ಸಾಮಾಜಿಕ ಬಹಿಷ್ಕಾರದ ಪಿಡುಗು ಇನ್ನೂ ಜೀವಂತವಿದ್ದು ಅದೆಷ್ಟೋ ಕುಟುಂಬಗಳು ನಲುಗಿ ಹೋಗಿವೆ. ಇಲ್ಲೊಬ್ಬ ವ್ಯಕ್ತಿ ಸಾಮಾಜಿಕ ಬಹಿಷ್ಕಾರದಿಂದ ಬೇಸತ್ತು ನೇಣಿಗೆ ಕೊರಳೊಡ್ಡಿದ್ದಾನೆ. ಅಷ್ಟಕ್ಕು ಅಲ್ಲಿ ಆಗಿದ್ದಾದರು ಏನು ಈ ಸ್ಟೋರಿ ನೋಡಿ..
ವರದಿ - ಪುಟ್ಟರಾಜು. ಆರ್. ಸಿ ಏಷಿಯಾನೆಟ್ ಸುವರ್ಣ ನ್ಯೂಸ್
ಚಾಮರಾಜನಗರ (ಮೇ.21): ಸಾಮಾಜಿಕ ಬಹಿಷ್ಕಾರದ ಪಿಡುಗು ಇನ್ನೂ ಜೀವಂತವಿದ್ದು ಅದೆಷ್ಟೋ ಕುಟುಂಬಗಳು ನಲುಗಿ ಹೋಗಿವೆ. ಇಲ್ಲೊಬ್ಬ ವ್ಯಕ್ತಿ ಸಾಮಾಜಿಕ ಬಹಿಷ್ಕಾರದಿಂದ ಬೇಸತ್ತು ನೇಣಿಗೆ ಕೊರಳೊಡ್ಡಿದ್ದಾನೆ. ಅಷ್ಟಕ್ಕು ಅಲ್ಲಿ ಆಗಿದ್ದಾದರು ಏನು ಈ ಸ್ಟೋರಿ ನೋಡಿ..
ಚಾಮರಾಜನಗರ ಜಿಲ್ಲೆಯ ಹಲವೆಡೆ ಸಾಮಾಜಿಕ ಬಹಿಷ್ಕಾರದ ಪಿಡುಗು ಹತ್ತಾರು ಕುಟುಂಬಗಳನ್ನು ಬಾಧಿಸುತ್ತಿದೆ. ಈ ಅನಿಷ್ಟ ಪದ್ದತಿಗೆ ಇಲ್ಲೊಬ್ಬ ಬಲಿಯಾಗಿ ಹೋಗಿದ್ದಾನೆ. ಹೌದು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೋಕಿನ ಅಗರ ಗ್ರಾಮದ ರಂಗಸ್ವಾಮಿ ಸಾಮಾಜಿಕ ಬಹಿಷ್ಕಾರ ಹಾಗು ನೆರೆಹೊರೆಯವರ ಕಿರುಕುಳದಿಂದ ಬೇಸತ್ತು ನೇಣಿಗೆ ಶರಣಾಗಿದ್ದಾನೆ. ಮೂರು ವರ್ಷಗಳ ಹಿಂದೆ ಅಗರ ಗ್ರಾಮದ ಉಗ್ರಾಣ ಬೀದಿಗೆ ರಂಗಸ್ವಾಮಿ ಯಜಮಾನನಾಗಿದ್ದ.
ಈ ವೇಳೆ ಕುಲಕ್ಕೆ ಸಂಬಂಧಿಸಿದ 12 ಲಕ್ಷ ರೂಪಾಯಿಗಳನ್ನು ಈತ ವೈಯಕ್ತಿಕವಾಗಿ ಬಳಸಿಕೊಂಡಿದ್ದ. ಇದು ಗೊತ್ತಾದ ನಂತರ ಈತನನ್ನು ಯಜಮಾನ ಸ್ಥಾನದಿಂದ ಕೆಳಗಿಳಿಸಿದ ಗ್ರಾಮಸ್ಥರು 12 ಲಕ್ಷ ರೂಪಾಯಿ ಕಟ್ಟುವಂತೆ ತಾಖೀತು ಮಾಡಿದ್ದರು. ಆದರೆ ಗಾರೆ ಕೆಲಸ ಮಾಡಿಕೊಂಡಿದ್ದ ರಂಗಸ್ವಾಮಿ ಹಣ ಕಟ್ಟುವಲ್ಲಿ ವಿಫಲನಾಗಿದ್ದ. ಇದರಿಂದ ರಂಗಸ್ವಾಮಿ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹೇರಲಾಗಿತ್ತು. ಒಂದೆಡೆ ಸಾಲ ಇನ್ನೊಂದೆಡೆ ಬಹಿಷ್ಕಾರದಿಂದ ಬೇಸತ್ತು ರಂಗಸ್ವಾಮಿ ಆತ್ಮಹತ್ಯೆಯ ಹಾದಿ ಹಿಡಿದಿದ್ದಾನೆ
ಇದನ್ನೂ ಓದಿ: ದೇವರಾಜ ಅರಸು ದಾಖಲೆಯತ್ತ ಸಿಎಂ ಸಿದ್ದರಾಮಯ್ಯ
ರಂಗಸ್ವಾಮಿ ಅಷ್ಟೋ ಇಷ್ಟೋ ಸಂಪಾದಿಸಿ ಆರು ಲಕ್ಷ ರೂಪಾಯಿ ಹಣವನ್ನು ಕುಲಕ್ಕೆ ಹಿಂದಿರುಗಿಸಿದ್ದ. ಉಳಿದ 6 ಲಕ್ಷ ರೂಪಾಯಿಗಳನ್ನು ಮನೆ ಮೇಲೆ ಸಾಲ ಪಡೆದು ಕುಲದ ಹಣ ಹಿಂದಿರುಗಿಸಲು ಯೋಜಿಸಿದ್ದ. ಆದರೆ ಮನೆಗೆ ರಸ್ತೆ ಇಲ್ಲದ ಕಾರಣ ಬ್ಯಾಂಕ್ ಹಾಗು ಫೈನಾನ್ಸ್ ಕಂಪನಿಗಳು ಸಾಲ ಮಂಜೂರು ಮಾಡಲಿಲ್ಲ. ಮನೆಯ ಮುಂದಿನ ರಸ್ತೆ ಜಾಗವನ್ನು ನೆರೆಹೊರೆಯವರು ಒತ್ತುವರಿ ಮಾಡಿಕೊಂಡಿದ್ದರು. ಜಿಲ್ಲಾಡಳಿತಕ್ಕೆ ದೂರು ನೀಡಿದ ಮೇಲೆ ಒತ್ತುವರಿ ತೆರವು ಮಾಡಿದ್ದರು. ದೂರು ನೀಡಿದ್ದರಿಂದ ರಂಗಸ್ವಾಮಿ ಜೊತೆ ಆಗಾಗ್ಗೆ ಜಗಳ ತೆಗೆದು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇನ್ನೊಂದೆಡೆ ಕುಲದ ಹಣ ಹಿಂದಿರುಗಿಸಲು ಗ್ರಾಮಸ್ಥರ ಒತ್ತಡ ಹೆಚ್ಚಾಗಿತ್ತು. ಇದರಿಂದ ಬೇಸತ್ತ ಆತ ಡೆತ್ ನೋಟ್ ಬರೆದಿಟ್ಟು ಮರಕ್ಕೆ ನೇಣು ಬಿಗಿದು ಕೊಂಡು ಸಾವಿಗೆ ಶರಣಾಗಿದ್ದಾನೆ..
ಇದನ್ನೂ ಓದಿ:Karnataka News Live: ಮೇ.21ಕ್ಕೆ ಕರ್ನಾಟಕದಲ್ಲಿ ಮದ್ಯ ಮಾರಾಟ ಬಂದ್, ಮುಂದುವರಿದರೂ ಆಶ್ಚರ್ಯವಿಲ್ಲ
ಸಾಮಾಜಿಕ ಬಹಿಷ್ಕಾರದಿಂದ ರಂಗಸ್ವಾಮಿ ನಲುಗಿ ಹೋಗಿದ್ದ. ಕುಲದ ಹಣ ಹಿಂದಿರುಗಿಸಲು ಬ್ಯಾಂಕ್ ಗಳು ಸಹ ಮನೆ ಮೇಲೆ ಸಾಲ ನೀಡಲಿಲ್ಲ. ಇನ್ನು ಕುಲಸ್ಥರಿಗೆ ಮುಖ ತೋರಿಸುವುದಾದರು ಎಂಬ ಚಿಂತೆ ರಂಗಸ್ವಾಮಿಯನ್ನು ಸಾವಿನ ಮನೆಗೆ ನೂಕಿದೆ. ಒಟ್ಟಾರೆ ಸಾಮಾಜಿಕ ಬಹಿಷ್ಕಾರದ ಅನಿಷ್ಟ ಪದ್ದತಿಗೆ ಆತ ಬಲಿಯಾಗಿದ್ದಾನೆ..


