ಹೊಸಬರ ಮತ್ತು ಗ್ರಾಮೀಣ ಸೊಗಡಿನ ಸಿನಿಮಾಗಳಿಗೆ ಥಿಯೇಟರ್ ಸಿಗದಿರುವ ಸಮಸ್ಯೆ ಇಂದಿಗೂ ಮುಂದುವರಿದಿದೆ. 1986ರ ಶಂಖನಾದ ಸಿನಿಮಾದಿಂದ ಇತ್ತೀಚಿನ ಚಂದ್ರಹಾಸ ಹಾಗೂ ಪ್ರೇಮದ ಊರಲಿ ಸಿನಿಮಾಗಳವರೆಗೂ ಈ ಹೋರಾಟ ಕಾಣಬಹುದು.

ಇತ್ತೀಚೆಗೆ ಹೊಸಬರ ಸಿನಿಮಾಗಳಿಗೆ ಥಿಯೇಟರ್ ಸಿಗುತ್ತಿಲ್ಲ. ಇದೀಗ ರಾಜ್ಯದಲ್ಲಿ 50 ದಿನಗಳ ಯಶಸ್ವಿ ಪ್ರದರ್ಶನ ಕಂಡಿರುವ ಪ್ರೇಮದ ಊರಲಿ ಸಿನಿಮಾಗೂ ಆರಂಭದಲ್ಲಿ ಥಿಯೇಟರ್ ಕೊಟ್ಟಿರಲಿಲ್ಲ. ಅದೇ ಸಮಸ್ಯೆಯನ್ನು ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಹರೀಶ್ ಹಿರಿಯೂರು ಅವರ ಚಂದ್ರಹಾಸ ಸಿನಿಮಾ ಎದುರಿಸುತ್ತಿದೆ. ಆದರೆ, 40 ವರ್ಷಗಳ ಹಿಂದೆಯೇ ಗ್ರಾಮೀಣ ಸೊಗಡಿನ ಸಿನಿಮಾಗಳಿಗೆ ಚಿತ್ರಮಂದಿರಗಳ ಸಮಸ್ಯೆ ಕಾಡುತ್ತಿತ್ತು. 1986ರಲ್ಲಿ ಬಿಡುಗಡೆಯಾದ ಶಂಖನಾದ ಸಿನಿಮಾ ಚಿತ್ರಮಂದಿರ ಪಡೆಯಲು ಕಷ್ಟಪಟ್ಟ ರೋಚಕ ಸ್ಟೋರಿ ಇಲ್ಲಿದೆ ನೋಡಿ...

ಗ್ರಾಮೀಣ ಸೊಗಡಿನ, ಉತ್ತರ ಕರ್ನಾಟಕ ಕಲಾವಿದರಿಗೆ ಥಿಯೇಟರ್ ಸಮಸ್ಯೆ

ಪ್ರೇಮದ ಊರಲಿ ಸಿನಿಮಾ 50 ದಿನಗಳ ಭರ್ಜರಿ ಯಶಸ್ಸು ಕಂಡಿದ್ದು, ಹೌಸ್‌ಫುಲ್ ಪ್ರದರ್ಶನ ಮುಂದುವರೆದಿದೆ. ಜೊತೆಗೆ ಯಶ್ ಅವರ ರಾಮಾಯಣ ಸಿನಿಮಾ ಕೂಡ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹೀಗಿರುವಾಗ ಹೊಸಬರ ಸಿನಿಮಾಗೆ ಥಿಯೇಟರ್ ಸಿಗುವುದು ಭಾರೀ ಕಷ್ಟ. ಇನ್ನು ಕನ್ನಡದ ಒಳ್ಳೆಯ ಸಿನಿಮಾಗಳು ಇಲ್ಲದಿರುವಾಗಲೂ ಹಿಂದಿ, ತೆಲುಗು ಹಾಗೂ ತಮಿಳು ಸಿನಿಮಾಗಳ ಪ್ರದರ್ಶನ ಮಾಡಲಾಗುತ್ತದೆಯೇ ಹೊರತು ಹೊಸಬರ ಸಿನಿಮಾಗಳಿಗೆ ಅವಕಾಶ ಕೊಟ್ಟಿದ್ದೂ ಅಷ್ಟಕ್ಕಷ್ಟೇ. ಕಾರಣ, ಒಳ್ಳೆಯ ಕನ್ನಡ ಸಿನಿಮಾಗಳು ಬರುತ್ತಿಲ್ಲ ಎನ್ನುವ ದೂರುಗಳು ಸಾಕಷ್ಟಿದ್ದವು, ಇದೀಗ ಪ್ರೇಮದ ಊರಲಿ ಸಿನಿಮಾ ಬಂದ ನಂತರ ಕನ್ನಡದ ಇತರೆ ಹೊಸಬರ ಅದರಲ್ಲಿಯೂ ಉತ್ತರ ಕರ್ನಾಟಕದ ಗ್ರಾಮೀಣ ಸೊಗಡಿನ ಸಿನಿಮಾಗಳಿಗೆ ಥಿಯೇಟರ್ ಸಮಸ್ಯೆ ಕಾಡುತ್ತಿದೆ.

ಹುಟ್ಟೂರಿನಲ್ಲೇ ಚಿತ್ರಮಂದಿರ ಸಿಗಲಿಲ್ಲ

ಚಂದ್ರಹಾಸ ಸಿನಿಮಾಗೆ ರಾಜ್ಯದಲ್ಲಿ ಥಿಯೇಟರ್‌ಗಳೇ ಸಿಗದೆ ಚಿತ್ರತಂಡ ಪರದಾಡಿದೆ. ಸಿನಿಮಾದ ನಾಯಕ ತಮ್ಮ ಹುಟ್ಟೂರು ಗದಗ ನಗರದಲ್ಲಿ ಸಿನಿಮಾ ರಿಲೀಸ್ ಮಾಡಿಸಲು ಎಷ್ಟೇ ಹೋರಾಟ ಮಾಡಿದರೂ ಎರಡು ವಾರಗಳ ಕಾಲ ಅವರಿಗೆ ಥಿಯೇಟರ್ ಸಿಗಲಿಲ್ಲ. ಪ್ರೇಮದ ಊರಲಿ ಸಿನಿಮಾ 2 ಚಿತ್ರಮಂದಿರಲ್ಲಿ ನಡೆಯುತ್ತಿದ್ದು, ಇದರಲ್ಲಿ ಕನಿಷ್ಠ ಒಂದು ಚಿತ್ರಮಂದಿರಲ್ಲಿ 2 ಪ್ರದರ್ಶನ ನಡೆಸಲೂ ಅವಕಾಶ ಕೊಟ್ಟಿರಲಿಲ್ಲ. ಈ ಬಗ್ಗೆ ಚಿತ್ರದ ನಾಯಕ ಹಾಗೂ ಇತರೆ ಸಹಕಲಾವಿದರು ಭಾರೀ ಬೇಸರ ಹೊರಹಾಕಿದ್ದರು. ಆದರೆ, ಈ ಹಿಂದೆಯೂ ಕನ್ನಡ ಚಿತ್ರರಂಗದಲ್ಲಿ ಹೊಸಬರು ಹಾಗೂ ಗ್ರಾಮೀಣ ಸೊಗಡಿನ ಸಿನಿಮಾಗಳಿಗೆ ಥಿಯೇಟರ್ ಕೊಡದಿರುವ ಸಮಸ್ಯೆಗಳು ಎದುರಾಗಿದ್ದವು. ಅದರಲ್ಲಿ ಶಂಖನಾದ ಸಿನಿಮಾ ಕೂಡ ಒಂದಾಗಿದ್ದು, ನಂತರದ ದಿನಗಳನ್ನು ಬೆಂಗಳೂರಿನಲ್ಲಿಯೇ 100 ದಿನ ಪ್ರದರ್ಶನ ಕಂಡು ಭಾರೀ ಸದ್ದು ಮಾಡಿತ್ತು.

40 ವರ್ಷದ ಹಿಂದೆಯೇ ಚಿತ್ರಮಂದಿರ ಸಿಗದೆ ಪರದಾಡಿದ್ದ ಶಂಖನಾದ

ಕಳೆದ 40 ವರ್ಷಗಳ ಹಿಂದೆ ಶಂಖನಾದ ಸಿನಿಮಾಗೂ ಇದೇ ಅನುಭವ ಆಗಿತ್ತು. ಈ ಸಿನಿಮಾದಲ್ಲಿ ಅನುಭವ ಅರವಿಂದ ನಾಯಕ ನಟರಾಗಿದ್ದು, ಗ್ರಾಮ ಪಂಚಾಯಿತಿಯಲ್ಲಿ ಮೀಸಲಾತಿ ಹಾಗೂ ಮೀಸಲಾತಿಯಡಿ ಗ್ರಾಮ ಪಂಚಾಯಿತಿ ಅಧ್ಯಕ್ಷನಾದವನ ಅಧಿಕಾರ ಕುರಿತು ಚಿತ್ರಣವಾಗಿತ್ತು. ಈ ಸಿನಿಮಾಗೆ ಬೆಂಗಳೂರಿನ ಮೆಜೆಸ್ಟಿಕ್ ಸೇರಿದಂತೆ ಯಾವುದೇ ಥಿಯೇಟರ್‌ಗಳಲ್ಲಿ ಬಿಡುಗಡೆಗೆ ಅವಕಾಶ ನೀಡಲಿಲ್ಲ. ಕೊನೆಗೆ ಹಠಕ್ಕೆ ಬಿದ್ದ ನಿರ್ದೇಶಕ ಉಮೇಶ್ ಕುಲಕರ್ಣಿ ಅವರು ಚಿತ್ರ ಶೂಟಿಂಗ್ ಮಾಡಿದ ಸಂಪಿಗೆ ಗ್ರಾಮದ ಒಂದು ಟೆಂಟ್‌ನಲ್ಲಿ ಸಿನಿಮಾ ರಿಲೀಸ್ ಮಾಡಿದ್ದರು. ನಂತರ 1987ರಲ್ಲಿ ಬೆಂಗಳೂರಿನ ಕೈಲಾಸ ಚಿತ್ರಮಂದಿರಲ್ಲಿ ಬಿಡುಗಡೆಯಾಗಿ 105 ದಿನ ಪ್ರದರ್ಶನ ಕಂಡಿತು. ಸಿನಿಮಾ ಯಶಸ್ಸು ಸಿಗುತ್ತಿದ್ದಂತೆ ಬೇರೆ ಚಿತ್ರಮಂದಿಗಳೂ ಪ್ರದರ್ಶನ ಮಾಡಿದ್ದವು.

ಎಲ್ಲಾ ಕಾಲದಲ್ಲಿಯೂ ಕನ್ನಡ ಚಿತ್ರರಂಗದಲ್ಲಿ ಹಲವು ಏಳು ಬೀಳುಗಳು ಕಂಡುಬಂದಿವೆ. ಇದೀಗ ಕೆಲವು ನಾಯಕರ ಸಿನಿಮಾಗಳಿಗೆ ರಿಲೀಸ್ ದಿನಕ್ಕೆ ಚಿತ್ರಮಂದಿರಗಳು ಕಾಯುತ್ತಿದ್ದರೆ, ಇನ್ನು ಹೊಸಬರು ಏಕಾದರೂ ಚಿತ್ರಮಂದಿರ ಕೇಳಲು ಬರುತ್ತಾರೋ ಎಂದು ಗೊಣಗುವವರೂ ಇದ್ದಾರೆ. ಆದರೆ, ಎಲ್ಲ ಕಲಾವಿದರಿಗೂ ಅವಕಾಶ ಮಾಡಿಕೊಟ್ಟು ಬೆಳೆಸುವುದು, ಜನರಿಗೆ ಸಿನಿಮಾ ಪ್ರದರ್ಶನ ಮಾಡುವುದು ತಮ್ಮ ಜವಾಬ್ದಾರಿ ಎನ್ನುವುದನ್ನು ಮರೆಯಬಾರದು.