ಜೀ ಕನ್ನಡದ ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಯಲ್ಲಿ 'ದೇವತಾ ಮನುಷ್ಯ' ಚಿತ್ರದ 'ನಿನ್ನಂಥ ಅಪ್ಪ ಇಲ್ಲ' ಹಾಡನ್ನು ಮರುಸೃಷ್ಟಿಸಲಾಯಿತು. ಈ ನೃತ್ಯವನ್ನು ವೀಕ್ಷಿಸಿದ ನಟಿ ಸುಧಾರಾಣಿ ಅವರು ಡಾ. ರಾಜ್ಕುಮಾರ್ ಹಾಗೂ ತಮ್ಮ ತಂದೆಯನ್ನು ನೆನಪಿಸಿಕೊಂಡು ಭಾವುಕರಾಗಿ ಕಣ್ಣೀರಿಟ್ಟರು.
ಬೆಂಗಳೂರು: 1988ರಲ್ಲಿ ಬಿಡುಗಡೆಯಾದ ಕನ್ನಡದ ಪ್ರಸಿದ್ಧ ಚಲನಚಿತ್ರ 'ದೇವತಾ ಮನುಷ್ಯ' ಚಿತ್ರ ನೋಡಿದವರಿಗೆ ಡಾ.ರಾಜ್ ಮತ್ತು ಸುಧಾರಾಣಿ ಅಪ್ಪ-ಮಗಳು ಆಗಿ ಅಭಿನಯಿಸಿದ್ದು ಇನ್ನೂ ಕಣ್ಣ ಮುಂದೆಯೇ ಬರುತ್ತದೆ. ಆಗ ಸುಧಾರಾಣಿ ಅವರು, 14-15 ವರ್ಷದ ಬಾಲಕಿಯಾಗಿದ್ದರು. ಅಪ್ಪ-ಮಗಳ ಈ ಸಂಬಂಧ ನೋಡಿ ವೀಕ್ಷಕರು ಕಣ್ತುಂಬಿಸಿಕೊಂಡದ್ದು ಇದೆ. ಅದರಲ್ಲಿಯೂ ಈ ಸಿನಿಮಾದ ನಿನ್ನಂಥ ಅಪ್ಪ ಇಲ್ಲ ಹಾಡು ಇಂದಿಗೂ ಜನಜನಿತ. ಅಷ್ಟಕ್ಕೂ ಅಣ್ಣಾವ್ರ ಸಿನಿಮಾದ ಹಾಡುಗಳು ಎಂದರೆ ಅವು ಇಂದಿನ ಸಿನಿಮಾಗಳಂತೆ ಅಲ್ಲವೇಅಲ್ಲ ಬಿಡಿ. ಅವರ ಪ್ರತಿಯೊಂದು ಸಿನಿಮಾದ ಹಾಡುಗಳು ಹಚ್ಚ ಹಸಿರಾಗಿಯೇ ಇರುವಂಥದ್ದು. ಅಂಥದ್ದರಲ್ಲಿ ಒಂದು ದೇವತಾ ಮನುಷ್ಯದ ಈ ಹಾಡು. ತನ್ನದಲ್ಲದ ಆರೋಪಕ್ಕೆ ಜೈಲು ಸೇರುವ ನಾಯಕ (ಡಾ.ರಾಜ್). ಸೇಡು ತೀರಿಸಿಕೊಳ್ಳಲು ಹೊಂಚು ಹಾಕಿದರೂ, ಕಥೆ ಮುಂದುವರೆದಂತೆ ಸೇಡು ಮತ್ತು ಕ್ಷಮೆಯ ನಡುವಿನ ಸಂಘರ್ಷದಲ್ಲಿ ದ್ವೇಷವನ್ನು ಬಿಟ್ಟು ಮಾನವೀಯತೆಯ ದಾರಿಯನ್ನು ಹಿಡಿಯುವ ಮೂಲಕ 'ದೇವತಾ ಮನುಷ್ಯ'ನಾಗುತ್ತಾನೆ ಎನ್ನುವ ಕಥೆ ಹೊಂದಿರುವ ಈ ಸಿನಿಮಾ ಇಂದಿಗೂ ಜನರ ಮನಸ್ಸಿನಲ್ಲಿ ನೆಲೆಯೂರಿದೆ.
ಡಿಕೆಡಿ ವೇದಿಕೆಯಲ್ಲಿ ರೀಕ್ರಿಯೇಟ್
ಈ ಸಿನಿಮಾದ ನಿನ್ನಂಥ ಅಪ್ಪ ಇಲ್ಲ ಹಾಡನ್ನು ಇದೀಗ ಜೀ ಕನ್ನಡದ ಡಾನ್ಸ್ ಕರ್ನಾಟಕ ಡಾನ್ಸ್ (Dance Karnataka Dance) ವೇದಿಕೆಯ ಮೇಲೆ ರಿಕ್ರಿಯೇಟ್ ಮಾಡಲಾಗಿದೆ. ಸ್ಪರ್ಧಿ ಲಾವಣ್ಯ ಅವರು ಅಭಿನಯಿಸಿದ ಈ ನೃತ್ಯಕ್ಕೆ ಅವರ ಕೋರಿಯೋಗ್ರಫರ್ ರಾಜ್ಕುಮಾರ್ ಆಗಿ ನಟಿಸಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಸೇಮ್ ಟು ಸೇಮ್ ಡಾ.ರಾಜ್ ಮತ್ತು ಸುಧಾರಾಣಿ ಅವರನ್ನೇ ಹೋಲುವಂತೆ ಈ ಡಾನ್ಸ್ ರೀಕ್ರಿಯೇಟ್ ಮಾಡಲಾಗಿತ್ತು.
ಕಣ್ಣೀರಿಟ್ಟ ನಟಿ
ಅತಿಥಿಯಾಗಿ ಬಂದಿದ್ದ ನಟಿ ಸುಧಾರಾಣಿ ಅವರು, ಆ ಕ್ಷಣದಲ್ಲಿ ಭಾವುಕರಾಗಿ ಕಣ್ಣೀರಿಟ್ಟರು. ಸಿನಿಮಾದಲ್ಲಿ ಅಪ್ಪನಾಗಿ ನಟಿಸಿದ್ದ ಡಾ.ರಾಜ್ಕುಮಾರ್ ಅವರು ನಟಿ ಸುಧಾರಾಣಿ ಅವರ ಬಣ್ಣದ ಲೋಕದಲ್ಲಿ ಬಹಳಷ್ಟು ಕೊಡುಗೆ ನೀಡಿದವರು. ಒಂದು ಮಾತಿನಲ್ಲಿ ಹೇಳುವುದಾದರೆ, ಸುಧಾರಾಣಿ ಅವರು ಸಿನಿಮಾಕ್ಕೆ ಎಂಟ್ರಿ ಕೊಡಲು ಕಾರಣವಾಗಿದ್ದೇ ಡಾ.ರಾಜ್ ಕುಟುಂಬ. ಈ ಹಾಡಿನಲ್ಲಿ ನಿನ್ನಂಥ ಅಪ್ಪ ಇಲ್ಲ ಎಂದಾಗ, ರಾಜ್ಕುಮಾರ್ ಅವರನ್ನು ನೆನಪಿಸಿಕೊಳ್ಳುವುದರ ಜೊತೆಗೆ ತಮ್ಮ ತಂದೆಯನ್ನೂ ನೆನಪಿಸಿಕೊಂಡ ನಟಿ ಕಣ್ಣೀರಾದರು.
ಇವರಿಬ್ಬರೂ ನನ್ನ ಜೀವನದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ ಎನ್ನುತ್ತಲೇ ಗದ್ಗದಿತರಾದರು. ಮುಂದೆ ಮಾತನಾಡಲೂ ಆಗದಷ್ಟು ಭಾವುಕರಾದರು ನಟಿ. ಅಂದಹಾಗೆ, ನಟಿ ಸುಧಾರಾಣಿ ಅವರ ತಂದೆಯ ಹೆಸರು ಎಚ್. ಎಸ್. ಗೋಪಾಲಕೃಷ್ಣ. ಇವರು ಜನವರಿ 2021 ರಲ್ಲಿ ತಮ್ಮ 93ನೇ ವಯಸ್ಸಿನಲ್ಲಿ ನಿಧನರಾದರು.







