ಡಾ. ರಾಜ್‌ಕುಮಾರ್ ಅವರಿಗೆ ಟಿಪ್ಪು ಸುಲ್ತಾನ್ ಪಾತ್ರದಲ್ಲಿ ನಟಿಸಲು ಮನವಿ ಮಾಡಿದ್ದ ಖ್ಯಾತ ನಟ ಯಾರು? ಈ ಪ್ರಶ್ನೆಗೆ ಉತ್ತರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಪತ್ರಿಕೆಯ ತುಣುಕಿನಲ್ಲಿದೆ. ಟಿಪ್ಪು ಸುಲ್ತಾನ್ ಚಿತ್ರದ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.
ಬೆಂಗಳೂರು: ಇಂದು ಟಿಪ್ಪು ಸುಲ್ತಾನ್ ಹೆಸರು ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಈ ಹಿಂದೆ ಕನ್ನಡದ ವರನಟ ಡಾ. ರಾಜ್‌ಕುಮಾರ್ ಅವರಿಗೆ ಟಿಪ್ಪು ಸುಲ್ತಾನ್ ಪಾತ್ರದಲ್ಲಿ ನಟಿಸಲು ಖ್ಯಾತ ನಟ, ನಿರ್ದೇಶಕರು ಮನವಿ ಮಾಡಿಕೊಳ್ಳುವದಾಗಿ ಹೇಳಿದ್ದರು. ಇದೀಗ ಈ ಹೇಳಿಕೆ ಕುರಿತು ಪ್ರಕಟವಾದ ಸುದ್ದಿಯ ಪತ್ರಿಕೆಯ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಪೇಪರ್ ಕ್ಲಿಪ್‌ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ನಟ ಡಾ.ರಾಜ್‌ಕುಮಾರ್ ಮತ್ತು ಟಿಪ್ಪು ಸುಲ್ತಾನ್ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹಾಗಾದ್ರೆ ಡಾ.ರಾಜ್‌ಕುಮಾರ್ ಅವರನ್ನು ಹಾಕಿಕೊಂಡು ಟಿಪ್ಪು ಸುಲ್ತಾನ್ ಸಿನಿಮಾ ಮಾಡಲು ಮುಂದಾಗಿದ್ದು ಯಾರು? ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.
ಚಂದನವನದ ಕಿಲಾಡಿ ಕುಳ್ಳ ಎಂದೇ ಪ್ರಸಿದ್ಧರಾದವರು ನಟ ದ್ವಾರಕೀಶ್. ವಿದೇಶದಲ್ಲಿ ಮೊದಲ ಸಿನಿಮಾ ಶೂಟಿಂಗ್ ಮಾಡಿದ್ದ ಖ್ಯಾತಿ ದ್ವಾರಕೀಶ ಅವರಿಗೆ ಸಲ್ಲುತ್ತದೆ. ನಟನೆ ಜೊತೆಯಲ್ಲಿ ಸಿನಿಮಾ ನಿರ್ದೇಶನ, ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದರು. ಮಹತ್ವಾಕಾಂಕ್ಷಿಗಳಾಗಿದ್ದ ದ್ವಾರಕೀಶ್, ಹಲವು ಸಿನಿಮಾಗಳನ್ನು ತೆರೆ ಮೇಲೆ ತರಲು ಪ್ಲಾನ್ಮ ರೂಪಿಸಿದ್ದರು. ಟಿಪ್ಪು ಸುಲ್ತಾನ್ ಸಹ ದ್ವಾರಕೀಶ್ ಅವರ ಕನಸಿನ ಯೋಜನೆಗಳಲ್ಲಿ ಒಂದಾಗಿತ್ತು. ದ್ವಾರಕೀಶ್ ಅವರ ಕನಸಿನ ಯೋಜನೆಗಳ ಕುರಿತ ಸುದ್ದಿಯ ಪೇಪರ್ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹಲ್‌ಚಲ್ ಸೃಷ್ಟಿಸಿದೆ.
ವೈರಲ್ ಪೇಪರ್ ತುಣುಕಿನಲ್ಲಿರೋ ವಿಷಯ ಏನು?
ಹಾಸ್ಯ ನಟ ನಿರ್ಮಾಪಕ ದ್ವಾರಕೀಶ್ ತಮ್ಮ ಈಗಿನ 'ಕಳ್ಳ ಕುಳ್ಳ' ವರ್ಣದ ಚಿತ್ರ ಮುಗಿಸಿದ ನಂತರ ಐತಿ ಪಾಸಿಕ “ಟಿಪ್ಪು ಸುಲ್ತಾನ್ ನನ್ನು ವರ್ಣದಲ್ಲಿ ತೆರೆಗೆ ತರಲಿದ್ದಾರೆ. ಟಿಪ್ಪು ಪಾತ್ರಕ್ಕೆ ರಾಜ್ ಕುಮಾರ್ ಅವರನ್ನು ಅಭಿನಯಿಸುವಂತೆ ತಾನು ಕೇಳಿಕೊಳ್ಳುವುದಾಗಿ ದ್ವಾರಕೀಶ್ ತಿಳಿಸಿದರಾದರೂ, ಅವರ 'ಕಾಲ್‌ಷೀಟ್' ಒಂದು ಳೆ ಸಿಗದಿದ್ದರೆ ಫೈಟರ್ ಶೆಟ್ಟಿ ಇವರೇ ಈ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಂಭವ ಇದೆ. ತಾಂತ್ರಿಕ ಮತ್ತು ನಟ-ನಟಿಯರ ಆಯ್ಕೆ ಕೆಲಸ ಮುಂದಿನ ತಿಂಗಳೊಳಗೆ ನಡೆಯುವುದು, ಚಿತ್ರವನ್ನು ಕೆ. ಎಸ್. ಆರ್. ದಾಸ್ ನಿರ್ದೇಶಿಸುವರು ಎಂಬ ಮಾಹಿತಿಯನ್ನು ಹೊಂದಿದೆ.
ಈ ಪತ್ರಿಕೆ ತುಣುಕಿನ ಫೋಟೋವನ್ನು ಮಲ್ಲಿಕಾರ್ಜುನ್ ಮೇಟಿ ಎಂಬವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ದ್ವಾರಕೀಶ್ ರವರದು ಏನೇನೋ ಯೋಜನೆಗಳಿದ್ದವು. ಟಿಪ್ಪು ಸುಲ್ತಾನ್, ಕರ್ನಾಟಕ ಎಕ್ಸಪ್ರೆಸ್, ಅಲಿಬಾಬ 40 ಕಳ್ಳರು ಹೀಗೆ ದೊಡ್ಡ ಬಜೆಟ್ಟಿನ ಚಿತ್ರಗಳೇ ಇದ್ದವು. ಜೊತೆಗೆ 70 ಎಂ.ಎಂ ಸಹ ಅಂತಾನೂ ಹೇಳಿದ್ದರು. ಕಾರ್ಯರೂಪಕ್ಕೆ ಬರಲೇ ಇಲ್ಲ ಎಂದು ಮಲ್ಲಿಕಾರ್ಜುನ್ ಮೇಟಿ ಬರೆದುಕೊಂಡಿದ್ದಾರೆ.
ವೈರಲ್ ಪೋಸ್ಟ್‌ಗೆ ತರೇಹವಾರಿ ಕಮೆಂಟ್‌ಗಳು
ಈ ಪೋಸ್ಟ್‌ಗೆ ಮಂಜು ಎಂಬವರು ಕಮೆಂಟ್ ಮಾಡಿ, ಮಾಡದೇ ಇದದ್ದೇ ಒಳ್ಳೆದಾಯ್ತು. ನಿನ್ನೆವರೆಗೂ ಹೀರೋ ಆಗಿದ್ದ ಟಿಪ್ಪು ಇಂದೂ ವಿಲನ್ ಬಹುತೇಕರಿಗೆ. ಆದ್ದರಿಂದ ಅಂಥಾ ಪಾತ್ರ ಮಾಡಿದ್ರೆ ಹಲವರಿಗೆ ಇಷ್ಟ ಆಗುತ್ತಿರಲಿಲ್ಲ. ರಾಜ್‌ಕುಮಾರ್ ಮೊದಲಿನಿಂದಲೂ ಯಾವುದೇ ವಿವಾದಕ್ಕೆ ಆಸ್ಪದ ಕೊಡುತ್ತಿರಲಿಲ್ಲ. ವಿವಾದಾಸ್ಪದ ಮಾತುಗಳನ್ನು ಸಹ ಆಡುತ್ತಿರಲಿಲ್ಲ. ಮಾತು ಮುತ್ತು ಅಂತಾ ತಿಳಿದ ಜ್ಞಾನಿ ಅವರು. ಸಾಯಿ ಹೋಗಿ ಸಾಯಿಬಾಬಾ ಪಾತ್ರ ಮಾಡೋಕೆ ಕೇಳಿ ಮುಖ ಸಪ್ಪಗೆ ಮಾಡ್ಕೊಂಡೋಗಿ ಕೊನೆಗೆ ಆ ಪಾತ್ರದಲ್ಲಿ ತಾನೇ ನಟಿಸಿದ್ರು ಸಿನಿಮಾ ಅಟ್ಟರ್ ಪ್ಲಾಫ್ ಆದದ್ದು ಇತಿಹಾಸಎ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಕಳ್ಳನ್ನ ನಂಬಿದರೂ ಕುಳ್ಳನ್ನ ನಂಬಬೇಡ ಗಾದೆ ಮಾತು ಸುಳ್ಳಲ್ಲ. ಕುಳ್ಳನಿಂದ ಅಣ್ಣಾವ್ರಿಗೆ ತೊಂದರೆಯೇ ಆಗಿದ್ದರೂ ದೇವಮಾನವ ಅಣ್ಣಾವ್ರು ಭಾಗ್ಯವಂತರು ಚಿತ್ರದಲ್ಲಿ ಅಭಿನಯಿಸಿದರು ಇದು ಅಣ್ಣಾವ್ರ ದೊಡ್ಡ ಮನೆ ದೊಡ್ಡ ಗುಣ ಅಲ್ಲವಾ ಎಂದು ಶಿವಲಿಂಗಪ್ಪ ಎಂಬವರು ಕಮೆಂಟ್ ಮಾಡಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ಸಹ ಈ ಸಿನಿಮಾಗೆ ಬರುತ್ತಿದ್ರು!
ಒಂದು ವೇಳೆ ಈ ಚಿತ್ರ ಕಾರ್ಯರೂಪಕ್ಕೆ ಬಂದಿದ್ದರೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ಕೂಡ ಒಂದು ಪಾತ್ರಕ್ಕೆ ಆಯ್ಕೆ ಆಗುತ್ತಿದ್ದರು ಎಂಬ ಮತ್ತೊಂದು ಅಚ್ಚರಿಯ ಮಾಹಿತಿಯನ್ನು ಮಾದೇಶ್ ಎಂ. ಹಂಚಿಕೊಂಡಿದ್ದಾರೆ. ಮಾದೇಶ್ ಎಂ ಕಮೆಂಟ್‌ಗೆ ಪ್ರತಿಕ್ರಿಯೆ ನೀಡಿರುವ ಹಿಂದೊಮ್ಮೆ ರಜನೀಕಾಂತ್ ಅವರು ಅಣ್ಣಾವ್ರ ಬಳಿ ಟಿಪ್ಪುವಿನ ಪಾತ್ರ ಮಾಡುವಂತೆಯೂ ಕಾರ್ನವಾಲಿಸ್ ಪಾತ್ರ ತಾನು ಮಾಡುವುದಾಗಿ ಕೇಳಿದ್ದರಂತೆ. ಆಗ ರಾಜ್ ಅವರೇ ವಿನಯವಾಗಿ ತಿರಸ್ಕರಿಸಿದರಂತೆ. ಇದು ಆಗಿನ ಕಾಲದಲ್ಲಿ ಪತ್ರಿಕೆಗಳಲ್ಲಿ ಬಂದಿತ್ತು ಎಂದು ಹೇಳಿದ್ದಾರೆ. ಸದ್ಯ ವೈರಲ್ ಆಗಿರುವ ಪತ್ರಿಕೆ ಕ್ಲಿಪ್ ಯಾವ ದಿನ ಪಬ್ಲಿಶ್ ಆಗಿತ್ತು ಮತ್ತು ಯಾವ ನ್ಯೂಸ್ ಪೇಪರ್ ಎಂಬುದರ ಮಾಹಿತಿ ಲಭ್ಯವಾಗಿಲ್ಲ.
