Asianet Suvarna News Asianet Suvarna News

ಸಾವಿನ ಬಗ್ಗೆ ಈ ಗುರುಗಳು ಏನು ಹೇಳ್ತಾರೆ!

ನಾವು ಸಾವನ್ನು ತಿಳಿದುಕೊಳ್ಳಬೇಕು ಅಂದರೆ ಸಾವನ್ನೂ ಜೀವಿಸಬೇಕು! | ಹೊಸತಾಗಿ ಬರುವವರುಗೆ ರೂಮ್‌ ಬಿಟ್ಟು ಕೊಡಲೇ ಬೇಕಲ್ಲಾ..| ದೇಹವನ್ನು ಖುಷಿಯಿಂದ ತ್ಯಾಗ ಮಾಡೋಣ ಆ ಕಾಲ ಬಂದಾಗ! 

Whats is death in perspective of  jiddu krishnamurti alan watts Jaggi Vasudev
Author
Bangalore, First Published Feb 17, 2020, 11:11 AM IST

ಜಗ್ಗಿ ವಾಸುದೇವ್‌

- ಈ ವಿಶ್ವದಲ್ಲಿ ನಾವೊಬ್ಬರೇ ಮೊದಲು ಹುಟ್ಟಿದವರೂ ಅಲ್ಲ, ನಾವೊಬ್ಬರೇ ಮೊದಲು ಸಾಯುವವರೂ ಅಲ್ಲ. ಆದರೆ ನಮಗೆ ನಮ್ಮ ಮುಂದಿನ ಲೈಫ್‌ ಹೇಗಿರುತ್ತೆ ಅಂತ ಗೊತ್ತಿರಲ್ಲ, ನಾವು ಮದ್ವೆ ಆಗ್ತೀವೋ, ಅವಿವಾಹಿತರಾಗಿಯೇ ಉಳೀತೀವೋ, ಮಕ್ಕಳಾಗ್ತವೋ ಇವುಗಳ ಬಗೆಗೆಲ್ಲ ಏನಂದರೆ ಏನೂ ಗೊತ್ತಿರಲ್ಲ. ಆದರೆ ಒಂದು ವಿಷಯ ಮಾತ್ರ ಸ್ವಷ್ಟವಾಗಿ ಗೊತ್ತಿರುತ್ತದೆ. ಅದು ಈ ಭೂಮಿಯಲ್ಲಿ ಹುಟ್ಟಿರೋ ನಾವು ಒಂದಲ್ಲ ಒಂದು ದಿನ ಸತ್ತೇ ಸಾಯ್ತೀವಿ ಅನ್ನೋದು.

- ಇತ್ತೀಚೆಗೆ ಕ್ಯಾರ್ಲಿಫೋನಿಯಾದಲ್ಲಿ ಒಬ್ಬರು ನನ್ನ ಬಳಿ ಕೇಳಿದ್ರು. ಈ ಹಾವುಗಳು ನಿಜಕ್ಕೂ ತಮ್ಮಷ್ಟಕ್ಕೇ ತಾವು ಸಾಯುತ್ತವೋ ಇಲ್ಲವೋ ಅಂತ. ಏಕೆಂದರೆ ಮನುಷ್ಯ ಹೊಡೆದು ಸಾಯಿಸಿರುವ ಹಾವುಗಳು ಕಾಣಸಿಗಬಹುದು. ಆದರೆ ವಯಸ್ಸಾಗಿ ಸತ್ತ ಹಾವುಗಳು ಕಣ್ಣಿಗೆ ಬೀಳೋದೇ ಇಲ್ಲ. ಆದರೆ ಹಾವುಗಳು ಅದರಲ್ಲೂ ಕಾಳಿಂಗ ಸರ್ಪಗಳ ಒಂದು ಪ್ರವೃತ್ತಿ ನಾನು ನೋಡಿದ್ದೇನೆ. ಅವುಗಳಿಗೆ ತಮ್ಮ ಕೊನೆಗಾಲ ಬಂತು ಅಂತನಿಸಿದಾಗ ಅವು ನೇರ ಹೋಗಿ ಮರದ ಪೊಟರೆಯಲ್ಲಿ ನುಸುಳಿ ಕೂರುತ್ತವೆ. ಹದಿನೆಂಟರಿಂದ ಇಪ್ಪತ್ತು ದಿನಗಳವರೆಗೆ ಆಹಾರವನ್ನು ಬಿಟ್ಟು ಒಂದು ದಿನ ಸತ್ತು ಹೋಗುತ್ತವೆ. ನನಗೆ ಪರಿಚಿತವಾಗಿದ್ದ ಒಂದು ಕಾಳಿಂಗ ಸರ್ಪ ಹೀಗೆ ಮಾಡಿತ್ತು. ಪೊಟರೆಯೊಳಗೆ ಸೇರಿಕೊಂಡ ಅದನ್ನು ಹೊರತೆಗೆದು ಅದಕ್ಕೆಷ್ಟುಬಲವಂತದಲ್ಲಿ ಆಹಾರ ತಿನಿಸಿದರೂ ಅದು ತಿನ್ನಲಿಲ್ಲ. ಬಿಟ್ಟಕೂಡಲೇ ಮತ್ತೆ ಪೊಟರೆಯೊಳಗೆ ಸೇರಿಬಿಡುತ್ತಿತ್ತು. ನೋಡುತ್ತಿದ್ದ ಹಾಗೇ ಒಂದು ದಿನ ಸತ್ತು ಹೋಯಿತು.ನನಗಾಗ ಬಹಳ ಅಚ್ಚರಿಯಾಯ್ತು. ನಾವು ತೀರಾ ಕ್ಷುಲ್ಲಕ ಅಂತ ಭಾವಿಸುವ ಜಂತುಗಳಿಗೂ ತಮ್ಮ ಸಾವಿನ ಬಗ್ಗೆ ಅರಿವು ಇದೆ. ಆದರೆ ಮನುಷ್ಯರ ವಿಷಯಕ್ಕೆ ಬಂದರೆ ಇದು ಪ್ರಜ್ಞೆಗೆ ನಿಲುಕದ್ದು.

ಪ್ರೀತಿಯಲ್ಲಿ ಬೀಳುವ ಮುನ್ನ ಪ್ರೇಮದ ಮಂತ್ರವನ್ನು ತಿಳಿಯಿರಿ

- ಬದುಕೇ ನಮ್ಮ ಸಾವನ್ನು ನಿರ್ಧರಿಸುತ್ತದೆ. ಅದು ನಮ್ಮ ಯೋಚನೆಗಳಿಗೆ ನಿಲುಕದ್ದು. ದೇಹಕ್ಕೂ ಸಾವಿಗೂ ಸಂಬಂಧ ಇರಲ್ಲ. ದೈಹಿಕವಾಗಿ ಬಹಳ ಚೆನ್ನಾಗಿರುವವರೂ ಸಾಯೋದನ್ನು ನೋಡಿದ್ದೀವಿ. ನಮ್ಮ ಯೋಚನೆ, ದೈಹಿಕತೆಯನ್ನು ಮೀರಿ ಬದುಕು ನಮ್ಮ ಸಾವನ್ನು ನಿರ್ಧರಿಸುತ್ತದೆ.

- ಹುಷಾರಿಲ್ಲದೇ, ಆಸ್ಪತ್ರೆಯಲ್ಲಿ ಮೂರು ವರ್ಷ ಮಲಗಿ ಒಂದು ದಿನ ಬಹಳ ಬೇಸರದಲ್ಲಿ ಸಾಯೋದು ಲೋಕದ ರೂಢಿ. ಆದರೆ ಯೋಗಿಗಳು ತಮಗಿಷ್ಟಬಂದಾಗ ದೇಹ ಬಿಡುತ್ತಾರೆ. ಅವರು ಶಾರೀರಿಕವಾಗಿ ಸದೃಢರಾಗಿದ್ದರೂ ಕೂಡ. ಬಹಳ ಜನ ಕೇಳ್ತಾರೆ, ಅಷ್ಟುಚೆನ್ನಾಗಿದ್ರಲ್ಲ, ಆದ್ರೂ ಯಾಕೆ ಸಾವನ್ನು ಹತ್ತಿರ ಕರೆದರು ಅಂತ. ಯಾಕೆ ಎಲ್ಲ ಚೆನ್ನಾಗಿರುವಾಗ ಖುಷಿಯಿಂದ ಸಾವನ್ನು ಸ್ವಾಗತಿಸಬಾರದಾ?

- ದೇಹವನ್ನು ಖುಷಿಯಿಂದ ತ್ಯಾಗ ಮಾಡೋಣ ಆ ಕಾಲ ಬಂದಾಗ.

- ಸಾವು ಅನ್ನೋದು ನಿರಂತರ ಕ್ರಿಯೆ. ಈಗಲೂ ನಡೆಯುತ್ತಿದೆ. ಕೊನೆಯಲ್ಲಿ ಆ ಕ್ರಿಯೆ ಕೊನೆ ಮುಟ್ಟುತ್ತದೆ ಅಷ್ಟೇ.

- ನಾನು ಬದುಕಿದ್ದೇನೆ ಅನ್ನುವಾಗಲೇ ನಾನು ಸಾಯುತ್ತಿದ್ದೇನೆ ಅನ್ನುವುದೂ ಸತ್ಯ.

- ಲೈಫ್‌ ಆ್ಯಂಡ್‌ ಡೆತ್‌ ಒಂದು ಪ್ಯಾಕೇಜ್‌

- ಈ ಕ್ಷಣವನ್ನು ನೀನು ಖುಷಿಯಿಂದ ಜೀವಿಸಿದರೆ ಆ ಕೊನೆಯ ಕ್ಷಣವನ್ನೂ ಖುಷಿಯಿಂದ ಸ್ವಾಗತಿಸುತ್ತೀ.

- ಒಳಗೆ ಉಸಿರೆಳೆದುಕೊಂಡಾಗ ನಿನಗೆ ಹುಟ್ಟು, ಉಸಿರು ಹೊರ ಬಿಟ್ಟಾಗ ನಿನ್ನ ಸಾವು. ಅಲ್ಲಿಗೆ ಹುಟ್ಟು, ಸಾವು ನಿರಂತರ.

ಕನ್ಫ್ಯೂಷನ್ನೇ ಜಾಸ್ತಿ, ಸೊಲ್ಯೂಷನ್ನು ನಾಸ್ತಿ;ಗರ್ಲ್ ಫ್ರೆಂಡಾ, ಬೆಸ್ಟ್‌ ಫ್ರೆಂಡಾ!

- ನಾವು ಬಿಟ್ಟಉಸಿರು ಮತ್ತೆ ಬರದಿದ್ದರೆ ಆತನೂ ಮತ್ತೆ ಬರಲ್ಲ.

ಒಂದು ಹಂತದ ಮೇಲೆ ನಾವು ರೂಮ್‌ ಬಿಟ್ಟುಕೊಡಲೇ ಬೇಕು!

- ಅಲನ್‌ ವಾಟ್ಸ್‌

ನಾವು ಜೀವಿಸಬೇಕು, ಬಹಳ ಕಾಲ ಬಾಳ ಬೇಕು ಅಂದುಕೊಳ್ತೀವಿ, ಆದರೆ ಎಷ್ಟುಕಾಲ.. ನಮ್ಮ ಕರಾರು ಮುಗಿದ ಮೇಲೆ ಹೊಸತಾಗಿ ಬರುವವರಿಗೆ ರೂಮ್‌ ಬಿಟ್ಟು ಕೊಡಲೇ ಬೇಕಲ್ಲಾ.. ನಮಗೋ ರೂಮಿನ ಜೊತೆಗೆ ಅಟ್ಯಾಚ್‌ಮೆಂಟ್‌, ಬಿಟ್ಟು ಹೋಗುವ ಟೈಮ್‌ ಬಂದರೂ ನಾವು ಉಳಿಸಿಕೊಳ್ಳಲು ಟ್ರೈ ಮಾಡುತ್ತಲೇ ಇರುತ್ತೇವೆ. ಆದರೆ ನಾವು ಹೀಗೇ ಉಳಿದುಕೊಂಡರೆ ನಮ್ಮ ದಟ್ಟಣೆ ಹೆಚ್ಚಾಗಿ ಜಗತ್ತನ್ನೇ ಹರಿದು ತಿನ್ನುವ ಸ್ಥಿತಿ ಬರಬಹುದು. ಹೀಗಾಗಿ ಒಬ್ಬ ವ್ಯಕ್ತಿ ಸತ್ತುಹೋದ ಅಂದರೆ ಅದು ಒಳ್ಳೆಯ ವಿಷಯವೇ. ಆತ ತನ್ನ ರೂಮ್‌ಅನ್ನು ತೆರವುಗೊಳಿಸಿದ. ನಾವು ಸಾವನ್ನು ಪೋಸ್ಟ್‌ಪೋನ್‌ ಮಾಡುತ್ತಾ ಹೋಗುತ್ತೇವೆ ಅಂದುಕೊಳ್ಳಿ. ಒಂದು ದಿನ ನಮಗೇ ನಮ್ಮ ನಿರರ್ಥಕತೆಯ ಅರಿವಾಗುತ್ತದೆ. ನಮ್ಮ ಮಕ್ಕಳು ಬರುತ್ತಾರೆ. ಮಕ್ಕಳಲ್ಲಿ ನಾವು ಮುಂದುವರಿಯುತ್ತಿರುತ್ತೇವೆ.

- ನಾವು ಬೆಳೆಯುತ್ತ ಹೋದಂತೆ ಪ್ರತಿಯೊಂದು ಸಂಗತಿಯನ್ನೂ ಇದು ನನಗೆಷ್ಟುಲಾಭ ಕೊಡಬಹುದು, ಇದು ನನ್ನ ಉಳಿಸಬಲ್ಲದಾ ಅನ್ನುವ ರೀತಿಯಲ್ಲೇ ನೋಡುತ್ತೇವೆ. ದಿನೇ ದಿನೇ ನಮ್ಮ ದೃಷ್ಟಿಸಂಕುಚಿತವಾಗುತ್ತಾ ಹೋಗುತ್ತದೆ. ಆದರೆ ಮಕ್ಕಳ ದೃಷ್ಟಿಕೋನ ಹಾಗಿರಲ್ಲ. ಅವರು ಯಾವುದನ್ನೂ ಲಾಭನಷ್ಟದ ಲೆಕ್ಕಾಚಾರದಲ್ಲಿ ನೋಡಲ್ಲ. ಬದುಕಿಗೆ ಆ ಬೆರಗು ಬೇಕು. ಆ ಅಚ್ಚರಿ ಕಡಿಮೆಯಾಗುತ್ತ ಹೋದಂತೆ ನಾವು ಹೋಗೋ ಟೈಮೂ ಹತ್ತಿರವಾಗುತ್ತಾ ಬರುತ್ತದೆ.

ಸಾವಿನಲ್ಲೇ ಜೀವಿಸಿದರೆ ಅದರೊಳಗಿನ ಅನುಭೂತಿ ತಿಳಿಯುತ್ತದೆ!

- ಜಿಡ್ಡು ಕೃಷ್ಣಮೂರ್ತಿ

ಸಾವು ನಮ್ಮೆಲ್ಲರಿಗೂ ಸಾಮಾನ್ಯ. ಇದು ಸೆನ್ಸೇಶನ್‌ ಅಲ್ಲ. ಇದು ಅತ್ತು ಸುಮ್ಮನಾಗುವ, ಅವಾಯ್‌ ಮಾಡುವ, ಪೂಜಿಸುವ ವಿಚಾರವಲ್ಲ. ಇದು ಅದನ್ನು ಮೀರಿದ್ದು. ಮನುಷ್ಯ ವಯಸ್ಸಾದಂತೆ ಸಾವಿನ ಭೀತಿಯಿಂದ ಒದ್ದಾಡುತ್ತಾನೆ. ಹಾಗಿದ್ರೆ ಏನದು ಸಾವು, ನಮ್ಮ ಸಾವಿನತ್ತ ಬಲವಾಗಿ ಎಳೆದೊಯ್ಯೋದು ಏನು, ಒಬ್ಬೊಬ್ಬರಿಗೆ ಒಂದೊಂದು ಥರದಲ್ಲಿ ಸಾವು ಬರುತ್ತೆ. ರೋಗ, ವಯಸ್ಸು, ಆಕ್ಸಿಡೆಂಟ್‌ ಹೀಗೆ ಯಾವ ಕಾರಣವೂ ಇರಬಹುದು.

- ಸಾವಿನಲ್ಲಿ ಎರಡು ವಿಚಾರಗಳಿವೆ. ಮುಂದುವರಿಯುವಿಕೆ ಮತ್ತು ಮುಂದುವರಿಯುವಿಕೆಯ ಕೊನೆ. ಬದುಕಿನಲ್ಲಿ ಅನುಭವ, ನೋವು, ನೆನಪು ಇತ್ಯಾದಿಗಳ ಸಂಗ್ರಹವಿರುತ್ತವೆ. ಇದನ್ನೆಲ್ಲ ಬಿಟ್ಟು ತೆರಳಬೇಕು. ಇವೆಲ್ಲದರ ಜೊತೆಗೂ ನಮ್ಮದೊಂದು ಬಿಡಿಸಲಾಗದ ಅಟ್ಯಾಚ್‌ಮೆಂಟ್‌ ಇರುತ್ತದೆ. ನಮ್ಮ ಪರಂಪರೆ, ಸಂಸ್ಕೃತಿ ಇವುಗಳೆಲ್ಲದರ ಮುಂದುವರಿಕೆ ಇರುತ್ತದೆ. ಈ ಸಂಗ್ರಹ ಮತ್ತು ಮುಂದುವರಿಕೆಗಳಿಗೆ ಕೊನೆ. ಈ ಕೊನೆಯೇ ಸಾವು.

- ಈ ಮುಂದುವರಿಕೆಯ ಕೊನೆ ಸಾವು ಅಂದಾದರೆ ಮುಂದೆ ಲೈಫ್‌ ಇರುತ್ತದಾ.. ಮುಂದುವರಿಯೇ ಮುಗಿದ ಮೇಲೆ ಏನಿರುತ್ತದೆ.. ಯಾವ ನೆನಪುಗಳೂ ಇರಲ್ಲ. ಈ ಬಗ್ಗೆಚಿಂತಿಸಬೇಕು.

- ನಾವು ನಮ್ಮನ್ನು ಸುಲಭವಾಗಿ, ಖುಷಿಯಿಂದ ಕೊನೆಗೊಳಿಸೋದು ಹೇಗೆ? ಹುಷಾರಾಗಿ ಬದುಕಬೇಕು ಅಂತ ತವಕಿಸುವ ಮಿದುಳನ್ನೇ ನಿಷ್ಕಿ್ರಯಗೊಳಿಸೋದು ಹೇಗೆ..

ಮ್ಯಾಜಿಕ್‌ ಮೊಮೆಂಟ್: ಅಮ್ಮನಿಗೆ ಕೊಟ್ಟಮೊದಲ ಉಡುಗೊರೆ!

- ಒಬ್ಬ ವ್ಯಕ್ತಿ ಇದ್ದ. ಅವನು ಸಾಕಷ್ಟುಹಣ, ಸಂಪತ್ತು ಸಂಗ್ರಹಿಸಿದ್ದ. ಸಂಗ್ರಹಿಸುತ್ತಲೂ ಇದ್ದ. ಅವನ ಕೊನೆಗಾಲ ಬಂತು. ತನ್ನ ಕಬೋರ್ಡ್‌ ತೆರೆದ. ಅಲ್ಲಿದ್ದ ವಜ್ರ ವೈಢೂರ್ಯಗಳನ್ನು ನೋಡಿದ, ಹಣವನ್ನು ಕಂಡು ಉಲ್ಲಸಿತನಾದ. ಖುಷಿಯಿಂದ ತನ್ನ ಸಂಗ್ರಹ ನೋಡುತ್ತಲೇ ಸತ್ತುಹೋದ. ಅವನಿಗೆ ಕೊನೆಗೂ ತಾನು ಸಾಯುತ್ತಿರುವುದು ಗೊತ್ತೇ ಆಗಲಿಲ್ಲ. ಏಕೆಂದರೆ ಅವನ ಗಮನವೆಲ್ಲ ಹಣದ ಮೇಲೇ ಇತ್ತು.

- ಅಟ್ಯಾಚ್‌ಮೆಂಟ್‌ ಅಂತ ನಾವೇನನ್ನು ಹೇಳುತ್ತೇವೋ, ಅದರಲ್ಲಿ ಕಳೆದುಕೊಳ್ಳುವ ಭೀತಿಯೂ ಇರುತ್ತದೆ. ಆ ಭಯ ಅಸೂಯೆ ತರುತ್ತದೆ. ಅಸೂಯೆಯಿಂದ ದ್ವೇಷ, ಅಟ್ಯಾಚ್‌ಮೆಂಟ್‌ನಿಂದ ಕಟುದ್ವೇಷ.

- ನಾವು ಸಾವನ್ನು ತಿಳಿದುಕೊಳ್ಳಬೇಕು ಅಂದರೆ ಸಾವನ್ನೂ ಜೀವಿಸಬೇಕು! ಹೌದು, ಹಾಗಂತ ಆತ್ಮಹತ್ಯೆಯ ಬಗ್ಗೆ ಮಾತನಾಡುತ್ತಿಲ್ಲ. ಸಾವನ್ನು ನಿಮ್ಮ ಯೋಚನೆಯೊಳಗೆ ತಂದು ಅದನ್ನು ಜೀವಿಸಿ. ಆಗ ಅದರ ಅಗಾಧತೆ, ಪ್ರಶಾಂತತೆ, ದಿವ್ಯ ಅನುಭೂತಿ ಗೊತ್ತಾಗುತ್ತದೆ. ಹೀಗಾದಾಗ ನಮ್ಮ ಹಣ ಸಂಗ್ರಹ, ನೆನಪುಗಳ ಸಂಗ್ರಹ, ಭಾವನೆಗಳ ಸಂಗ್ರಹ, ಅಟ್ಯಾಚ್‌ಮೆಂಟ್‌ ಇವೆಲ್ಲವುಗಳಿಂದಲೂ ನಾವು ಹೊರಬರುತ್ತೇವೆ. ಅದುವೇ ನಿಜವಾದ ಸ್ವಾತಂತ್ರ್ಯ. ಅದುವೇ ಪ್ರೀತಿ. ಇದಕ್ಕೆ ಎಲ್ಲೆಗಳೇ ಇರುವುದಿಲ್ಲ.

Follow Us:
Download App:
  • android
  • ios