ಸೌಗತ ಬಸು ಮತ್ತು ಮಯಾಂಕ್ ಕಲ್ರಾ 2012ರಲ್ಲಿ ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿ, ಹತ್ತು ವರ್ಷಗಳ ಕಾಲ ಒಟ್ಟಿಗೆ ಬದುಕಿದ್ದಾರೆ. 2021ರಲ್ಲಿ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳಿಗೆ ಪೋಷಕರಾದ ನಂತರ ಈ ಸಲಿಂಗಿ ಜೋಡಿ ವಿವಾಹವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯರಾಗಿದ್ದಾರೆ.
ಬೆಂಗಳೂರು: ಜಾರ್ಖಂಡ್ನ ಜಮ್ಶೆಡ್ಪುರ ಮೂಲದ ಸೌಗತ ಬಸು ಮತ್ತು ಉತ್ತರ ಪ್ರದೇಶದ ಮಯಾಂಕ್ ಕಲ್ರಾ 2012 ರಲ್ಲಿ ಡೇಟಿಂಗ್ ಆ್ಯಪ್ ಮೂಲಕ ಬೆಂಗಳೂರಿನಲ್ಲಿ ಪರಿಚಯವಾದರು. ಸುಮಾರು ಹತ್ತು ವರ್ಷಗಳ ಕಾಲ ಒಟ್ಟಿಗೆ ಜೀವನ ನಡೆಸಿದ ನಂತರ ಇವರು ದಾಂಪತ್ಯಕ್ಕೆ ಕಾಲಿಟ್ಟಿರೋ ಈ ಜೋಡಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ, ಇಬ್ಬರು ಮಕ್ಕಳಿಗೆ ಪೋಷಕರಾದ ಮೇಲೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದೆ. ಅಂದಹಾಗೆ, ಸೌಗತ ಬಸು (Sougata Basu) ಅವರು ಬೆಂಗಳೂರಿನಲ್ಲಿ ನೆಲೆಸಿರುವ ಕಂಟೆಂಟ್ ಕ್ರಿಯೇಟರ್ ಮತ್ತು ಕಾರ್ಪೊರೇಟ್ ವೃತ್ತಿಪರರಾಗಿದ್ದಾರೆ. ಇವರ ಪಾರ್ಟನರ್ ಆಗಿ ಬಂದವರು ಮಯಾಂಕ್ ಕಲ್ರಾ (Mayank Kalra). ಅವರೊಂದಿಗಿನ ಸಲಿಂಗ ದಾಂಪತ್ಯ ಮತ್ತು ಪಿತೃತ್ವದ ಪಯಣದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಪಡೆದಿದ್ದಾರೆ.
ಇವರಿಬ್ಬರೂ ಪರಿಚಯವಾದದ್ದು ಡೇಟಿಂಗ್ ಆ್ಯಪ್ ಮೂಲಕ. ನಂತರ ಬೆಂಗಳೂರಿನಲ್ಲಿ ಜೋಡಿ ಭೇಟಿಯಾಯಿತು. ಹತ್ತು ವರ್ಷಗಳ ಪ್ರೀತಿಯ ಬಳಿಕ, ಇಬ್ಬರು ಮಕ್ಕಳ ಪೋಷಕರಾದ ಮೇಲೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ ಜೋಡಿ. 2012ರ ನವೆಂಬರ್ನಲ್ಲಿ ಮೊದಲ ಬಾರಿಗೆ ಭೇಟಿಯಾದ ಜೋಡಿಯ ನಡುವೆ ಆರಂಭದಲ್ಲಿ ಸ್ನೇಹ ಬೆಳೆದಿತ್ತು. ಮಯಾಂಕ್ ಅವರು ಹೊಸ ಮನೆ ಹುಡುಕುವವರೆಗೆ ಸೌಗತ ಅವರ ಕಚೇರಿ ಸಮೀಪದ ಮನೆಯಲ್ಲಿ ತಾತ್ಕಾಲಿಕವಾಗಿ ಉಳಿದುಕೊಳ್ಳಲು ನಿರ್ಧರಿಸಿದ್ದರು. ಆದರೆ ಕೆಲವೇ ದಿನಗಳ ಒಡನಾಟ ತಿಂಗಳುಗಳಾಗಿ ಬದಲಾಯಿತು. ಒಟ್ಟಿಗೆ ಜೀವನ ನಡೆಸುತ್ತಿದ್ದಂತೆ ಇಬ್ಬರ ನಡುವೆ ಪ್ರೀತಿ ಚಿಗುರೊಡೆದಿತ್ತು.
ಪ್ರೀತಿಗೆ ತಿರುಗಿದ ಪರಿಚಯ
ಪರಿಚಯವಾದ ಕೇವಲ ಒಂದು ತಿಂಗಳೊಳಗೆ ಇಬ್ಬರೂ ಪರಸ್ಪರ ಪ್ರೀತಿಸುತ್ತಿರುವುದನ್ನು ಅರಿತುಕೊಂಡರು. ಸೌಗತ ಅವರು ಮೊದಲು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. ಸುಮಾರು ಐದು ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಬಳಿಕ ತಮ್ಮ ಸಂಬಂಧದ ವಿಚಾರವನ್ನು ಕುಟುಂಬದವರಿಗೆ ತಿಳಿಸಿದರು. ಸೌಗತ ಅವರ ಸಹೋದರಿಯರು ಈ ಸಂಬಂಧವನ್ನು ಸಂತೋಷದಿಂದ ಸ್ವಾಗತಿಸಿದರೆ, ಪೋಷಕರು ಒಪ್ಪಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡರು. ನಂತರ ಕುಟುಂಬದವರೂ ಇವರ ಸಂಬಂಧವನ್ನು ಒಪ್ಪಿಕೊಂಡರು. ಹೀಗೆ ಆರಂಭದಲ್ಲಿ ಸಮಾಜ ಮತ್ತು ಕುಟುಂಬದ ವಿರೋಧದ ನಡುವೆಯೂ ಇಬ್ಬರೂ ತಮ್ಮ ಪೋಷಕರಿಗೆ ತಮ್ಮ ಸಂಬಂಧದ ಬಗ್ಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾದರು. ಪ್ರಸ್ತುತ ಇವರಿಬ್ಬರ ಪೋಷಕರು ಕೂಡ ಇವರೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.
ಬಾಡಿಗೆ ತಾಯ್ತತನದ ಮೂಲಕ ಮಕ್ಕಳು
2021 ರಲ್ಲಿ ಈ ದಂಪತಿ ಬಾಡಿಗೆ ತಾಯ್ತನದ (Surrogacy) ಮೂಲಕ ಅವಳಿ ಮಕ್ಕಳಿಗೆ (ಒಂದು ಹೆಣ್ಣು ಮತ್ತು ಒಂದು ಗಂಡು) ಪೋಷಕರಾದರು. ವಿಶೇಷವೆಂದರೆ, ತಮ್ಮ ಮಕ್ಕಳ ಮೊದಲ ಹುಟ್ಟುಹಬ್ಬದಂದೇ ಸೌಗತ ಮತ್ತು ಮಯಾಂಕ್ ವಿವಾಹವಾಗುವ ಮೂಲಕ ತಮ್ಮ ದೀರ್ಘಕಾಲದ ಪ್ರೀತಿಗೆ ಅಧಿಕೃತ ಮುದ್ರೆ ಒತ್ತಿದರು.
ಇವರು ಇನ್ಸ್ಟಾಗ್ರಾಮ್ನಲ್ಲಿ @the_daddy_lyfe ಖಾತೆಯ ಮೂಲಕ ತಮ್ಮ ದೈನಂದಿನ ಕೌಟುಂಬಿಕ ಜೀವನ, ಪಿತೃತ್ವದ ಅನುಭವಗಳು ಮತ್ತು LGBTQ+ ಸಮುದಾಯದ ಬಗ್ಗೆ ಜಾಗೃತಿ ಮೂಡಿಸುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಸಲಿಂಗಿ ಜೋಡಿಯಾಗಿ ಬದುಕುವ ಸಂದರ್ಭದಲ್ಲಿ ಹಲವು ಸಾಮಾಜಿಕ ಸವಾಲುಗಳು, ತಪ್ಪು ತಿಳಿವಳಿಕೆಗಳು ಹಾಗೂ ಅಪಮಾನಗಳನ್ನು ಎದುರಿಸಬೇಕಾಯಿತು ಎಂದು ಈ ದಂಪತಿ ಹೇಳಿಕೊಂಡಿದ್ದಾರೆ. ಆದರೆ ಪೋಷಕರು ಮತ್ತು ಸಂಬಂಧಿಕರು ತಮ್ಮ ಸಂಬಂಧವನ್ನು ಒಪ್ಪಿಕೊಂಡ ಬಳಿಕ ಯಾವುದೇ ಮುಚ್ಚುಮರೆಯಿಲ್ಲದೆ ಆತ್ಮವಿಶ್ವಾಸದಿಂದ ಬದುಕಲು ಸಾಧ್ಯವಾಯಿತು ಎಂದು ನೆನಪಿಸಿಕೊಂಡಿದ್ದಾರೆ. ತಮ್ಮ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಕೆಲವರಿಗೆ ಸಮಯ ಬೇಕಾಗಬಹುದು. ಅಂತಹವರನ್ನು ತಾಳ್ಮೆ ಮತ್ತು ಗೌರವದಿಂದಲೇ ಎದುರಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.










