‘ಪ್ರೇಮದ ಊರಲಿ’ ಹಾಡುಗಳು ಸಿನಿಪ್ರೇಕ್ಷಕರ ಮನ ಗೆದ್ದಿವೆ. ಈ ಯಶಸ್ಸಿನ ಹಿಂದೆ ಇರುವ ಸಂಗೀತ ನಿರ್ದೇಶಕ ಸುನಾದ್ ಗೌತಮ್ ಯಾರು? 15ನೇ ವಯಸ್ಸಿನಿಂದ ಆರಂಭವಾದ ಅವರ ಸಂಗೀತ ಪಯಣದ ಕುತೂಹಲಕಾರಿ ಮಾಹಿತಿ ಇಲ್ಲಿದೆ.
ಸೃಜನಶೀಲ ಜಗತ್ತಿನಲ್ಲಿ ಎಷ್ಟೋ ಬಾರಿ ನಿರಂತರ ಶ್ರಮ ಮತ್ತು ಅಪ್ಪಟ ಗುಣಮಟ್ಟದ ಕೆಲಸಗಳು ತೆರೆಯ ಮರೆಯಲ್ಲೇ ಉಳಿದುಬಿಡುತ್ತವೆ. ಅಂಥಾ ಒಂದು ಅಪ್ಪಟ ಪ್ರತಿಭೆ ಸುನಾದ್ ಗೌತಮ್. ಇದೀಗ ಅವರು ‘ಪ್ರೇಮದ ಊರಲಿ’ ಸಿನಿಮಾ ಮೂಲಕ ಸಂಗೀತ ಮಾಯೆ ಉಂಟು ಮಾಡಿದ್ದಾರೆ. ಕೇವಲ 15ನೇ ವಯಸ್ಸಿಗೆ ಕಿರುಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿ, 18ರ ಹರೆಯದಲ್ಲೇ ಸ್ವಂತ ಆಡಿಯೋ ಸ್ಟುಡಿಯೋ ಕಟ್ಟಿ ಬೆಳೆದ ಪ್ರತಿಭಾವಂತ.
22ಕ್ಕೂ ಅಧಿಕ ಚಲನಚಿತ್ರಗಳು ಹಾಗೂ 75ಕ್ಕೂ ಹೆಚ್ಚು ಜನಪ್ರಿಯ ಧಾರಾವಾಹಿಗಳಿಗೆ (ಮೆಗಾಹಿಟ್ ‘ಜೊತೆ ಜೊತೆಯಲಿ’, ಹಿಂದಿಯ ‘ತುಮ್ ಸೆ ತುಮ್ ತಕ್’ ಸೇರಿದಂತೆ) ರಾಗ ಸಂಯೋಜಿಸಿರುವ ಅನುಭವ ಇವರ ಬೆನ್ನಿಗಿದೆ. ಅಷ್ಟೇ ಅಲ್ಲ, ‘ಸೋಜಿಗ’, ‘ಗೋಲ್ಮಾಲ್’ನಂತಹ ಚಿತ್ರಗಳಿಗೆ ಕ್ಯಾಮೆರಾ ಹಿಡಿದು ‘ಅತ್ಯುತ್ತಮ ಛಾಯಾಗ್ರಾಹಕ’ ಪ್ರಶಸ್ತಿಯನ್ನೂ ಪಡೆದ ಬಹುಮುಖ ಪ್ರತಿಭೆ ಇವರು.
22ಕ್ಕೂ ಅಧಿಕ ಸಿನಿಮಾಗಳಿಗೆ ಸಂಗೀತ
ಇತ್ತೀಚೆಗೆ ಎಲ್ಲೆಡೆ ಹೊಸ ಅಲೆಯೆಬ್ಬಿಸಿರುವ ‘ಪ್ರೇಮದ ಊರಲಿ’ ಚಿತ್ರದ ಅಭೂತಪೂರ್ವ ಯಶಸ್ಸು ಸುನಾದ್ ಅವರ ಅಸಾಧಾರಣ ಸಾಮರ್ಥ್ಯವನ್ನು ಮುನ್ನೆಲೆಗೆ ತಂದು ನಿಲ್ಲಿಸಿದೆ. ಎಲ್ಲಿ ನೋಡಿದರೂ ಅವರ ಹಾಡುಗಳನ್ನು ಸಿನಿ ಪ್ರೇಕ್ಷಕರು ಗುನುಗುತ್ತಿರುವುದು ಕೇಳಿಸುತ್ತಿದೆ. ಈ ಹಿಂದೆ ‘ಅನಂತು ವರ್ಸಸ್ ನುಸ್ರತ್’ ಚಿತ್ರದ ಕ್ಲಾಸಿಕ್ ಮೆಲೋಡಿ ‘ಈಗತಾನೇ ಜಾರಿಯಾಗಿದೆ’ ಹಾಗೂ ‘ಅಪಾಯವಿದೆ ಎಚ್ಚರಿಕೆ’ ಚಿತ್ರದ ‘ಚುರುಕು ನೋಟವೇ’ ಮೂಲಕ ಸಂಗೀತ ಪ್ರಿಯರ ಮನಗೆದ್ದಿದ್ದರೂ, ಈಗ ಆ ಪ್ರತಿಭೆ ಎಲ್ಲರ ಗಮನ ಸೆಳೆಯುವ ಹಂತಕ್ಕೆ ತಲುಪಿದೆ.
ಒಂದು ಚಿತ್ರಕ್ಕೆ ಸಂಗೀತ ಬಹಳ ಮುಖ್ಯ. ಅದನ್ನು ಎಂಭತ್ತರ ದಶಕದ ಬಹುತೇಕ ಸಿನಿಮಾತಂಡಗಳು ಅರಿತುಕೊಂಡಿದ್ದವು. ಈಗ ಅಂಥದ್ದೇ ಅತಿ ಮಧುರ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಹೊಂದಿರುವ ‘ಪ್ರೇಮದ ಊರಲಿ’ ಸೂಪರ್ ಹಿಟ್ ಆಗಿದೆ. ಜನ ಮೆಚ್ಚಿಕೊಂಡಿದ್ದಾರೆ.ಇಡೀ ತಂಡಕ್ಕೆ ಮತ್ತು ಅದ್ಭುತ ಸಂಗೀತ ನೀಡಿದ ಸುನಾದ್ ಗೌತಮ್‌ಗೆ ಮೆಚ್ಚುಗೆ.


