ಉತ್ತರ ಪ್ರದೇಶದ 28 ವರ್ಷದ ಸ್ನಾತಕೋತ್ತರ ಪದವೀಧರೆ ಪಿಂಕಿ ಶರ್ಮಾ, ತನ್ನ ಆರಾಧ್ಯ ದೈವ ಶ್ರೀಕೃಷ್ಣನ ಪ್ರತಿಮೆಯನ್ನೇ ಸಾಂಪ್ರದಾಯಿಕವಾಗಿ ವಿವಾಹವಾಗಿದ್ದಾರೆ. ಕುಟುಂಬಸ್ಥರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಈ ವಿಶಿಷ್ಟ ಮದುವೆ ನಡೆದಿದೆ.
ಹಿಂದುಗಳ ಆರಾಧ್ಯ ದೈವ ಭಗವಾನ್ ಶ್ರೀಕೃಷ್ಣನ ಮೇಲೆ ಹೆಣ್ಮಕ್ಕಳಿಗಿರುವ ಪ್ರೀತಿ ಅನಾದಿ ಕಾಲದಿಂದಲೂ ಸಾಬೀತಾಗಿದೆ. ಶ್ರೀಕೃಷ್ಣನ ದೈವಭಕ್ತೆ ಮೀರಾಬಾಯಿಯಿಂದ ಹಿಡಿದು ಕೃಷ್ಣನನ್ನೇ ಗಂಡನೆಂದು ವರಿಸಿದ ಅನೇಕ ಸ್ತ್ರಿಯರಿದ್ದಾರೆ. ಶ್ರೀಕೃಷ್ಣ ಇಂದಿಗೂ ಅನೇಕ ಹೆಂಗೆಳೆಯರ ಪಾಲಿಗೆ ಮುದ್ದು ಮಗು, ತುಂಟಾಟವಾಡುವ ಗೆಳೆಯ, ಪ್ರಿಯಕರ. ಮನುಷ್ಯರಂತೆ ಎಲ್ಲಾ ಕಷ್ಟಸುಖಗಳನ್ನು ಅನುಭವಿಸಿಕೊಂಡು ಸ್ತ್ರೀಲೋಲ, ಜಾರ, ಚೋರ ಎಂದೆಲ್ಲಾ ಕರೆಸಿಕೊಂಡಿರುವ ಶ್ರೀಕೃಷ್ಣನ ಮೇಲೆ ಆತನ ಭಕ್ತರಿಗೆ ಇರುವ ಪ್ರೀತಿ ಎಂದಿಗೂ ಕಡಿಮೆ ಆಗುವುದೇ ಇಲ್ಲ... ಹಾಗೆಯೇ ಈ ಕಲಿಯುಗದಲ್ಲೂ ಅದ್ದೂರಿ ಸಮಾರಂಭವೊಂದರಲ್ಲಿ ಯುವತಿಯೊಬ್ಬಳು ಶ್ರೀಕೃಷ್ಣನ ಪ್ರತಿಮೆಯನ್ನೇ ಮದುವೆಯಾಗಿದ್ದಾಳೆ.
ಮನುಷ್ಯಳಾಗಿ ಹುಟ್ಟಿದ್ದವಳೊಬ್ಬಳು ದೇವರನ್ನು ಮದುವೆಯಾದಂತಹ ಈ ವಿಚಿತ್ರ ಘಟನೆ ನಡೆದಿರುವುದು ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ. ಈ ವಿಚಾರವೀಗ ಬಹಳ ಚರ್ಚೆಗೆ ಗ್ರಾಸವಾಗಿದೆ. 28 ವರ್ಷದ ಪಿಂಕಿ ಶರ್ಮಾ ಸಂಪ್ರದಾಯಿಕ ಹಿಂದೂ ಸಂಪ್ರದಾಯದಲ್ಲಿ ಭಗವಂತ ಶ್ರೀಕೃಷ್ಣ ಪ್ರತಿಮೆಯನ್ನೇ ವರಿಸಿದ್ದಾಳೆ. ಸ್ನಾತಕೋತ್ತರ ಪದವೀಧರೆಯಾಗಿರುವ ಪಿಂಕಿಶರ್ಮಾ ಅವರು ಶ್ರೀಕೃಷ್ಣನ ದೈವಭಕ್ತೆಯಾಗಿದ್ದು, ಜೀವನದುದ್ದಕ್ಕೂ ಶ್ರೀಕೃಷ್ಣನ ಭಕ್ತೆಯಾಗಿ ಕಳೆಯಲು ಬಯಸಿದ್ದು, ಶನಿವಾರ ಅವರು ಸಂಪ್ರದಾಯಿಕ ಮದುವೆ ಸಮಾರಂಭದಲ್ಲಿ ತನ್ನ ನೆಚ್ಚಿನ ಶ್ರೀಕೃಷ್ಣನ ಪ್ರತಿಮೆಯನ್ನು ಮದುವೆಯಾಗಿದ್ದಾಳೆ. ಆಕೆಯ ಕುಟುಂಬದವರು, ಸಂಬಂಧಿಕರು ಮತ್ತು ಗ್ರಾಮಸ್ಥರು ಸಾಂಪ್ರದಾಯಿಕ ವಿವಾಹದಂತೆಯೇ ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಇಸ್ಲಾಂನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬೈಯೂರ್ ಕಾಸಿಮಾಬಾದ್ ಗ್ರಾಮದಲ್ಲಿ ನಡೆದ ಈ ವಿಶಿಷ್ಟ ಮದುವೆ ಸಮಾರಂಭವು ಈಗ ದೇಶದೆಲ್ಲೆಡೆ ಸಾಕಷ್ಟು ಗಮನ ಸೆಳೆಯುತ್ತಿದೆ.
ದೈವಿಕ ವರನೊಂದಿಗೆ ಸಾಂಪ್ರದಾಯಿಕ ವಿವಾಹ
ಈ ಮದುವೆಗಾಗಿ ಪಿಂಕಿಯ ಮನೆಯನ್ನು ತುಂಬಾ ಸೊಗಸಾಗಿ ಅಲಂಕರಿಸಲಾಗಿತ್ತು. ವಿವಾಹ ಮಂಟಪವನ್ನು ಸ್ಥಾಪಿಸಲಾಗಿತ್ತು ಮತ್ತು ಅವರ ಸೋದರ ಮಾವ ಇಂದ್ರೇಶ್ ಕುಮಾರ್ ವರನಂತೆ ಅಲಂಕರಿಸಲ್ಪಟ್ಟ ಶ್ರೀಕೃಷ್ಣನ ವಿಗ್ರಹವನ್ನು ಹೊತ್ತು ಕಾರಿನಲ್ಲಿ ದಿಬ್ಬಣ ಬಂದರು. ಸುಮಾರು 125 ಜನರು ಈ ದಿಬ್ಬಣದಲ್ಲಿ ವಿವಾಹ ಸ್ಥಳಕ್ಕೆ ಆಗಮಿಸಿದಾಗ ಅವರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯ್ತು.
ನಂತರ ಪಿಂಕಿ ಮುದ್ದಾಗಿ ವರನಂತೆ ಸಿಂಗರಿಸಿದ್ದ ಶ್ರೀಕೃಷ್ಣನ ಪ್ರತಿಮೆಯನ್ನು ತೋಳುಗಳಲ್ಲಿ ಎತ್ತಿಕೊಂಡು ಮದುವೆಯ ವಿವಿಧ ಸಂಪ್ರದಾಯಗಳನ್ನು ಪೂರೈಸುವುದಕ್ಕಾಗಿ ವೇದಿಕೆ ಮೇಲೇರಿದರು. ಸಿಂಧುರ ಹಾಕುವ ಕಾರ್ಯಕ್ರಮದ ನಂತರ ಶ್ರೀಕೃಷ್ಣನ ಪ್ರತಿಮೆಯ ಜೊತೆಗೆ ಆಕೆ ಹಾರಗಳನ್ನು ಬದಲಾಯಿಸಿಕೊಂಡಳು. ವೃಂದಾವನದಿಂದ ಬಂದಿದ್ದ ಕಲಾವಿದರು ಈ ಮದುವೆ ಸಮಾರಂಭದಲ್ಲಿ ಧಾರ್ಮಿಕ ಹಾಡುಗಳಿಗೆ ನೃತ್ಯ ಮಾಡಿದರು. ಹಾಗೂ ಮದುವೆ ಸಮಾರಂಭದ ಭಾಗವಾಗಿ ಇಡೀ ಗ್ರಾಮಕ್ಕೆ ಔತಣಕೂಟವನ್ನು ಏರ್ಪಡಿಸಲಾಗಿತ್ತು. ಮದುವೆ ಸಮಾರಂಭದಲ್ಲಿ ವಧು ಪಿಂಕಿ ವರ ಶ್ರೀಕೃಷ್ಣನ ವಿಗ್ರಹವನ್ನು ಹೊತ್ತುಕೊಂಡು ಪವಿತ್ರ ಬೆಂಕಿಗೆ ಏಳು ಸುತ್ತುಗಳನ್ನು ಬಂದರು. ನಂತರ ವಧುವಿನ ವಿದಾಯ ಸಮಾರಂಭವು ಮರುದಿನ ಬೆಳಗ್ಗೆ ನಡೆಯಿತು. ಮದುವೆಯ ನಂತರ ವಧು ತನ್ನ ಪೋಷಕರ ಮನೆಯಲ್ಲಿ ವಾಸಿಸುತ್ತಾಳೆ.
ಇದನ್ನೂ ಓದಿ: ಧಾರ್ಮಿಕ ಕಾರಣಕ್ಕೆ ದೇಗುಲ ಪ್ರವೇಶಿಸುವುದಿಲ್ಲ ಎಂದ ಕ್ರಿಶ್ಚಿಯನ್ ಮಿಲಿಟರಿ ಅಧಿಕಾರಿಯ ಅಮಾನತು ಎತ್ತಿ ಹಿಡಿದ ಸುಪ್ರೀಂಕೋರ್ಟ್
ಪಿಂಕಿಗೆ ಬಾಲ್ಯದಿಂದಲೂ ಶ್ರೀಕೃಷ್ಣನ ಮೇಲೆ ಅಪಾರ ಭಕ್ತಿ ಹೊಂದಿದ್ದಳು. ಆಗಾಗ ಅತನೊಂದಿಗೆ ವೃಂದಾವನಕ್ಕೆ ಹೋಗುತ್ತಿದ್ದಳು ಎಂದು ಆಕೆಯ ತಂದೆ ಸುರೇಶ್ ಚಂದ್ರ ಹೇಳಿದ್ದಾರೆ. ಸುಮಾರು ನಾಲ್ಕು ತಿಂಗಳ ಹಿಂದೆ, ಅವಳು ದೈವಿಕ ಹಸ್ತಕ್ಷೇಪ ಎಂದು ಹೇಳಿಕೊಂಡ ಅನುಭವವನ್ನು ಪಡೆದಳು. ಬಂಕೆ ಬಿಹಾರಿ ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸುವಾಗ, ಶುದ್ಧ ಚಿನ್ನದ ಉಂಗುರವು ಅವಳ ಸ್ಕಾರ್ಫ್‌ಗೆ ಬಿದ್ದಿತು. ಪಿಂಕಿ ಇದನ್ನು ಆಶೀರ್ವಾದ ಎಂದು ನಂಬಿದ್ದಳು ಮತ್ತು ತಾನು ಯಾವುದೇ ಮನುಷ್ಯನನ್ನು ಮದುವೆಯಾಗುವುದಿಲ್ಲ, ಕೃಷ್ಣನನ್ನು ಮಾತ್ರ ಮದುವೆಯಾಗುತ್ತೇನೆ ಎಂದು ನಿರ್ಧರಿಸಿದಳು ಎಂದು ಹೇಳಿದ್ದಾರೆ.
ಇತ್ತೀಚೆಗೆ ಆಕೆ ಅನಾರೋಗ್ಯದಿಂದ ಬಳಲುತ್ತಿದ್ದಾಗ, ವೃಂದಾವನದ ಮೂಲಕ ಭಾರವಾದ ಕೃಷ್ಣನ ವಿಗ್ರಹವನ್ನು ಹೊತ್ತುಕೊಂಡು ಗೋವರ್ಧನ ಪರಿಕ್ರಮವನ್ನು ಪೂರ್ಣಗೊಳಿಸುವ ಮೂಲಕ ಆಕೆ ತನ್ನ ಕುಟುಂಬವನ್ನು ಬೆರಗುಗೊಳಿಸಿದಳು. ಇದಾದ ನಂತರ ಆಕೆ ಚೇತರಿಸಿಕೊಂಡಳು. ಇದನ್ನು ಅವರು ಮತ್ತೊಂದು ದೈವಿಕ ಸಂಕೇತವೆಂದು ಪರಿಗಣಿಸಿದರು. ಹಲವು ಘಟನೆಗಳಿಂದಾಗಿ ಆಕೆಯ ತಂದೆ ಮಗಳ ನಿರ್ಧಾರವನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ಮತ್ತು ತನ್ನ ಪುತ್ರರಂತೆ ಕುಟುಂಬದ ಆಸ್ತಿಯಲ್ಲಿ ಆಕೆಗೆ ಪಾಲು ನೀಡುವುದಾಗಿ ಭರವಸೆ ನೀಡಿದ್ದಾಗಿ ಹೇಳಿದರು. ಪಿಂಕಿಯ ಈ ಕಲ್ಪನೆಯು ಮೊದಲಿಗೆ ವಿಚಿತ್ರ ಎನಿಸಿದರೂ ನಂತರ ಕುಟುಂಬವು ಅದನ್ನು ಒಪ್ಪಿಕೊಂಡಿತು ಏಕೆಂದರೆ ಪಿಂಕಿಯ ಆಯ್ಕೆಯು ಭಕ್ತಿಯಿಂದ ಹುಟ್ಟಿಕೊಂಡಿತು ಎಂದು ಆಕೆಯ ತಾಯಿ ರಾಮೇಂದ್ರಿ ಹೇಳಿದ್ದಾರೆ.
ಇದನ್ನೂ ಓದಿ: ಹೆಸರು ಸರ್ವಜ್ಞ: ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ
ಸಂದರ್ಶನವೊಂದರಲ್ಲಿ ಪಿಂಕಿ, ತನ್ನ ಜೀವನ ದೇವರಿಗೆ ಸಮರ್ಪಿತವಾಗಿದೆ ಎಂದು ಹೇಳಿಕೊಂಡಿದ್ದಾರೆ. ಶಿಕ್ಷಣಕ್ಕೆ ತನ್ನದೇ ಆದ ಸ್ಥಾನವಿದ್ದರೂ, ತನ್ನ ಶಾಂತಿಯೂ ಕೃಷ್ಣನಿಗೆ ಭಕ್ತಿ ಮತ್ತು ಶರಣಾಗತಿಯಾಗುವುದರಲ್ಲಿದೆ ಎಂದು ಹೇಳಿದರು. ಅದೇನೆ ಇರಲಿ ಅಣುರೇಣು ತೃಣಕಾಷ್ಟಗಳಲ್ಲಿ ಭಗವಂತನಿದ್ದಾನೆ ಎಂಬ ಮಾತಿದೆ.


