ಕನ್ನಡ ಚಿತ್ರರಂಗವನ್ನು ಕಾಡುತ್ತಿರುವ ಪೈರಸಿ ವಿರುದ್ಧ ನಟ ಜಗ್ಗೇಶ್ ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಈ ಹೋರಾಟದ ಫಲವಾಗಿ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಇದು ಕೇವಲ ತಮ್ಮ ಚಿತ್ರಕ್ಕಲ್ಲದೆ ಇಡೀ ಚಿತ್ರೋದ್ಯಮಕ್ಕಾಗಿ ನಡೆಸಿದ ಹೋರಾಟ ಎಂದು ಜಗ್ಗೇಶ್ ಸ್ಪಷ್ಟಪಡಿಸಿದ್ದಾರೆ.  

ಪೈರಸಿ ಎನ್ನೋದು ಇದೀಗ ಇಡೀ ಚಿತ್ರೋದ್ಯಮಕ್ಕೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ. ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿ ಮಾಡುವ ಚಿತ್ರಗಳು ಬಿಡುಗಡೆಯಾದ ಮಾರನೆಯ ದಿನವೇ ನಕಲಿ ಕಾಪಿ ಜಾಲತಾಣಗಳಲ್ಲಿ ಸಿಗುತ್ತಿದ್ದು, ನಿರ್ಮಾಪಕರಿಗಿಂತಲೂ ಹೆಚ್ಚು ದುಡ್ಡನ್ನು ಈ ಖದೀಮರು ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಸಿನಿ ಇಂಡಸ್ಟ್ರಿಗೆ ಲಕ್ಷಾಂತರ ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಇದರ ಬಗ್ಗೆ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳ ಇಂಡಸ್ಟ್ರಿಯವರು ದನಿ ಎತ್ತಿದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಇವೆಲ್ಲವೂ ಮಾಮೂಲು, ಏನೂ ಮಾಡಲು ಆಗುವುದಿಲ್ಲ ಎಂದುಕೊಳ್ಳುವವರೇ ಹೆಚ್ಚು. ಅದರಲ್ಲಿಯೂ ಸ್ಟಾರ್​ ನಟರ ಚಿತ್ರಗಳ ಪೈರಸಿ ಹೆಚ್ಚುತ್ತಿದ್ದರೂ, ಅವರಿಗೆ ಬರಬೇಕಾದ ದುಡ್ಡು ಬಂದಿರುತ್ತದೆ. ಆದ್ದರಿಂದ ಅವರೇನೂ ಹೆಚ್ಚು ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ ಎನ್ನುವ ಗಂಭೀರ ಆರೋಪಗಳು ಕೂಡ ಇಂಡಸ್ಟ್ರಿ ಮಟ್ಟದಲ್ಲಿಯೇ ಹೇಳುವುದು ಇದೆ. ನಿರ್ಮಾಪಕರು ಮಾತ್ರ ತಲೆ ಚಚ್ಚಿಕೊಳ್ಳುವ ಸ್ಥಿತಿ ಉಂಟಾಗುತ್ತಿದೆ.

ಒಬ್ಬರ ಅರೆಸ್ಟ್​

ಆದರೆ, ಇದೀಗ ನಟ ಜಗ್ಗೇಶ್​ ಅವರ ಮುಂದಾಳತ್ವದಲ್ಲಿ ನಡೆದಿರುವ ಹೋರಾಟದಿಂದ ಪೈರಸಿ ಮಾಡುತ್ತಿದ್ದ ಕ್ರಿಮಿನಲ್​ ಒಬ್ಬನ ಅರೆಸ್ಟ್​ ಆಗಿದೆ. ಇಂಥ ಸಹಸ್ರಾರು ಖದೀಮರು ಇದ್ದರೂ, ಮೊದಲ ಹೆಜ್ಜೆಯಾಗಿ ಇಂಥದ್ದೊಂದು ಸಾಧನೆ ಮಾಡಿದ್ದಾರೆ ಜಗ್ಗೇಶ್​. ಆದರೆ, ಪೈರಸಿ ಖಂಡಿಸಿ ಅವರು ನಡೆಸಿದ ಹೋರಾಟಕ್ಕೆ ಸಿನಿಮಾ ಇಂಡಸ್ಟ್ರಿಯವರು ಯಾವ ಯಾವ ನಟರು ಬರಬೇಕಿತ್ತೋ, ಅವರು ಬಂದಿಲ್ಲ ಎನ್ನುವ ನೋವು ಕೂಡ ಇದ್ದ ಹಾಗಿದೆ. ಬರಿಯ ಭಾಷಣ ಮಾಡಿದರೆ ಸಾಕಾಗುವುದಿಲ್ಲ, ಇಂಥ ಹೋರಾಟ ಮಾಡುವ ಮೂಲಕ ಕ್ರಿಮಿನಲ್​ಗಳನ್ನು ಮಟ್ಟಹಾಕುವ ಮನಸ್ಥಿತಿ ಬರಬೇಕಿದೆ ಎಂದು ಇದರ ವಿರುದ್ಧ ಹೋರಾಡುತ್ತಿರುವವರು ಹೇಳುತ್ತಿದ್ದಾರೆ.

ಸುದೀಪ್​, ದರ್ಶನ್​, ಉಪೇಂದ್ರ ಚಿತ್ರಗಳ ಪೈರಸಿ

ಇದೀಗ ಉಪೇಂದ್ರ, ಶಿವರಾಜ್​ಕುಮಾರ್, ರಾಜ್​ ಬಿ.ಶೆಟ್ಟಿ ಅವರ 45 ಚಿತ್ರ, ದರ್ಶನ್​ ಅವರ ದಿ ಡೆವಿಲ್​, ಸುದೀಪ್​ ಅವರ ಮ್ಯಾಕ್ಸ್​ ಚಿತ್ರವೂ ಪೈರಸಿ ಆಗಿದೆ. ಅದೇ ರೀತಿ ಜಗ್ಗೇಶ್‌ ಸಹೋದರ ಕೋಮಲ್ ನಟನೆಯ "ಕೋಣ" ಸಿನಿಮಾ ಪೈರಸಿ ಆಗಿತ್ತು. ಇದರ ವಿರುದ್ಧ ದೂರು ಕೂಡ ದಾಖಲಾಗಿತ್ತು. ಆದರೆ ಜಗ್ಗೇಶ್​ ಅವರು ಕೇವಲ ಭಾಷಣ ಮಾಡಿ ಹೋರಾಟ ಮಾಡದೇ ಅಕ್ಷರಶಃ ಇದರ ವಿರುದ್ಧ ಬೀದಿಗಿಳಿದ ಹಿನ್ನೆಲೆಯಲ್ಲಿ ಓರ್ವನ ಬಂಧನವಾಗಿದೆ.

ಅರ್ಥ ಮಾಡಿಕೊಳ್ಳಿ ಎಂದ ಜಗ್ಗೇಶ್​

ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸ್ವಲ್ಪ ಗರಂ ಆಗಿಯೇ ಉತ್ತರಿಸಿದ ಜಗ್ಗೇಶ್​, ನೋಡಿ ಸ್ವಲ್ಪ ಅರ್ಥಮಾಡಿಕೊಳ್ಳಿ. ಕೋಣ ಚಿತ್ರಕ್ಕೆ ಎಷ್ಟು ಬೇಕೋ ಅಷ್ಟು ಹಣ ಬಂದಿದೆ. ಓಟಿಟಿಯಲ್ಲಿಯೂ ಈ ಚಿತ್ರ ಬಿಡುಗಡೆಯಾಗಿ ಚೆನ್ನಾಗಿ ಗಳಿಕೆ ಮಾಡುತ್ತಿದೆ. ಈಗ ಹಿಡಿದುಕೊಟ್ಟಿರುವ ಆರೋಪಿ ಬಳಿ ಕೋಣ ಚಿತ್ರದ ಪೈರಸಿ ಇರಲಿಲ್ಲ. ಅವನ ಬಳಿ ಇದ್ದದ್ದು 45 ಚಿತ್ರ, ಸುದೀಪ್​ ಮತ್ತು ದರ್ಶನ್​ ಚಿತ್ರದ್ದು. ಅದಕ್ಕಾಗಿ ನಾವು ಹೋರಾಟ ಮಾಡುತ್ತಿದ್ದೇವೆ ಅಷ್ಟೇ. ಸಿನಿಮಾ ಇಂಡಸ್ಟ್ರಿಗಾಗಿ ಈ ಹೋರಾಟ. ನಮ್ಮ ಚಿತ್ರದ ಪೈರಸಿಯಾಗಿದೆ ಎಂದು ವೈಯಕ್ತಿಕವಾಗಿ ಹೋರಾಟ ನಡೆಸಲಿಲ್ಲ. ಯಾರಾದರೂ ಬೀದಿಗಿಳಿದು ಹೋರಾಟ ಮಾಡಿದರೆ ಮಾತ್ರ ಈ ಸಮಸ್ಯೆಗೆ ಒಂದು ಸಮಾಧಾನ ಸಿಗುವುದು ಎಂದಿದ್ದಾರೆ.

ಕೋಣ ಸಿನಿಮಾ ನಾಯಕಿ ತನಿಷಾ ಕುಪ್ಪಂಡ ಅವರು ಕೂಡ ಈ ವಿಷಯದಲ್ಲಿ ಸ್ವಲ್ಪಕೋಪ ಹೊರಹಾಕಿದ್ದಾರೆ. ನಟರಿಗೆ ಈ ವಿಷ್ಯ ಬೇಕಾಗುವುದಿಲ್ಲ. ಎಲ್ಲರೂ ಪೈರಸಿ ಬಗ್ಗೆ ಮಾತನಾಡುವವರೇ ವಿನಾ ಈ ರೀತಿ ಹೋರಾಟಕ್ಕೆ ಸಜ್ಜಾಗುವುದಿಲ್ಲ. ಆದರೆ ಇಂದು ಜಗ್ಗೇಶ್​ ಅವರು ಬೀದಿಗಿಳಿದು ಹೋರಾಟ ಮಾಡಿದ್ದರಿಂದಲೇ ಆರೋಪಿಗಳ ಬಂಧನವಾಗ್ತಿದೆ ಎಂದು ಹೇಳಿದ್ದಾರೆ.