ವಾಲ್ಮೀಕಿ ರಾಮಾಯಣದಲ್ಲಿ ಜಟಾಯು ಸೀತೆಯನ್ನು ರಕ್ಷಿಸಲು ರಾವಣನ ವಿರುದ್ಧ ಹೋರಾಡಿದ ಸಾಹಸದ ವಿವರವಿದೆ. ಸೀತೆಯನ್ನು ರಕ್ಷಿಸಲು ರಾವಣನ ವಿರುದ್ಧ ಹೋರಾಡಿದ ಜಟಾಯುವಿನ ಉಗುರನ್ನು ರಾವಣ ತನ್ನ ಬಳಿ ಇಟ್ಟುಕೊಂಡಿದ್ದೇಕೆ? ಇತ್ತೀಚಿನ ರಾಮಾಯಣ ಸಿನಿಮಾದ ಬಳಿಕ ಎಲ್ಲರಲ್ಲೂ ಈ ಪ್ರಶ್ನೆ ಇದೆ
ರಾಮಾಯಣ: ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಆಕೆಯನ್ನು ರಕ್ಷಿಸಲು ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ ಮಹಾಪಕ್ಷಿ ಜಟಾಯು. ಹದ್ದುಗಳ ರಾಜ. ವಯಸ್ಸಾದ ಪಕ್ಷಿಯಾಗಿದ್ದರೂ ರಾವಣನಂತಹ ಬಲಶಾಲಿ ರಾಕ್ಷಸನ ವಿರುದ್ಧ ಧೈರ್ಯದಿಂದ ಸೆಣಸಿದ ಜಟಾಯುವಿನ ಸಾಹಸ ರಾಮಾಯಣದ ಪ್ರಮುಖ ಘಟನೆಗಳಲ್ಲಿ ಒಂದಾಗಿದೆ. ಈ ಹೋರಾಟದಲ್ಲಿ ಜಟಾಯು ಗಂಭೀರವಾಗಿ ಗಾಯಗೊಂಡು ರಾಮ ಸೀತೆಯನ್ನು ಹುಡುಕಿ ಬಂದ ಮೇಲಷ್ಟೇ ಪ್ರಾಣ ಬಿಡುತ್ತಾನೆ. ಆದರೆ, ಇತ್ತೀಚಿನ ನಟ ಯಶ್ ರಾವಣನಾಗಿ ನಟಿಸಿರುವ 'ರಾಮಾಯಣ' ಚಲನಚಿತ್ರದ ಚರ್ಚೆಯಲ್ಲಿರುವ ಒಂದು ದೃಶ್ಯ ಇದು. ರಾವಣನು ಜಟಾಯುವಿನ ಉಗುರನ್ನು ತನ್ನ ಬಳಿ ಇಟ್ಟುಕೊಳ್ಳುವ ದೃಶ್ಯ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.
ಹಾಗಾದರೆ, ವಾಲ್ಮೀಕಿ ರಾಮಾಯಣದಲ್ಲಿ ರಾವಣನು ಜಟಾಯುವಿನ ಉಗುರನ್ನು ತನ್ನ ಬಳಿ ಇಟ್ಟುಕೊಂಡಿದ್ದನೆಂಬ ಉಲ್ಲೇಖ ಇದೆಯೇ? ಅಥವಾ ಇದು ಚಲನಚಿತ್ರಕ್ಕಾಗಿ ಸೃಷ್ಟಿಸಲಾದ ಕಾಲ್ಪನಿಕ ಸನ್ನಿವೇಶವೇ? ಈ ಎರಡರ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಮುಖ್ಯ.
ಸೀತೆಯನ್ನು ರಕ್ಷಿಸಲು ರಾವಣನ ವಿರುದ್ಧ ಹೋರಾಡಿದ ಜಟಾಯು
ವಾಲ್ಮೀಕಿ ರಾಮಾಯಣದ ಅರಣ್ಯಕಾಂಡದಲ್ಲಿ ಸೀತಾಪಹರಣದ ಸಂದರ್ಭದಲ್ಲಿ ಜಟಾಯು ಮತ್ತು ರಾವಣನ ನಡುವೆ ನಡೆದ ಭೀಕರ ಯುದ್ಧದ ಉಲ್ಲೇಖವಿದೆ. ರಾವಣನು ಸೀತೆಯನ್ನು ಬಲವಂತವಾಗಿ ಅಪಹರಿಸಿ ಪುಷ್ಪಕ ವಿಮಾನದಲ್ಲಿ ಲಂಕೆಯ ಕಡೆಗೆ ಕೊಂಡೊಯ್ಯುತ್ತಿದ್ದಾಗ, ಮಾರ್ಗಮಧ್ಯೆ ಜಟಾಯು ಇದನ್ನು ಗಮನಿಸುತ್ತಾನೆ.
ಸೀತೆಯ ಆಕ್ರಂದನವನ್ನು ಕೇಳಿದ ಜಟಾಯು, ರಾವಣನನ್ನು ತಡೆದು ಆಕೆಯನ್ನು ಬಿಡುಗಡೆ ಮಾಡುವಂತೆ ಎಚ್ಚರಿಸುತ್ತಾನೆ. ಆದರೆ ರಾವಣ ತನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಹೀಗಾಗಿ ಸೀತೆಯನ್ನು ರಕ್ಷಿಸುವ ಉದ್ದೇಶದಿಂದ ಜಟಾಯು ರಾವಣನ ಮೇಲೆ ದಾಳಿ ನಡೆಸುತ್ತಾನೆ.
ವಯಸ್ಸಾದ ಪಕ್ಷಿಯಾಗಿದ್ದರೂ ಜಟಾಯು ಅಪಾರ ಧೈರ್ಯವಂತ, ಸೂಕ್ಷ್ಮ ಕಣ್ಣುಗಳನ್ನು ಹೊಂದಿದ್ದ. ತನ್ನ ಕೊಕ್ಕು ಮತ್ತು ಉಗುರುಗಳನ್ನು ಬಳಸಿ ರಾವಣನಿಗೆ ಗಾಯಗೊಳಿಸುತ್ತಾನೆ. ರಾವಣನ ಪುಷ್ಪಕವಿಮಾನ ರಥ ಹಾಗೂ ಪ್ರಯಾಣಕ್ಕೆ ಅಡ್ಡಿಪಡಿಸುವ ಮೂಲಕ ಸೀತೆಯನ್ನು ರಕ್ಷಿಸಲು ಸಾಧ್ಯವಾದಷ್ಟು ಪ್ರಯತ್ನಿಸುತ್ತಾನೆ. ಈ ಹೋರಾಟದಲ್ಲಿ ಜಟಾಯು ರಾವಣನಿಗೆ ಪ್ರಬಲ ಪ್ರತಿರೋಧ ಒಡ್ಡುತ್ತಾನೆ.
ಜಟಾಯುವಿನ ಅಸಾಧಾರಣ ಪರಾಕ್ರಮವನ್ನು ಅರಿತ ರಾವಣನು ತನ್ನ ದಿವ್ಯ ಅಸ್ತ್ರವಾದ 'ಚಂದ್ರಹಾಸ' ಖಡ್ಗವನ್ನು ಬಳಸಿ ಜಟಾಯುವಿನ. ತೀವ್ರವಾಗಿ ಗಾಯಗೊಂಡ ಜಟಾಯು ನೆಲಕ್ಕೆ ಬೀಳುತ್ತಾನೆ. ಬಳಿಕ ರಾವಣ ಸೀತೆಯನ್ನು ಕರೆದುಕೊಂಡು ಲಂಕೆಯತ್ತ ಪ್ರಯಾಣ ಮುಂದುವರಿಸುತ್ತಾನೆ.
ವಾಲ್ಮೀಕಿ ರಾಮಾಯಣದಲ್ಲಿ ಜಟಾಯುವಿನ ಉಗುರನ್ನು ರಾವಣ ಇಟ್ಟುಕೊಂಡಿದ್ದನೇ?
ವಾಲ್ಮೀಕಿ ರಾಮಾಯಣದ ಅರಣ್ಯಕಾಂಡದಲ್ಲಿ ಜಟಾಯು ಮತ್ತು ರಾವಣನ ನಡುವಿನ ಯುದ್ಧದ ವಿವರವಿದೆ. ಆದರೆ, ಯುದ್ಧದ ಬಳಿಕ ರಾವಣನು ಜಟಾಯುವಿನ ಉಗುರನ್ನು ಕಿತ್ತು ತನ್ನ ಬಳಿ ಇಟ್ಟುಕೊಂಡಿದ್ದನೆಂಬ ಘಟನೆಗೆ ಮೂಲ ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖವಿಲ್ಲ.
ಹೀಗಾಗಿ, ಜಟಾಯುವಿನ ಉಗುರನ್ನು ರಾವಣ ತನ್ನ ಬಳಿ ಇಟ್ಟುಕೊಂಡಿದ್ದಾನೆ ಎಂಬುದನ್ನು ವಾಲ್ಮೀಕಿ ರಾಮಾಯಣದ ಮೂಲ ಪ್ರಸಂಗವೆಂದು ಪರಿಗಣಿಸುವುದು ಸರಿಯಲ್ಲ ಎಂಬ ವಾದಗಳು ಸೋಷಿಯಲ್ ಮೀಡಿಯಾದಲ್ಲಿದೆ. ಈ ಅಂಶವನ್ನು ಚಲನಚಿತ್ರದ ಕಥನದಲ್ಲಿ ಸೇರಿಸಲಾದ ಸೃಜನಾತ್ಮಕ ಬದಲಾವಣೆ ಇರಬಹುದು ಎನ್ನಲಾಗಿದೆ
ರಾಮಾಯಣ ಸಿನಿಮಾದಲ್ಲಿ ಜಟಾಯುವಿನ ಉಗುರಿನ ದೃಶ್ಯ ಏಕೆ ವಿಶೇಷ?
ಚಲನಚಿತ್ರದ ಯುದ್ಧದ ದೃಶ್ಯದಲ್ಲಿ ಜಟಾಯು ತನ್ನ ಹರಿತವಾದ ಉಗುರುಗಳಿಂದ ರಾವಣನ ತಲೆಗೆ ದಾಳಿ ನಡೆಸುತ್ತಾನೆ. ಮೂವಿಯಲ್ಲಿ ತೋರಿಸಿದಂತೆ, ರಾವಣನ ತಲೆ ಕತ್ತರಿಸಲ್ಪಟ್ಟರೂ ಅವನ ಮಾಯಾಶಕ್ತಿಯಿಂದ ಮತ್ತೆ ಅದು ಜೀವಂತವಾಗುತ್ತದೆ. ಆದರೂ, ತನ್ನಂತಹ ಬಲಶಾಲಿ ರಾಕ್ಷಸನಿಗೆ ಒಂದು ಪಕ್ಷಿ ಇಂತಹ ಪ್ರತಿರೋಧ ತೋರಿದ ಘಟನೆ ರಾವಣನ ಅಹಂಕಾರಕ್ಕೆ ದೊಡ್ಡ ಪೆಟ್ಟು ನೀಡುತ್ತದೆ. ಈ ಸನ್ನಿವೇಶದ ಮುಂದುವರಿದ ಭಾಗವಾಗಿ ರಾವಣನು ಜಟಾಯುವಿನ ಉಗುರನ್ನು ತನ್ನ ಬಳಿ ಇಟ್ಟುಕೊಳ್ಳುವಂತೆ ಚಿತ್ರಿಸಲಾಗಿದೆ. ಇದಕ್ಕೆ ಕೆಲವು ಅರ್ಥಗಳನ್ನು ಪ್ರೇಕ್ಷಕರು ಮತ್ತು ಸಿನಿಮಾ ವಿಶ್ಲೇಷಕರು ನೀಡುತ್ತಿದ್ದಾರೆ.
ವಿಜಯದ ಸಂಕೇತವಾಗಿ ಉಗುರು
ತನ್ನ ವಿರುದ್ಧ ಧೈರ್ಯದಿಂದ ಹೋರಾಡಿದ ಜಟಾಯುವನ್ನು ಕೊನೆಗೆ ಸೋಲಿಸಿದ ನೆನಪಿಗಾಗಿ ರಾವಣನು ಆ ಉಗುರನ್ನು ತನ್ನ ಬಳಿ ಇಟ್ಟುಕೊಂಡಿರಬಹುದು ಎಂಬುದು ಒಂದು ವ್ಯಾಖ್ಯಾನ. ತನ್ನನ್ನು ಎದುರಿಸಿದ ಶಕ್ತಿಯನ್ನು ಸೋಲಿಸಿದ ವಿಜಯದ ಸಂಕೇತವಾಗಿ ಅದನ್ನು ಪರಿಗಣಿಸಿರುವ ಸಾಧ್ಯತೆಯನ್ನು ಈ ದೃಶ್ಯ ಸೂಚಿಸುತ್ತದೆ.
ರಾವಣನ ಅಹಂಕಾರಕ್ಕೆ ಬಿದ್ದ ಪೆಟ್ಟಿನ ನೆನಪು
ರಾವಣನು ತನ್ನ ಶಕ್ತಿ ಮತ್ತು ಸಾಮರ್ಥ್ಯದ ಬಗ್ಗೆ ಅಪಾರ ಅಹಂಕಾರ ಹೊಂದಿದ್ದ ಪಾತ್ರ. ಅಂತಹವನಿಗೆ ಒಂದು ಪಕ್ಷಿಯೇ ಸವಾಲೊಡ್ಡಿ ಗಾಯಗೊಳಿಸಿದ್ದು ಅವನ ಆತ್ಮಾಭಿಮಾನಕ್ಕೆ ಧಕ್ಕೆಯಾದ ಘಟನೆ ಎಂಬ ರೀತಿಯಲ್ಲಿ ಸಿನಿಮಾದ ದೃಶ್ಯವನ್ನು ಅರ್ಥೈಸಬಹುದು. ಜಟಾಯುವಿನ ಉಗುರನ್ನು ಉಳಿಸಿಕೊಳ್ಳುವುದು ಆ ಘಟನೆಯ ನೆನಪನ್ನು ತನ್ನೊಂದಿಗೆ ಕೊಂಡೊಯ್ಯುವ ಸಂಕೇತವಾಗಿರಬಹುದು.
ಮುಂದಿನ ಕಥೆಗೆ ಬಳಸಬಹುದಾದ ಕಾಲ್ಪನಿಕ ಅಂಶ
ಕೆಲವು ಪ್ರೇಕ್ಷಕರ ಅಭಿಪ್ರಾಯದಂತೆ, ಈ ಉಗುರನ್ನು ಮುಂದಿನ ಕಥೆಯಲ್ಲಿ ರಾವಣನ ಪಾತ್ರದ ಬೆಳವಣಿಗೆಗೆ ಅಥವಾ ಶ್ರೀರಾಮನೊಂದಿಗಿನ ಯುದ್ಧಕ್ಕೆ ಸಂಬಂಧಿಸಿದ ಭಾವನಾತ್ಮಕ ಅಂಶವಾಗಿ ಬಳಸುವ ಸಾಧ್ಯತೆಯಿದೆ. ಆದರೆ, ಈ ಕುರಿತು ಚಿತ್ರತಂಡದ ಅಧಿಕೃತ ವಿವರಣೆ ಇಲ್ಲದಿದ್ದರೆ ಅದನ್ನು ಖಚಿತ ಕಥಾವಸ್ತುವೆಂದು ಹೇಳಲು ಸಾಧ್ಯವಿಲ್ಲ.
ಜಟಾಯುವಿಗೆ ಶ್ರೀರಾಮನಿಂದ ಮೋಕ್ಷ
ಸೀತೆಯನ್ನು ಹುಡುಕುತ್ತಾ ಶ್ರೀರಾಮ ಮತ್ತು ಲಕ್ಷ್ಮಣರು ಕಾಡಿನಲ್ಲಿ ಸಂಚರಿಸುತ್ತಿರುವಾಗ ತೀವ್ರವಾಗಿ ಗಾಯಗೊಂಡಿದ್ದ ಜಟಾಯು ಅವರಿಗೆ ಕಾಣಿಸಿಕೊಳ್ಳುತ್ತಾನೆ. ಸೀತೆಯನ್ನು ರಕ್ಷಿಸಲು ರಾವಣನೊಂದಿಗೆ ಹೋರಾಡಿದ ವಿಚಾರವನ್ನು ತಿಳಿಸಿದ ಜಟಾಯು, ರಾವಣನು ಸೀತೆಯನ್ನು ಯಾವ ದಿಕ್ಕಿನಲ್ಲಿ ಕರೆದೊಯ್ದಿದ್ದಾನೆ ಎಂಬ ಮಹತ್ವದ ಮಾಹಿತಿಯನ್ನು ರಾಮನಿಗೆ ನೀಡುತ್ತಾನೆ.
ಸೀತೆಯನ್ನು ರಕ್ಷಿಸುವ ಪ್ರಯತ್ನದಲ್ಲಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಜಟಾಯುವಿನ ನಿಷ್ಠೆ ಮತ್ತು ಧೈರ್ಯವನ್ನು ಶ್ರೀರಾಮ ಮೆಚ್ಚುತ್ತಾನೆ. ಜಟಾಯುವನ್ನು ತಂದೆಯ ಸಮಾನ ಗೌರವದಿಂದ ಕಾಣುವ ರಾಮನು ಆತನ ಅಂತ್ಯಕ್ರಿಯೆಯನ್ನು ನೆರವೇರಿಸುತ್ತಾನೆ. ಈ ಮೂಲಕ ಜಟಾಯುವಿಗೆ ಮೋಕ್ಷ ದೊರೆಯುತ್ತದೆ ಎಂಬುದು ರಾಮಾಯಣದ ಪ್ರಸಂಗ.
ಜಟಾಯುವಿನ ಪಾತ್ರ ರಾಮಾಯಣದಲ್ಲಿ ಏಕೆ ಮಹತ್ವದ್ದು?
ಜಟಾಯುವಿನ ಪಾತ್ರ ಕೇವಲ ರಾವಣನೊಂದಿಗೆ ಯುದ್ಧ ಮಾಡಿದ ಪಕ್ಷಿಯ ಪಾತ್ರಕ್ಕೆ ಸೀಮಿತವಾಗಿಲ್ಲ. ಅನ್ಯಾಯವನ್ನು ಕಂಡಾಗ ತನ್ನ ಶಕ್ತಿಯ ಮಿತಿಯನ್ನು ಲೆಕ್ಕಿಸದೆ ಅದನ್ನು ತಡೆಯಲು ಮುಂದಾಗುವ ಧೈರ್ಯ, ದುರ್ಬಲರ ರಕ್ಷಣೆಗೆ ನಿಲ್ಲುವ ಮನೋಭಾವ ಮತ್ತು ಕರ್ತವ್ಯನಿಷ್ಠೆಗೆ ಜಟಾಯು ಪ್ರತೀಕವಾಗಿದ್ದಾನೆ.
ಸೀತೆಯನ್ನು ರಕ್ಷಿಸಲು ರಾವಣನಂತಹ ಪ್ರಬಲ ಶತ್ರುವಿನ ವಿರುದ್ಧ ಹೋರಾಡಿದ ಜಟಾಯು, ಕೊನೆಗೆ ಸೋತರೂ ತನ್ನ ಕರ್ತವ್ಯದಿಂದ ಹಿಂದೆ ಸರಿಯಲಿಲ್ಲ. ಆತನ ಹೋರಾಟದ ಮೂಲಕ ರಾಮನಿಗೆ ರಾವಣನಿಂದ ಸೀತಾಪಹರಣ ವಾಗಿದೆ ಮಾಹಿತಿ ದೊರೆಯುತ್ತದೆ. ಹೀಗಾಗಿ ರಾಮಾಯಣದ ಕಥೆಯಲ್ಲಿ ಜಟಾಯುವಿನ ತ್ಯಾಗಕ್ಕೆ ವಿಶೇಷ ಸ್ಥಾನವಿದೆ.
ಒಟ್ಟಿನಲ್ಲಿ, ಜಟಾಯುವಿನ ಉಗುರನ್ನು ರಾವಣ ತನ್ನ ಬಳಿ ಇಟ್ಟುಕೊಂಡಿದ್ದಾನೆ ಎಂಬ ದೃಶ್ಯವು ಚಲನಚಿತ್ರದ ಕಥನಕ್ಕೆ ಸೇರಿಸಲಾದ ಸೃಜನಾತ್ಮಕ ಅಂಶವಾಗಿದೆ ಎನ್ನಲಾಗಿದೆ.














