‘ರಾಮರಸ’ ಸಿನಿಮಾದಲ್ಲಿ ಡೆಡ್ಲಿ ಆದಿತ್ಯ ‘ವೀರ ದುರ್ಮುರ್ಗಿ’ಯಾಗಿ ಕಾಣಿಸಿಕೊಳ್ಳಲಿದ್ದಾರೆ. ದಶ ಮಹಾವಿದ್ಯೆಯ ರಹಸ್ಯದೊಂದಿಗೆ ಈ ಪಾತ್ರಕ್ಕಿರುವ ನಂಟೇನು? ಸಿನಿಮಾದ ಹೊಸ ಅಪ್‌ಡೇಟ್ ಇಲ್ಲಿದೆ.

ಭಾರತೀಯ ಚಿತ್ರರಂಗದಲ್ಲಿ ಜಾನಪದ, ದೈವಿಕ ಹಾಗೂ ಆಧ್ಯಾತ್ಮಿಕ ಹಿನ್ನೆಲೆಯ ಕಥೆಗಳು ಸದ್ಯ ಪ್ರೇಕ್ಷಕರ ಗಮನ ಸೆಳೆಯುತ್ತಿವೆ. ಇದೇ ಸಾಲಿನಲ್ಲಿ ಕನ್ನಡ ಚಿತ್ರರಂಗದಿಂದ ಮೂಡಿಬರುತ್ತಿರುವ ಮತ್ತೊಂದು ವಿಭಿನ್ನ ಪ್ರಯತ್ನ ‘ರಾಮರಸ’. ವಿಶಿಷ್ಟ ಶೀರ್ಷಿಕೆ, ಮೈಥಿಕಲ್ ಫ್ಯಾಂಟಸಿ ಕಥಾಹಂದರ ಹಾಗೂ ಭರ್ಜರಿ ತಾರಾಬಳಗದ ಮೂಲಕ ಆರಂಭದಿಂದಲೂ ಕುತೂಹಲ ಮೂಡಿಸಿರುವ ಈ ಸಿನಿಮಾಗೆ ಇದೀಗ ‘ಡೆಡ್ಲಿ’ ಆದಿತ್ಯ ಎಂಟ್ರಿ ನೀಡಿದ್ದಾರೆ.

ಬಿಗ್ ಬಜೆಟ್ ಮೈಥಿಕಲ್ ಫ್ಯಾಂಟಸಿ ಸಿನಿಮಾ ‘ರಾಮರಸ’ ಸದ್ಯ ಶೂಟಿಂಗ್‌ನ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿ, ಹೈ-ಎಂಡ್ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ. ಈ ನಡುವೆ ಸಿನಿಮಾದ ತಾರಾಬಳಗಕ್ಕೆ ನಟ ಆದಿತ್ಯ ಸೇರ್ಪಡೆಯಾಗಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

‘ರಾಮರಸ’ ಸಿನಿಮಾದಲ್ಲಿ ಡೆಡ್ಲಿ ಆದಿತ್ಯ!

‘ರಾಮರಸ’ ಸಿನಿಮಾದಲ್ಲಿ ಆದಿತ್ಯ ಅವರು ‘ವೀರ ದುರ್ಮುರ್ಗಿ’ ಎಂಬ ಅತ್ಯಂತ ಪ್ರಮುಖ ಹಾಗೂ ರೌದ್ರಭರಿತ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಕ್ತಿ, ಭಯ ಮತ್ತು ವಿನಾಶದ ಪ್ರತೀಕವಾಗಿ ರೂಪಿಸಲಾಗಿರುವ ಈ ಪಾತ್ರ ಸಿನಿಮಾದಲ್ಲಿ ಸಾಮಾನ್ಯ ಎಂಟ್ರಿಯಾಗಿರುವುದಿಲ್ಲ ಎನ್ನಲಾಗಿದೆ.

‘ವೀರ ದುರ್ಮುರ್ಗಿ’ ಪಾತ್ರವೇ ಇಡೀ ಕಥೆಯ ದಿಕ್ಕನ್ನು ಬದಲಿಸುವ ಪ್ರಮುಖ ತಿರುವಾಗಿದ್ದು, ಸಿನಿಮಾದ ನಿರೂಪಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಅದರಲ್ಲೂ ದಶ ಮಹಾವಿದ್ಯೆಯ ರಹಸ್ಯದ ಬಹುಮುಖ್ಯ ಅಂಶಗಳು ಈ ಪಾತ್ರದ ಸುತ್ತ ಸುತ್ತಲಿವೆ ಎನ್ನಲಾಗಿದ್ದು, ಇದು ‘ರಾಮರಸ’ ಕಥೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಿದೆ.

‘ರಾಮರಸ’ದಲ್ಲಿ ತಾರೆಯರ ದೊಡ್ಡ ದಂಡೇ ಇದೆ!

ನಮ್ಮ ನೆಲದ ಸಾಂಪ್ರದಾಯಿಕ ಜಾನಪದ ಸಂಸ್ಕೃತಿ ಹಾಗೂ ಸ್ಥಳೀಯ ಆಧ್ಯಾತ್ಮಿಕ ಆಚರಣೆಗಳಿಂದ ಸ್ಫೂರ್ತಿ ಪಡೆದಿರುವ ‘ರಾಮರಸ’, ಪರಾಶಕ್ತಿಯ ದೈವಿಕ ಆಟದ ಹಿನ್ನೆಲೆಯಲ್ಲಿನ ರೋಮಾಂಚಕ ಫ್ಯಾಂಟಸಿ ಕಥೆಯನ್ನು ಹೇಳಲಿದೆ.

ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಕಾಣಿಸಿಕೊಳ್ಳುತ್ತಿದೆ. ‘ಡೈನಾಮಿಕ್ ಸ್ಟಾರ್’ ಪ್ರಜ್ವಲ್ ದೇವರಾಜ್, ‘ಬಿಗ್ ಬಾಸ್’ ವಿಜೇತ ಕಾರ್ತಿಕ್ ಮಹೇಶ್, ಬಾಲಿವುಡ್ ಹಾಗೂ ದಕ್ಷಿಣ ಭಾರತದ ನಟಿ ಅದಾ ಶರ್ಮಾ, ಶರಣ್, ಹೆಬಾ ಪಟೇಲ್, ಬಾಲಾಜಿ ಮನೋಹರ್ ಹಾಗೂ ವೈಶಾಲಿ ಸೇರಿದಂತೆ ಹಲವು ಪ್ರಮುಖ ಕಲಾವಿದರು ಸಿನಿಮಾದ ಭಾಗವಾಗಿದ್ದಾರೆ.

ಬಿ.ಎಂ. ಗಿರಿರಾಜ್ ನಿರ್ದೇಶನ

‘ರಾಮರಸ’ ಸಿನಿಮಾವನ್ನು ಬಿ.ಎಂ. ಗಿರಿರಾಜ್ ನಿರ್ದೇಶಿಸುತ್ತಿದ್ದಾರೆ. ‘ಜಿ ಸಿನಿಮಾ ಸ್ಟೋರ್’ ಹಾಗೂ ‘ಸೆವೆನ್ ಸ್ಟಾರ್ ಮೂವೀಸ್’ ಬ್ಯಾನರ್ ಅಡಿಯಲ್ಲಿ ಗುರು ದೇಶಪಾಂಡೆ ಮತ್ತು ವಿಕ್ರಂ ಆರ್ಯ ಜಂಟಿಯಾಗಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಶೂಟಿಂಗ್ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಇದೀಗ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಹೈ-ಎಂಡ್ ಸ್ಟುಡಿಯೋಗಳಲ್ಲಿ ಅತ್ಯಾಧುನಿಕ ಗ್ರಾಫಿಕ್ಸ್, ಎಡಿಟಿಂಗ್ ಹಾಗೂ ಸೌಂಡ್ ಡಿಸೈನಿಂಗ್ ಕೆಲಸಗಳಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ.

‘ರಾಮರಸ’ದಿಂದ ಇನ್ನೂ ಬಿಗ್ ಸರ್ಪ್ರೈಸ್‌ಗಳು!

‘ಡೆಡ್ಲಿ’ ಆದಿತ್ಯ ಅವರ ಎಂಟ್ರಿ ಕೇವಲ ಆರಂಭವಷ್ಟೇ ಎಂದು ಚಿತ್ರತಂಡ ಹೇಳಿಕೊಂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಮುಖ ನಟರ ಪಾತ್ರಗಳ ವಿವರ, ಫಸ್ಟ್ ಲುಕ್ ಪೋಸ್ಟರ್‌ಗಳು ಹಾಗೂ ಬಹುನಿರೀಕ್ಷಿತ ಟೀಸರ್ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸುವ ನಿರೀಕ್ಷೆಯಿದೆ. ಇನ್ನು ಜಾನಪದ, ಆಧ್ಯಾತ್ಮಿಕತೆ, ದೈವಿಕ ಶಕ್ತಿ ಮತ್ತು ಫ್ಯಾಂಟಸಿ ಅಂಶಗಳನ್ನು ಒಳಗೊಂಡಿರುವ ‘ರಾಮರಸ’ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ರೀತಿಯ ಅನುಭವ ನೀಡುವ ಪ್ರಯತ್ನದಲ್ಲಿದೆ. ಇದೀಗ ‘ವೀರ ದುರ್ಮುರ್ಗಿ’ಯಾಗಿ ಡೆಡ್ಲಿ ಆದಿತ್ಯ ಅವರ ಸೇರ್ಪಡೆಯಾಗಿರುವುದರಿಂದ ಸಿನಿಮಾದ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.