1999ರ ಉಪೇಂದ್ರ ಸಿನಿಮಾದಲ್ಲಿ ಮುಗ್ಧ ಹುಡುಗಿಯಾಗಿ ನಟಿಸಿ ಜನಪ್ರಿಯತೆ ಗಳಿಸಿದ್ದ ನಟಿ ದಾಮಿನಿ ಈಗ ಎಲ್ಲಿದ್ದಾರೆ? ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದ ಅವರು ಚಿತ್ರರಂಗದಿಂದ ದೂರವಾದ ಸಿನಿ ಪಯಣದ ಮಾಹಿತಿ ಇಲ್ಲಿದೆ.

ಕನ್ನಡ ಚಿತ್ರರಂಗದಲ್ಲಿ ಕೆಲ ಕಲಾವಿದರು ಒಂದೇ ಸಿನಿಮಾದ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದ ಗುರುತು ಮೂಡಿಸುತ್ತಾರೆ. ಅಂಥವರಲ್ಲಿ ನಟಿ ದಾಮಿನಿ ಕೂಡ ಒಬ್ಬರು. 1999ರಲ್ಲಿ ತೆರೆಕಂಡ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಉಪೇಂದ್ರ' ಸಿನಿಮಾದಲ್ಲಿ ಮುಗ್ಧ ಹುಡುಗಿಯಾಗಿ ಕಾಣಿಸಿಕೊಂಡಿದ್ದ ದಾಮಿನಿ, ತಮ್ಮ ಸಹಜ ಅಭಿನಯ ಮತ್ತು ತೊದಲು ನುಡಿಯ ಮೂಲಕ ಸಿನಿರಸಿಕರ ಗಮನ ಸೆಳೆದಿದ್ದರು.

ಮೊದಲ ಸಿನಿಮಾದಲ್ಲೇ ಪ್ರೇಕ್ಷಕರ ಪ್ರೀತಿ ಗಳಿಸಿದ್ದ ಈ ನಟಿಗೆ ಮುಂದೆ ಅವಕಾಶಗಳೂ ಹರಿದುಬಂದಿದ್ದವು. ಆದರೆ, ಕೆಲವೇ ವರ್ಷಗಳಲ್ಲಿ ಅವರು ಚಿತ್ರರಂಗದಿಂದ ದೂರವಾದರು. ಹಾಗಾದರೆ, ದಾಮಿನಿ ಅವರ ಸಿನಿ ಪಯಣ ಹೇಗಿತ್ತು? ಸಿನಿಮಾ ರಂಗದಿಂದ ದೂರ ಉಳಿಯಲು ಕಾರಣವೇನು?

ಮೊದಲ ಸಿನಿಮಾದಲ್ಲೇ ಗಮನ ಸೆಳೆದಿದ್ದ ದಾಮಿನಿ

ನಿರ್ದೇಶಕ ಉಪೇಂದ್ರ ಅವರ ವಿಭಿನ್ನ ಕಥೆ ಮತ್ತು ನಿರೂಪಣೆಯಲ್ಲಿ ಮೂಡಿಬಂದ 'ಉಪೇಂದ್ರ' ಸಿನಿಮಾ 1999ರಲ್ಲಿ ತೆರೆಕಂಡು ಸಾಕಷ್ಟು ಸದ್ದು ಮಾಡಿತ್ತು. ಈ ಚಿತ್ರದಲ್ಲಿ ಪ್ರೇಮಾ ಹಾಗೂ ಬಾಲಿವುಡ್ ನಟಿ ರವೀನಾ ಟಂಡನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಮತ್ತೊಂದು ಪಾತ್ರಕ್ಕೆ ಹೊಸ ಮುಖದ ಹುಡುಕಾಟದಲ್ಲಿದ್ದ ಚಿತ್ರತಂಡದ ಗಮನಕ್ಕೆ ಬಂದಿದ್ದು ದಾಮಿನಿ. ಉಪೇಂದ್ರ ಅವರ ಆಹ್ವಾನದ ಮೇರೆಗೆ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡ ದಾಮಿನಿ, ಮೊದಲ ಸಿನಿಮಾದಲ್ಲೇ ದೊಡ್ಡ ಕಲಾವಿದರೊಂದಿಗೆ ತೆರೆ ಹಂಚಿಕೊಳ್ಳುವ ಅವಕಾಶ ಪಡೆದರು.

ಸಿನಿಮಾದಲ್ಲಿ ಅವರು ಕಾಣಿಸಿಕೊಂಡಿದ್ದ ಮುಗ್ಧ ಹುಡುಗಿಯ ಪಾತ್ರ ಹಾಗೂ ಅವರ ತೊದಲು ನುಡಿ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ವಿಶೇಷವಾಗಿ ಸಿನಿಮಾದಲ್ಲಿ ಉಪೇಂದ್ರ ಹಾವಳಿಯನ್ನು ತಡೆಯಲಾಗದೆ ದಾಮಿನಿ, ಉಪೇಂದ್ರ ಕೇಳಿದ ಪ್ರಶ್ನೆಗೆ, ಹೌದು, ನಾನು ತಪ್ಪು ಮಾಡಿಲ್ಲ, ಗೊತ್ತಿದ್ದು ಗೊತ್ತಿದ್ದೂ ತಪ್ಪು ಮಾಡಿಲ್ಲ ಎಂದು ದೇವರ ಮೇಲೆ ಆಣೆ ಮಾಡುತ್ತಾರೆ, ಆ ಸೀನ್ ಹೇಗೆ ತಾನೇ ಮರೆಯಲು ಸಾಧ್ಯ ಹೇಳಿ. ಉಪೇಂದ್ರ ಅವರ ಪ್ರಶ್ನೆಗಳಿಗೆ ಮುಗ್ಧವಾಗಿ ಉತ್ತರಿಸುವ ದೃಶ್ಯ ಇಂದಿಗೂ ಸಿನಿಮಾ ಪ್ರೇಮಿಗಳ ನೆನಪಿನಲ್ಲಿ ಉಳಿದಿದೆ.

ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಅವಕಾಶ

'ಉಪೇಂದ್ರ' ಸಿನಿಮಾ ಯಶಸ್ಸಿನ ಬಳಿಕ ದಾಮಿನಿ ಅವರಿಗೆ ಕನ್ನಡ ಚಿತ್ರರಂಗದಿಂದ ಹಲವು ಅವಕಾಶಗಳು ಬರಲಾರಂಭಿಸಿದವು. ಅದರಂತೆ 'ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ', 'ವಂದೇ ಮಾತರಂ', 'ಚಿಟ್ಟೆ' ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದರು. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ 'ಅಸುರ' ಸಿನಿಮಾದಲ್ಲಿಯೂ ಕಾಣಿಸಿಕೊಂಡು ಪ್ರೇಕ್ಷಕರಿಗೆ ಮತ್ತಷ್ಟು ಪರಿಚಿತರಾದರು.

ಆರಂಭದಲ್ಲಿ ಗಮನ ಸೆಳೆದಿದ್ದರೂ, ಮುಂದಿನ ಸಿನಿಮಾಗಳಿಗೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಒಂದರ ನಂತರ ಮತ್ತೊಂದು ಅವಕಾಶಗಳನ್ನು ಬಳಸಿಕೊಳ್ಳುವ ಪ್ರಯತ್ನದಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡರೂ, ಮೊದಲ ಸಿನಿಮಾದಲ್ಲಿ ಮೂಡಿದ್ದ ಜನಪ್ರಿಯತೆಯನ್ನು ಉಳಿಸಿಕೊಳ್ಳುವುದು ಅವರಿಗೆ ಸುಲಭವಾಗಲಿಲ್ಲ.

ಅವಕಾಶಗಳು ಕಡಿಮೆಯಾದಂತೆ ಬದಲಾದ ಸಿನಿ ಪಯಣ

ದಾಮಿನಿ ಅಭಿನಯದ ಸಿನಿಮಾಗಳಲ್ಲಿ 'ಉಪೇಂದ್ರ' ಮತ್ತು 'ಅಸುರ' ಹೆಚ್ಚು ಗಮನ ಸೆಳೆದ ಚಿತ್ರಗಳಾಗಿದ್ದವು. ಆದರೆ, ನಂತರದ ಸಿನಿಮಾಗಳು ಅವರ ವೃತ್ತಿಜೀವನಕ್ಕೆ ನಿರೀಕ್ಷಿತ ತಿರುವು ನೀಡಲಿಲ್ಲ. ಅವಕಾಶಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಸಿಕ್ಕ ಪಾತ್ರಗಳನ್ನು ಒಪ್ಪಿಕೊಳ್ಳುವ ಪರಿಸ್ಥಿತಿ ಎದುರಾಯಿತು. ಈ ಹಂತದಲ್ಲಿ 'ಬ್ರಿಗೇಡ್' ಸಿನಿಮಾದಲ್ಲಿಯೂ ಅವರು ನಟಿಸಿದ್ದರು. ನಂತರ 2009ರಲ್ಲಿ ಹುಚ್ಚ ವೆಂಕಟ್ ನಿರ್ದೇಶನದ 'ಸ್ವತಂತ್ರ ಪಾಳ್ಯ' ಚಿತ್ರದಲ್ಲಿ ಕಾಣಿಸಿಕೊಂಡರು. ಈ ಸಿನಿಮಾ ಅವರ ಸಿನಿ ಪಯಣದ ಕೊನೆಯ ಹಂತದ ಚಿತ್ರಗಳಲ್ಲೊಂದಾಯಿತು. ಆ ಬಳಿಕ ದಾಮಿನಿ ಬೆಳ್ಳಿತೆರೆಯಿಂದ ದೂರ ಉಳಿದರು.

ಈಗ ನಟಿ ದಾಮಿನಿ ಎಲ್ಲಿದ್ದಾರೆ?

ಒಂದು ಕಾಲದಲ್ಲಿ ತಮ್ಮ ಮುಗ್ಧ ಅಭಿನಯದಿಂದ ಕನ್ನಡ ಸಿನಿರಸಿಕರ ಗಮನ ಸೆಳೆದಿದ್ದ ದಾಮಿನಿ, ನಂತರ ಚಿತ್ರರಂಗದಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳಲಿಲ್ಲ. ಅವಕಾಶಗಳ ಕೊರತೆ ಹಾಗೂ ವೃತ್ತಿಜೀವನದಲ್ಲಿ ನಿರೀಕ್ಷಿತ ಯಶಸ್ಸು ಸಿಗದಿರುವುದು ಅವರ ಸಿನಿ ಪಯಣಕ್ಕೆ ವಿರಾಮ ನೀಡಿದ ಅಂಶಗಳೆಂದು ಹೇಳಲಾಗುತ್ತದೆ. ಆದರೆ, ಚಿತ್ರರಂಗದಿಂದ ದೂರ ಉಳಿಯಲು ಅವರು ತೆಗೆದುಕೊಂಡ ನಿರ್ಧಾರದ ಹಿಂದಿನ ನಿಖರ ಕಾರಣಗಳ ಬಗ್ಗೆ ಅವರ ಅಧಿಕೃತ ಹೇಳಿಕೆ ಲಭ್ಯವಿಲ್ಲ. ಹಾಗೆಯೇ ಸದ್ಯ ಅವರು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬ ಬಗ್ಗೆಯೂ ಖಚಿತವಾದ ಸಾರ್ವಜನಿಕ ಮಾಹಿತಿ ಲಭ್ಯವಿಲ್ಲ.

ಇನ್ನು 'ಉಪೇಂದ್ರ' ಸಿನಿಮಾದಲ್ಲಿ ಪುಟ್ಟ ಪಾತ್ರದ ಮೂಲಕವೇ ಪ್ರೇಕ್ಷಕರ ಮನಸ್ಸು ಗೆದ್ದಿದ್ದ ದಾಮಿನಿ ಅವರ ಸಿನಿ ಪಯಣ ಹೆಚ್ಚು ಕಾಲ ಮುಂದುವರಿಯಲಿಲ್ಲ. ಕೆಲ ಕಲಾವಿದರು ಎಷ್ಟೇ ಸಿನಿಮಾಗಳಲ್ಲಿ ನಟಿಸಿದರೂ ಸಿಗದ ಜನಪ್ರಿಯತೆ, ಕೆಲವರಿಗೆ ಒಂದೇ ಪಾತ್ರದಿಂದ ಸಿಗುತ್ತದೆ ಎಂಬುದಕ್ಕೆ ದಾಮಿನಿ ಅವರ ಆರಂಭಿಕ ಸಿನಿ ಪಯಣವೇ ಸಾಕ್ಷಿ.