ದುನಿಯಾ ವಿಜಯ್ ನಿರ್ದೇಶನದ ‘ಸಿಟಿ ಲೈಟ್ಸ್’ ಮೊದಲ ಮೂರು ದಿನಗಳಲ್ಲಿ ಎಷ್ಟು ಕಲೆಕ್ಷನ್ ದಾಖಲಿಸಿದೆ ಎಂದು ವರದಿಯಾಗಿದೆ. ವಿನಯ್ ರಾಜ್‌ಕುಮಾರ್ ಹಾಗೂ ಮೋನಿಷಾ ವಿಜಯ್ ಅಭಿನಯದ ಈ ಚಿತ್ರದ ಬಾಕ್ಸ್ ಆಫೀಸ್ ಗಳಿಕೆ ಸಂಪೂರ್ಣ ವಿವರ ಇಲ್ಲಿದೆ.
‘ಭೀಮ’ ಸಿನಿಮಾದ ಬಳಿಕ ಮತ್ತೊಮ್ಮೆ ನಿರ್ದೇಶನದ ಮೂಲಕ ಗಮನ ಸೆಳೆಯುತ್ತಿರುವ ದುನಿಯಾ ವಿಜಯ್, ಈ ಬಾರಿ ‘ಸಿಟಿ ಲೈಟ್ಸ್’ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ವಿನಯ್ ರಾಜ್‌ಕುಮಾರ್ ಹಾಗೂ ಮೋನಿಷಾ ವಿಜಯ್ ಅಭಿನಯದ ಈ ಸಿನಿಮಾ ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲಿ ಉತ್ತಮ ಗಳಿಕೆ ದಾಖಲಿಸಿದೆ. ಸಿನಿಮಾ ಮೂಡಿಸಿರುವ ಭಾವನಾತ್ಮಕ ಕಥಾಹಂದರಕ್ಕೆ ಪ್ರೇಕ್ಷಕರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಮೂರು ದಿನಕ್ಕೆ ‘ಸಿಟಿ ಲೈಟ್ಸ್’ ಗಳಿಕೆ ಎಷ್ಟು?
ಬಾಕ್ಸ್ ಆಫೀಸ್ ಟ್ರ್ಯಾಕಿಂಗ್ ಸಂಸ್ಥೆ ಸ್ಯಾಕ್ನಿಲ್ಕ್ ವರದಿ ಪ್ರಕಾರ, ‘ಸಿಟಿ ಲೈಟ್ಸ್’ ಸಿನಿಮಾ ಮೊದಲ ದಿನ ಭಾರತದಲ್ಲಿ ₹80 ಲಕ್ಷ ಕಲೆಕ್ಷನ್ ಮಾಡಿದೆ. ಎರಡನೇ ದಿನ ಗಳಿಕೆಯಲ್ಲಿ ಏರಿಕೆ ಕಂಡುಬಂದಿದ್ದು, ₹99 ಲಕ್ಷ ವ್ಯವಹಾರ ನಡೆಸಿದೆ. ಭಾನುವಾರವೂ ಸಿನಿಮಾಗೆ ಪ್ರೇಕ್ಷಕರ ಬೆಂಬಲ ಹೆಚ್ಚಾಗಿದ್ದು, ಒಂದೇ ದಿನ ₹1.23 ಕೋಟಿ ಗಳಿಸಿದೆ ಎನ್ನಲಾಗಿದೆ.
ಈ ಮೂಲಕ ಬಿಡುಗಡೆಯಾದ ಮೂರು ದಿನಗಳಲ್ಲಿ ಸಿನಿಮಾದ ಒಟ್ಟು ಭಾರತ ಕಲೆಕ್ಷನ್ ₹3.38 ಕೋಟಿ (ಗ್ರಾಸ್) ತಲುಪಿದೆ. ಇದರಲ್ಲಿ ₹3.02 ಕೋಟಿ ನೆಟ್ ಕಲೆಕ್ಷನ್ ಎಂದು ವರದಿಯಾಗಿದೆ. ವಾರಾಂತ್ಯದಲ್ಲಿ ಗಳಿಕೆ ಹೆಚ್ಚಾಗಿರುವುದು ಚಿತ್ರತಂಡದ ನಿರೀಕ್ಷೆಗಳಿಗೆ ಮತ್ತಷ್ಟು ಬಲ ನೀಡಿದೆ.
ಕಂಟೆಂಟ್‌ಗೆ ಮೆಚ್ಚುಗೆ..
‘ಸಿಟಿ ಲೈಟ್ಸ್’ ಸಿನಿಮಾ ಕೇವಲ ಬಾಕ್ಸ್ ಆಫೀಸ್ ವಿಚಾರದಲ್ಲಷ್ಟೇ ಅಲ್ಲ, ಕಥೆಯ ನಿರೂಪಣೆ ಹಾಗೂ ಭಾವನಾತ್ಮಕ ಅಂಶಗಳಿಗೂ ಗಮನ ಸೆಳೆಯುತ್ತಿದೆ. ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದು, ಹಲವು ಕಾಮೆಂಟ್‌ಗಳಲ್ಲಿ ಚಿತ್ರತಂಡದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
‘ಒಂದು ಒಳ್ಳೆಯ ಮೆಸೇಜ್ ಕೊಟ್ಟಿದ್ದೀರಿ’, ‘ಅದ್ಭುತ ಸಿನಿಮಾ’, ‘ಒಳ್ಳೆಯ ಸಿನಿಮಾ’ ಎಂಬ ಪ್ರತಿಕ್ರಿಯೆಗಳು ಕೇಳಿಬರುತ್ತಿವೆ. ದುನಿಯಾ ವಿಜಯ್ ಅವರ ನಿರ್ದೇಶನ ಹಾಗೂ ಚಿತ್ರದ ಭಾವನಾತ್ಮಕ ನಿರೂಪಣೆಯನ್ನು ಕೆಲವರು ಮೆಚ್ಚಿಕೊಂಡಿದ್ದಾರೆ. ಅಭಿಮಾನಿಗಳ ಪ್ರತಿಕ್ರಿಯೆಗಳ ವಿಡಿಯೋವನ್ನು ಚಿತ್ರತಂಡವೂ ಹಂಚಿಕೊಂಡಿದ್ದು, ‘ಬೆಲೆ ಕಟ್ಟಲಾಗದ ಪ್ರೀತಿ ಇದು, ಹೃದಯಪೂರ್ವಕ ಧನ್ಯವಾದಗಳು’ ಎಂದು ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸಿದೆ.
ಹಳ್ಳಿಯಿಂದ ಬೆಂಗಳೂರಿಗೆ.. ಬದುಕಿನ ಹೋರಾಟದ ಕಥೆ
‘ಸಿಟಿ ಲೈಟ್ಸ್’ ಸಿನಿಮಾದ ಕಥೆ ಉತ್ತಮ ಜೀವನದ ಕನಸು ಹೊತ್ತು ಹಳ್ಳಿಯಿಂದ ಬೆಂಗಳೂರಿಗೆ ಬರುವ ನಾಯಕ-ನಾಯಕಿಯ ಸುತ್ತ ಸಾಗುತ್ತದೆ. ಹೊಸ ಬದುಕಿನ ನಿರೀಕ್ಷೆಯೊಂದಿಗೆ ಮಹಾನಗರಕ್ಕೆ ಕಾಲಿಡುವ ಈ ಜೋಡಿ, ನಗರದ ವೇಗದ ಬದುಕು, ಕಠಿಣ ವಾಸ್ತವಗಳು ಹಾಗೂ ಸಂವೇದನಾಶೂನ್ಯ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ.
ಬೆಂಗಳೂರಿನಲ್ಲಿ ತಮ್ಮದೇ ಆದ ಸ್ಥಾನವನ್ನು ಕಂಡುಕೊಳ್ಳಲು ಅವರು ನಡೆಸುವ ಹೋರಾಟ, ಎದುರಾಗುವ ಸವಾಲುಗಳು ಮತ್ತು ಅವುಗಳನ್ನು ಮೀರಲು ತೋರಿಸುವ ದೃಢತೆ ಚಿತ್ರದ ಪ್ರಮುಖ ಅಂಶಗಳಾಗಿವೆ. ಇದರೊಂದಿಗೆ ನಾಯಕ-ನಾಯಕಿಯ ಮುಗ್ಧ ಪ್ರೇಮಕಥೆಯನ್ನೂ ಬೆಸೆಲಾಗಿದ್ದು, ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಲಾಗಿದೆ.
ಮೋನಿಷಾ ವಿಜಯ್‌ಗೆ ಸ್ಯಾಂಡಲ್‌ವುಡ್ ಎಂಟ್ರಿ
‘ಸಿಟಿ ಲೈಟ್ಸ್’ ಸಿನಿಮಾದ ಮತ್ತೊಂದು ವಿಶೇಷತೆ ದುನಿಯಾ ವಿಜಯ್ ಅವರ ಎರಡನೇ ಮಗಳು ಮೋನಿಷಾ ವಿಜಯ್ ಅವರ ಚಿತ್ರರಂಗ ಪ್ರವೇಶ. ಸಾಕಷ್ಟು ತಯಾರಿಯೊಂದಿಗೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿರುವ ಮೋನಿಷಾ ಅವರ ಅಭಿನಯಕ್ಕೂ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದು ವರದಿಯಾಗಿದೆ. 2 ಗಂಟೆ 9 ನಿಮಿಷಗಳ ರನ್‌ಟೈಮ್ ಹೊಂದಿರುವ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ‘ಎ’ ಪ್ರಮಾಣಪತ್ರ ದೊರೆತಿದೆ.
ತಾಂತ್ರಿಕ ಬಳಗ
ವಿಜಯ್ ಕುಮಾರ್ ಹಾಗೂ ವಿಕ್ರಮ್ ಆರ್ಯ ಜಂಟಿಯಾಗಿ ನಿರ್ಮಿಸಿರುವ ‘ಸಿಟಿ ಲೈಟ್ಸ್’ ಸಿನಿಮಾಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಮಾಸ್ತಿ ಮಂಜು ಸಂಭಾಷಣೆ ಬರೆದಿದ್ದು, ಶಿವಸೇನಾ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಿನಿಮಾವನ್ನು ವಿತರಿಸಿದೆ. ಇನ್ನು ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲಿ ಉತ್ತಮ ಗಳಿಕೆ ದಾಖಲಿಸಿರುವ ‘ಸಿಟಿ ಲೈಟ್ಸ್’, ಪ್ರೇಕ್ಷಕರ ಬಾಯಿಮಾತಿನ ಪ್ರಚಾರದೊಂದಿಗೆ ಮುನ್ನಡೆಯುವ ನಿರೀಕ್ಷೆ ಮೂಡಿಸಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಯಾವ ರೀತಿಯ ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.


