17 ವರ್ಷದ ನೇಹಾಗೆ ಈ ಬಾರಿ ಹುಟ್ಟುಹಬ್ಬಕ್ಕೆ ಅಪ್ಪ ಫೋನ್ ಕೊಡಿಸಿದ್ದೇ ಒಂದು ನೆಪ. ವಾರವೊಂದರಲ್ಲೇ ಆಕೆಗೆ ಫೋನೇ ಪ್ರಪಂಚವಾಗಿ ಹೋಯಿತು. ಕುಳಿತಾಗ, ನಿಂತಾಗ, ಊಟ ಮಾಡುವಾಗ, ಹೊರ ಹೋಗುವಾಗ, ಕಡೆಗೆ ಟಾಯ್ಲೆಟ್‌‌ಗೆ ಹೋಗುವಾಗಲೂ ಫೋನ್ ಬೇಕೇ ಬೇಕು. ಮುಂಚೆಯಂತೆ ಪುಸ್ತಕ ಓದುವುದು ಮರೆತು ಹೋಯಿತು, ಹಾಡು ಕೇಳುವುದು, ಗೆಳತಿಯರೊಟ್ಟಿಗೆ ಸುತ್ತುವುದು, ಕುಟುಂಬದೊಂದಿಗೆ ಮಾತನಾಡುವುದು, ಅವಳಿಷ್ಟದ ಕ್ರಾಫ್ಟ್ ಮಾಡುವುದು ಎಲ್ಲವೂ ಬಂದ್. ಕೇವಲ ಫೋನ್ ಫೋನ್ ಫೋನ್. ಅದೇನು ನೋಡುತ್ತಾಳೋ, ಚಾಟ್ ಮಾಡುತ್ತಾಳೋ- ದೇವರಿಗೇ ಗೊತ್ತು. ಇಂಥ ಬದಲಾವಣೆಗಳೆಲ್ಲ ತಾಯಿಯ ಕಣ್ಣು ತಪ್ಪಿಸಲು ಸಾಧ್ಯವಿಲ್ಲ. ಹಾಗೆಯೇ ನೇಹಾಳ ತಾಯಿಗೂ ಮಗಳಲ್ಲಾಗಿರುವ ಬದಲಾವಣೆ ಚಿಂತೆಗೆ ಹಚ್ಚಿಸಿತು. ಅವಳು ಫೋನ್‌ನೊಳಗೆ ಮುಳುಗಿ ಮಾತುಗಳನ್ನು ಕೇಳಿಸಿಕೊಳ್ಳದಿದ್ದಾಗ ಸಿಟ್ಟು ನೆತ್ತಿಗೇರಲು ಆರಂಭಿಸಿತು. ಆಕೆ ಮಗಳ ಮೇಲೆ ರೇಗಾಡತೊಡಗಿದಳು. ಸಾಮಾನ್ಯವಾಗಿ ತಂದೆತಾಯಿಗೆ ತಿರುಗಿ ಹೇಳದ ನೇಹಾ ಈಗೀಗ ಮರುಉತ್ತರ ಕೊಡತೊಡಗಿದಳು. ಅದನ್ನು ನೋಡಿ ತಂದೆಯೂ ಬೈಯ್ಯಲು ಬಂದರೆ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು ಕೂರುವಳು. ಇವನ್ನೆಲ್ಲ ನೋಡಿದ ಪೋಷಕರ ಎದುರು ಎರಡೇ ಆಯ್ಕೆ ಉಳಿದಿದ್ದು- ಒಂದು ಫೋನನ್ನು ಕಿತ್ತುಕೊಳ್ಳುವುದು, ಇನ್ನೊಂದು ಆಕೆಯ ಈ ವರ್ತನೆಯನ್ನು ಒಪ್ಪಿಕೊಂಡು ಕಂಡರೂ ಕಾಣದಂತಿರುವುದು. ಇವೆರಡೂ ತಮ್ಮಿಂದ ಸಾಧ್ಯವಿಲ್ಲವೆಂಬ ಅಸಹಾಯಕತೆಯೇ ನೇಹಾಳ ಪೋಷಕರ ಚಿಂತೆಯನ್ನು ದಿನದಿಂದ ದಿನಕ್ಕೆ ಹೆಚ್ಚಿಸತೊಡಗಿತು. 

ಫೇಮಸ್ ನಟನ ಪತ್ನಿ ಎಂದ್ಮೇಲೆ ಸುಖಿ ಎಂದು ಕೊಂಡರದು ತಪ್ಪು...

ಫುಬ್ಬಿಂಗ್
ನೇಹಾಳ ವರ್ತನೆ ನಿಮಗೆ ನಿಮ್ಮ ಸುತ್ತಮುತ್ತಲಿನ ಕೆಲವರನ್ನು ನೆನಪಿಸಿದರೆ, ಅಥವಾ ನಿಮ್ಮದೇ ಮನೆಯ ಪಾಡಾಗಿದ್ದರೆ, ಅದು ತಪ್ಪಲ್ಲ. ಏಕೆಂದರೆ ಈ ಚಟ ಏರುಗತಿಯಲ್ಲಿ ಬೆಳೆಯುತ್ತಲೇ ಇದೆ. ನೇಹಾಳ ಈ ಚಟದ ಹೆಸರೇ ಫುಬ್ಬಿಂಗ್. ಫೋನ್ ಮತ್ತು ಸ್ನಬ್ಬಿಂಗ್‌ನ ಸೇರಿಸಿ ಹೊಲಿದು ಹುಟ್ಟಿಸಿದ ಪದ ಫುಬ್ಬಿಂಗ್. ಅಂದರೆ, ಸುತ್ತಮುತ್ತ ಏನಾಗುತ್ತಿದೆ, ಯಾರಿದ್ದಾರೆ ಎಂಬ ಅರಿವಿಲ್ಲದಂತೆ ಸದಾ ಕಾಲ ಫೋನ್‌ಗೆ ಅಂಟಿಕೊಂಡಿರುವ ಗೀಳಿನ ಹೆಸರು. 

ಇಷ್ಟೊಂದು ಸ್ಮಾರ್ಟ್‌ಫೋನ್‌ಗೆ ಅಂಟಿಕೊಳ್ಳುವ ಚಟ ಬಹಳ ಕೆಟ್ಟದ್ದು. ಇಂಥ ವರ್ತನೆಯು ವ್ಯಕ್ತಿಯನ್ನು ಸಮಾಜದಿಂದ ಹೊರಗಿರಿಸಿ, ಏಕಾಂಗಿಯಾಗಿಸುತ್ತದೆ. ಅಷ್ಟೇ ಅಲ್ಲ, ಅವರ ಜೊತೆಗಿರುವವರೂ ಕೂಡಾ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಬೇಸರದಿಂದ ಬಳಲುತ್ತಾರೆ. ಓದಿನಲ್ಲಿ, ಉದ್ಯೋಗದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಫುಬ್ಬಿಂಗ್ ಸಮಸ್ಯೆಗಾಗಿ ಈಗೀಗ ಪೋಷಕರು ಮನೋತಜ್ಞರ ಮೊರೆ ಹೋಗುವುದು ಸಾಮಾನ್ಯವಾಗಿದೆ. ಹಾಗೆಯೇ ವಿವಾಹತ ಜೋಡಿಗಳಲ್ಲಿ ಕೂಡಾ  ತಮ್ಮ ಸಂಗಾತಿಯ ಇಂಥ ವರ್ತನೆಯಿಂದ ಜಗಳ ಕದನಗಳು ಹೆಚ್ಚಿದ್ದು ವಿಚ್ಛೇದನಕ್ಕೆ ದಾರಿ ಮಾಡಿಕೊಡುತ್ತಿರುವುದೂ ಇದೆ. ಕೇಳಿಸಿಕೊಳ್ಳುವ, ಪ್ರತಿಕ್ರಿಯಿಸುವ ಅಭ್ಯಾಸವನ್ನು ಫುಬ್ಬಿಂಗ್ ಹಾಳು ಮಾಡುತ್ತಿದೆ. ಈಗೀಗ ಹಿರಿಯ ವಯಸ್ಕರು ಕೂಡಾ ಏಕಾಂಗಿತನದ ಕಾರಣದಿಂದಲೋ, ಫೋನ್ ಬಳಸಲು ಕಲಿತ ಖುಷಿಗೋ ಫುಬ್ಬಿಂಗ್ ಗೀಳಿಗೆ ಅಂಟಿಕೊಳ್ಳುತ್ತಿದ್ದಾರೆ. 

ವೈವಾಹಿಕ ಜೀವನ ಬೋರಿಂಗ್ ಎನ್ನುವವರಿಗೆ...

ತಡೆಯುವುದು ಹೇಗೆ?
ಯಾವುದೇ ಒಂದು ಸಮಸ್ಯೆಯನ್ನು ಹೋಗಿಸಬೇಕು ಎಂದರೆ ಅದರ ಮೊದಲ ಹಂತ- ಸಮಸ್ಯೆ ಇರುವ ಬಗ್ಗೆ ಸಂಬಂಧಿಸಿದವರಿಗೆ ಅರ್ಥ ಮಾಡಿಸುವುದು. ನಿಮ್ಮ ಹತ್ತಿರದವರಿಗೆ ಈ ಸಮಸ್ಯೆ ಇದ್ದರೆ ಈ ಬಗ್ಗೆ ರೇಗಾಡುವ ಬದಲು, ನಿಧಾನವಾಗಿ ಮಾತನಾಡಿ ಅವರಿಗೆ ಗೀಳಿಗೆ ಅಂಟಿಕೊಂಡಿರುವ ಬಗ್ಗೆ ತಿಳಿ ಹೇಳಿ. ಒಮ್ಮೆ ಅಲ್ಲಿ ಸಮಸ್ಯೆ ಇದೆ ಎಂಬುದು ಅರಿವಾದರೆ ಅದನ್ನು ಪರಿಹರಿಸಿಕೊಳ್ಳುವತ್ತ ಗಮನ ಹೋಗುತ್ತದೆ. 

- ಈಗ ಫೋನ್‌ನಲ್ಲಿ ಯಾವೆಲ್ಲ ಆ್ಯಪನ್ನು ಹೆಚ್ಚು ಬಳಸುತ್ತಿದ್ದೀರೆಂಬ ಕಡೆ ಗಮನ ಹರಿಸಿ. ಅವುಗಳಲ್ಲಿ ಯಾವುದು ನಿಜವಾಗಿಯೂ ಅಗತ್ಯ ಎಂಬುದನ್ನು ಯೋಚಿಸಿ. ಅಗತ್ಯವಿಲ್ಲದೆ, ಕೇವಲ ಸಮಯ ಹಾಳು ಮಾಡುವುದಕ್ಕಾಗಿಯೇ ಇರುವ ಆ್ಯಪ್‌ಗಳನ್ನು ಮೊದಲು ಅನ್‌ಇನ್ಸ್ಟಾಲ್ ಮಾಡಿ. 

- ಊಟಕ್ಕೆ ಹೋಗುವಾಗ, ಟಾಯ್ಲೆಟ್‌ಗೆ ಹೋಗುವಾಗ, ಮನೆಯ ಸದಸ್ಯರೆಲ್ಲರೂ ಇರುವಲ್ಲಿಗೆ ಫೋನ್ ತೆಗೆದುಕೊಂಡು ಹೋಗುವುದಿಲ್ಲ ಎಂಬ ಮಿತಿಯನ್ನು ಹಾಕಿಕೊಳ್ಳಿ. 

- ಫೋನನ್ನು ಎಲ್ಲಾದರೂ ಬಿಟ್ಟು ಹೋಗುವುದು ನಿಮಗೆ ನಿಮ್ಮ ದೇಹದ ಭಾಗವೊಂದನ್ನು ಕಿತ್ತಿಟ್ಟಂತೆನಿಸಿದರೂ ಪರವಾಗಿಲ್ಲ, ಅದನ್ನು ಬೇಕಂತಲೇ ಎಲ್ಲಾದರೂ ಬಿಟ್ಟು ಹೋಗಿ ಗಂಟೆಗಳ ಕಾಲ ಕಳೆಯುವುದನ್ನು ಟಾಸ್ಕ್‌ನಂತೆ ಮಾಡಿ. ಈ ಸಂದರ್ಭದಲ್ಲಿ ನಿಮ್ಮ ಇತರೆ ಹವ್ಯಾಸಗಳಿಗೆ ಸಮಯ ಕೊಡಿ. 

- ಏನೇ ಮಾಡಿದರೂ ಗೀಳಿನಿಂದ ಹೊರ ಬರಲಾಗುತ್ತಿಲ್ಲವೆಂದರೆ ನಿಸ್ಸಂಕೋಚವಾಗಿ ಮನೋತಜ್ಞರ ಸಹಾಯ ಪಡೆಯಿರಿ.