ಗಂಡನಿಂದ ವಿಚ್ಛೇದನ ಪಡೆಯುವ ಉದ್ದೇಶದಿಂದ, ಮಹಿಳೆಯೊಬ್ಬಳು ತನ್ನ ಬಾಯ್‌ಫ್ರೆಂಡ್ ಜೊತೆ ಸೇರಿ ಪತಿಯ ಕಾರಿನಲ್ಲಿ ಗೋಮಾಂಸವಿಟ್ಟು ಆತನನ್ನು ಜೈಲಿಗಟ್ಟಲು ಸಂಚು ರೂಪಿಸಿದ್ದಾಳೆ. ಈ ಹಿಂದೆ ಇದೇ ರೀತಿ ಯತ್ನಿಸಿ ಆತನನ್ನು ಒಮ್ಮೆ ಜೈಲಿಗಟ್ಟಿದ್ದ ಆಕೆ ಆತ ವಾಪಸ್ ಬರುತ್ತಿದ್ದಂತೆ ಮತ್ತೊಂದು ಪ್ಲಾನ್ ಮಾಡಿದ್ದಾಳೆ.

ಗಂಡನಿಂದ ಡಿವೋರ್ಸ್‌ ಪಡೆಯುವುದಕ್ಕೆ ಮಹಿಳೆಯೊಬ್ಬಳು ತನ್ನ ಬಾಯ್‌ಫ್ರೆಂಡ್ ಜೊತೆ ಸೇರಿ ಖತರ್ನಾಕ್ ಪ್ಲಾನ್ ಮಾಡಿದ್ದಾಳೆ. ಗಂಡನ ಕಾರಿಗೆ ಗೋಮಾಂಸವನ್ನು ತುಂಬಿದ ಮಹಿಳೆಯೊಬ್ಬಳು ತನ್ನ ಬಾಯ್‌ಫ್ರೆಂಡ್ ಮೂಲಕ ಭಜರಂಗದಳದವರಿಗೆ ಕರೆ ಮಾಡಿ ತಿಳಿಸಿದ್ದಾಳೆ. ಈ ಮೂಲಕ ಗಂಡನನ್ನು ಜೈಲಿಗಟ್ಟುವ ಪ್ರಯತ್ನ ಮಾಡಿದ್ದಾಳೆ. ಈಕೆಯ ಈ ಖತರ್ನಾಕ್ ಐಡಿಯಾ ಪೊಲೀಸರ ತನಿಖೆ ಹಾಗೂ ಸಂಬಂಧಿಸಿದ ಸಾಕ್ಷ್ಯಗಳಿಂದ ಬಯಲಾಗಿದೆ. ಉತ್ತರ ಪ್ರದೇಶದಲ್ಲಿ ಗೋಹತ್ಯೆಯನ್ನು ನಿಷೇಧಿಸಲಾಗಿದ್ದು, ಇಲ್ಲಿ ಗೋಮಾಂಸ ಮಾರಾಟ ಹಾಗೂ ಸಾಗಾಟ ಅಪರಾಧವಾಗಿದ್ದು, ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಹೀಗಾಗಿ ಉತ್ತರ ಪ್ರದೇಶದ ಗೋಹತ್ಯೆ ನಿಷೇಧ ಕಾಯ್ದೆಯನ್ನೇ ಬಳಸಿಕೊಂಡು ಮಹಿಳೆಯೊಬ್ಬಳು ಖತರ್ನಾಕ್ ಐಡಿಯಾ ಮಾಡಿದ್ದು, ಗಂಡನನ್ನು ಎರಡೆರಡು ಬಾರಿ ಜೈಲಿಗಟ್ಟುವ ಪ್ರಯತ್ನ ಮಾಡಿದ್ದಾಳೆ. ಹೌದು ನಗರದ ಹೊರವಲಯಗಳಲ್ಲಿ ನಡೆಯುವ ನಿಯಮಿತ ಗೋಹತ್ಯೆ ತಡೆ ತಪಾಸಣೆಯೊಂದು ವಿಚಿತ್ರ ಮಾನಸಿಕ ಥ್ರಿಲ್ಲರ್ ಸಿರೀಸ್‌ನಂತಹ ಘಟನೆಯಾಗಿ ಬದಲಾಗಿದೆ. ಮಹಿಳೆಯೇ ಈ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದಾಳೆ. ಈಕೆಯ ಉದ್ದೇಶ ಮಾತ್ರ ಸಂಪೂರ್ಣವಾಗಿ ವೈಯಕ್ತಿಕವಾಗಿತ್ತು. ಡಿವೋರ್ಸ್ ನೀಡುವಂತೆ ಗಂಡನ ಮೇಲೆ ಒತ್ತಾಯ ಹೇರುವುದೇ ಈ ಕೃತ್ಯದ ಹಿಂದಿನ ಉದ್ದೇಶವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಭಜರಂಗದಳ ನೀಡಿದ ಸುಳಿವಿನ ಮೇರೆಗೆ ಕಾಕೋರಿಯಾ ಪೊಲೀಸರು ಜನವರಿ 14ರಂದು ದುರ್ಗಾಗಾಂಜ್ ಬಳಿ ಆನ್‌ಲೈನ್ ಪೋರ್ಟರ್ ವಾಹನವೊಂದನ್ನು ತಡೆದು 12 ಕೆಜಿ ಗೋಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ಗೋಮಾಂಸವನ್ನು ಅಮಿನಾಬಾದ್‌ನ ಪೇಪರ್ ಫ್ಯಾಕ್ಟರಿಯ ಮಾಲೀಕ ವಾಸೀಫ್ ಎಂಬುವವರ ಹೆಸರಿನಲ್ಲಿ ಬುಕ್ ಮಾಡಲಾಗಿದೆ ಎಂದು ಆ ಆನ್‌ಲೈನ್ ಪೋರ್ಟರ್ ವಾಹನದ ಚಾಲಕ ಹೇಳಿದ್ದ. ಆದರೆ ವಾಸೀಫ್ ತಾನು ಅಂತಹ ಯಾವುದೇ ವಸ್ತುವನ್ನು ಬುಕ್ ಮಾಡಿಲ್ಲ ಎಂದು ವಾಸೀಫ್ ಸ್ಪಷ್ಟವಾಗಿ ಹೇಳಿದರೂ ಅವರ ಫೋನ್‌ನಿಂದಲೇ ಇದನ್ನು ಬುಕ್ ಮಾಡಲಾಗಿದೆ. ಈ ವಿತರಣೆಯನ್ನು ದೃಢೀಕರಿಸಲು ಬಳಸುವ ಒಟಿಪಿಯನ್ನು ಅವರ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗಿದೆ ಎಂಬುದು ತೋರಿಸಿದೆ.

ಮನೆಯ ಸಿಸಿಟಿವಿ ನೀಡಿತು ಪ್ರಕರಣಕ್ಕೆ ಟ್ವಿಸ್ಟ್:

ಘಟನೆಯಿಂದ ತಲೆಕೆಡಿಸಿಕೊಂಡ ವಾಸೀಫ್ ಅವರು ತಮ್ಮ ಮನೆಯ ಸಿಸಿಟಿವಿಯನ್ನು ಚೆಕ್ ಮಾಡಿದ್ದಾರೆ. ಒಟಿಪಿ ಬಳಕೆ ಮಾಡಿದ ಸಮಯದಲ್ಲಿ ಅವರು ಬಾತ್‌ರೂಮ್‌ನಲ್ಲಿದ್ದರು. ಆದರೆ ಅವರ ಫೋನ್ ಹೊರಗೆ ಇತ್ತು. ಹೀಗಾಗಿ ಈ ವಿಚಾರವೇ ನಂತರ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ನೀಡಿತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ವಾಸಿಫ್ ಮೇಲೆ ಸುಳ್ಳು ಆರೋಪ ಹೊರಿಸಲು ಉದ್ದೇಶಪೂರ್ವಕವಾಗಿಯೇ ಗೋಮಾಂಸವನ್ನು ಅವರ ಕಾರಿನಲ್ಲಿ ಇರಿಸಲಾಗಿತ್ತು ಎಂಬುದನ್ನು ನಂತರ ತನಿಖಾಧಿಕಾರಿಗಳು ಶೀಘ್ರದಲ್ಲೇ ಬಯಲಿಗೆಳೆದರು. ತನಿಖೆಯ ವೇಳೆ ಆತನ ಪತ್ನಿಯೇ ಪತಿಯನ್ನು ಸಿಲುಕಿಸಲು ತನ್ನ ಬಾಯ್‌ಫ್ರೆಂಡ್ ಭೋಪಾಲ್ ಮೂಲದ ಅಮಾನ್ ಜೊತೆ ಸೇರಿ ಈ ಸಂಚು ರೂಪಿಸಿದ್ದಳು ಎಂಬ ಸ್ಫೋಟಕ ಸತ್ಯ ಬಯಲಾಗಿದೆ.

ಇದನ್ನೂ ಓದಿ: ಉಡುಪಿ: ವ್ಹೀಲ್‌ಚೇರ್‌ನಲ್ಲಿದ್ದ ಅಪರೇಷನ್ ಪರಾಕ್ರಮ್‌ನ ಗಾಯಾಳು ಯೋಧನಿಗೆ ಟೋಲ್ ಕಟ್ಟುವಂತೆ ಪೀಡನೆ

ಅಮಾನ್ ಗೋಮಾಂಸ ಬುಕ್ ಮಾಡಲು ಮಹಿಳೆಯ ಪತಿ ವಾಸೀಫ್‌ ಗುರುತನ್ನು ಬಳಸಿದ್ದ. ಈ ಆನ್‌ಲೈನ್ ಪೋರ್ಟರ್‌ನ್ನು ಅಮೀನಾಬಾದ್‌ನಿಂದ ಕಕೋರಿಗೆ ಬುಕ್ ಮಾಡಿದ್ದ ಹಾಗೂ ಈ ಕೃತ್ಯಕ್ಕಾಗಿ ಗೋಮಾಂಸವನ್ನು ಭೋಪಾಲ್‌ನಿಂದ ತರಿಸಲಾಗಿತ್ತು. ರಟ್ಟಿನ ಪೆಟ್ಟಿಗೆಯೊಳಗೆ ಮರೆ ಮಾಡಿ ಈ ಗೋಮಾಂಸವನ್ನು ರಹಸ್ಯವಾಗಿ ತುಂಬಿಸಲಾಗಿತ್ತು. ನಂತರ ವಾಸೀಫ್ ಬಂಧನಕ್ಕಾಗಿ ಅಮಾನ್, ರಾಹುಲ್ ಎಂಬಾತನ ಹೆಸರಿನಲ್ಲಿ ಭಜರಂಗದಳದವರಿಗೆ ವಿಚಾರ ತಿಳಿಸಿದ್ದ ಎಂದು ಕಾಕೋರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸತೀಶ್ ಚಂದ್ರ ರಾಥೋಡ್ ಹೇಳಿದ್ದಾರೆ.

ಇದನ್ನೂ ಓದಿ: ನಾನೇನು ಕಳ್ಳನಾ ಅಣ್ಣ : ಭದ್ರತೆಯಲ್ಲಿ ಕರೆದೊಯ್ದ ಖಾಕಿ ಜೊತೆಗೂ ಗಿಲ್ಲಿ ನಟನ ಹಾಸ್ಯ : ನಕ್ಕು ಸುಸ್ತಾದ ಪೊಲೀಸರು

ತನಿಖೆಗಿಳಿದ ಪೊಲೀಸರಿಗೆ ಹಲವು ವಿಚಾರಗಳು ಬೆಳಕಿಗೆ ಬಂದಿವೆ. ವಾಸೀಫ್‌ನ ಪತ್ನಿಗೂ ಅಮಾನ್‌ಗೂ 2022ರಲ್ಲಿ ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯ ಅಗಿತ್ತು. ಸ್ನೇಹ ಪ್ರೇಮಕ್ಕೆ ತಿರುಗಿದ ನಂತರ ವಾಸೀಫ್ ಪತ್ನಿ ಗಂಡನಿಂದ ಡಿವೋರ್ಸ್ ಪಡೆಯುವುದಕ್ಕಾಗಿ ಈ ರೀತಿ ಪ್ಲಾನ್ ಮಾಡಿದ್ದಳು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಹಜರತ್‌ಗಂಜ್‌ನ ಬಹುಮಹಡಿ ಪಾರ್ಕಿಂಗ್ ಸೌಲಭ್ಯದಲ್ಲಿ ನಿಲ್ಲಿಸಲಾಗಿದ್ದ ಕಪ್ಪು ಮಹೀಂದ್ರಾ ಥಾರ್‌ನಿಂದ ಸುಮಾರು 20 ಕೆಜಿ ಗೋಮಾಂಸವನ್ನು ವಶಪಡಿಸಿಕೊಳ್ಳಲಾಗಿತ್ತು. ಹೀಗಾಗಿ ಈ ಕಾರಿ ಮಾಲೀಕನಾಗಿದ್ದ ವಾಸಿಫ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಯಿತು. ಆದರೆ ತನಿಖೆಯ ನಂತರ ಮುಂಜಾನೆ ವಾಸಿಫ್ ಹೊರಗೆ ಹೋದಾಗ ವಾಹನದೊಳಗೆ ಗೋಮಾಂಸವನ್ನು ಇರಿಸಲಾಗಿತ್ತು ಎಂಬುದು ತಿಳಿದು ಬಂದಿತ್ತು. ಆ ಸಮಯದಲ್ಲಿ ವಾಸೀಫ್ ಜೈಲಿನಿಂದ ಬೇಗನೇ ಹೊರಬಂದಿದ್ದರು. ಹೀಗಾಗಿ ಮತ್ತೊಮ್ಮೆ ಆತನನ್ನು ಒಳಗೆ ಕಳುಹಿಸುವುದಕ್ಕೆ ಮಾಸ್ಟರ್ ಪ್ಲಾನ್ ಮಾಡಿದ ಆಕೆ ಸಿಕ್ಕಿಬಿದ್ದಿದ್ದು, ಶೀಘ್ರದಲ್ಲೇ ಆಕೆಯನ್ನು ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.