ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿ ಪುಟ್ಟ ಬಾಲಕನೊಬ್ಬನೊಂದಿಗೆ ಕಾಲ ಕಳೆದ ಫೋಟೋ ವೈರಲ್ ಆಗಿತ್ತು. ಆ ಬಾಲಕ ಬೇರಾರು ಅಲ್ಲ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಮೊಮ್ಮಗ ಇಧ್ಯಾನ್. ಬೊಮ್ಮಾಯಿ ಅವರು ತಮ್ಮ ಪುತ್ರಿಯ ಮದುವೆಗೆ ಆಹ್ವಾನಿಸಲು ಕುಟುಂಬ ಸಮೇತ ದೆಹಲಿಗೆ ತೆರಳಿದ್ದಾಗ ಈ ಸುಂದರ ಕ್ಷಣ ಸೆರೆಯಾಗಿದೆ.
ದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪುಟಾಣಿ ಜೊತೆಗಿನ ಫೋಟೋವನ್ನು ಶೇರ್ ಮಾಡಿಕೊಂಡು ನಿನ್ನೆ 7, LKM ಗೆ ಒಬ್ಬ ಪುಟ್ಟ ಸ್ನೇಹಿತ ಭೇಟಿ ನೀಡಿದ್ದರು ಎಂದು ಬರೆದುಕೊಂಡಿದ್ದಾರೆ. ಇದು ಯಾರ ಮಗು ಎಂದು ಹಲವರು ತಲೆ ಕೆಡಿಸಿಕೊಂಡದ್ದು ಇದೆ. ಅಸಲಿಗೆ ಇದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅ ವರ ಮೊಮ್ಮಗ ಇಧ್ಯಾನ್. ಬಸವರಾಜ ಬೊಮ್ಮಾಯಿ ಅವರು ಮೊನ್ನೆ ಅರ್ಥಾತ್ ಭಾನುವಾರ ದೆಹಲಿಯಲ್ಲಿ ಪ್ರಧಾನಿ ಅವರನ್ನು ಭೇಟಿಯಾಗಿ ಪುತ್ರಿ ಅದಿತಿಯ ವಿವಾಹದ ಆಮಂತ್ರಣ ಪತ್ರಿಕೆಯನ್ನು ನೀಡಿ, ಮದುವೆಗೆ ಆಹ್ವಾನಿಸಿದರು. ಕುಟುಂಬ ಸಮೇತ ಬೊಮ್ಮಾಯಿ ಮೋದಿ ಅವರ ನಿವಾಸಕ್ಕೆ ಭೇಟಿ ನೀಡಿದರು. ಆ ಸಂದರ್ಭದಲ್ಲಿ ಅವರ ಮೊಮ್ಮಗನ ಜೊತೆ ಪ್ರಧಾನಿ ಮೋದಿ ಕಾಲ ಕಳೆದರು.
ಅಂದಹಾಗೆ ಬಸವರಾಜ ಬೊಮ್ಮಾಯಿ ಅವರ ಮಗ ಭರತ್ ಬೊಮ್ಮಾಯಿ ಅವರ ಪುತ್ರ ಇಧ್ಯಾನ್. ಇದೇ ವೇಳೆ, ಪ್ರಧಾನಿ ಜೊತೆಗಿನ ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ಸಂಸದ ಬಸವರಾಜ ಬೊಮ್ಮಾಯಿ ಅವರು, "ಪ್ರೀತಿ, ವಾತ್ಸಲ್ಯ ಮತ್ತು ಆದರದಿಂದ ತುಂಬಿದ ಪ್ರಾಮಾಣಿಕ ಹೃದಯವುಳ್ಳ ವ್ಯಕ್ತಿ ಮಾತ್ರ ಮುಗ್ಧ ಮಗುವಿನ ಮನಸ್ಸನ್ನು ಮುಟ್ಟಲು ಸಾಧ್ಯ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರ ಹೃದಯ ಗೆಲ್ಲುವ ಅಂತಹ ವ್ಯಕ್ತಿಯೇ ನಮ್ಮ ಪ್ರೀತಿಯ ಪ್ರಧಾನಿ ನರೇಂದ್ರ ಮೋದಿ ಜೀ. ಇಧ್ಯಾನ್ ಬೊಮ್ಮಾಯಿ ಪರವಾಗಿ ನಿಮಗೆ ಧನ್ಯವಾದಗಳು ಮೋದಿ ಜೀ" ಎಂದು ಬರೆದುಕೊಂಡಿದ್ದಾರೆ.
ಬೊಮ್ಮಾಯಿ ಟ್ವೀಟ್
ದೇಶದ ಕೋಟ್ಯಂತರ ಜನರ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿರುವ ಪ್ರಧಾನಮಂತ್ರಿಗಳು, ತಮ್ಮ ಬಿಡುವಿಲ್ಲದ ಕಾರ್ಯಗಳ ನಡುವೆಯೂ ನಮ್ಮ ಕುಟುಂಬಕ್ಕೆ ತೋರಿದ ಈ ಪ್ರೀತಿ, ಆತ್ಮೀಯತೆ ಹಾಗೂ ಕಾಳಜಿ ನಮ್ಮ ಮನಸ್ಸಿಗೆ ಅಪಾರ ಸಂತೋಷ ತಂದಿದೆ. ನಮ್ಮ ಕುಟುಂಬದ ಪಾಲಿಗೆ ಸದಾ ನೆನಪಿನಲ್ಲಿ ಉಳಿಯುವ ಈ ಸುಂದರ ಕ್ಷಣಗಳು ನಿಜಕ್ಕೂ ಅವಿಸ್ಮರಣೀಯ. ಅವರ ಪ್ರೀತಿ ಮತ್ತು ಆಶೀರ್ವಾದಕ್ಕೆ ಹೃತ್ಪೂರ್ವಕ ಧನ್ಯವಾದಗಳು ಮೋದಿ ಜೀ" ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅಂದಹಾಗೆ ಬೊಮ್ಮಾಯಿ ಅವರ ಪುತ್ರಿ ಅದಿತಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಇದರ ಆಹ್ವಾನ ಪತ್ರಿಕೆ ನೀಡಲು ಅವರು ಕುಟುಂಬ ಸಹಿತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು.










