ಪ್ರೀತಿಸಿ ಅಥವಾ ತಮ್ಮಿಷ್ಟದ ಪ್ರಕಾರ ಮದುವೆಯಾಗುವ ಜೋಡಿಗಳಿಗೆ ಮಾತ್ರವಲ್ಲದೇ ಅವರ ಇಡೀ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಗ್ರಾಮಸ್ಥರು ಈ ಬಗ್ಗೆ ನಿರ್ಧಾರ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಮ್ಮಿಷ್ಟದಂತೆ ಮದುವೆಯಾಗುವ ಹೆಣ್ಣು ಗಂಡಿನ ಕುಟುಂಬಕ್ಕೆ ಬಹಿಷ್ಕಾರ:
ಮದುವೆ ಎಂಬುದು ಹೆಣ್ಣು ಹಾಗೂ ಗಂಡಿಗೆ ಸಂಬಂಧಿಸಿದ ವಿಚಾರವಾಗಬೇಕು. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಗಂಡು ಹೆಣ್ಣು ಒಪ್ಪಿದರೆ ಮದುವೆ ಫಿಕ್ಸ್ ಆದರೆ ಆದರೆ ಭಾರತದಲ್ಲಿ ಹಾಗಲ್ಲ, ಮದುವೆಯ ಎಂಬುದು ಗಂಡು ಹೆಣ್ಣಿನ ಸಂಬಂಧಕ್ಕೆ ಸೇತುವೆಯಾಗಿ ಉಳಿದಿಲ್ಲ, ಬಹುತೇಕ ಮದುವೆಗಳು ಎರಡು ಕುಟುಂಬಗಳ ಮಿಲನದಂತೆ. ಗಂಡು ಹೆಣ್ಣಿನ ಬದುಕಿನಲ್ಲಿ ಅವರಿಗಿಂತ ಅವರ ಪೋಷಕರು ಬಂಧುಗಳು ಕೈಯಾಡಿಸುವುದೇ ಹೆಚ್ಚು. ಬಹುತಕ ಮದುವೆಗಳು ಹೆಣ್ಣು ಗಂಡಿನ ಒಪ್ಪಿಗೆಯನ್ನು ಕೇಳುವುದೇ ಇಲ್ಲ, ಎರಡು ಕುಟುಂಬಗಳಿಗೆ ಇಷ್ಟವಾದರಷ್ಟೇ ಮದುವೆ. ಆದರೆ ಇದನ್ನು ಮೀರಿ ತಮ್ಮಿಷ್ಟದಂತೆ ಮದುವೆಯಾಗುವ ಗಂಡು ಹೆಣ್ಣಿನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರದ ಶಿಕ್ಷೆ ನೀಡುವುದಕ್ಕೆ ಗ್ರಾಮವೊಂದು ಸಿದ್ಧವಾಗಿದ್ದು, ಈ ವಿಚಾರ ಈಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಹೌದು ಮಧ್ಯಪ್ರದೇಶದ ರತ್ಲಂ ಜಿಲ್ಲೆಯ ಗ್ರಾಮವೊಂದರಲ್ಲಿ ತಮ್ಮಿಷ್ಟದಂತೆ ಮದುವೆಯಾಗುವ ಜೋಡಿಗೆ ಮಾತ್ರವಲ್ಲದೇ ಅವರ ಇಡೀ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕುವುದಕ್ಕೆ ಆ ಗ್ರಾಮಸ್ಥರು ನಿರ್ಧರಿಸಿದ್ದಾರೆ. ಇಲ್ಲಿ ಯಾರಾದರು ಹದಿಹರೆಯದ ಹುಡುಗ ಹುಡುಗಿಯರು ತಮ್ಮ ಇಷ್ಟದಂತೆ ಮದುವೆಯಾದರೆ ಅಥವಾ ಪ್ರೀತಿ ಮಾಡಿ ತಾವು ಪ್ರೀತಿಸಿದವರನ್ನು ಮದುವೆಯಾದರೆ ಅಂತಹ ಹುಡುಗ ಹಾಗೂ ಹುಡುಗಿಯ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕುವುದಕ್ಕೆ ರತ್ಲಂ ಜಿಲ್ಲೆಯ ಪಂಚೇವಾ ಎಂಬ ಗ್ರಾಮದ ಹಿರಿಯರು ನಿರ್ಧಾರ ಮಾಡಿದ್ದಾರೆ.
ಗ್ರಾಮದಲ್ಲಿ ಸಾಮಾಜಿಕ ಗಡಿಪಾರು ಶಿಕ್ಷೆಗಳನ್ನು ಘೋಷಿಸುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ನಂತರ ಗ್ರಾಮದ ಈ ನಿರ್ಧಾರಕ್ಕೆ ಈಗ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ವೈರಲ್ ಆದ ವೀಡಿಯೋದಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ದೊಡ್ಡದಾದ ಸಭೆ ನಡೆಸಿದ್ದಾರೆ. ಬಳಿಕ ಅಲ್ಲಿ ಒಬ್ಬ ಯುವಕ ಗ್ರಾಮ ಸುಗ್ರೀವಾಜ್ಞೆ ಎಂದು ಕರೆಯಲ್ಪಡುವ ಈ ವಿಚಾರವನ್ನು ಸಾರ್ವಜನಿಕವಾಗಿ ಘೋಷಿಸುತ್ತಾನೆ.
ಈ ಘೋಷಣೆಯ ಪ್ರಕಾರ ಓಡಿಹೋಗಿ ತಮ್ಮ ಆಯ್ಕೆಯ ಮೇರೆಗೆ ಮದುವೆಯಾದ ಯಾವುದೇ ಹುಡುಗ ಅಥವಾ ಹುಡುಗಿಗೆ ಶಿಕ್ಷೆಯಾಗುವುದಲ್ಲದೆ, ಅವರ ಇಡೀ ಕುಟುಂಬವನ್ನು ಬಹಿಷ್ಕರಿಸಲಾಗುತ್ತದೆ. ಈ ತೀರ್ಮಾನದಿಂದಾಗಿ ಆ ಯುವಕ/ಯುವತಿ ಅವರಿಷ್ಟದಂತೆ ಮದುವೆಯಾದರೆ ಅವರ ಸಂಪೂರ್ಣ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರಕ್ಕೆ ಆದೇಶಿಸಲಾಗುತ್ತದೆ. ಅಂತಹ ಕುಟುಂಬಗಳನ್ನು ಸಾಮಾಜಿಕ ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗುವುದಿಲ್ಲ, ಅವರಿಗೆ ಬೇಕಾದಂತೆ ಅಕ್ಕಿ, ದಿನಸಿ ಸಾಮಾನು ಹಾಲು ಮುಂತಾದ ದೈನಂದಿನ ಅಗತ್ಯ ವಸ್ತುಗಳನ್ನು ನಿರಾಕರಿಸಲಾಗುತ್ತದೆ. ಅವರು ತಮ್ಮ ದೈನಂದಿನ ಕೆಲಸಕ್ಕೆ ಕಾರ್ಮಿಕರನ್ನು ನೇಮಿಸಿಕೊಳ್ಳುವುದಕ್ಕೆ ಅಡ್ಡಿ ಮಾಡಲಾಗುತ್ತದೆ ಅಥವಾ ಯಾರೋ ಕೂಡ ಅವರಲ್ಲಿಗೆ ಕೆಲಸಕ್ಕೆ ಹೋಗುವುದಕ್ಕೆ ಇಷ್ಟಪಡುವುದಿಲ್ಲ. ಹಳ್ಳಿಯಲ್ಲಿನ ಎಲ್ಲಾ ಆರ್ಥಿಕ ಮತ್ತು ಸಾಮಾಜಿಕ ಸಂವಹನವನ್ನು ಕಡಿತಗೊಳಿಸಲಾಗುತ್ತದೆ.
ಇಷ್ಟಕ್ಕೆ ಈ ಬಹಿಷ್ಕಾರಗಳು ಮುಗಿಯುವುದಿಲ್ಲ. ಯಾವುದೇ ಗ್ರಾಮಸ್ಥರು ಈ ಕುಟುಂಬಗಳಿಂದ ಭೂಮಿಯನ್ನು ಗುತ್ತಿಗೆಗೆ ಪಡೆಯುವುದಿಲ್ಲ. ಯಾರೂ ಅವರ ಮನೆಗಳಲ್ಲಿ ಕೆಲಸ ಮಾಡುವುದಿಲ್ಲ. ಬಹಿಷ್ಕೃತ ಕುಟುಂಬದ ಸದಸ್ಯರನ್ನು ನೇಮಿಸಿಕೊಳ್ಳಲು ಧೈರ್ಯ ಮಾಡುವರೂ ಕೂಡ ಅಂತಹದ್ದೇ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ತಮ್ಮಿಷ್ಟದಂತೆ ಮದುವೆಯಾಗುವ ಜೋಡಿಗೆ ಅನುಕೂಲ ಮಾಡಿಕೊಡುವ, ಮದುವೆಗೆ ಸಾಕ್ಷಿಯಾಗುವ ಅಥವಾ ಆಶ್ರಯ ನೀಡುವ ಗ್ರಾಮಸ್ಥರನ್ನು ಸಹ ಸಾಮಾಜಿಕವಾಗಿ ಬಹಿಷ್ಕರಿಸಲಾಗುತ್ತದೆ.
ಈ ವೀಡಿಯೋದಲ್ಲಿ ಮೂರು ಕುಟುಂಬಗಳ ಮುಖ್ಯಸ್ಥರನ್ನು ಗುರುತಿಸಿ ಅವರಿಗೆ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ಬರುವಂತೆ ಮಾಡಬೇಕು ಬಹಿಷ್ಕೃತ ಕುಟುಂಬವನ್ನು ಬೆಂಬಲಿಸಿದರೆ ನಿಮ್ಮನ್ನು ಬಹಿಷ್ಕರಿಸಲಾಗುವುದು ಎಂದು ಹೇಳಲಾಗುತ್ತದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳೀಯಾಡಳಿತವೂ ಗ್ರಾಮಕ್ಕೆ ಭೇಟಿ ನೀಡಿದ್ದು ಜನಪದ್ ಸಿಇಒ ಮತ್ತು ಪಟ್ವಾರಿ ಗ್ರಾಮಕ್ಕೆ ಭೇಟಿ ನೀಡಿ, ಸಾಮಾಜಿಕ ಬಹಿಷ್ಕಾರಗಳು ಕಾನೂನುಬಾಹಿರ ಮತ್ತು ಸಂವಿಧಾನಬಾಹಿರ ಎಂದು ವಿವರಿಸುವ ಮೂಲಕ ಹಾನಿ ನಿಯಂತ್ರಣಕ್ಕೆ ಪ್ರಯತ್ನಿಸಿದ್ದಾರೆ. ಈ ಬಗ್ಗೆ ಔಪಚಾರಿಕ ದೂರು ಬಂದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಡಿಒಪಿ ಸಂದೀಪ್ ಮಾಳವೀಯ ಹೇಳಿದ್ದಾರೆ.
ಇದನ್ನೂ ಓದಿ: ಗಂಡನ ಕಾರಿನಲ್ಲಿ ಗೋಮಾಂಸ ತುಂಬಿಸಿ ಭಜರಂಗದಳಕ್ಕೆ ಮಾಹಿತಿ ನೀಡಿದ ಪತ್ನಿ
18 ವರ್ಷ ವಯಸ್ಸಿನ ಮಹಿಳೆ ಮತ್ತು 21 ವರ್ಷ ವಯಸ್ಸಿನ ಪುರುಷನಿಗೆ ತಮ್ಮ ಇಚ್ಛೆಯಂತೆ ಮದುವೆಯಾಗಲು ಕಾನೂನುಬದ್ಧ ಹಕ್ಕಿದೆ ಎಂದು ಕಾನೂನು ಸ್ಪಷ್ಟವಾಗಿ ಹೇಳುತ್ತದೆ. ಸಾಮಾಜಿಕ ಬಹಿಷ್ಕಾರಗಳು ಮತ್ತು ಪಂಚಾಯತ್ ಶೈಲಿಯ ತೀರ್ಪುಗಳನ್ನು ಕಾನೂನು ಬಾಹಿರವೆಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಘೋಷಿಸಿದೆ. ಅಂತರ್ಜಾತಿ ಅಥವಾ ಪ್ರೇಮ ವಿವಾಹಗಳಿಗೆ ಪ್ರವೇಶಿಸುವ ವಯಸ್ಕರಿಗೆ ರಕ್ಷಣೆ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ.
ಇದನ್ನೂ ಓದಿ: ಉಡುಪಿ: ವ್ಹೀಲ್‌ಚೇರ್‌ನಲ್ಲಿದ್ದ ಅಪರೇಷನ್ ಪರಾಕ್ರಮ್‌ನ ಗಾಯಾಳು ಯೋಧನಿಗೆ ಟೋಲ್ ಕಟ್ಟುವಂತೆ ಪೀಡನೆ


