ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ, ಮುಸ್ಲಿಂ ವ್ಯಕ್ತಿಯೊಬ್ಬನಿಂದ ಮತಾಂತರಕ್ಕೆ ಒತ್ತಾಯ ಮತ್ತು ಅನೈತಿಕ ಸಂಬಂಧ ಮುಂದುವರಿಸುವಂತೆ ಕಿರುಕುಳ ಹಾಗೂ ಕೊಲೆ ಬೆದರಿಕೆಗೆ ಒಳಗಾಗಿದ್ದ ವಿವಾಹಿತೆಯೊಬ್ಬರು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ.
ಬೆಳಗಾವಿ (ಡಿ. 05): ಬೆಳಗಾವಿ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ವರದಿಯಾಗಿದ್ದು, ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಮತ್ತು ಅನೈತಿಕ ಸಂಬಂಧವನ್ನು ಮುಂದುವರಿಸುವಂತೆ ಮುಸ್ಲಿಂ ವ್ಯಕ್ತಿಯೊಬ್ಬ ನೀಡುತ್ತಿದ್ದ ನಿರಂತರ ಕಿರುಕುಳ ಮತ್ತು ಕೊಲೆ ಬೆದರಿಕೆಯಿಂದ ಬೇಸತ್ತ ವಿವಾಹಿತೆಯೊಬ್ಬರು ಆತ್ಮ*ಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗೋಣಗನೂರ ಗ್ರಾಮದಲ್ಲಿ ನಡೆದಿದೆ.
ಮತಾಂತರ ಮತ್ತು ಕೊಲೆ ಬೆದರಿಕೆ
ಮೃತ ಮಹಿಳೆಯನ್ನು ನಾಗವ್ವ ದೇಮಪ್ಪ ವಂಟಮೂರಿ (28) ಎಂದು ಗುರುತಿಸಲಾಗಿದೆ. ಆಕೆಯ ಕುಟುಂಬಸ್ಥರು ಗ್ರಾಮದ ಮಕ್ತುಮಸಾಬ್ ಪಾಟೀಲ್ ಎಂಬ ವ್ಯಕ್ತಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನಾಗವ್ವ ಅವರು ಮಕ್ತುಮಸಾಬ್‌ನ ಕಿರುಕುಳಕ್ಕೆ ಬೇಸತ್ತು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಾರೆ. ಮಕ್ತುಮಸಾಬ್ ಪಾಟೀಲ್, ನಾಗವ್ವ ಅವರಿಗೆ 'ನೀನು ಹಿಂದೂ ಧರ್ಮದಲ್ಲಿ ಯಾಕೆ ಇರುತ್ತೀಯಾ, ನಮ್ಮ ಮುಸ್ಲಿಂ ಧರ್ಮಕ್ಕೆ ಬಾ' ಎಂದು ನಿರಂತರವಾಗಿ ಧಮಕಿ ಹಾಕುತ್ತಿದ್ದ ಎನ್ನಲಾಗಿದೆ. ಒಂದು ವೇಳೆ ಮತಾಂತರವಾಗದಿದ್ದರೆ, 'ನಿನ್ನನ್ನು ಕೊಲೆ ಮಾಡುತ್ತೇನೆ' ಎಂದು ಜೀವ ಬೆದರಿಕೆ ಹಾಕುತ್ತಿದ್ದ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನೈತಿಕ ಸಂಬಂಧ ಮತ್ತು ಬುದ್ಧಿವಾದ
ಮೃತೆ ನಾಗವ್ವ ಅವರಿಗೆ ಒಂಭತ್ತು ವರ್ಷಗಳ ಹಿಂದೆ ದೇಮಪ್ಪ ಎಂಬುವರೊಂದಿಗೆ ಮದುವೆಯಾಗಿತ್ತು. ಮದುವೆಯಾದ ಸುಮಾರು 1 ವರ್ಷದ ಬಳಿಕ ನಾಗವ್ವ ಅವರಿಗೆ ಮಕ್ತುಮಸಾಬ್ ಪಾಟೀಲ್‌ನ ಪರಿಚಯವಾಗಿತ್ತು. ಈ ಪರಿಚಯವು ಕ್ರಮೇಣ ಅನೈತಿಕ ಸಂಬಂಧಕ್ಕೆ ಮಾರ್ಪಟ್ಟಿತ್ತು. ಈ ಅನೈತಿಕ ಸಂಬಂಧದ ವಿಚಾರ ನಾಗವ್ವ ಅವರ ಮನೆಯವರಿಗೆ ತಿಳಿದು ಬಂದಾಗ, ಅವರು ಬೈದು ಬುದ್ಧಿವಾದ ಹೇಳಿದ್ದರು. ಮನೆಯವರ ಸೂಚನೆ ಮತ್ತು ಎಚ್ಚರಿಕೆಯ ಮೇರೆಗೆ ನಾಗವ್ವ ಮಕ್ತುಮಸಾಬ್‌ನ ಸಹವಾಸವನ್ನು ಬಿಟ್ಟಿದ್ದರು.
ಸಹವಾಸ ಬಿಟ್ಟ ಬಳಿಕ ಕಿರುಕುಳ ಆರಂಭ
ನಾಗವ್ವ ಅವರು ಮಕ್ತುಮಸಾಬ್‌ನಿಂದ ದೂರವಾದ ಬಳಿಕ, ಆತ ಅವರ ಮನೆಗೆ ಹೋಗಿ ನಿರಂತರವಾಗಿ ಧಮಕಿ ಹಾಕಿ ಕಿರುಕುಳ ನೀಡಲು ಪ್ರಾರಂಭಿಸಿದ್ದನು. ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವಂತೆ, ಸಂಬಂಧ ಮುಂದುವರಿಸುವಂತೆ ಮತ್ತು ಜೀವ ಬೆದರಿಕೆ ಹಾಕುತ್ತಿದ್ದ ಮಕ್ತುಮಸಾಬ್‌ನ ಕಿರುಕುಳ ತಾಳಲಾರದೆ ನಾಗವ್ವ ಅವರು ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಈ ಸಾವಿಗೆ ಮಕ್ತುಮಸಾಬ್ ಪಾಟೀಲ್‌ನ ಕಿರುಕುಳವೇ ನೇರ ಕಾರಣ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇನ್ನು ಘಟನೆ ನಡೆದ ಸ್ಥಳಕ್ಕೆ ಕಟಕೋಳ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಶವಾಗಾರಕ್ಕೆ ಸಾಗಿಸಲಾಗಿದ್ದು, ಕುಟುಂಬಸ್ಥರ ದೂರಿನ ಮೇರೆಗೆ ಕಟಕೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.


