, ನಿಮ್ಮ ಮುಂದಿನ ಹಾದಿಗೆ ಪ್ರೀತಿ ತುಂಬಿದ ಶುಭ ಹಾರೈಕೆಗಳು ಎಂದು ಸುದೀಪ್‌ ಯಶ್‌ ಹಾಗೂ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಸುದೀಪ್‌ ಅವರ ಈ ಹೇಳಿಕೆ ‘ಟಾಕ್ಸಿಕ್’ ಸಿನಿಮಾದ ಬಗ್ಗೆ ನಡೆಯುತ್ತಿರುವ ಚರ್ಚೆಯ ನಡುವೆಯೇ ಸಾಕಷ್ಟು ಗಮನ ಸೆಳೆದಿದೆ.

ಈ ಹಿಂದೆ ಉಪೇಂದ್ರ ಕೂಡ ‘ಟಾಕ್ಸಿಕ್’ಗೆ ಫಿದಾ ಆಗಿದ್ದರು!

ಸುದೀಪ್‌ಗಿಂತ ಮುಂಚೆಯೇ ರಿಯಲ್‌ ಸ್ಟಾರ್‌ ಉಪೇಂದ್ರ ಕೂಡ ‘ಟಾಕ್ಸಿಕ್’ ಸಿನಿಮಾ ನೋಡಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಸಿನಿಮಾವನ್ನು ಮೆಚ್ಚಿಕೊಂಡಿದ್ದ ಉಪೇಂದ್ರ, ‘ಟಾಕ್ಸಿಕ್’ ಒಂದು ಕಾಲ್ಪನಿಕ ಕಥೆಯಾಗಿದ್ದರೂ ದೊಡ್ಡವರಿಗಾಗಿ ರೂಪಿಸಿರುವ ವಿಭಿನ್ನ ಲೋಕದ ಅನುಭವ ನೀಡುತ್ತದೆ ಎಂದು ಹೇಳಿದ್ದರು.

ಟಾಕ್ಸಿಕ್ ಸಿನಿಮಾ ನೋಡಿದೆ. ವಾವ್! ಎಂತಹ ಸಿನಿಮಾ! ಒಂದು ಹೊಸ ಲೋಕ. ಒಂದು ಸಂಪೂರ್ಣ ಹೊಸ ಅನುಭವ! ಎಂದು ಉಪೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಚಿತ್ರದ ಪ್ರತಿಯೊಬ್ಬ ಕಲಾವಿದ ಹಾಗೂ ತಂತ್ರಜ್ಞರ ಶ್ರಮ, ಶ್ರದ್ಧೆ ಮತ್ತು ಕಲೆಯ ಮೇಲಿನ ಪ್ರೀತಿಯನ್ನು ಅಭಿನಂದಿಸಿದ್ದ ಅವರು, ಯಶ್‌ ಹಾಗೂ ಇಡೀ ತಂಡಕ್ಕೆ ಹ್ಯಾಟ್ಸ್‌ ಆಫ್‌ ಎಂದಿದ್ದರು.

‘ಕನ್ನಡದ ಸೆಲೆಬ್ರಿಟಿಗಳು ಬೆಂಬಲ ನೀಡುತ್ತಿಲ್ಲ’ ಎಂಬ ಚರ್ಚೆ ನಡುವೆ ಸುದೀಪ್‌-ಉಪೇಂದ್ರ ಮಾತು

‘ಟಾಕ್ಸಿಕ್’ ಬಿಡುಗಡೆಯಾದ ಬಳಿಕ ಸಿನಿಮಾದ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ವಿಶೇಷವಾಗಿ ಉತ್ತರ ಭಾರತದಲ್ಲಿ ಸಿನಿಮಾಗೆ ನೆಗೆಟಿವ್‌ ಪ್ರತಿಕ್ರಿಯೆಗಳು ಬಂದಿದ್ದರೆ, ತೆಲುಗು ಮತ್ತು ತಮಿಳು ವಲಯದಲ್ಲೂ ಕೆಲವರು ಸಿನಿಮಾವನ್ನು ಟ್ರೋಲ್‌ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದ ಪ್ರಮುಖ ಸೆಲೆಬ್ರಿಟಿಗಳು ‘ಟಾಕ್ಸಿಕ್’ ಬಗ್ಗೆ ಹೆಚ್ಚು ಮಾತನಾಡುತ್ತಿಲ್ಲ ಎಂಬ ಚರ್ಚೆಯೂ ನಡೆದಿತ್ತು.

ಇದೀಗ ಈ ಚರ್ಚೆಯ ನಡುವೆಯೇ ಉಪೇಂದ್ರ ಮತ್ತು ಸುದೀಪ್‌ ಇಬ್ಬರೂ ಸಿನಿಮಾ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿರುವುದು ವಿಶೇಷವಾಗಿದೆ. ಅದರಲ್ಲೂ ಸುದೀಪ್‌ ಅವರು ಯಶ್‌ ಅವರ ವಿಭಿನ್ನ ಪ್ರಯತ್ನವನ್ನು ಮೆಚ್ಚಿಕೊಂಡು ಸಾರ್ವಜನಿಕವಾಗಿ ಶುಭ ಹಾರೈಸಿರುವುದು ‘ಟಾಕ್ಸಿಕ್’ ಅಭಿಮಾನಿಗಳ ಗಮನ ಸೆಳೆದಿದೆ. ಇನ್ನು ಸಿನಿಮಾದ ಬಗ್ಗೆ ಪ್ರೇಕ್ಷಕರ ಅಭಿಪ್ರಾಯಗಳು ಏನೇ ಇರಲಿ, ಕನ್ನಡ ಚಿತ್ರರಂಗದ ಇಬ್ಬರು ಪ್ರಮುಖ ಸ್ಟಾರ್‌ಗಳು ವಿಭಿನ್ನ ಪ್ರಯತ್ನಕ್ಕೆ ಬೆಂಬಲವಾಗಿ ನಿಂತಿರುವುದು ಮಾತ್ರ ಸದ್ಯದ ಚರ್ಚೆಯ ಕೇಂದ್ರಬಿಂದುವಾಗಿದೆ.