ನಟ ಶಿವರಾಜ್​ ಕುಮಾರ್​ ಅಭಿನಯದ 'ಎ ಫಾರ್ ಆನಂದ್' ಚಿತ್ರದಲ್ಲಿ ನಟಿ ತಾರಾ ಅನುರಾಧ ಅಭಿನಯಿಸುತ್ತಿದ್ದು, ಹಳೆಯ ಆನಂದ್ ಸಿನಿಮಾದ ನೆನಪುಗಳನ್ನು ಹಂಚಿಕೊಂಡಿದ್ದಾರೆ. 25 ಟೇಕ್ ನಂತರ ಐಸ್ ಕ್ರೀಮ್ ನೋಡಿ ಡೈಲಾಗ್ ಹೇಳಿದ ರೋಚಕ ಘಟನೆಯನ್ನು ತಾರಾ ವಿವರಿಸಿದ್ದಾರೆ.

ಬೆಂಗಳೂರು: ನಟ ಶಿವರಾಜ್​ ಕುಮಾರ್​ ಅಭಿನಯದ 'ಎ ಫಾರ್ ಆನಂದ್' ಚಿತ್ರದ ಬಗ್ಗೆ ಅಭಿಮಾನಿಗಳು ಸಕತ್​ ಕಾತರದಿಂದ ಕಾಯುತ್ತಿದ್ದಾರೆ. ಸಿನಿಮಾದಲ್ಲಿ ನಟಿ ರವೀನಾ ಟಂಡನ್ (Raveena Tandon) ಜೊತೆ ನಟಿ ತಾರಾ ಅನುರಾಧ (Tara Anuradha) ಅವರೂ ಇದ್ದಾರೆ. ಇದರ ವಿಶೇಷತೆ ಏನೆಂದರೆ, ಶಿವರಾಜ್​ ಕುಮಾರ್​ ಅವರ ಮೊದಲ ಸಿನಿಮಾ ಆನಂದ್​ನಲ್ಲಿ ತಾರಾ ಅವರು ಅಭಿನಯಿಸಿದ್ದರು. 1986ರಲ್ಲಿ ಆ ಸಿನಿಮಾ ಬಿಡುಗಡೆಯಾಗಿತ್ತು. ಅದಾದ ಬಳಿಕ ಕೆಲವು ಸಿನಿಮಾಗಳಲ್ಲಿ ಇವರಿಬ್ಬರೂ ನಟಿಸಿದ್ದರೂ ಇದೀಗ ಆನಂದ್​ ಸಿನಿಮಾ ಬಿಡುಗಡೆಯಾಗಿ 40 ವರ್ಷಗಳ ಬಳಿಕ ಶಿವಣ್ಣ ಅವರ ಸಿನಿಮಾದಲ್ಲಿ ತಾರಾ ಅವರು ನಟಿಸುತ್ತಿರುವುದು ವಿಶೇಷವಾಗಿದೆ. ಆನಂದ್​ ಸಿನಿಮಾ ಮಾಡುವ ಸಮಯದಲ್ಲಿ ತಾರಾ ಅವರ ಮನೆಯಲ್ಲಿ ಸಿನಿಮಾ ಬಗ್ಗೆ ಅಷ್ಟೊಂದು ಆಸಕ್ತಿ ಇರಲಿಲ್ಲವಂತೆ. ಆದರೆ ಡಾ.ರಾಜ್​ಕುಮಾರ್​ ಅವರ ಮಗನೊಬ್ಬ ಸಿನಿಮಾಕ್ಕೆ ಇಂಟ್ರಡ್ಯೂಸ್​ ಆಗ್ತಿದ್ದಾರೆ ಎನ್ನುವ ಕಾರಣ ಕೊಟ್ಟು, ಮನೆಯವರ ಮನವೊಲಿಸಿ ತಾರಾ ಅವರು ಈ ಸಿನಿಮಾದಲ್ಲಿ ನಟಿಸಿದ್ದರು. ಈ ಬಗ್ಗೆ ಸಂದರ್ಶನವೊಂದರಲ್ಲಿ ಖುದ್ದು ನಟಿ ತಾರಾ ಅವರೇ ರಿವೀಲ್​ ಮಾಡಿದ್ದಾರೆ.

ಎ ಫಾರ್ ಆನಂದ್ ಚಿತ್ರದ (A For Anand Movie) ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ, ಇದೀಗ ನಟಿ ತಾರಾ ಅವರು ತಮ್ಮ ಮತ್ತು ಶಿವಣ್ಣ ಅವರ ನಡುವಿನ ಬಾಂಡಿಂಗ್​ ಕುರಿತು ಮಾತನಾಡಿದ್ದಾರೆ. ಅದರಲ್ಲಿಯೂ ಆನಂದ್​ ಸಿನಿಮಾದಲ್ಲಿನ ರೋಚಕ ಘಟನೆಯೊಂದನ್ನು ನಟಿ ತಾರಾ ವಿವರಿಸಿದ್ದಾರೆ.

ನಾಯಕನನ್ನು ಆಸೆಯಿಂದ ನೋಡುವ ದೃಶ್ಯ

ಆನಂದ್ ಸಿನಿಮಾ ಮಾಡುವಾಗ ತಾರಾ ಇನ್ನೂ ತುಂಬಾ ಚಿಕ್ಕವರು. ಆ ಸಿನಿಮಾದಲ್ಲಿ ನಾಯಕ ಆನಂದ್​ ಅರ್ಥಾತ್​ ಶಿವರಾಜ್​ ಕುಮಾರ್​ ಅವರನ್ನು ಆಸೆಯ ಕಣ್ಣುಗಳಿಂದ ನೋಡುವ ದೃಶ್ಯವಿದೆ. ಅದನ್ನು ಮಾಡಲಾಗದೇ ತಾವು ಪಟ್ಟಿರುವ ಪೀಕಲಾಟವನ್ನು ನಟಿ ವಿವರಿಸಿದ್ದಾರೆ. ನನಗೆ ಮತ್ತು ಶಿವಣ್ಣಗೆ 26 ವರ್ಷ ವಯಸ್ಸಿನ ಅಂತರ. ಇದರ ಹೊರತಾಗಿಯೂ ನಾನು ಏಕವಚನದಲ್ಲಿ ಮಾತನಾಡುವ ಏಕೈಕ ವ್ಯಕ್ತಿ ಅಂದ್ರೆ ಅದು ಶಿವಣ್ಣ ಎಂದಿರುವ ನಟಿ, ಬಹುಶಃ ಗೀತಮ್ಮ ಸಹ ಅವರನ್ನ ಹೋಗು.. ಬಾ.. ಕರೀತಾರೋ, ಇಲ್ವೋ.. ಗೊತ್ತಿಲ್ಲ. ಆದರೆ, ನಾನು ಮಾತ್ರ ಹಾಗೇ ಕರೆಯೋದು. ಇವಾಗಲೂ ಹಾಗೇ ಕರೆಯೋದು'' ಅಂತ ಹೇಳಿದ್ದಾರೆ ತಾರಾ.

ಐಸ್​ಕ್ರೀಂ ಕೊಟ್ಟು ಶೂಟಿಂಗ್​ ಫಿನಿಷ್​

ನಂತರ ಆನಂದ್​ ಸಿನಿಮಾ (Anand Kannada Movie) ಶೂಟಿಂಗ್​ ಬಗ್ಗೆ ವಿವರಿಸಿರುವ ಅವರು, ಅದರಲ್ಲಿ ನನ್ನದು ಸ್ವಲ್ಪ ವಿಭಿನ್ನ ಕ್ಯಾರೆಕ್ಟರ್​ ಆಗಿತ್ತು. ನಾಯಕನನ್ನು ಆಸೆಯ ಕಣ್ಣಿನಿಂದ ನೋಡಿ ಮಾತನಾಡಬೇಕಿತ್ತು. ಆದರೆ ಏನು ಮಾಡಿದ್ರೂ ನನಗೆ ಡೈಲಾಗ್​ ಹೇಳಲು ಬರಲೇ ಇಲ್ಲ. ನಿರ್ದೇಶಕರಾಗಿದ್ದ ಸಿಂಗೀತಂ ಶ್ರೀನಿವಾಸ ರಾವ್ ಅವರು ಹೇಳಿ ಕೊಟ್ಟೂ ಕೊಟ್ಟೂ ಸಾಕಾದರು. ಆದರೂ ಆಸೆಯ ಕಣ್ಣುಗಳಿಂದ ಡೈಲಾಗ್​ ಹೇಳಲು ಪರದಾಡಿದೆ. ಅದಾಗಲೇ 25 ಟೇಕ್​ಮೇಲಾಗಿತ್ತು. ಎಲ್ಲರೂ ಸುಸ್ತಾಗಿಬಿಟ್ಟಿದ್ದರು ಎಂದು ನಟಿ ತಾರಾ ನೆನಪಿಸಿಕೊಂಡಿದ್ದಾರೆ. ಆಮೇಲೆ ನಿರ್ದೇಶಕರು, 'ನಿನಗೆ ಏನು ಇಷ್ಟ' ಅಂತ ಕೇಳಿದರು. ನಾನು ಕೂಡಲೇ ಐಸ್ ಕ್ರೀಮ್ ಎಂದೆ. ಆಗ ವೆನ್ನಿಲಾ ಫ್ಯಾಮಿಲಿ ಪ್ಯಾಕ್ ಐಸ್​ಕ್ರೀಂ ತಂದು ಅದರ ಪಕ್ಕ ಕ್ಯಾಮೆರಾ ಇಟ್ಟರು. ಈಗ ಆಸೆಯ ಕಣ್ಣುಗಳಿಂದ ಈ ಐಸ್​ಕ್ರೀಂ ನೋಡಿ ಡೈಲಾಗ್​ ಹೇಳು ಎಂದರು. ಅದನ್ನು ನೋಡಿ ನನಗೆ ಸಿಕ್ಕಾಪಟ್ಟೆ ಆಸೆಯಾಗಿತ್ತು. ಕೊನೆಗೆ ಐಸ್​ಕ್ರೀಂ ಪ್ಯಾಕ್ ನೋಡಿ ಪಟಪಟ ಅಂತ ಆಸೆಯ ಕಣ್ಣುಗಳಿಂದ ಡೈಲಾಗ್​ ಹೇಳಿ ಮುಗಿಸಿದೆ ಎಂದು ನೆನಪಿಸಿಕೊಂಡಿದ್ದಾರೆ ನಟಿ ತಾರಾ.