Danger Boys: ಕನ್ನಡದ 'ಅಪಾಯವಿದೆ ಎಚ್ಚರಿಕೆ' ಸಿನಿಮಾ ಇದೀಗ ತೆಲುಗಿನಲ್ಲಿ 'ಡೇಂಜರ್ ಬಾಯ್ಸ್' ಹೆಸರಿನಲ್ಲಿ ಬಿಡುಗಡೆಯಾಗಿ ಹೈದರಾಬಾದ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮೊದಲ ದಿನವೇ ಎಲ್ಲಾ ಶೋಗಳು ಹೌಸ್‌ಫುಲ್ ಆಗಿದ್ದು, ತೆಲುಗು ಪ್ರೇಕ್ಷಕರ ಪ್ರೀತಿಗೆ ನಟ ವಿಕಾಶ್ ಉತ್ತಯ್ಯ ಸಂತಸ ವ್ಯಕ್ತಪಡಿಸಿದ್ದಾರೆ.

ಡೇಂಜರ್ ಬಾಯ್ಸ್ ಹೌಸ್ ಫುಲ್ ಪ್ರದರ್ಶನ

ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದ ನಟರಾದ ಅಣ್ಣಯ್ಯ ಸೀರಿಯಲ್ ನಟ ವಿಕಾಶ್ ಉತ್ತಯ್ಯ ಹಾಗೂ ಭಾರ್ಗವಿ ಎಲ್ ಎಲ್ ಬಿ ನಟಿ ರಾಧಾ ಭಗವತಿ ಲೀಡ್ ಪಾತ್ರದಲ್ಲಿ ನಟಿಸಿರುವ ‘ಅಪಾಯವಿದೆ ಎಚ್ಚರಿಕೆ’ ಸಿನಿಮಾ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಿ ಜನ ಮನ ಗೆದ್ದಿತ್ತು. ಹಾರರ್ ಮಿಸ್ಟ್ರಿ ಕಥೆ ಹೊಂದಿರುವ ಈ ಸಿನಿಮಾ ಇದೀಗ ತೆಲುಗಿನಲ್ಲಿ ‘ಡೇಂಜರ್ ಬಾಯ್ಸ್’ ಎನ್ನುವ ಹೆಸರಿನಲ್ಲಿ ಬಿಡುಗಡೆಯಾಗಿದ್ದು, ಮೊದಲ ದಿನವೇ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

ವಿಕಾಶ್ ಉತ್ತಯ್ಯ ಸಂಭ್ರಮ

ತೆಲಂಗಾಣದ ಹೈದರಾಬಾದಿನಲ್ಲಿ ಸಿನಿಮಾಗೆ ಕೆಲವೇ ಥಿಯೇಟರ್ ಗಳು ಸಿಕ್ಕಿದ್ದರೂ ಸಹ ಎಲ್ಲಾ ಶೋ ಗಳು ಹೌಸ್ ಫುಲ್ ಆಗಿವೆ. ಈ ಕುರಿತು ಸಂತೋಷಗೊಂಡಿರುವ ನಟ ವಿಕಾಶ್ ಉತ್ತಯ್ಯ, ಸೋಶಿಯಲ್ ಮೀಡೀಯಾದಲ್ಲಿ ಈ ಕುರಿತು ಪೋಸ್ಟ್ ಮಾಡಿ, ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. 'ಡೇಂಜರ್ ಬಾಯ್ಸ್' (Danger Boys) ಬಗ್ಗೆ ತೆಲುಗು ಪ್ರೇಕ್ಷಕರಿಗಿರುವ ಪ್ರೀತಿ! ಹೈದರಾಬಾದ್‌ನಲ್ಲಿ ಮೊದಲ ದಿನವೇ ಹೌಸ್‌ಫುಲ್! ತೆಲಂಗಾಣ ಮತ್ತು ಆಂಧ್ರಪ್ರದೇಶದ ಜನರಿಗೆ ಧನ್ಯವಾದಗಳು! ಎಂದು ಬರೆದುಕೊಂಡಿರುವ ವಿಕಾಶ್ ಜೊತೆಗೆ ಹೌಸ್ ಫುಲ್ ಶೋಗಳ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ. ಜೊತೆಗೆ ಸ್ವತಃ ಥಿಯೇಟರ್ ಗೆ ಭೇಟಿ ನೀಡಿ, ವೀಕ್ಷಕರ ಅಭಿಪ್ರಾಯ ತಿಳಿದುಕೊಂಡಿದ್ದಾರೆ ನಟ.

ಸಿನಿಮಾ ಕಥೆ ಏನು?

ಈ ಚಿತ್ರವು ಸುರಿ, ಪೆಟ್ಗೆ ಮತ್ತು ಗಾಬ್ರಿ ಎಂಬ, ಜೀವನದಲ್ಲಿ ಯಾವುದೇ ಗಂಭೀರ ಗುರಿಗಳಿಲ್ಲದ ಮೂವರು ಯುವಕರ ಕಥೆಯನ್ನು ಹೇಳುತ್ತದೆ. ಇವರು ಬೇಜವಾಬ್ದಾರಿಯುತ ಹಾಗೂ ನಿಶ್ಚಿಂತೆಯ ಜೀವನವನ್ನು ನಡೆಸುತ್ತಿರುತ್ತಾರೆ. ಸುಲಭವಾಗಿ ಹಣ ಗಳಿಸುವ ಮಾರ್ಗಗಳನ್ನು ಹುಡುಕುವ ಭರದಲ್ಲಿ, ಇವರು ಅರಿವಿಲ್ಲದೆಯೇ ಕಾಡೊಂದಕ್ಕೆ ಸಂಬಂಧಿಸಿದ ಅಲೌಕಿಕ ರಹಸ್ಯವೊಂದರಲ್ಲಿ ಸಿಲುಕಿಕೊಳ್ಳುತ್ತಾರೆ. ಚಿತ್ರದ ದ್ವಿತೀಯಾರ್ಧವು ಹೆಚ್ಚು ಗಂಭೀರ ಮತ್ತು ಕರಾಳ ತಿರುವನ್ನು ಪಡೆಯುತ್ತದೆ; ಇದರಲ್ಲಿ ವಿಚಿತ್ರವಾದ ಮಾಟಮಂತ್ರದ ಆಚರಣೆಗಳು ಹಾಗೂ ನೈಸರ್ಗಿಕ ಸಂಪನ್ಮೂಲಗಳ ದುರ್ಬಳಕೆಯ ಪರಿಣಾಮಗಳು ಅನಾವರಣಗೊಳ್ಳುತ್ತವೆ. ಹಾರರ್ ಕಾಮಿಡಿ ಆಗಿರುವ ಈ ಸಿನಿಮಾವು, ಅಜ್ಞಾತ ಶಕ್ತಿಗಳ ವಿರುದ್ಧ ಈ ಯುವಕರ ಗುಂಪು ಹೇಗೆ ಹೋರಾಡಿ ಬದುಕುಳಿಯುತ್ತದೆ ಎಂಬುದನ್ನು ತೋರಿಸಿದೆ.

ಸಿನಿಮಾ ಪಾತ್ರಧಾರಿಗಳು

ಸಿನಿಮಾ ಕಥೆ ಬರೆದು ನಿರ್ದೇಶನ ಮಾಡಿರುವುದು ಅಭಿಜೀತ್ ತೀರ್ಥಹಳ್ಳಿ. ಈ ಸಿನಿಮಾದಲ್ಲಿ ಸೂರಿ ಪಾತ್ರದಲ್ಲಿ ವಿಕಾಶ್‌ ಉತ್ತಯ್ಯ, ಪೆಟ್ಗೆ ಪಾತ್ರದಲ್ಲಿ ರಾಘವ್‌, ಗಾಬ್ರಿ ಪಾತ್ರದಲ್ಲಿ ಮಿಥುನ್, ದೇವಿಕಳಾಗಿ ಹರಿಣಿ ಶ್ರೀಕಾಂತ್ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇವರ ನಡುವೆ ಅನಿರೀಕ್ಷಿತ ಪಾತ್ರದ ಮೂಲಕ ಇಡೀ ಚಿತ್ರಕ್ಕೆ ಹೊಸ ತಿರುವು ಕೊಡುವ ಪಾತ್ರದಲ್ಲಿ ಅಶ್ವಿನ್‌ ಹಾಸನ್‌ ಅಚ್ಚರಿಯಂತೆ ತಮ್ಮ ಪಾತ್ರವನ್ನು ನಿಭಾಯಿಸಿದ್ದಾರೆ. ನಾಯಕಿಯಾಗಿ ರಾಧಾ ಭಗವತಿ, ರುದ್ರನಾಗಿ ದೇವ್, ಕಲಾವತಿಯಾಗಿ ನವ್ಯಾ ಕತೆಗೆ ನ್ಯಾಯ ಸಲ್ಲಿಸಿದ್ದಾರೆ.