ಡಾ.ರಾಜ್‌ಕುಮಾರ್ ಅವರ ಕೊನೆಕ್ಷಣಗಳ ಬಗ್ಗೆ ಮಗಳು ಪೂರ್ಣಿಮಾ ರಾಮ್‌ಕುಮಾರ್ ಮಾತನಾಡಿದ್ದಾರೆ. ಅಂದು ಮನೆಯಲ್ಲಿ ನಡೆದ ಘಟನೆಗಳು ಮತ್ತು ರಾಜ್‌ಕುಮಾರ್ ಅವರ ಕೊನೆಯ ಮಾತುಗಳನ್ನು ಅವರು ವಿವರಿಸಿದ್ದಾರೆ.
ಬೆಂಗಳೂರು: ವರನಟ ಡಾ.ರಾಜ್‌ಕುಮಾರ್ ದೇಹತ್ಯಾಗ ಮಾಡಿದ್ರಾ ಅನ್ನೋ ಪ್ರಶ್ನೆಯೊಂದು ಆಗಾಗ್ಗೆ ಮುನ್ನಲೆಗೆ ಬರುತ್ತಿರುತ್ತದೆ. ಡಾ.ರಾಜ್‌ಕುಮಾರ್ ಅವರ ಕೊನೆಕ್ಷಣದಲ್ಲಿ ಏನಾಯ್ತು ಎಂಬುದರ ಬಗ್ಗೆ ಮಗಳು ಪೂರ್ಣಿಮಾ ರಾಮ್‌ಕುಮಾರ್ ಮಾತನಾಡಿದ್ದಾರೆ. ತಂದೆಯ ಕೊನೆ ಕ್ಷಣದಲ್ಲಿ ಏನೆಲ್ಲಾ ನಡೆಯಿತು ಮತ್ತು ಆ ಸಮಯದಲ್ಲಿ ಯಾರೆಲ್ಲಾ ಇದ್ರು ಎಂಬುದರ ಬಗ್ಗೆ ಪೂರ್ಣಿಮಾ ಹೇಳಿದ್ದಾರೆ. ಅಂದು ನಮ್ಮ ಮಕ್ಕಳ ರಿಸಲ್ಟ್ ಬಂದಿತ್ತು. ನನ್ನ ಮಗ ಸಂಸ್ಕೃತ ವಿಷಯದಲ್ಲಿ ಚೆನ್ನಾಗಿ ಅಂಕಗಳನ್ನು ತೆಗೆದುಕೊಂಡಿದ್ದನು. ಹಾಗಾಗಿ ಅದನ್ನು ಹೇಳಲು ನಾನು ಆವತ್ತು ನೇರವಾಗಿ ತಂದೆ ಮನೆಗೆ ಹೋದೆ. ಮಗನ ಟೀಚರ್ ಸಹ ಈ ವಿಷಯವನ್ನು ರಾಜ್‌ಕುಮಾರ್ ಅವರಿಗೆ ಹೇಳಿ ಅಂದಿದ್ರು. ಹಾಗಾಗಿ ಸಡನ್ ಆಗಿ ನಾನು ತಂದೆ ಮನೆಗೆ ಬಂದೆ ಎಂದು ಪೂರ್ಣಿಮಾ ಹೇಳಿದರು.
ಮನೆಯೊಳಗೆ ಬರುತ್ತಿದ್ದಂತೆ ಎದುರಿಗೆ ಅಪ್ಪು-ಅಶ್ವಿನಿ ಸಿಕ್ಕರು. ಇಬ್ಬರು ಆಸ್ಪತ್ರೆಗೆ ಹೊರಟಿದ್ದರು. ಆಸ್ಪತ್ರೆಯಿಂದ ಬಂದ್ಮೇಲೆ ಅಪ್ಪಾಜಿಯನ್ನು ಕರೆದುಕೊಂಡು ಊಟಕ್ಕೆ ಹೋಟೆಲ್‌ಗೆ ಹೋಗೋಣ ಎಂದು ಹೇಳಿ ಮನೆಯಿಂದ ಹೋದನು. ಶಿವಣ್ಣ ಶೂಟಿಂಗ್‌ಗೆ ಹೋಗಿದ್ದನು. ಆವತ್ತು ಮನೆಯಲ್ಲಿ ಬಹುತೇಕ ಯಾರೂ ಇರಲಿಲ್ಲ. ಮಕ್ಕಳು ಸಹ ಮನೆಯಲ್ಲಿರಲಿಲ್ಲ ಎಂಬ ಕಾರಣ ಅಪ್ಪಾಜಿ ಸ್ವಲ್ಪ ಅಪ್‌ಸೆಟ್ ಆಗಿದ್ದರು. ಇದನ್ನು ನೋಡಿಯೇ ಹೊರಗೆ ಊಟಕ್ಕೆ ಹೋಗೋಣ ಎಂದು ಅಪ್ಪು ಹೇಳಿ ಆಸ್ಪತ್ರೆಗೆ ಹೋದ. ನಾನು ಹೋದಾಗ ನನ್ನ ಸೋದರ ಸಂಬಂಧಿ ಲಕ್ಷ್ಮೀ, ಸರೋಜಾ, ಅತ್ತೆ ಮನೆಯಲ್ಲಿದ್ದರು. ಆಷ್ಟರಲ್ಲಿ ಅಮ್ಮ ಬಂದರು. ನಾವು ಅಲ್ಲೇ ಹಾಲ್‌ನಲ್ಲಿಯೇ ಕುಳಿತು ಮಾತಾಡ್ತಾ ಇದ್ದೀವಿ.
ಅಪ್ಪು ಮಗಳು ಮತ್ತು ಧನ್ಯಾ ಇಬ್ಬರು ಹೊರಗಡೆ ಹೋಗುತ್ತಿದ್ದರು. ಆಗ ಅಪ್ಪಾಜಿಯೇ ಅವರನ್ನು ಮುದ್ದು ಮಾಡಿ ಬಾಗಿಲಿನವರೆಗೆ ಬಂದು ಕಳುಹಿಸಿಕೊಟ್ಟರು. ನಾನೇ ಅಪ್ಪಾಜಿಯನ್ನು ಕರೆದುಕೊಂಡು ಬಂದು ಹಾಸಿಗೆ ಮೇಲೆ ಕೂರಿಸಿ, ಪಕ್ಕದಲ್ಲಿರಿಸಿಕೊಳ್ಳಲು ದಿಂಬು ನೀಡಿದೆ. ಫ್ಯಾನ್ ಹಾಕಿ, ಟಿವಿ ಆನ್ ಮಾಡೋಕೆ ಹೇಳಿದರು. ನಾನು ಟಿವಿ ಆನ್ ಮಾಡಿ ಒಳಗಡೆ ಹೋದೆ. ಒಳಗಡೆಯಿಂದ ಹೊರಗೆ ಬರೋವಷ್ಟರಲ್ಲಿ, ಒಂಥರಾ ಅಪ್ಪಾಜಿ ಉಸಿರಾಡುತ್ತಿದ್ದರು. ಅದನ್ನು ನೋಡಿದಾಗ ಅವರ ಹತ್ತಿರ ಹೋಗಲು ಸಹ ನನಗೆ ಭಯ ಆಯ್ತು. ಅಮ್ಮಾ ಮತ್ತು ಅತ್ತೆಯನ್ನು ಜೋರಾಗಿ ಕಿರುಚಿದೆ. ಎಲ್ಲರೂ ತಕ್ಷಣ ಓಡಿ ಬಂದರು. ಆ ಕ್ಷಣದಲ್ಲಿ ಅಪ್ಪಾಜಿಯ ಕಿವಿಯಲ್ಲಿ ಏನೋ ಹೇಳಿದರು. ನಾನು ಮೇಲೆ ನೋಡುತ್ತಾ ನಿಂತುಬಿಟ್ಟೆ. ಡಾಕ್ಟರ್‌ಗೆ ಫೋನ್ ಮಾಡಬೇಕು ಅಂತಾನೂ ನನಗೆ ಗೊತ್ತಾಗುತ್ತಿಲ್ಲ. ಅಪ್ಪಾಜಿ ಹೋಗಿದ್ದಾರೆ ಅಂತ ನನ್ನ ಮನಸ್ಸಿನಲ್ಲಿ ಬಂತು ಎಂದು ಪೂರ್ಣಿಮಾ ರಾಮ್ ಕುಮಾರ್ ಸಂದರ್ಶನದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ನಮ್ಮನ್ನು ಯಾವ ಜಾಗದಲ್ಲಿ ಇಟ್ಟಿರುತ್ತಾರೆ ಅನ್ನೋದು ಮುಖ್ಯ; ಪತಿ ರಾಮ್‌ಕುಮಾರ್ ಬಗ್ಗೆ ಅಣ್ಣಾವ್ರ ಮಗಳ ಮಾತು ವೈರಲ್
ಆ ಸಮಯದಲ್ಲಿ ನನಗೆ ಡಾಕ್ಟರ್ ನಂಬರ್ ಸಹ ನೆನಪಿಗೆ ಬರುತ್ತಿರಲಿಲ್ಲ. ಆಮೇಲೆ ಡಾಕ್ಟರ್ ಬಂದ್ರು, ಆಸ್ಪತ್ರೆಗೆ ಕರೆದುಕೊಂಡು ಹೋದರು ಎಂದು ಪೂರ್ಣಿಮಾ ಹೇಳಿದರು. ಈ ವೇಳೆ ನಿರೂಪಕ, ಡಾ.ರಾಜ್‌ಕುಮಾರ್ ಅವರದ್ದು ದೇಹತ್ಯಾಗ. ಅವರು ಇಚ್ಛಾಮರಣಿ. ಸೋದರನ ನಿಧನದ ಬಳಿಕ ಡಾ.ರಾಜ್‌ಕುಮಾರ್ ಎಲ್ಲದರಿಂದಲೂ ವಿಮುಖರಾಗಿದ್ದರು ಅಲ್ಲವಾ ಎಂದು ಹೇಳುತ್ತಾರೆ. ಇದಕ್ಕೆ ಪೂರ್ಣಿಮಾ ರಾಮ್‌ಕುಮಾರ್, ಹೌದು ಅಂತಾರೆ. ಚಿಕ್ಕಪ್ಪ ನಿಧನದ ಬಳಿಕ ಅಪ್ಪಾಜಿ ನೊಂದಿದ್ದರು. ಚಿಕ್ಕಪ್ಪನ ಫೋಟೋವನ್ನು ನೋಡ್ತಾ ಇರುತ್ತಿದ್ದರು. ಆಗ ನಾವೆಲ್ಲಾ ಆ ಫೋಟೋ ತೆಗಿಸೋಣ ಎಂದು ಮಾತಾಡಿಕೊಳ್ಳುತ್ತಿದ್ದೀವಿ. ಆಗ ಅಪ್ಪಾಜಿ ನನ್ನನ್ನು ಕರೆಸಿ, ಫೋಟೋ ನೋಡ್ತಿದ್ರೆ ನನಗೇನಾದೂ ಆಗುತ್ತೆ ಅಂತನಾ ಎಂದು ಹೇಳಿದ್ದರು. ನನಗೇನೂ ದುಃಖವಿಲ್ಲ. ನಾನು ತುಂಬಾ ಧೈರ್ಯವಾಗಿದ್ದೇನೆ. ನಾವು ಸಹ ಒಂದು ದಿನ ಹೋಗುಬೇಕಲ್ಲವಾ ಅಂತ ಅಂದ್ಕೊಂಡ್ರೆ ಏನು ಆಗಲ್ಲ. ಅವನು ಹೋಗಿದ್ದಾನೆ, ನಾನು ಒಂದು ದಿನ ಹೋಗ್ತಿವಿ ಅಷ್ಟೇ, ಯಾರೇ ನಮ್ಮನ್ನು ಅಗಲಿದರೂ ಈ ರೀತಿಯೇ ತಿಳಿದುಕೊಳ್ಳಬೇಕು ಎಂದು ಹೇಳಿದ್ದರು.
ಇದನ್ನೂ ಓದಿ: ರಾಮ್‌ಕುಮಾರ್ ಸರ್ ತಂದೆ ಪಾತ್ರಕ್ಕಾದರೂ ಕಮ್‌ಬ್ಯಾಕ್ ಮಾಡಲೇಬೇಕು; ನೆಟ್ಟಿಗರಿಂದ ಶುರುವಾಯ್ತು ಡಿಮ್ಯಾಂಡ್!
