ಭಾರತದಲ್ಲಿ ನಡೆದ ದೇಸಿ ವರ ಹಾಗೂ ವಿದೇಶಿ ವಧುವಿನ ಮದುವೆಯೊಂದರ ವಿಡಿಯೋ ವೈರಲ್ ಆಗಿದೆ. ವೆಡ್ಡಿಂಗ್ ಪ್ಲಾನರ್‌ಗಳ ಎಡವಟ್ಟಿನಿಂದ, ವಧು-ವರರು ಹಾರ ಬದಲಿಸಿಕೊಳ್ಳುವ ಬದಲು ಇಬ್ಬರು ಬಾಲಕರು ಅವರ ಕೊರಳಿಗೆ ಹಾರ ಹಾಕಿದ್ದಾರೆ. ಈ ತಮಾಷೆಯ ಘಟನೆ ಜನರನ್ನು ನಗೆಗಡಲಲ್ಲಿ ತೇಲಿಸುತ್ತಿದೆ.
ಭಾರತದ ಸೆಲೆಬ್ರಿಟಿಗಳು ಶ್ರೀಮಂತರು ಹೇಗೆ ವಿದೇಶದಲ್ಲಿ ಹೋಗಿ ಮದುವೆ ಆಗುತ್ತಾರೋ ಹಾಗೆಯೇ ವಿದೇಶಿಗರು ಕೂಡ ಭಾರತದ ಜೈಪುರ, ರಾಜಸ್ಥಾನ, ಕಾಶ್ಮೀರ, ಮುಂತಾದ ಸ್ಥಳಗಳಲ್ಲಿ ಬಂದು ಅದ್ದೂರಿಯಾಗಿ ಮದುವೆಯಾಗುತ್ತಾರೆ. ಭಾರತದಲ್ಲಿ ಮದುವೆಯಾಗಲು ಬಯಸುವ ವಿದೇಶಿಗರು ಬಹುತೇಕ ಭಾರತೀಯ ಶೈಲಿಯಲ್ಲಿ ಮದುವೆಯಾಗಲು ಬಯಸುತ್ತಾರೆ. ಇಲ್ಲಿನ ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ಅವರಿಗೆ ಅರಿವಿಲ್ಲದ ಕಾರಣ ಬಹುತೇಕ ವಿದೇಶಿಗರು ಈ ಸಮಯದಲ್ಲಿ ವೆಡ್ಡಿಂಗ್ ಪ್ಲಾನರ್‌ಗಳ ಮೊರೆ ಹೋಗುತ್ತಾರೆ. ವೆಡ್ಡಿಂಗ್ ಪ್ಲಾನರ್‌ಗಳು ಇದಕ್ಕಾಗಿ ಲಕ್ಷಾಂತರ ರೂಪಾಯಿಯನ್ನು ವಸೂಲಿ ಮಾಡುತ್ತಾರೆ. ವಿದೇಶಿಗರಿಗೆ ಎಲ್ಲೂ ಇಲ್ಲದ ಆಚರಣೆಯನ್ನು ಕೂಡ ತೋರಿಸುವ ಪ್ರಯತ್ನ ಮಾಡುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ವೆಡ್ಡಿಂಗ್ ಪ್ಲಾನರ್‌ಗಳ ಎಡವಟ್ಟು ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುವುದರ ಜೊತೆಗೆ ಇಂಟರ್‌ನೆಟ್‌ನಲ್ಲಿ ನಗೆಯುಕ್ಕಿಸುತ್ತಿದೆ.
weddingsbyesl(Weddings by Ekta Saigal Lulla)ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ವೀಡಿಯೋದಲ್ಲಿ ಕಾಣುವಂತೆ ನದಿಯ ಮಧ್ಯೆ ವಧುವರರು ನಿಂತಿದ್ದು, ಅವರಿಗೆ ಇಬ್ಬರು ಪುಟ್ಟ ಬಾಲಕರ ಕೈಯಲ್ಲಿ ಹೂವಿನ ಹಾರವನ್ನು ಕೊಟ್ಟು ಕಳುಹಿಸಿರುತ್ತಾರೆ. ಈ ಬಾಲಕರು ವಧು ಹಾಗೂ ವರನಿಗೆ ಹೂವಿನ ಹಾರವನ್ನು ಕೊಡಬೇಕಿತ್ತು. ಬದಲಾಗಿ ಈ ಬಾಲಕರು ತಾವೇ ವರ ಹಾಗೂ ವಧುವಿನ ಕೊರಳಿಗೆ ಹೂವಿನ ಹಾರವನ್ನು ಹಾಕಿದ್ದಾರೆ. ಸಾಮಾನ್ಯವಾಗಿ ಮದುವೆಯಲ್ಲಿ ವರ ಹಾಗೂ ವಧು ಪರಸ್ಪರ ಹಾರ ಬದಲಾಯಿಸಿಕೊಳ್ಳುತ್ತಾರೆ. ಆದರೆ ಇಲ್ಲಿ ಈ ಬಾಲಕರೇ ಅವರ ಕೊರಳಿಗೆ ಹೂವಿನ ಹಾರ ಹಾಕಿದ್ದಾರೆ. ಆ ಹಾರ ಹಾಕಿದ ಬಾಲಕರಿಗಾಗಲಿ ಹಾರ ಹಾಕಿಸಿಕೊಂಡ ನವಜೋಡಿಗಾಗಲಿ ಇದು ಕ್ರಮವಲ್ಲ ಎಂಬ ವಿಚಾರವೇ ಗೊತ್ತಿಲ್ಲ. ನಂತರ ಎಲ್ಲರೂ ನಗುತ್ತಾ ವೀಡಿಯೋ ಫೋಟೋಗಳಿಗೆ ಪೋಸ್ ನೀಡಿದ್ದು, ಈ ಹೂವಿನ ಹಾರ ಹಾಕುವ ವೇಳೆ ಹಿಂದಿನ ಪುಷ್ಪವೃಷ್ಟಿಯಾಗುವುದನ್ನು ಕೂಡ ವೀಡಿಯೋದಲ್ಲಿ ನೋಡಬಹುದಾಗಿದೆ.
ಇದನ್ನೂ ಓದಿ: ಮಗುವಿನ ಮುಖ ನೋಡುವ ಮುನ್ನವೇ ಯೋಧನ ದುರಂತ ಅಂತ್ಯ: ಮಗುವಿನೊಂದಿಗೆ ಸ್ಟ್ರೆಚರ್‌ನಲ್ಲಿ ಬಂದು ಅಂತಿಮ ದರ್ಶನ ಪಡೆದ ಪತ್ನಿ
ಈ ಪ್ಲವರ್ ಬಾಯ್‌ಗಳಿಗಾಗಲಿ ಆ ಜೋಡಿಗಾಗಲಿ ಈ ಕ್ರಮದ ಅರ್ಥ ಗೊತ್ತಿಲ್ಲ ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ವೀಡಿಯೋಗೆ ಹಲವರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಇಲ್ಲಿ ವಿವಾಹವಾದ ಜೋಡಿ ದೇಸಿ ವರ ಹಾಗೂ ವಿದೇಶಿ ವಧು ಎಂದು ತಿಳಿದು ಬಂದಿದೆ. ವೀಡಿಯೋ ನೋಡಿದ ಅನೇಕರು ಕ್ಯೂಟ್ ಎಂದು ಕಾಮೆಂಟ್ ಮಾಡಿದ್ದಾರೆ. ಈಗ ಅವರು ಖುಷಿಯಾಗಿ ಮದುವೆಯಾಗಿದ್ದಾರೆ ಎಂದು ಮತ್ತೊಬ್ಬರು ಅಣಕವಾಡಿದ್ದಾರೆ. ವರ ಭಾರತೀಯನಂತೆ ಕಾಣಿಸುತ್ತಿದ್ದಾನೆ ಕನಿಷ್ಠ ಆತನಿಗಾದರೂ ಇದರ ಬಗ್ಗ ಜ್ಞಾನವಿರಬೇಕಿತ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋವನ್ನು 2 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಈ ವೀಡಿಯೋ ನೋಡಿ ನಿಮಗೇನನಿಸಿತು ಕಾಮೆಂಟ್ ಮಾಡಿ..
ಇದನ್ನೂ ಓದಿ: ಪುಟ್ಟ ಮಕ್ಕಳಂತೆ ವೆಡ್ಡಿಂಗ್ ಕೇಕ್ ರುಚಿ ನೋಡಿದ ವರ: ಆಕ್ಷೇಪಿಸಿದ ವಧು: ಆಮೇಲಾಗಿದ್ದು ದುರಂತ: ವೀಡಿಯೋ


