ಧೃತರಾಷ್ಟ್ರನ ಪುತ್ರ ವ್ಯಾಮೋಹ ನಿಮ್ಮಲ್ಲೂ ಇರಬಹುದು! ಚೆಕ್ ಮಾಡ್ಕೊಳ್ಳಿ
ಮಕ್ಕಳು ತಪ್ಪು ಮಾಡಿದಾಗ ಬೈದು, ಬುದ್ಧಿ ಹೇಳದೆ ಅವರನ್ನೇ ಸಮರ್ಥಿಸಿಕೊಳ್ಳುವ ಹೆತ್ತವರು ಎಂದಿಗೂ ಉತ್ತಮ ಪೋಷಕರಾಗಲು ಸಾಧ್ಯವಿಲ್ಲ. ಪೋಷಕರ ಇಂಥ ವರ್ತನೆ ಮಕ್ಕಳ ಭವಿಷ್ಯಕ್ಕೆ ಮಾರಕವಾಗಬಲ್ಲದು.
ಮಕ್ಕಳನ್ನು ಪ್ರೀತಿಸಬೇಕು, ಮುದ್ದಿಸಬೇಕು ನಿಜ. ಆದ್ರೆ ಆ ಪ್ರೀತಿ, ವಾತ್ಸಲ್ಯಕ್ಕೂ ಒಂದು ಲಕ್ಷ್ಮಣ ರೇಖೆ ಇರಲೇಬೇಕು. ಮಕ್ಕಳು ತಪ್ಪು ಮಾಡಿದಾಗ, ಅಡ್ಡ ದಾರಿ ಹಿಡಿದಾಗ ಪೋಷಕರು ಅದನ್ನು ಪ್ರೋತ್ಸಾಹಿಸಿದ್ರೆ, ಸಮರ್ಥಿಸಿಕೊಂಡ್ರೆ ಅದು ಖಂಡಿತಾ ಮಮತೆಯಲ್ಲ, ಕುರುಡು ಪ್ರೇಮವಷ್ಟೆ. ಪುತ್ರ ವ್ಯಾಮೋಹದಲ್ಲಿ ಪೋಷಕರ ಕಣ್ಣು ಕುರುಡಾದ್ರೆ ಅದು ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತೆ ಎಂಬುದಕ್ಕೆ ಮಹಾಭಾರತಕ್ಕಿಂತ ದೊಡ್ಡ ನಿದರ್ಶನ ಬೇರೆಯಿಲ್ಲ. ಹೌದು, ದುರ್ಯೋಧನ ಸೇರಿದಂತೆ ತನ್ನ 100 ಪುತ್ರರು ಏನೇ ತಪ್ಪು ಮಾಡಿದ್ರೂ ಅತಿಯಾದ ಪುತ್ರ ವಾತ್ಸಲ್ಯದ ಕಾರಣಕ್ಕೆ ಅದನ್ನು ಸರಿಯೆಂದೇ ವಾದಿಸಿದ, ಸಮರ್ಥಿಸಿಕೊಂಡ ಧೃತರಾಷ್ಟ್ರನ ಕುರುಡು ಪ್ರೇಮವೇ ಕೌರವರು ತಪ್ಪು ದಾರಿ ಹಿಡಿಯಲು ಮೂಲವಾಯಿತು. ಒಂದರ್ಥದಲ್ಲಿ ಮಕ್ಕಳ ಸರ್ವನಾಶಕ್ಕೆ ತಂದೆಯೇ ಷರಾ ಬರೆದಂತಾಯಿತು. ಮಕ್ಕಳ ಮೇಲೆ ಪೋಷಕರು ತೋರುವ ಇಂಥ ಅತಿಯಾದ ಪ್ರೇಮ ಕೂಡ ಟಾಕ್ಸಿಕ್ ಪೇರೇಟಿಂಗ್‍ನ ಒಂದು ಭಾಗ. ಅತಿಯಾದ್ರೆ ಅಮೃತವೂ ವಿಷಯೆಂಬಂತೆ ಪ್ರೀತಿ ಅಥವಾ ವಾತ್ಸಲ್ಯ ಎಲ್ಲೆಮೀರಿದ್ರೆ ಮಕ್ಕಳ ಭವಿಷ್ಯಕ್ಕೆ ಮುಳ್ಳಾಗೋದ್ರಲ್ಲಿ ಅನುಮಾನವೇ ಇಲ್ಲ.
ಗಂಡ, ಮಕ್ಕಳನ್ನು ನೋಡದೆ ಒಂದು ತಿಂಗಳು, ಇದು ನರ್ಸ್‌ಗಳ ಕತೆ!
ಮಕ್ಕಳು ತಪ್ಪು ಮಾಡಿದಾಗ ಸಮರ್ಥಿಸಿಕೊಳ್ಳಬೇಡಿ
ಮಕ್ಕಳು ತಪ್ಪು ಮಾಡೋದು ಸಹಜ. ಆದ್ರೆ ಅದನ್ನು ತಿದ್ದಿ ಬುದ್ಧಿ ಹೇಳೋದು ದೊಡ್ಡವರ ಕೆಲ್ಸ. ಆ ಹೊಣೆಗಾರಿಕೆಯನ್ನು ಪೋಷಕರು ಸಮರ್ಥವಾಗಿ ನಿಭಾಯಿಸಿದಾಗ ಮಾತ್ರ ಮಕ್ಕಳು ಸರಿಯಾದ ಮಾರ್ಗದಲ್ಲಿ ಸಾಗುತ್ತಾರೆ. ಆದ್ರೆ ಕೆಲವು ಪೋಷಕರಿಗೆ ತಮ್ಮ ಮಕ್ಕಳು ಮಾಡಿದ್ದೆಲ್ಲ ಸರಿ ಎಂಬ ಭಾವನೆಯಿರುತ್ತೆ. ಮಕ್ಕಳ ಮೇಲೆ ಪ್ರೀತಿ ತೋರೋದು ತಪ್ಪಲ್ಲ, ಆದ್ರೆ ತಪ್ಪು ಮಾಡಿದಾಗಲೂ ಅವರ ಮೇಲೆ ಕನಿಕರ ತೋರಿದ್ರೆ ಮುಂದೆ ಪಶ್ಚತ್ತಾಪ ಪಡಬೇಕಾಗುತ್ತೆ. ಆದಕಾರಣ ತಪ್ಪು ಮಾಡಿದಾಗ ನೀನು ಮಾಡಿರೋದು ತಪ್ಪು ಎಂದು ನೇರವಾಗಿ ತಿಳಿಸಿ. ನಿನ್ನ ವರ್ತನೆ ಸರಿಯಿಲ್ಲ, ನನಗೆ ಇಷ್ಟವಾಗಿಲ್ಲ ಎಂದೇ ಹೇಳಿ. ಇಂಥ ವರ್ತನೆಯಿಂದ ಬೇರೆಯವರಿಗೆ ಎದುರಾಗುವ ತೊಂದರೆ ಬಗ್ಗೆ ಮನವರಿಕೆ ಮಾಡಿಸಿ. ತಪ್ಪು ಮಾಡಿದಾಗ ಸಾರಿ ಕೇಳಲು ಮರೆಯದೆ ಕಲಿಸಿ.
ಮಕ್ಕಳ ಮುಂದೆಯೇ ಅವರನ್ನು ಅತಿಯಾಗಿ ಹೊಗಳಬೇಡಿ
ಕೆಲವು ಪೋಷಕರಿಗೊಂದು ಕೆಟ್ಟ ಚಟವಿರುತ್ತೆ. ಅದೇನೆಂದ್ರೆ ಇನ್ನೊಬ್ಬರ ಮುಂದೆ ತಮ್ಮ ಮಕ್ಕಳ ಗುಣಗಾನ ಮಾಡೋದು. ಅದೂ ಮಕ್ಕಳ ಮುಂದೆಯೇ. ಇದು ಸಹಜವಾಗಿಯೇ ಮಕ್ಕಳಲ್ಲಿ ಅಹಂ ಭಾವನೆ ಬೆಳೆಯುವಂತೆ ಮಾಡುತ್ತೆ. ನಾನು ಮಾಡಿದ್ದೆಲ್ಲವೂ ಸರಿ ಎಂಬ ಭಾವನೆ ಮಗುವಿನ ಮನಸ್ಸಿನಲ್ಲಿ ಬೇರೂರಲು ಇದೂ ಒಂದು ಕಾರಣ.
ಸೆಕ್ಸ್‌ನಲ್ಲೂ ಆತ್ಮನಿರ್ಭರತೆ ಸಾಧಿಸಿದವರು!
ಕೇಳಿದ್ದನ್ನೆಲ್ಲ ತಂದು ಕೊಡುವ ಅಭ್ಯಾಸ ಬಿಡಿ
ಮಗು ಏನಾದರೊಂದು ವಸ್ತುವಿನ ಹೆಸರು ಹೇಳಿದ್ರೆ ಸಾಕು, ಮರುಕ್ಷಣವೇ ಅದನ್ನು ಖರೀದಿಸಿ ತಂದು ಮಗುವಿನ ಮುಂದಿಡೋದು ಇಂದಿನ ಪೋಷಕರ ಅಭ್ಯಾಸ. ನಮ್ಮ ಮಗುವಿಗೆ ಯಾವುದೇ ಕೊರತೆಯಾಗಬಾರದು ಎಂಬ ಅತಿಯಾದ ಕಾಳಜಿಯಿಂದ ಮಕ್ಕಳಿಗೆ ವಸ್ತುವಿನ ಮೌಲ್ಯದ ಅರಿವಾಗೋದಿಲ್ಲ. ಆದ್ರಿಂದ ಮಕ್ಕಳು ಹಟ ಮಾಡಿದ ತಕ್ಷಣ ಅಥವಾ ಅಳಲು ಪ್ರಾರಂಭಿಸಿದ ಕೂಡಲೇ ಕೇಳಿದ್ದನ್ನೆಲ್ಲ ಕೊಡಿಸುವ ಅಭ್ಯಾಸವನ್ನು ಪೋಷಕರು ಬಿಡಬೇಕು. ಇಲ್ಲವಾದ್ರೆ ಮಕ್ಕಳು ದೊಡ್ಡವರಾದ ಬಳಿಕವೂ ನೋಡಿದ, ಕೇಳಿದ ವಸ್ತುಗಳೆಲ್ಲ ತನ್ನದಾಗಬೇಕು ಎಂಬ ಹಟ ಬೆಳೆಸಿಕೊಳ್ಳುವ ಅಪಾಯವಿದೆ.
ಪ್ರತಿ ಕೆಲಸದಲ್ಲೂ ನೆರವು ನೀಡೋದು ಒಳ್ಳೆಯದ್ದಲ್ಲ
ಮಕ್ಕಳು ಏನಾದ್ರೂ ಕೆಲ್ಸ ಮಾಡುತಿದ್ರೆ ಅವರಿಗೆ ಕಷ್ಟವಾಗುತ್ತೆ ಎಂಬ ಕಾರಣಕ್ಕೆ ನೆರವು ನೀಡಲು ಹೋಗುವ ಪೋಷಕರ ಸಂಖ್ಯೆ ಕಡಿಮೆಯೇನಿಲ್ಲ. ಊಟ, ತಿಂಡಿಯಿಂದ ಹಿಡಿದು ಶೂ ಲೇಸ್ ಕಟ್ಟೋದು, ಹೋಂವರ್ಕ್ ಮಾಡಿ ಕೊಡೋದು ಹೀಗೆ ಮಕ್ಕಳ ಪ್ರತಿ ಕೆಲಸಕ್ಕೂ ನೆರವು ನೀಡೋದ್ರಿಂದ ಮಕ್ಕಳಿಗೆ ಸ್ವತಂತ್ರವಾಗಿ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಾಗದೆ ಹೋಗಬಹುದು. ಅವರು ಪ್ರತಿ ಕೆಲಸಕ್ಕೂ ಇನ್ನೊಬ್ಬರ ನೆರವು ಬಯಸುವ ಸಾಧ್ಯತೆಯಿದೆ. ಆದಕಾರಣ ಮಕ್ಕಳಿಗೆ ಬಾಲ್ಯದಲ್ಲೇ ಸ್ವಾವಲಂಬನೆಯ ಪಾಠ ಕಲಿಸೋದು ಅಗತ್ಯ.
ಸಂಬಂಧ ಕೆಡಿಸುವ ಫುಬ್ಬಿಂಗ್ ಎಂಬ ಹೊಸ ಚಟ
ಕಷ್ಟ ಪಟ್ರೇನೆ ಸುಖ ಅನ್ನೋದನ್ನು ಮನವರಿಕೆ ಮಾಡಿಸಿ
ಕಷ್ಟ ಪಟ್ರೆ ಮಾತ್ರ ಸುಖ ಸಿಗುತ್ತೆ ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಸೋದು ಅಗತ್ಯ. ಯಶಸ್ಸು ಸಾಧಿಸಲು ಶ್ರಮ ವಹಿಸಿ ಕೆಲಸ ಮಾಡಲೇಬೇಕು ಎಂಬುದನ್ನು ಮಕ್ಕಳಿಗೆ ತಿಳಿಸಿ ಕೊಟ್ರೆ ಅವರು ಕಷ್ಟಗಳಿಗೆ ಅಂಜೋದಿಲ್ಲ. ಮೈಗಳ್ಳತನ ಮಾಡೋದು ಅಥವಾ ಸುಖದ ಬದುಕಿಗಾಗಿ ಅಡ್ಡದಾರಿ ಹಿಡಿಯೋದಿಲ್ಲ.