Tapaswini Poonacha: 'ಪ್ರೇಮದ ಊರಲಿ' ಹಾಗೂ 'ಮಿಸ್ಟರ್ ಜಾಕ್' ಸಿನಿಮಾಗಳ ಪ್ರಮೋಷನ್ನಲ್ಲಿ ನಟಿ ತಪಸ್ವಿನಿ ಪೂಣಚ್ಚ ಫುಲ್ ಬ್ಯುಸಿಯಾಗಿದ್ದಾರೆ. ಆದರೆ ಅವರು ಮನೆಯಿಂದ ಹೊರಗೆ ಹೋಗಬಾರದು ಎಂದು ಅವರ ಶೂ, ಚಪ್ಪಲಿ ಕದ್ದಿಟ್ಟು, ಬಟ್ಟೆಗಳನ್ನೆಲ್ಲಾ ಹರಿದು ಹಾಕುತ್ತಿರುವವರು ಯಾರು ಗೊತ್ತಾ? ಸಂದರ್ಶನದಲ್ಲಿ ಬಯಲಾದ ಆ ಸ್ವಾರಸ್ಯಕರ ಸತ್ಯ ಇಲ್ಲಿದೆ!
'ಪ್ರೇಮದ ಊರಲಿ' ಚಿತ್ರದ ಭರ್ಜರಿ ಯಶಸ್ಸಿನ ಬೆನ್ನಲ್ಲೇ ನಟಿ ತಪಸ್ವಿನಿ ಇದೀಗ 'ಮಿಸ್ಟರ್ ಜಾಕ್' ಚಿತ್ರದ ಪ್ರಮೋಷನ್ನಲ್ಲಿಯೂ ಸಖತ್ ಬ್ಯುಸಿಯಾಗಿದ್ದಾರೆ. ಬೆಳಗ್ಗೆಯಿಂದ ರಾತ್ರಿಯವರೆಗೆ ಎರಡೆರಡು ಸಿನಿಮಾಗಳ ಪ್ರಚಾರ ಕಾರ್ಯಗಳಲ್ಲಿ ತೊಡಗಿರುವುದರಿಂದ ಕುಟುಂಬಕ್ಕೂ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ತಪಸ್ವಿನಿ ಹೇಳಿಕೊಂಡಿದ್ದಾರೆ. ಈ ನಡುವೆ, ಸಂದರ್ಶನವೊಂದರಲ್ಲಿ ತಪಸ್ವಿನಿ ಹಾಗೂ ಸಹನಟ ಗುರುನಂದನ್ 'ಮಾಫಿ'ಯ ಕುರಿತ ಸ್ವಾರಸ್ಯಕರ ಹಾಗೂ ತಮಾಷೆಯ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಸಂದರ್ಶನದಲ್ಲಿ ನಿರೂಪಕರು 'ಪ್ರೇಮದ ಊರಲಿ' ಸಕ್ಸಸ್ ಆದಮೇಲೆ ತಪಸ್ವಿನಿ ಕೈಗೆ ಸಿಗ್ತಿಲ್ಲ ಎಂಬ ಮಾತಿದೆಯಲ್ಲ?" ಎಂದು ಕೇಳಿದಾಗ, ತಪಸ್ವಿನಿ ಪರ ಮಾತನಾಡಿದ ಗುರುನಂದನ್, "ಆ ಸಿನಿಮಾ ಕೂಡ 50 ದಿನ ಪೂರೈಸಿ 100ನೇ ದಿನದತ್ತ ಸಾಗುತ್ತಿದೆ. ಹೀಗಾಗಿ ಎರಡೂ ಚಿತ್ರಗಳ ಪ್ರಮೋಷನ್ಗೆ ಓಡಾಡಬೇಕಾಗಿದೆ. ಮೊನ್ನೆ ರಾಮನಗರದ ಕಾರ್ಯಕ್ರಮಕ್ಕೂ ಬರಬೇಕಿತ್ತು, ಆದರೆ 50 ದಿನದ ಎಫ್.ಎಂ ಕಾರ್ಯಕ್ರಮಕ್ಕೆ ಹೋಗಿದ್ದರಿಂದ ಅವರಿಗೆ ಸಮಯ ಸಿಗಲಿಲ್ಲ" ಎಂದರು.
ಇತ್ತ ತಪಸ್ವಿನಿ ಕೂಡ, "ಬೆಳಗ್ಗೆ 'ಪ್ರೇಮದ ಊರಲಿ' ಪ್ರಮೋಷನ್ ಮುಗಿಸಿ 'ಮಿಸ್ಟರ್ ಜಾಕ್', ಅದನ್ನು ಮುಗಿಸಿ ಮತ್ತೆ ಆ ಟೀಮ್ಗೆ ಹೋಗಿ ಮನೆಗೆ ಸೇರುವಷ್ಟರಲ್ಲಿ ಸಾಕಾಗುತ್ತಿದೆ" ಎಂದು ತಮ್ಮ ಬ್ಯುಸಿ ಶೆಡ್ಯೂಲ್ ಬಿಚ್ಚಿಟ್ಟರು.
ಇದೇ ವೇಳೆ ತಪಸ್ವಿನಿ ಅವರ ಪ್ರಾಣಿಪ್ರೇಮದ ಬಗ್ಗೆ ಮಾತನಾಡಿದ ಗುರುನಂದನ್, ತಾವು 'ಮಾಫಿ' ಹೆಸರಿನ ಟೀ-ಶರ್ಟ್ ಧರಿಸಿರುವುದನ್ನು ತೋರಿಸಿ ಗಮನ ಸೆಳೆದರು. ತಪಸ್ವಿನಿ ಅವರ ಬಳಿ ಕೊಡಗು ಮೂಲದ 'ಶಿಟ್ಜು' (Shih Tzu) ತಳಿಯ 'ಮಾಫಿ' ಎಂಬ ಮುದ್ದಾದ ನಾಯಿಯಿದ್ದು, ಅದನ್ನು ಅವರು ಸ್ವಂತ ಮಗುವಿನಂತೆ ಸಾಕುತ್ತಿದ್ದಾರಂತೆ.
"ಶೂಟಿಂಗ್ ಸಮಯದಲ್ಲಿ ಮಾಫಿಯನ್ನು ಸೆಟ್ಗೆ ಕರೆತಂದು ಕ್ಯಾರವಾನ್ನಲ್ಲಿ ಇರಿಸುತ್ತಿದ್ದರು. ಆದರೆ ಈಗ ಪ್ರಮೋಷನ್ ಒತ್ತಡದಲ್ಲಿ ಎಲ್ಲಿಯೂ ಕರೆದುಕೊಂಡು ಹೋಗದ ಕಾರಣ ಅದು ಬೇಸರ ಮಾಡಿಕೊಂಡಿದೆ. ತಪಸ್ವಿನಿ ಹೊರಗೆ ಹೋಗಬಾರದು ಎಂಬ ಕಾರಣಕ್ಕೆ ಅವರ ಶೂ, ಸ್ಲಿಪ್ಪರ್ಗಳನ್ನೆಲ್ಲಾ ಕದ್ದಿಡುತ್ತಿದೆ, ಬಟ್ಟೆಗಳನ್ನೂ ಹರಿದು ಹಾಕುತ್ತಿದೆ! ಅದು ಕೊಡಗಿಂದು, ಸಾಮಾನ್ಯ ಅಲ್ಲ. ನೆಕ್ಸ್ಟ್ ನಮ್ಮ ಬಟ್ಟೆಯನ್ನೂ ಹರಿಯುತ್ತೆ ನೋಡಿ!" ಎಂದು ಗುರುನಂದನ್ ಹಾಸ್ಯ ಚಟಾಕಿ ಹಾರಿಸಿದರು.
ಇದಕ್ಕೆ ನಗುತ್ತಲೇ ಧ್ವನಿಗೂಡಿಸಿದ ತಪಸ್ವಿನಿ, "ಹೌದು, ಸ್ಲಿಪ್ಪರ್ಗಳನ್ನೆಲ್ಲಾ ಅಲ್ಲಲ್ಲಿ ಬಿಟ್ಟಿರುತ್ತಾನೆ. ಅದು ಅವನ ಅತಿಯಾದ ಪ್ರೀತಿ ಹಾಗೂ ಅಟ್ಯಾಚ್ಮೆಂಟ್. ಪ್ರಾಣಿಗಳ ಪ್ರೀತಿ ತುಂಬಾ ಶುದ್ಧವಾದದ್ದು, ಯಾವುದೇ ನಿರೀಕ್ಷೆಗಳಿಲ್ಲದೆ (No expectation) ಪ್ರೀತಿಸುತ್ತವೆ" ಎಂದು ಭಾವುಕರಾದರು. "ನಾಯಿ ಎಂದರೆ ನಿಯತ್ತು ಮತ್ತು ಪ್ರಾಮಾಣಿಕತೆ. ಸಿನಿಮಾ ಬಿಡುಗಡೆಯಾದ ಮೇಲೆ ನಾನೂ ಮಾಫಿಯನ್ನು ನಮ್ಮೂರಿಗೆ ಕರೆದುಕೊಂಡು ಹೋಗಿ ಆಟ ಆಡಿಸುತ್ತೇನೆ. ಅಂದಹಾಗೆ ಮಾಫಿಯನ್ನು 'ನಾಯಿ' ಎಂದರೆ ತಪಸ್ವಿನಿಗೆ ಭಯಂಕರ ಸಿಟ್ಟು ಬರುತ್ತದೆ, 'ಮಗು' ಎಂದೇ ಕರೆಯಬೇಕು!" ಎಂದು ಗುರುನಂದನ್ ನಗೆ ಬೀರಿದರು.
ಇನ್ನು 'ಮಿಸ್ಟರ್ ಜಾಕ್' ಡಿಸೆಂಬರ್ 4ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಮಂಡಿಮನೆ ಟಾಕೀಸ್ ಲಾಂಛನದಲ್ಲಿ ಗುರುನಂದನ್ ತಮ್ಮ ಸ್ನೇಹಿತರ ಸಹನಿರ್ಮಾಣದೊಂದಿಗೆ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸುಮಂತ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ಗುರುನಂದನ್ ನಾಯಕನಾಗಿ, ತಪಸ್ವಿನಿ ಪೂಣಚ್ಚ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಧರ್ಮಣ್ಣ ಕಡೂರು, ಸುಷ್ಮಿತಾ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಗಣದಲ್ಲಿದ್ದಾರೆ. ಇನ್ನು ‘MR ಜಾಕ್’ ಚಿತ್ರಕ್ಕೆ ಕಿರಣ್ ರವೀಂದ್ರನಾಥ್ ಸಂಗೀತ ಸಂಯೋಜಿಸಿದ್ದು, ಶಿವಸೇನ ಛಾಯಾಗ್ರಹಣ ನಿರ್ವಹಿಸಿದ್ದಾರೆ. ವಿಜಯ್ ರಾಜ್ ಸಂಕಲನ ಹಾಗೂ ಅಭಿಷೇಕ್ ಮಠದ್ ನೃತ್ಯ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.















