Asianet Suvarna News Asianet Suvarna News

ಇಂಥ ಗಂಡನ ಜೊತೆ ಏಗೋದು ಕಷ್ಟ!

ಮದುವೆಗೆ ಮುಂಚೆ ಪತಿ ಹೀಗೆಯೇ ಇರಬೇಕು ಎಂದು ಪ್ರತಿ ಹೆಣ್ಣು ಕನಸು ಕಾಣುತ್ತಾಳೆ.ಆದ್ರೆ ಮದುವೆ ಬಳಿಕ ಆ ಕನಸಿನ ವಾಸ್ತವತೆ ಅರ್ಥವಾಗುತ್ತೆ.ಅದ್ರಲ್ಲೂ ಗಂಡನ ಕೆಲವು ವರ್ತನೆಗಳು ಆಕೆಯ ನೆಮ್ಮದಿಯನ್ನೇ ಕೆಡಿಸಿಬಿಡುತ್ತವೆ.

These behaviours of husband wife don't like
Author
Bangalore, First Published Aug 15, 2020, 5:10 PM IST

ಇನ್ನೂ ಹಸೆಮಣೆಯೇರದ ಹುಡುಗೀರ ಬಳಿ ನಿನ್ನ ಕೈಹಿಡಿಯೋ ಹುಡ್ಗ ಹೇಗಿರಬೇಕು ಎಂದು ಕೇಳಿದ್ರೆ ಇಷ್ಟುದ್ದ ಪಟ್ಟಿ ನೀಡ್ತಾರೆ. ಅದ್ರಲ್ಲಿ ಏನೇನೋ ಬೇಡಿಕೆಗಳು,ಕನಸುಗಳು,ಆಸೆಗಳು ಇರುತ್ತವೆ. ಇದೊಂಥರ ಕೇಳೋಕೆ ಕಿವಿಗೆ ಇಂಪೆನ್ನಿಸುತ್ತೆ. ಆದ್ರೆ ಅದೇ ಮದುವೆಯಾದ ಹೆಣ್ಮಕ್ಕಳು ತಮ್ಮ ಕಷ್ಟ ಹೇಳೋಕೆ ಶುರು ಮಾಡಿದ್ರೆ ಇವರದ್ದೇನು ಗೋಳಪ್ಪ, ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಂಡು ಹೋಗಮ್ಮಾ ಅನ್ನೋ ಬಿಟ್ಟಿ ಸಲಹೆಗಳು ಸಿಗುತ್ತವೆ. ಹಾಗಂತ ಮದುವೆಯಾದ ಹೆಣ್ಮಕ್ಕಳು ತಮ್ಮ ಪತಿ ಮಹಾಶಯ ಈ ರೀತಿಯೇ ಇರಬೇಕು ಎಂದು ಬಯಸೋದ್ರಲ್ಲಿ ತಪ್ಪೇನೂ ಇಲ್ಲ. ಅದ್ರಲ್ಲೂ ಸಹಿಸಿಕೊಳ್ಳೋಕೆ ಅಸಾಧ್ಯವೆನಿಸೋ ಗಂಡಂದಿರ ಕೆಲವು ಅಭ್ಯಾಸಗಳ ಬಗ್ಗೆ ತುಟಿ ಬಿಚ್ಚದೆ ಸುಮ್ಮನಿರೋದು ಕಷ್ಟವೇ ಸರಿ. ಪತ್ನಿಯರ ನೆಮ್ಮದಿ ಕೆಡಿಸೋ, ಪಿತ್ತ ನೆತ್ತಿಗೇರಿಸೋ ಪತಿಮಹಾಶಯರ ಕೆಟ್ಟ ಚಾಳಿಗಳು ಯಾವುವು ಗೊತ್ತಾ?

ಎರಡು ವರ್ಷದ ಈ ಪುಟ್ಟ ಬಾಲೆಗೆ ಆನೆಯೇ ಬೆಸ್ಟ್ ಫ್ರೆಂಡ್..!

ಕೂತ ಜಾಗ ಬಿಟ್ಟು ಕದಲದಿರೋದು
ಕೈಯಲ್ಲಿ ಮೊಬೈಲ್ ಹಿಡಿದು ಅಥವಾ ಟಿವಿ ನೋಡುತ್ತ ಕುರ್ಚಿ ಅಥವಾ ಸೋಫಾಕ್ಕೆ ಅಂಟಿ ಕುಳಿತ ಪತಿಯಿಂದ ಪತ್ನಿ ಸಹಾಯ ನಿರೀಕ್ಷಿಸೋದು ಕನಸಿನ ಮಾತೇ ಸರಿ. ಕೆಲವರಂತೂ ಸಹಾಯ ಮಾಡೋದು ಬಿಡಿ, ಕರೆದ್ರೂ ಹೂಂಗುಟ್ಟೋದು ಕೂಡ ಇಲ್ಲ. ಬೆಳಗ್ಗೆಯ ಗಡಿಬಿಡಿ ಇರಲಿ, ಮಕ್ಕಳು ಕಣ್ಣೆದುರೇ ಕಿತ್ತಾಡುತ್ತಿರಲಿ, ಮನೆಯಲ್ಲಿ ವಿಶೇಷ ಕಾರ್ಯಕ್ರಮವಿರಲಿ ಇಂಥವರು ಮಾತ್ರ ಎಲ್ಲದಕ್ಕೂ ನಿರ್ಲಿಪ್ತರು. ತಮಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ಇದ್ದು ಬಿಡುತ್ತಾರೆ. ಇಂಥ ಗಂಡಸರನ್ನು ಕಟ್ಟಿಕೊಂಡವರ ಪಾಡು ದೇವರಿಗೇ ಪ್ರೀತಿ!

These behaviours of husband wife don't like

ಮಾತಿಗೆ ಪ್ರತ್ಯುತ್ತರ ನೀಡದಿರೋದು
ಅದೇನೋ ಮುಖ್ಯ ವಿಷಯವನ್ನು ಅರ್ಜೆಂಟಾಗಿ ಹೇಳಬೇಕಿರುತ್ತೆ, ಅಡುಗೆ ಮನೆಯಲ್ಲಿ ಬಿಜಿಯಾಗಿರೋ ಪತ್ನಿ ಅಲ್ಲಿಂದಲೇ ಪತಿಗೆ ಅದನ್ನು ತಿಳಿಸಲು ಕೂಗಿ ಕರೆದ್ರೂ ಈ ಕಡೆಯಿಂದ ಪತ್ಯುತ್ತರ ಬರಲ್ಲ. ಸ್ಟೌ ಮೇಲೆ ಹಾಲಿಟ್ಟು ಮಕ್ಕಳನ್ನು ಸ್ನಾನ ಮಾಡಿಸಲು ಹೋಗಿರೋ ಪತ್ನಿ ಬಾತ್‍ರೂಮ್‍ನಿಂದ ಕೂಗಿ ಹೇಳಿದ್ರೂ ಪತಿ ಮಾತ್ರ ಕಿವಿಗೆ ಹಾಕೊಳ್ಳೋದು ಇಲ್ಲ, ಸ್ಟೌವ್ ಆಫ್ ಮಾಡೋದೂ ಇಲ್ಲ. ಹಾಲು ತಳ ಹಿಡಿದ್ರೂ ಪತ್ನಿಯೇ ಬಂದು ನಿಲ್ಲಿಸಬೇಕು. ಈ ತರಹ ಬೇಜವಾಬ್ದಾರಿಯಿಂದ ನಡೆದುಕೊಳ್ಳೋ ಗಂಡನ ಜೊತೆ ಏಗೋದು ಕಷ್ಟ ಎಂಬುದು ಬಹುತೇಕ ಮಹಿಳೆಯರ ಅಭಿಪ್ರಾಯ. 

ಕೊಡಲಿಯಿಂದ ಕಾರಿನ ಕನ್ನಡಿ ಒಡೆದು ನಾಯಿ ರಕ್ಷಿಸಿದ..!

ಹೆಂಡ್ತಿಗೆ ಏನೂ ಗೊತ್ತಿಲ್ಲ ಎಂಬ ವರ್ತನೆ
ಹೆಂಡ್ತಿ ಮಾಡುವ ಪ್ರತಿ ಕೆಲಸದಲ್ಲೂ ತಪ್ಪು ಹುಡುಕೋದು, ಅದನ್ನು ಎತ್ತಿ ಆಡೋದು ಕೆಲವು ಗಂಡಂದಿರಿಗೆ ಅತ್ಯಂತ ಪ್ರಿಯವಾದ ಕೆಲ್ಸ. ಆಕೆಗೇನೂ ಗೊತ್ತಿಲ್ಲ, ಅವಳು ಯಾವುದನ್ನೂ ಸರಿಯಾಗಿ ಮಾಡಲ್ಲ ಎಂಬ ಅರ್ಥದಲ್ಲಿ ಸಂಬಂಧಿಕರ ಮುಂದೆಯೇ ಹೆಂಡ್ತಿ ಮಾನ ಹರಾಜು ಹಾಕೋರು ಇದ್ದಾರೆ. ಇಂಥ ಗಂಡನನ್ನು ಕಟ್ಟಿಕೊಂಡ ಹೆಂಡ್ತಿ ಪಾಡು ಕೇಳೋದೇ ಬೇಡ. ಗಂಡ ಈ ರೀತಿ ಮಾತು ಮಾತಿಗೂ ಹಂಗಿಸುತ್ತ ಇಲ್ಲವೆ ತಪ್ಪು ತೋರಿಸುತ್ತ ಇದ್ರೆ ಹೆಂಡ್ತಿ ಆತ್ಮವಿಶ್ವಾಸ ಕುಸಿಯೋದು ಸಹಜ. 

ಬೇರೆ ಹೆಂಗಸರ ಜೊತೆ ಹೋಲಿಕೆ
ಕೆಲವು ಗಂಡಸರಿಗೆ ತಮ್ಮ ಹೆಂಡ್ತಿಯನ್ನು ಬೇರೆ ಹೆಂಗಸರ ಜೊತೆ ಹೋಲಿಸಿ ನೋಡುವ ಕೆಟ್ಟ ಚಾಳಿಯಿರುತ್ತೆ. ನನ್ನ ಸ್ನೇಹಿತನ ಹೆಂಡ್ತಿ ಎಷ್ಟು ಚೆನ್ನಾಗಿ ಅಡುಗೆ ಮಾಡ್ತಾರೆ ಗೊತ್ತಾ, ನೀನು ಇದ್ದೀಯಾ, ನನ್ನ ತಂಗಿ ಎಷ್ಟು ಚೆನ್ನಾಗಿ ಡ್ರೆಸ್ ಮಾಡ್ಕೊಳ್ಳುತ್ತಾಳೆ, ಅವಳನ್ನು ನೋಡಿ ಕಲಿ. ಇಂಥ ಮಾತುಗಳು ಪದೇಪದೆ ಗಂಡನ ಬಾಯಿಯಿಂದ ಬರುತ್ತಿದ್ರೆ ಹೆಂಡ್ತಿಗೆ ಕೀಳರಿಮೆ ಬೆಳೆಯದೆ ಇರದು. ಪ್ರತಿ ಸಾರಿ ಅಡುಗೆ ಮಾಡುವಾಗ, ಡ್ರೆಸ್ ಮಾಡ್ಕೊಳ್ಳುವಾಗ ಅಥವಾ ಯಾವುದೇ ಕೆಲ್ಸ ಮಾಡೋವಾಗ ಗಂಡನನ್ನು ಮೆಚ್ಚಿಸಬೇಕು ಎಂಬ ಯೋಚನೆ ಆಕೆ ತಲೆಯಲ್ಲಿ ಕೂತಿರುತ್ತೆ. ಇದ್ರಿಂದ ಆಕೆ ಪ್ರತಿ ಕೆಲ್ಸಕ್ಕೂ ಅಗತ್ಯಕ್ಕಿಂತ ಹೆಚ್ಚಿನ ಮಹತ್ವ ನೀಡಲು ಪ್ರಯತ್ನಿಸುತ್ತಾಳೆ. ಕೊನೆಗೆ ಫಲಿತಾಂಶ ಚೆನ್ನಾಗಿ ಬಾರದಿದ್ರೆ ನಿರಾಸೆಗೆ ಒಳಗಾಗೋ ಸಾಧ್ಯತೆಯಿರುತ್ತೆ.

ಈ ರಾಶಿಯವರು ಮದುವೆಯಾದರೆ ಜಗಳವೇ ಗತಿ!

ವಿನಾಕಾರಣ ರೇಗೋದು
ಕೆಲವು ಗಂಡಸರಿಗೆ ರೇಗೋಕೆ ಕಾರಣವೇ ಬೇಕಿಲ್ಲ. ಹೆಂಡ್ತಿಗೆ ಬೈಯೋದು ಆಜನ್ಮ ಸಿದ್ಧ ಹಕ್ಕು ಎಂದು ಭಾವಿಸಿರುತ್ತಾರೆ. ಚಿಕ್ಕಪುಟ್ಟ ಕಾರಣಕ್ಕೂ ಹೆಂಡ್ತಿ ಮೇಲೆ ರೇಗುತ್ತಿರುತ್ತಾರೆ. ಇಂಥ ಗಂಡ ಖಂಡಿತವಾಗಲೂ ಹೆಂಡ್ತಿಗೆ ಇಷ್ಟವಾಗಲ್ಲ. 
 

Follow Us:
Download App:
  • android
  • ios