Honnavalli Krishna: ಕನ್ನಡ ಚಿತ್ರರಂಗದಲ್ಲಿ ಸಾವಿರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟ ಹೊನ್ನವಳ್ಳಿ ಕೃಷ್ಣ, ಡಾ. ರಾಜ್‌ಕುಮಾರ್ ಹಾಗೂ ಅಪ್ಪು ಕುಟುಂಬಕ್ಕೆ ಅತ್ಯಂತ ಆಪ್ತರಾಗಿದ್ದರು.

ಕನ್ನಡ ಚಿತ್ರರಂಗದಲ್ಲಿ ಐದಾರು ದಶಕಗಳ ಕಾಲ ಸಾವಿರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ಡಾ. ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಕುಟುಂಬಕ್ಕೆ ಅತ್ಯಂತ ಆಪ್ತರಾಗಿದ್ದ ಹಿರಿಯ ಹಾಸ್ಯನಟ ಹೊನ್ನವಳ್ಳಿ ಕೃಷ್ಣ ಅವರ ಸ್ವಾಭಿಮಾನದ ಬದುಕಿನ ಕುರಿತು ಅವರ ಪುತ್ರ ಶ್ರೀಕಾಂತ್ ಮನಬಿಚ್ಚಿ ಮಾತನಾಡಿದ್ದಾರೆ. 'ಕಲಾ ಮಾಧ್ಯಮ' ಯೂಟ್ಯೂಬ್ ಚಾನೆಲ್‌ನ ಸಂದರ್ಶನದಲ್ಲಿ ಮಾತನಾಡಿದ ಅವರು, ರಾಜ್ ಕುಟುಂಬದ ಹೆಸರನ್ನು ತಮ್ಮ ತಂದೆ ಎಂದಿಗೂ ದುರುಪಯೋಗಪಡಿಸಿಕೊಳ್ಳಲಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಬಕೆಟ್ ಹಿಡಿಯಲಿಲ್ಲ, ಸೈಟ್-ಕಾರಿಗಾಗಿ ಕೈಚಾಚಲಿಲ್ಲ

"ನಮ್ಮ ತಂದೆ ಮನಸ್ಸು ಮಾಡಿದ್ದರೆ ಡಾ. ರಾಜ್‌ಕುಮಾರ್ ಅವರ ಹೆಸರು ಹೇಳಿಕೊಂಡು ಕೋಟ್ಯಂತರ ರೂಪಾಯಿ ಸಂಪಾದನೆ ಮಾಡಬಹುದಿತ್ತು. ಅಲ್ಲೊಂದು ಸೈಟ್, ಇಲ್ಲೊಂದು ಮನೆ, ಹತ್ತಾರು ಕಾರುಗಳನ್ನು ಮಾಡಿಕೊಳ್ಳಬಹುದಿತ್ತು. ಅಣ್ಣಾವ್ರನ್ನು ಕರೆದುಕೊಂಡು ಬಂದು ಫೋಟೋ ತೆಗೆಸುವುದು, ದೊಡ್ಡವರ ಬಳಿ ಕ್ಯಾಶ್ ಮಾಡಿಕೊಳ್ಳುವುದು ಕೆಲವರು ಮಾಡಿದಂತೆ ಮಾಡಬಹುದಿತ್ತು. ಆದರೆ ನಮಗೆ ಅದೆಲ್ಲಾ ಹೇಗೆ ಮಾಡುವುದು ಅಂತಲೇ ಗೊತ್ತಿಲ್ಲ. ನಮ್ಮ ತಂದೆ ಯಾವುದಕ್ಕೂ ಆಸೆ ಪಡಲಿಲ್ಲ" ಎಂದು ಶ್ರೀಕಾಂತ್ ತಿಳಿಸಿದ್ದಾರೆ.

ಯಾವುದೇ ಎಂಪಿ, ಎಂಎಲ್‌ಎ ಅಥವಾ ಪ್ರಭಾವಿಗಳ ಬಳಿ ಹೋಗಿ "ನಾವು ರಾಜ್‌ಕುಮಾರ್ ಆಪ್ತರು, ನಮಗೊಂದು ಸೈಟ್, ಮನೆ ಅಥವಾ ಕಾರ್ ಕೊಡಿಸಿ" ಎಂದು ಎಂದಿಗೂ ಕೇಳಿಲ್ಲ ಎಂದಿರುವ ಶ್ರೀಕಾಂತ್, "ಇವತ್ತಿಗೂ ಯಾರ ಮುಂದೆಯೂ ತಲೆ ಕೆರೆದು ಬಕೆಟ್ ಹಿಡಿಯುವ ಕೆಲಸ ಮಾಡಿಲ್ಲ. ನಾವು ಬಾಡಿಗೆ ಮನೆಯಲ್ಲಿದ್ದೇವೆ, ಲೀಸ್‌ಗೆ ಹಣ ಕೊಡಿ ಎಂದು ಯಾರನ್ನೂ ಗೋಗರೆದಿಲ್ಲ. ಅವರಾಗಿಯೇ ಗುರುತಿಸಿ ಗೌರವದಿಂದ ಕೊಟ್ಟರೆ ಸ್ವೀಕರಿಸುತ್ತೇವೆಯೇ ಹೊರತು ಕೈಚಾಚಿ ಬೇಡುವುದಿಲ್ಲ. ನಮಗೆ ಬೇಕಿರುವುದು ಕೇವಲ ಕೆಲಸ ಮತ್ತು ಅದಕ್ಕೆ ತಕ್ಕ ಕೂಲಿ ಮಾತ್ರ ಎಂಬ ಸ್ವಾಭಿಮಾನವನ್ನು ಅಪ್ಪ ಕಲಿಸಿದ್ದಾರೆ" ಎಂದು ಹೇಳಿದರು.

ಕೋಟಿ ಆಸ್ತಿಗಿಂತ ಜನರ ಪ್ರೀತಿ, ಗೌರವವೇ ದೊಡ್ಡದು

ಇಂದಿಗೂ ಹೊನ್ನವಳ್ಳಿ ಕೃಷ್ಣ ಅವರು ಎಲ್ಲೇ ಹೋದರೂ ಜನ ಕಲಾವಿದನೆಂಬ ಗೌರವ ಮತ್ತು ಪ್ರೀತಿ ತೋರಿಸುತ್ತಾರೆ. ಇತ್ತೀಚಿನ ಅನುಭವವನ್ನು ಹಂಚಿಕೊಂಡ ಶ್ರೀಕಾಂತ್, "ಮೊನ್ನೆ ನಾನು, ತಂದೆ-ತಾಯಿ, ಪತ್ನಿ ಹಾಗೂ ಮಕ್ಕಳೊಂದಿಗೆ ಆರು ಜನ ಮೇಲುಕೋಟೆಗೆ ಹೋಗಿದ್ದೆವು. ಅಲ್ಲಿನವರು ನಮ್ಮ ತಂದೆಯನ್ನು ಗುರುತಿಸಿ, 'ಕೃಷ್ಣ ಅವರ ಕುಟುಂಬ ಬಂದಿದೆ' ಎಂದು ನೇರವಾಗಿ ಗರ್ಭಗುಡಿಯ ಒಳಗೇ ಕರೆದೊಯ್ದು ದರ್ಶನ ಮಾಡಿಸಿದರು. ದೇವರ ಮುಂದೆ ನಿಂತಾಗಲೂ ನಾವು ದುಡ್ಡು, ಇಎಂಐ, ಬಾಡಿಗೆ ಕಷ್ಟ ಹೇಳಿಕೊಂಡು ಬೇಡಲಿಲ್ಲ, ಮನಸ್ಸಿನಲ್ಲೇ ಕಣ್ಣೀರು ಹಾಕಿ ಬಂದೆವು. ಇಂತಹ ಜನರ ಪ್ರೀತಿ ಮತ್ತು ಗೌರವವೇ ನಮಗೆ ನಿಜವಾದ ಆಸ್ತಿ" ಎಂದು ಭಾವುಕರಾದರು.

ಶ್ರೀಕಾಂತ್ ಅವರು ಇಂದಿಗೂ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿಯೇ ವಾಸವಿದ್ದು, ಸಿನಿಮಾ-ಧಾರಾವಾಹಿಗಳಲ್ಲಿ ಅಭಿನಯ, ನಿರ್ದೇಶನ ಹಾಗೂ ಪಕ್ಕದಲ್ಲಿ ಕಾರ್ ಡೀಲಿಂಗ್ ಕೆಲಸ ಮಾಡಿಕೊಂಡು ತಂದೆ ಕಲಿಸಿದ ಸ್ವಾಭಿಮಾನದ ಹಾದಿಯಲ್ಲೇ ನಿಯತ್ತಿನ ಬದುಕು ಸಾಗಿಸುತ್ತಿದ್ದಾರೆ.

ತಂದೆ-ಮಗ ಇಬ್ಬರೂ ರಾಜ್ ಕುಟುಂಬದ ಹೆಸರು ಹೇಳಿ ಯಾರ ಬಳಿಯೂ ಸೈಟ್-ಹಣ ಬೇಡದಿದ್ದರೂ, ಕಲಾವಿದನ ಮೇಲಿನ ಗೌರವದಿಂದ ಹೆಚ್. ವಿಶ್ವನಾಥ್ ಹಾಗೂ ಜಯಮಾಲಾ ಅವರು ತಾವಾಗಿಯೇ ತಾಯಿಯ ಹೆಸರಿನಲ್ಲಿ 20x30 ಸೈಟ್ ಮಂಜೂರು ಮಾಡಿಸಿದ್ದರು. ಮತ್ತೊಂದೆಡೆ, ಮೈಸೂರಿನಲ್ಲಿ ಒಬ್ಬ ಸಾಮಾನ್ಯ ಮೂಡಾ ವಾಚ್‌ಮ್ಯಾನ್ ದೇವರಂತೆ ಬಂದು 38 ಸಾವಿರ ರೂಪಾಯಿಗೆ ಸೈಟ್ ಕೊಡಿಸಿದ್ದರಿಂದಲೇ ಇಂದು ಕುಟುಂಬ ಸ್ವಂತ ಮನೆ ಕಾಣುವಂತಾಯಿತು. 75ರ ವಯಸ್ಸಿನಲ್ಲೂ ಕೃಷ್ಣ ಅವರು ಸಿನಿಮಾಗಳಲ್ಲಿ (ಇತ್ತೀಚೆಗೆ 'ಪಿನಾಕ') ನಟಿಸುತ್ತಿದ್ದು, ಪುತ್ರ ಶ್ರೀಕಾಂತ್ ಕೂಡ ಸಿನಿಮಾ-ಸೀರಿಯಲ್ ಜೊತೆಗೆ ಕಾರ್ ಡೀಲಿಂಗ್ ವ್ಯಾಪಾರ ಮಾಡಿಕೊಂಡು ನಿಯತ್ತಿನ ದುಡಿಮೆಯಲ್ಲೇ ತೃಪ್ತಿ ಕಾಣುತ್ತಿದ್ದಾರೆ.