ರೆಬಲ್ ಸ್ಟಾರ್ ಅಂಬರೀಷ್ ಮತ್ತು ನಟಿ ಸುಮಲತಾ ಅವರ ರೋಚಕ ಪ್ರೇಮ ಪಯಣದ ಬಗ್ಗೆ ಸುಮಲತಾ ಅವರೇ ಬಿಚ್ಚಿಟ್ಟಿದ್ದಾರೆ. ಆಹುತಿ ಸಿನಿಮಾದ ಶೂಟಿಂಗ್ ವೇಳೆ ಮೊದಲ ಬಾರಿಗೆ ಭೇಟಿಯಾದ ಈ ಜೋಡಿಯ ನಡುವೆ ಪ್ರೀತಿ ಚಿಗುರಿದ ಕಥೆಯನ್ನು ನೆನಪಿಸಿಕೊಂಡಿದ್ದಾರೆ.

ಬೆಂಗಳೂರು: ರೆಬಲ್​ ಸ್ಟಾರ್​ ಎಂದೇ ಖ್ಯಾತಿ ಪಡೆದು ಕೋಟ್ಯಂತರ ಅಭಿಮಾನಿಗಳ ಮನಸ್ಸಿನಲ್ಲಿ ಸದಾ ಅಚ್ಚಳಿಯದೇ ಇರುವ ನಟ ಎಂದರೆ ಅಂಬರೀಷ್​. 2018ರ ನವೆಂಬರ್​ 24ರಂದು ತಮ್ಮ 66ನೇ ವಯಸ್ಸಿನಲ್ಲಿ ಎಲ್ಲರನ್ನೂ ಬಿಟ್ಟು ಅಗಲಿದರು ನಟ. ಅವರ ಅಗಲಿಕೆಗೆ ಇದೀಗ ಎಂಟು ವರ್ಷ. ಬರುವ ಡಿಸೆಂಬರ್​ 8ಕ್ಕೆ ಅಂಬರೀಷ್​ ಮತ್ತು ನಟಿ ಸುಮಲತಾ ಅವರ ವಿವಾಹ ವಾರ್ಷಿಕೋತ್ಸವ. ನಟ ಅಂಬರೀಷ್​ ಬದುಕಿದ್ದರೆ ಜೋಡಿ ತಮ್ಮ 35ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿತ್ತು. ಈ ಸಂದರ್ಭದಲ್ಲಿ, ಅಂಬರೀಷ್​ ಮತ್ತು ಸುಮಲತಾ ಅವರ ಲವ್​ಸ್ಟೋರಿಯ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಇವರಿಬ್ಬರು ಮೀಟ್​ ಆಗಿದ್ದು ಹೇಗೆ ಎನ್ನುವ ರೋಚಕ ಪ್ರೇಮ ಪಯಣದ ವಿಷಯ ಇಲ್ಲಿದೆ. ಇದನ್ನು ಕೆಲ ವರ್ಷಗಳ ಹಿಂದೆ ಖುದ್ದು ನಟಿ ಸುಮಲತಾ ಅವರೇ ಹೇಳಿಕೊಂಡಿದ್ದು, ಇದೀಗ ಮತ್ತೊಮ್ಮೆ ವೈರಲ್​ ಆಗುತ್ತಿದೆ.

ಮೊದಲು ಮೀಟ್​ ಆಗಿದ್ದೆಲ್ಲಿ?

ಅಂದಹಾಗೆ ಜೋಡಿ ಮೊದಲು ಮೀಟ್​ ಆಗಿದ್ದು, ಆಹುತಿ ಎನ್ನುವ ಸಿನಿಮಾದ ಶೂಟಿಂಗ್​ ಸಮಯದಲ್ಲಿ. ಈ ಸಿನಿಮಾ 1985ರಲ್ಲಿ ಬಿಡುಗಡೆಯಾಗಿತ್ತು. ಅದಕ್ಕೂ ಮುನ್ನ ಇವರಿಬ್ಬರೂ ಒಂದು ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದರೂ ಮಾತನಾಡಿರಲಿಲ್ಲ. ಆದರೆ ಆಹುತಿ ಸಿನಿಮಾದಲ್ಲಿ ಅಂಬರೀಷ್​ ಮತ್ತು ಸುಮಲತಾ ಜೋಡಿಯಾಗಿದ್ದರು. ಆಗಲೇ ಮೊದಲ ಭೇಟಿಯಾಗಿತ್ತು. ಆದರೆ ಗಂಡಸರ ಬಳಿ ಮಾತನಾಡಲು ಸುಮಲತಾ ಭಯಪಡುತ್ತಿದ್ದರಂತೆ. ಆಗಿನ ಗಾಸಿಪ್​ಗಳಿಗೆ ಅವರು ಭಯ ಪಟ್ಟುಕೊಂಡಿದ್ದರು. ಆದರೆ ಅಂಬರೀಷ್​ ಅವರ ಬಳಿ ಮಾತನಾಡುತ್ತಾ ಭಯವೆಲ್ಲಾ ಹೊರಟುಹೋಗಿತ್ತು. ಅಲ್ಲಿಂದಲೇ ಪರಿಚಯವಾಗಿತ್ತು ಜೋಡಿಯದ್ದು.

ಆದರೆ ಪ್ರೀತಿ, ಪ್ರೇಮ ಎನ್ನೋದು ಇಬ್ಬರ ನಡುವೆ ಇರಲಿಲ್ಲ. ಮಾತು ಹಾಯ್​, ಹಲೋಗಷ್ಟೇ ಸೀಮಿತವಾಗಿತ್ತು ಎಂದು ನಟಿ ನೆನಪಿಸಿಕೊಂಡಿದ್ದರು. ಆವಾಗ ನಾನು ಚೆನ್ನೈನಲ್ಲಿದ್ದೆ. ಅವರು ಬೆಂಗಳೂರಲ್ಲಿ ಇದ್ದರು. ಅವರೇನಾದರೂ ಬೆಂಗಳೂರಿಗೆ ಬಂದಿದ್ದರೆ ಲ್ಯಾಂಡ್​ಲೈನ್​ನಲ್ಲಿ ಫೋನ್​ ಮಾಡಿ ಹೇಗಿದ್ದಿ ಅಷ್ಟೇ ಕೇಳೋರು, ನಾನು ಶೂಟಿಂಗ್​ ಸ್ಪಾಟ್​ಗೆ ಹೋಗಿ ಹಲೋ ಹೇಳಿ ಬರುತ್ತಿದ್ದೆ ಅಷ್ಟೇ ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದರು ಸುಮಲತಾ.

ಫ್ರೆಂಡ್ಲಿ ಪರ್ಸನಾಲಿಟಿ-ಪತಿಯನ್ನು ಹೊಗಳಿದ್ದ ನಟಿ

ಆದರೆ ಇದೇ ಪ್ರೀತಿ ಎನ್ನೋದು ತಿಳಿಯಲು ಬಹಳ ಸಮಯ ಹಿಡಿಯಿತು. ಅವರದ್ದು ತುಂಬಾ ಇವ್ರು ಫ್ರೆಂಡ್ಲಿ ಪರ್ಸನಾಲಿಟಿ, ಓಪನ್‌ ಹಾರ್ಟೆಡ್‌ ಪರ್ಸನ್‌ ಆಗಿದ್ದರು. ಸಿನಿಮಾ ಇಂಡಸ್ಟ್ರಿಯಲ್ಲಿ ಇಂತಹ ವ್ಯಕ್ತಿತ್ವವನ್ನು ನೋಡುವುದು ತುಂಬಾ ತುಂಬಾನೇ ಅಪರೂಪದ ವಿಷಯ. ಹಂಗಾಗಿ ನಾನು ಅವರನ್ನು ಇಷ್ಟಪಡತೊಡಗಿದೆ. ಅವರೂ ನನ್ನನ್ನು ತುಂಬಾ ಇಷ್ಟಪಡ್ತಿದ್ರು ಯಾಕೆಂದ್ರೆ ಫಿಲ್ಮ್‌ ಪರ್ಸನಾಲಿಟಿಗಳ ಜೊತೆ ಇರುವಾಗ ಅವರದೇ ಒಂದು ನಡತೆ, ಸ್ವಭಾವ, ಹವ್ಯಾಸಗಳಿರತ್ತೆ. ನಾನು ಅವರೆಲ್ಲರಿಗಿಂತ ಭಿನ್ನವಾಗಿದ್ದೆ, ತುಂಬಾ ಸೈಲೆಂಟ್‌ ಎಂದಿದ್ದಾರೆ ನಟಿ. ಆದರೂ ಶೂಟಿಂಗ್​ ಸೆಟ್​ನಲ್ಲಿ ನಾನು ಸಿಕ್ಕಾಪಟ್ಟೆ ಸೈಲೆಂಟ್​, ಅವರು ತುಂಬಾ ಗಲಾಟೆ ಮಾಡುತ್ತಿದ್ದರು. ನಾನು ಯಾರ ಹತ್ರಾನೂ ಅಷ್ಟೊಂದು ಮಿಂಗಲ್‌ ಆಗ್ತಿರಲಿಲ್ಲ. ಆದರೆ ಅಂಬರೀಷ್​ ಸೆಟ್​ಗೆ ಬಂದಾಗ, ನನ್ನಲ್ಲಿ ಏನೋ ಬದಲಾವಣೆ ಆಗುತ್ತಿತ್ತು. ಅವರ ಜೊತೆ ಮಾತನಾಡಬೇಕು ಎನ್ನಿಸುತ್ತಿತ್ತು ಎಂದಿರುವ ನಟಿ, ಆಗಲೇ ನಾವಿಬ್ಬರೂ ಇಷ್ಟಪಡಲು ಶುರು ಮಾಡಿದ್ವಿ ಎಂದಿದ್ದಾರೆ.

ಪ್ರೀತಿ ಏನು ಇಷ್ಟು ದಿನದ್ದು ಅಂತ ಹೀಗೆಯೇ ಎಂದು ಹೇಳಲು ಆಗುವುದಿಲ್ಲ. ಸುಮಾರು 8-10 ಸಿನಿಮಾ ಒಟ್ಟಿಗೇ ಮಾಡಿದ್ವಿ. ಆಗ ತುಂಬಾ ಕ್ಲೋಸ್​ ಆದ್ವಿ. ಮಾತು ಮದುವೆಯವರೆಗೂ ಬಂತು. ಆದರೆ ಒಂದೆರಡು ವರ್ಷ ಕಾಯೋಣ ಎಂದುಕೊಂಡ್ವಿ. ಆಗಲೇ ಅಂಬರೀಷ್​ ಅವರಿಗೆ 39 ವರ್ಷ ವಯಸ್ಸಾಗಿ ಹೋಗಿತ್ತು. ಅವರ ಮದುವೆಗೆ ಮನೆಯವರು ತುದಿಗಾಲಮೇಲೆ ನಿಂತಿದ್ರು. ಅವರ ಅಮ್ಮ ಸಿಕ್ಕಾಪಟ್ಟೆ ಆಸೆ ಇಟ್ಟುಕೊಂಡಿದ್ರು. ಸಾಯುವುದರೊಳಗೆ ಅವರ ಮದುವೆ ನೋಡಬೇಕು ಎನ್ನೋದು ಅವರ ಆಸೆಯಾಗಿತ್ತು. ಅಂಬರೀಷ್​ ಅವರ ಮಗುವನ್ನು ನೋಡಬೇಕು ಎನ್ನೋದು ಅವರ ಆಸೆಯಾಗಿತ್ತು. ಕೊನೆಗೆ ಅದು ಹಾಗೆಯೇ ಆಯಿತು ಎಂದಿದ್ದಾರೆ ಸುಮಲತಾ.

ಇದೇ ವೇಳೆ ಅಂಬರೀಷ್​ ಅವರ ಗುಣದ ಬಗ್ಗೆಯೂ ಮಾತನಾಡಿದ್ದ ಸುಮಲತಾ, ಅವರು ಯಾರ ಮಾತೂ ಕೇಳುವ ವ್ಯಕ್ತಿಯಲ್ಲ. ಈ ಪ್ರಪಂಚದಲ್ಲಿ ಯಾರೇ ಆಗ್ಲಿ ಇಂತಹ ವಿಷ್ಯ ನೀನು ಮಾಡ್ಲೇಬೇಕು ಅಂತ ಹೇಳಿದ್ರೆ ಕೇಳೋದೇ ಇಲ್ಲ. ಅವರ ಮೈಂಡಲ್ಲಿ ಬರ್ಬೇಕಷ್ಟೇ. ಆ ಥರ ಎಷ್ಟೋ ಸಲ ನಾನು ಹೇಳಿದ ವಿಷಯ ಸರಿ ಆಗಿದೆ. ಹೇಳಿದಂತೆ ನಡೆದಿದೆ. ಏನ್‌ ನಡೀಬೇಕಿತ್ತೋ ಅದೇ ನಡೆದಿದೆ. ನಡೆದ ಮೇಲೆ ಒಪ್ಕೊಳ್ತಾರೆ. ಹೌದು ನೀನ್‌ ಹೇಳಿದ್ದು ಕರೆಕ್ಟ್. ನೀ ಹೇಳಿದ್ದನ್ನ ಕೇಳ್ಬೇಕಾಗಿತ್ತು ಅಂತ. ಈ ಥರ ಒಪ್ಕೊಂಡಿದ್ದ ಸಂದರ್ಭ ಬೇಕಾದಷ್ಟಿದೆ ಎಂದು ನೆನಪಿಸಿಕೊಂಡಿದ್ದರು.