ಮೆನೋ ಡೈವೋರ್ಸ್‌ ಎಂಬುದು ಮಧ್ಯವಯಸ್ಸಿನಲ್ಲಿರುವ ದಂಪತಿಯ ವಿಚ್ಛೇದನದ ಹೊಸ ಟ್ರೆಂಡ್.‌ ಯಾವುದು ಇದಕ್ಕೆ ಕಾರಣ? ಮೆನೋ ಎಂದರೇನು? ಇದು ಕೇವಲ ಸಂಬಂಧದ ಅಂತ್ಯವಲ್ಲ, ಬದಲಾಗಿ ವೈಯಕ್ತಿಕ ಸಂತೋಷ ಮತ್ತು ಗೌರವದ ಹುಡುಕಾಟ. ಇಲ್ಲಿದೆ ಅದರ ವಿವರ.

ಗ್ರೇ ಡೈವೋರ್ಸ್, ಸೈಲೆಂಟ್ ಡೈವೋರ್ಸ್ ಎಂಬ ಪದಗಳು ಇತ್ತೀಚೆಗೆ ಟ್ರೆಂಡ್‌ ಆದವು. ಅವುಗಳ ನಂತರ ಈಗ ಹೊಸ ಪದ - ʼಮೆನೋ-ಡೈವೋರ್ಸ್ʼ ಬಂದಿದೆ. ಮಧ್ಯವಯಸ್ಸಿನ ದಂಪತಿಗಳಲ್ಲಿ ಇದು ಗಮನ ಸೆಳೆಯುತ್ತಿದೆ. 45ರಿಂದ 65 ವರ್ಷ ವಯಸ್ಸಿನ ನಡುವೆ, ವಿಶೇಷವಾಗಿ ಮಹಿಳೆಯರು ದೀರ್ಘಕಾಲದ ದಾಂಪತ್ಯವನ್ನು ಮುಕ್ತಾಯಗೊಳಿಸುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಅಧ್ಯಯನಗಳು ಸೂಚಿಸುತ್ತಿವೆ.

ಮೆನೋ-ಡೈವೋರ್ಸ್ ಎಂದರೇನು?

ಮೆನೋ-ಡೈವೋರ್ಸ್ ಎಂದರೆ ಮೆನೋಪಾಸ್ ಅಥವಾ ಪೆರಿಮೆನೋಪಾಸ್ ಹಂತದಲ್ಲಿರುವ ಮಹಿಳೆಯರು ತಮ್ಮ ದಾಂಪತ್ಯ ಬ್ರೇಕ್‌ ಮಾಡಿ ವಿಚ್ಛೇದನದ ನಿರ್ಧಾರ ತೆಗೆದುಕೊಳ್ಳುವುದು. ಇದು ಕೇವಲ ಸಂಬಂಧದ ಬಿರುಕಲ್ಲ. ಜೀವನದ ಆದ್ಯತೆಗಳು, ಐಡೆಂಟಿಟಿ ಮತ್ತು ಸಂತೋಷದ ಬಗ್ಗೆ ಮಹಿಳೆಯರು ಮಾಡುತ್ತಿರುವ ಪುನರಾಲೋಚನೆಯ ಫಲ.

ಏಕೆ ಈ ಟ್ರೆಂಡ್ ಹೆಚ್ಚುತ್ತಿದೆ?

ತಜ್ಞರ ಪ್ರಕಾರ, ಮೆನೋಪಾಸ್ ನೇರವಾಗಿ ವಿಚ್ಛೇದನಕ್ಕೆ ಕಾರಣವಲ್ಲ. ಆದರೆ ಅದು ವರ್ಷಗಳಿಂದ ಇರುವ ಸಮಸ್ಯೆಗಳನ್ನು ತೀವ್ರವಾಗಿ ಕಾಣುವಂತೆ ಮಾಡುತ್ತದೆ. ಅವು ಈ ಕೆಳಗಿನಂತಿವೆ.

1. ಹಾರ್ಮೋನ್ ಬದಲಾವಣೆಗಳ ಪರಿಣಾಮ: ಮಧ್ಯವಯಸ್ಸಿನಲ್ಲಿ ಈಸ್ಟ್ರೋಜೆನ್‌, ಪ್ರೊಜೆಸ್ಟರಾನ್‌ ಇಳಿಯುವಿಕೆಯಿಂದಾಗಿ ನಿದ್ರಾಹೀನತೆ, ಆತಂಕ, ಕೆರಳುವಿಕೆ, ಮನೋಭಾವ ಬದಲಾವಣೆ ಇವು ದಾಂಪತ್ಯದಲ್ಲಿ ಒತ್ತಡವನ್ನು ಹೆಚ್ಚಿಸಬಹುದು.

2. ʼಜೀವನ ಮರುಪರಿಶೀಲನೆʼ ಹಂತ: ಮಕ್ಕಳು ದೊಡ್ಡವರಾಗಿ ಹೊರಹೋದ ನಂತರ ದಂಪತಿಗಳು ತಮ್ಮ ಸಂಬಂಧವನ್ನು ಹೊಸದಾಗಿ ನೋಡುವರು. “ಈ ಸಂಬಂಧ ಇನ್ನೂ ನನಗೆ ಸರಿಹೊಂದುತ್ತಿದೆಯೇ?” ಎಂಬ ಪ್ರಶ್ನೆ ಉದ್ಭವಿಸುತ್ತದೆ

3. ವರ್ಷಗಳ ಅಸಮಾಧಾನ ಹೊರಬರುವುದು: ಸಂವಹನದ ಕೊರತೆ, ಜವಾಬ್ದಾರಿಗಳ ಅಸಮಾನತೆ, ಭಾವನಾತ್ಮಕ ದೂರ ಇವು ಮಧ್ಯವಯಸ್ಸಿನಲ್ಲಿ ಡೀಲ್‌ ಬ್ರೇಕರ್‌ ಆಗಬಹುದು.

4. ಮಹಿಳೆಯರ ಸ್ವಾತಂತ್ರ್ಯ ಹೆಚ್ಚಳ: ಇಂದಿನ ಸಮಾಜದಲ್ಲಿ ಆರ್ಥಿಕ ಸ್ವಾವಲಂಬನೆ, ವಿಚ್ಛೇದನದ ಬಗ್ಗೆ ಹೇವರಿಕೆ ಇಲ್ಲದಿರುವುದರಿಂದ ಮಹಿಳೆಯರು ʼಸಂತೋಷವಿಲ್ಲದ ದಾಂಪತ್ಯʼದಿಂದ ಹೊರಬರುವ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ.

45–55 ವಯಸ್ಸಿನಲ್ಲಿ ವಿಚ್ಛೇದನ ಪ್ರಮಾಣ ಗರಿಷ್ಠವಾಗಿರುವುದು ಕಂಡುಬಂದಿದೆ. ಮಧ್ಯವಯಸ್ಸಿನ ವಿಚ್ಛೇದನಗಳಲ್ಲಿ 60%ಕ್ಕಿಂತ ಹೆಚ್ಚು ಪ್ರಕರಣಗಳನ್ನು ಮಹಿಳೆಯರೇ ಪ್ರಾರಂಭಿಸುತ್ತಾರಂತೆ. ಕೆಲವು ಸಮೀಕ್ಷೆಗಳಲ್ಲಿ 70%ಕ್ಕೂ ಹೆಚ್ಚು ಮಹಿಳೆಯರು ಮೆನೋಪಾಸ್ ಇದರ ಕಾರಣಗಳಲ್ಲಿ ಒಂದೆಂದು ಹೇಳಿದ್ದಾರೆ.

ಭಾರತದಲ್ಲೂ ಇದೇ ಚಿತ್ರಣ ಇದೆ. ಭಾರತದಲ್ಲಿ ವಿಚ್ಛೇದನದ ಪ್ರಮಾಣ ಕಡಿಮೆ ಇದ್ದರೂ, ಮಧ್ಯವಯಸ್ಸಿನ ಮಹಿಳೆಯರಲ್ಲಿ ಈ ಪ್ರವೃತ್ತಿ ನಿಧಾನವಾಗಿ ಹೆಚ್ಚುತ್ತಿದೆ. ಇದು ಸಾಮಾಜಿಕ ಬದಲಾವಣೆ ಮತ್ತು ಮಹಿಳೆಯರ ಸ್ವತಂತ್ರ ಚಿಂತನೆಯ ಪ್ರತಿಫಲನವಾಗಿದೆ.

ತಜ್ಞರು ಹೇಳುವಂತೆ, ಮೆನೋಪಾಸ್ ಒಂದು “ಟ್ರಿಗರ್” ಆಗಬಹುದು, ಆದರೆ ಮೂಲ ಕಾರಣ ಅದಲ್ಲ. ಮೆನೋಪಾಸ್‌ ಹಳೆಯ ಸಮಸ್ಯೆಗಳನ್ನು ದೊಡ್ಡದಾಗಿ ತೋರಿಸುತ್ತದೆ. ಮಹಿಳೆಯರಿಗೆ ಜೀವನದ ಬಗ್ಗೆ ಸ್ಪಷ್ಟತೆ ನೀಡುತ್ತದೆ. ಹೀಗಾಗಿ ಕೆಲವರಿಗೆ ಇದು ಸಂಬಂಧಕ್ಕೆ ಬ್ರೇಕ್‌, ಮತ್ತವರಿಗೆ ಹೊಸ ಆರಂಭ ಆಗಬಹುದು.

ಮೆನೋ-ಡೈವೋರ್ಸ್ ಒಂದು ಫ್ಯಾಷನ್ ಪದವಲ್ಲ. ಇದು ಮಧ್ಯವಯಸ್ಸಿನ ಮಹಿಳೆಯರ ಮನೋಭಾವದಲ್ಲಿ ನಡೆಯುತ್ತಿರುವ ದೊಡ್ಡ ಬದಲಾವಣೆಯ ಸಂಕೇತ. ಇವರಿಗೆ, ದಾಂಪತ್ಯವನ್ನು ಉಳಿಸುವುದೊಂದೇ ಗುರಿಯಲ್ಲ. ಸಂತೋಷಕರ ಮತ್ತು ಗೌರವಪೂರ್ಣ ಜೀವನವೇ ಮುಖ್ಯ. ಮಧ್ಯವಯಸ್ಸು ಅಂದರೆ ಜೀವನದ ಅಂತ್ಯವಲ್ಲ. ಬದಲು ಅದು ಹಲವರಿಗೆ ಹೊಸ ಜೀವನದ ಆರಂಭ.