ಡಾ ರಾಜ್‌ಕುಮಾರ್ ಜೀವನದ ಹಳೆಯ ಘಟನೆಗಳನ್ನು ತಿಳಿದವರು ಸಂದರ್ಶನಗಳು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಅಂತಹದ್ದೇ ಒಂದು ಕುತೂಹಲಕಾರಿ ಘಟನೆ ಇದೀಗ ಗಮನ ಸೆಳೆಯುತ್ತಿದೆ. ಹೋಟೆಲ್ ಬದಲಾಯಿಸುವ ಸಂದರ್ಭ ನಡೆದ ಅನಿರೀಕ್ಷಿತ ಘಟನೆ ಇದೀಗ ಬೆಳಕಿಗೆ ಬಂದಿದೆ.

ಅಣ್ಣಾವ್ರು ಉಳಿದುಕೊಂಡಿದ್ದ ಹೋಟೆಲ್‌ನಲ್ಲಿ ಫ್ಯಾನ್ ಪ್ಲೇಟ್ ಬಿದ್ದು ಅವಾಂತರ!

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಡಾ. ರಾಜ್‌ಕುಮಾರ್ (Dr Rajkumar) ಅವರ ಹೆಸರು ಚಿನ್ನದ ಅಕ್ಷರಗಳಲ್ಲಿ ದಾಖಲಾಗಿದೆ. ಅಣ್ಣಾವ್ರು ಕೇವಲ ನಟನಾಗಿ ಮಾತ್ರವಲ್ಲ, ಸರಳತೆ, ಸಂಸ್ಕಾರ ಮತ್ತು ವ್ಯಕ್ತಿತ್ವದಿಂದಲೂ ಕೋಟ್ಯಂತರ ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಅವರ ಜೀವನದಲ್ಲಿ ನಡೆದ ಹಲವು ಘಟನೆಗಳು ಇಂದಿಗೂ ಕುತೂಹಲ ಮೂಡಿಸುತ್ತವೆ. ಆದರೆ, ಅಂದಿನ ಕಾಲದಲ್ಲಿ ಇಂದಿನಂತೆ ಸಾಮಾಜಿಕ ಜಾಲತಾಣಗಳು, ಯೂಟ್ಯೂಬ್ ಚಾನೆಲ್‌ಗಳು ಇರಲಿಲ್ಲ. ಪತ್ರಿಕೆಗಳು ಮತ್ತು ಕೆಲವೇ ಸುದ್ದಿಗೋಷ್ಠಿಗಳ ಮೂಲಕ ಜನರಿಗೆ ಮಾಹಿತಿ ತಲುಪುತ್ತಿತ್ತು. ಹೀಗಾಗಿ ಅಣ್ಣಾವ್ರ ವೈಯಕ್ತಿಕ ಬದುಕಿನ ಹಲವು ಸ್ವಾರಸ್ಯಕರ ಸಂಗತಿಗಳು ಜನರಿಗೆ ತಿಳಿಯದೆ ಉಳಿದಿದ್ದವು.

ಈಗ ಕಾಲ ಬದಲಾಗಿದೆ. ಹಳೆಯ ಘಟನೆಗಳನ್ನು ತಿಳಿದವರು ಸಂದರ್ಶನಗಳು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಅಂತಹದ್ದೇ ಒಂದು ಕುತೂಹಲಕಾರಿ ಘಟನೆ ಇದೀಗ ಗಮನ ಸೆಳೆಯುತ್ತಿದೆ. ಹೋಟೆಲ್ ಬದಲಾಯಿಸುವ ಸಂದರ್ಭ ನಡೆದ ಅನಿರೀಕ್ಷಿತ ಘಟನೆ, ಬಳಿಕ ಅಣ್ಣಾವ್ರು ಬೆಂಗಳೂರಿನಲ್ಲಿ ಮನೆ ಖರೀದಿಸಿದ ಪ್ರಸಂಗ ಹಾಗೂ ಆ ಮನೆಗೆ 'ದೊಡ್ಮನೆ' ಎಂಬ ಹೆಸರು ಬಂದ ಕಥೆ ನಿಜಕ್ಕೂ ಆಸಕ್ತಿದಾಯಕವಾಗಿದೆ.

ಹೈಲ್ಯಾಂಡ್ಸ್ ಹೋಟೆಲ್‌ನಿಂದ ಅಜಂತಾ ಹೋಟೆಲ್‌ಗೆ ಶಿಫ್ಟ್ ಆಗಿದ್ದ ಅಣ್ಣಾವ್ರು!

ಡಾ. ರಾಜ್‌ಕುಮಾರ್ ಅವರು ಬೆಂಗಳೂರಿನ ಹೈಲ್ಯಾಂಡ್ಸ್ ಹೋಟೆಲ್‌ನಲ್ಲಿ ಉಳಿದುಕೊಳ್ಳುತ್ತಿದ್ದರಂತೆ. ಆ ಸಮಯದಲ್ಲಿ ಒಬ್ಬ ನಿರ್ಮಾಪಕರು ಅವರನ್ನು ಭೇಟಿಯಾಗಿ, ನೀವು ಇಲ್ಲಿರುವುದು ಬೇಡ, ನಿಮಗಾಗಿ ಬೇರೆ ಹೋಟೆಲ್ ನೋಡಿದ್ದೇನೆ ಎಂದು ಹೇಳಿದ್ದರಂತೆ. ಅವರು ಸೂಚಿಸಿದ್ದು ಎಂಜಿ ರಸ್ತೆಯಲ್ಲಿದ್ದ ಅಜಂತಾ ಹೋಟೆಲ್. ನಿರ್ಮಾಪಕರ ಮಾತಿಗೆ ಬೆಲೆ ಕೊಟ್ಟ ಅಣ್ಣಾವ್ರು ಹೈಲ್ಯಾಂಡ್ಸ್ ಹೋಟೆಲ್‌ನಿಂದ ಅಜಂತಾ ಹೋಟೆಲ್‌ಗೆ ತಮ್ಮ ವಾಸ್ತವ್ಯ ಬದಲಾಯಿಸಿಕೊಂಡಿದ್ದರು.

ಆದರೆ, ಹೊಸ ಹೋಟೆಲ್‌ಗೆ ಹೋದ ಕೆಲವೇ ಸಮಯದಲ್ಲಿ ಅನಿರೀಕ್ಷಿತ ಘಟನೆ ನಡೆದಿದೆ. ಕೋಣೆಯ ಸೀಲಿಂಗ್ ಫ್ಯಾನ್‌ನ ಪ್ಲೇಟ್ ಕೆಳಗೆ ಬಿದ್ದಿತಂತೆ. ಇದರಿಂದ ಅಣ್ಣಾವ್ರು ಸ್ವಲ್ಪ ವಿಚಲಿತರಾದರು ಎನ್ನಲಾಗಿದೆ. ಈ ಘಟನೆ ನಡೆದ ಬಳಿಕ, 'ಇದ್ಯಾಕೋ ಗ್ರಹಚಾರ ಸರಿಯಿಲ್ಲ' ಎಂದು ಹೇಳಿಕೊಂಡು ಮತ್ತೆ ತಾವು ಮೊದಲು ಉಳಿದುಕೊಂಡಿದ್ದ ಹೈಲ್ಯಾಂಡ್ಸ್ ಹೋಟೆಲ್‌ಗೇ ವಾಪಸ್ ತೆರಳಿದರಂತೆ.

ದಕ್ಷಿಣ ಭಾರತದ ಚಿತ್ರವನ್ನು ಫಸ್ಟ್‌ ಟೈಂ ಜಗತ್ತಿಗೆ ತೋರಿಸಿ 1000 ಕೋಟಿಗೂ ಮೀರಿ ಗಳಿಕೆ ದಾಖಲಿಸಿದ್ದು ಈ ನಿರ್ದೇಶಕ!

ಚೆಟ್ಟಿಯಾರ್ ತೋರಿಸಿದ ಮನೆಯೇ ಅಣ್ಣಾವ್ರ ಪಾಲಿನ ದೊಡ್ಮನೆ!

ಹೋಟೆಲ್ ಬದಲಾವಣೆಯ ಈ ಘಟನೆಯ ಬಳಿಕ ಅಣ್ಣಾವ್ರ ಜೀವನದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆಯಿತು. ‘ಬೇಡರ ಕಣ್ಣಪ್ಪ’ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಎವಿಎಂ ಪ್ರೊಡಕ್ಷನ್ಸ್‌ನ ಮಾಲೀಕ ಚೆಟ್ಟಿಯಾರ್ ಅವರು ಡಾ. ರಾಜ್‌ಕುಮಾರ್ ಅವರಿಗೆ ಬೆಂಗಳೂರಿನಲ್ಲಿ ಸ್ವಂತ ಮನೆ ಖರೀದಿಸುವಂತೆ ಸಲಹೆ ನೀಡಿದ್ದರಂತೆ.

ಒಂದು ದಿನ ಅಣ್ಣಾವ್ರನ್ನು ಭೇಟಿಯಾದ ಚೆಟ್ಟಿಯಾರ್, ಸದಾಶಿವನಗರದಲ್ಲಿ ಮನೆ ಸಮೇತ ಒಂದು ಜಾಗ ನೋಡಿರುವುದಾಗಿ ತಿಳಿಸಿದ್ದರಂತೆ. ನೀವು ಅದನ್ನು ಖರೀದಿಸಿ ಎಂದು ಹೇಳಿದಾಗ, ಅವರ ಮಾತಿನಂತೆ ಅಣ್ಣಾವ್ರು ಆ ಸ್ಥಳವನ್ನು ನೋಡಲು ಮುಂದಾದರು. ಬಳಿಕ ಆ ಮನೆಯನ್ನು ಖರೀದಿಸುವ ನಿರ್ಧಾರ ಕೈಗೊಂಡರು.

ಆ ಕಾಲದಲ್ಲಿ ಬರೋಬ್ಬರಿ 15 ಲಕ್ಷ ರೂಪಾಯಿ ನೀಡಿ ಡಾ. ರಾಜ್‌ಕುಮಾರ್ ಅವರು ಆ ವಿಶಾಲವಾದ ಮನೆಯನ್ನು ಖರೀದಿಸಿದ್ದರಂತೆ. ಹೀಗೆ ಅವರ ಕುಟುಂಬಕ್ಕೆ ಬೆಂಗಳೂರಿನಲ್ಲಿ ಒಂದು ಶಾಶ್ವತ ನೆಲೆ ಸಿಕ್ಕಿತು. ದೊಡ್ಡದಾದ ಮನೆ ಮತ್ತು ವಿಶಾಲವಾದ ಜಾಗ ಹೊಂದಿದ್ದ ಕಾರಣ ಅದನ್ನು ಜನರು ಪ್ರೀತಿಯಿಂದ 'ದೊಡ್ಮನೆ' ಎಂದು ಕರೆಯತೊಡಗಿದರು.

ರಮೇಶ್ ಭಟ್‌ರನ್ನು ಅಂಗಡಿಯಿಂದ ಬಿಡಿಸಿದ್ದೇಕೆ ಶಂಕರ್‌ ನಾಗ್? ಆಮೇಲೆ ಮಾಡಿದ-ಮಾಡಲಾಗದ ಕೆಲಸಗಳು ಏನು?

ಇಂದು ಆ ಹಳೆಯ ದೊಡ್ಮನೆ ಇಲ್ಲ, ಆದರೆ ಹೆಸರು ಮಾತ್ರ ಹಾಗೆಯೇ ಇದೆ!

ಅಣ್ಣಾವ್ರು ಖರೀದಿಸಿದ್ದ ಆ ಮನೆ ಕೇವಲ ಒಂದು ಕಟ್ಟಡವಾಗಿರಲಿಲ್ಲ. ಅದು ರಾಜ್‌ಕುಮಾರ್ ಕುಟುಂಬದ ನೆನಪುಗಳು, ಸಂತೋಷ ಮತ್ತು ಬದುಕಿನ ಹಲವು ಮಹತ್ವದ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಕಾಲಕ್ರಮೇಣ ಆ ಹಳೆಯ ಮನೆಯನ್ನು ಕೆಡವಿ, ಅದೇ ಜಾಗದಲ್ಲಿ ಎರಡು ಪ್ರತ್ಯೇಕ ಮನೆಗಳನ್ನು ನಿರ್ಮಿಸಲಾಗಿದೆ ಎನ್ನಲಾಗಿದೆ.

ಈ ಮನೆಗಳಲ್ಲಿ ಒಂದರಲ್ಲಿ ಪುನೀತ್ ರಾಜ್‌ಕುಮಾರ್ ಅವರ ಕುಟುಂಬ ಹಾಗೂ ಮತ್ತೊಂದರಲ್ಲಿ ರಾಘವೇಂದ್ರ ರಾಜ್‌ಕುಮಾರ್ ಅವರ ಕುಟುಂಬ ವಾಸಿಸುತ್ತಿದೆ. ಹಳೆಯ ಮನೆ ಈಗ ಇಲ್ಲದಿದ್ದರೂ, ಆ ಜಾಗಕ್ಕೆ ಅಂಟಿಕೊಂಡಿರುವ 'ದೊಡ್ಮನೆ' ಎಂಬ ಹೆಸರು ಮಾತ್ರ ಇಂದಿಗೂ ಮುಂದುವರಿದಿದೆ.

ಅಣ್ಣಾವ್ರು ₹15 ಲಕ್ಷಕ್ಕೆ ಖರೀದಿಸಿದ್ದ ಆ ಮನೆಯ ಹಿಂದಿನ ಕಥೆ ಕೇಳಿದಾಗ ಅಭಿಮಾನಿಗಳಿಗೆ ಹಳೆಯ ದಿನಗಳ ನೆನಪು ಮರುಕಳಿಸುವುದು ಸಹಜ. ಹೋಟೆಲ್‌ನಲ್ಲಿ ನಡೆದ ಫ್ಯಾನ್ ಪ್ಲೇಟ್ ಘಟನೆಯಿಂದ ಹಿಡಿದು ಸದಾಶಿವನಗರದಲ್ಲಿ ಸ್ವಂತ ಮನೆ ಖರೀದಿಸುವವರೆಗಿನ ಈ ಪಯಣ, ಡಾ. ರಾಜ್‌ಕುಮಾರ್ ಅವರ ಜೀವನದ ಅಪರೂಪದ ನೆನಪುಗಳಲ್ಲಿ ಒಂದಾಗಿದೆ. ಇಂದಿಗೂ ರಾಜ್ ಕುಟುಂಬವನ್ನು 'ದೊಡ್ಮನೆ ಕುಟುಂಬ' ಎಂದು ಕರೆಯುವಾಗ, ಅದರ ಹಿಂದಿರುವ ಈ ಮನೆಯ ಕಥೆಯೂ ನೆನಪಾಗುತ್ತದೆ.