ನಟ ಯುವ ರಾಜ್‌ಕುಮಾರ್ ಮತ್ತು ಪತ್ನಿ ಶ್ರೀದೇವಿ ಭೈರಪ್ಪ ನಡುವಿನ ಡಿವೋರ್ಸ್ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಶ್ರೀದೇವಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪತಿ ಹಾಗೂ ಮತ್ತೊಬ್ಬ ಹುಡುಗಿಯನ್ನು ಉದ್ದೇಶಿಸಿ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಬೆಂಗಳೂರು (ಅ.7): ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ದೊಡ್ಮನೆ ಕುಟುಂಬದ ಕುಡಿ, ನಟ ಯುವ ರಾಜ್‌ಕುಮಾರ್ (Yuva Rajkumar) ಹಾಗೂ ಅವರ ಪತ್ನಿ ಶ್ರೀದೇವಿ ಭೈರಪ್ಪ (Sridevi Byrappa) ನಡುವಿನ ವೈವಾಹಿಕ ಭಿನ್ನಾಭಿಪ್ರಾಯ ಹಾಗೂ ಡಿವೋರ್ಸ್ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಸದ್ಯ ಸಪ್ತ ಸಾಗರದಾಚೆಯ ಅಮೆರಿಕದಲ್ಲಿ ನೆಲೆಸಿ ಕಾನೂನು ಹೋರಾಟ ನಡೆಸುತ್ತಿರುವ ಶ್ರೀದೇವಿ ಭೈರಪ್ಪ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಪೋಸ್ಟ್‌ಗಳು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುತ್ತಿರುತ್ತವೆ.

ಇದೀಗ ಶ್ರೀದೇವಿ ಭೈರಪ್ಪ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ/ರೀಲ್ಸ್ ಹಾಗೂ ಅದಕ್ಕೆ ನೀಡಿರುವ ಕ್ಯಾಪ್ಷನ್ ನೆಟ್ಟಿಗರ ಗಮನ ಸೆಳೆದಿದ್ದು, ಅವರು ಯಾರಿಗೆ ಟಾಂಗ್ ಕೊಟ್ಟಿದ್ದಾರೆ ಎಂಬ ಕುತೂಹಲ ಮೂಡಿಸಿದೆ.

ಶ್ರೀದೇವಿ ಭೈರಪ್ಪ ಅವರ ವೈರಲ್ ಪೋಸ್ಟ್‌ನಲ್ಲೇನಿದೆ?:

ಶ್ರೀದೇವಿ ಭೈರಪ್ಪ ತಮ್ಮ ಹಳೆಯ ಫೋಟೋಗಳನ್ನು ಬಳಸಿ ಮಾಡಿರುವ ರೀಲ್ಸ್‌ನಲ್ಲಿ ಪತಿ ಹಾಗೂ ಆ ರಹಸ್ಯ ಹುಡುಗಿಯನ್ನು ಉದ್ದೇಶಿಸಿ ಬರೆದುಕೊಂಡ ಸಾಲುಗಳು ವೈರಲ್ ಆಗುತ್ತಿವೆ. "ಅವನ ಫೋನ್‌ನಲ್ಲಿ ನನ್ನ ಇಂತಹ 10,000 ಫೋಟೋಗಳಿದ್ದವು. ಅದನ್ನು ನೋಡಿ ನಾನೇ ಆತನಿಗೆ 'ವಿಶೇಷ' (Special) ಎಂದು ಭಾವಿಸಿದ್ದೆ. ಆದರೆ, ಒಂದು ದಿನ ಆತನ ಗ್ಯಾಲರಿಯಲ್ಲಿ ಇನ್ನೊಬ್ಬ ಹುಡುಗಿಯದ್ದೂ ಇದೇ ರೀತಿಯ ಪೋಸ್ ಮತ್ತು ಫೋಟೋಗಳನ್ನು ನೋಡಿದ ಮೇಲೆಯೇ ನನಗೆ ಸತ್ಯ ಗೊತ್ತಾಗಿತ್ತು. ನಾನು ಆಕೆಗೆ ಒಂದು ವಿಷಯ ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ: 'ನೀನು ಏನ್ ಸ್ಪೆಷಲ್ ಇಲ್ಲ' (Neenu yen special illa). ಆ ಫೋಟೋಗಳ ಮೇಲೆ ಎಷ್ಟು ದೃಷ್ಟಿಬೊಟ್ಟು ಎಮೋಜಿ (🧿) ಹಾಕಿದರೂ ಯಾವುದೇ ಪ್ರಯೋಜನವಿಲ್ಲ. ಅಷ್ಟೇ. 📸 : ಡಿಯರ್ ಹಸ್ಬೆಂಡ್ (Dear Husband)' ಎಂದು ಬರೆದುಕೊಂಡಿದ್ದಾರೆ.

ಈ ಸಾಲುಗಳ ಮೂಲಕ ಶ್ರೀದೇವಿ ಭೈರಪ್ಪ ತಮ್ಮ ಪತಿ ಯುವ ರಾಜ್‌ಕುಮಾರ್ ಅವರಿಗೆ 'ಡಿಯರ್ ಹಸ್ಬೆಂಡ್' ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದು, ಫೋಟೋಗಳನ್ನು ಯುವ ಅವರೇ ಕ್ಲಿಕ್ಕಿಸಿದ್ದು ಎಂಬ ಹಿಂಟ್ ನೀಡಿದ್ದಾರೆ. ಜೊತೆಗೆ ತಮ್ಮ ಪತಿ ಜೀವನದಲ್ಲಿ ಬಂದಿದ್ದಾರೆ ಎನ್ನಲಾದ ಮತ್ತೊಬ್ಬ ಹುಡುಗಿಗೆ "ನೀನೇನೂ ಸ್ಪೆಷಲ್ ಅಲ್ಲ" ಎಂದು ನೇರವಾಗಿಯೇ ಟಾಂಗ್‌ ಕೊಟ್ಟಿದ್ದಾರೆ.

"ಅಪ್ಪು ಸರ್ ಇದ್ದಿದ್ದರೆ ನಿಮ್ಮ ಜೊತೆ ನಿಲ್ಲುತ್ತಿದ್ದರು" - ನೆಟ್ಟಿಗರ ಬೆಂಬಲ

ಶ್ರೀದೇವಿ ಅವರ ಈ ಪೋಸ್ಟ್ ಬಹಿರಂಗಗೊಳ್ಳುತ್ತಿದ್ದಂತೆಯೇ ಕಮೆಂಟ್ ಸೆಕ್ಷನ್‌ನಲ್ಲಿ ಅಭಿಮಾನಿಗಳು ಹಾಗೂ ನೆಟ್ಟಿಗರು ಅವರಿಗೆ ಬೆಂಬಲ ಸೂಚಿಸಿದ್ದಾರೆ. Iamaishu' ಎಂಬ ಖಾತೆಯಿಂದ ನೆಟ್ಟಿಗರೊಬ್ಬರು, "ಒಂದು ವೇಳೆ ಅಪ್ಪು ಸರ್ (ಪುನೀತ್ ರಾಜ್‌ಕುಮಾರ್) ಇದ್ದಿದ್ದರೆ ಖಂಡಿತ ನಿಮ್ಮ ಪರವಾಗಿ ನಿಲ್ಲುತ್ತಿದ್ದರು ಅಲ್ವಾ?" ಎಂದು ಭಾವನಾತ್ಮಕವಾಗಿ ಕಮೆಂಟ್ ಮಾಡಿದ್ದರು. ಈ ಕಮೆಂಟ್‌ಗೆ ತಕ್ಷಣವೇ ಸ್ಪಂದಿಸಿದ ಶ್ರೀದೇವಿ ಭೈರಪ್ಪ ಅವರು, "100000%" ಎಂದು ಬರೆದು ರೆಡ್ ಹಾರ್ಟ್ ಎಮೋಜಿ ನೀಡುವ ಮೂಲಕ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.

ದೊಡ್ಮನೆಯಲ್ಲಿ ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ಡಿವೋರ್ಸ್ ಪ್ರಕರಣವು ಪರಸ್ಪರ ಆರೋಪ-ಪ್ರತ್ಯಾರೋಪ, ಆಡಿಯೋ ಮತ್ತು ಫೋಟೋ ವೈರಲ್ ಮೂಲಕ ದೊಡ್ಡ ಮಟ್ಟದ ವಿವಾದ ಸೃಷ್ಟಿಸಿತ್ತು. ಸದ್ಯ ಶ್ರೀದೇವಿ ವಿದೇಶದಿಂದಲೇ ತಮ್ಮ ನ್ಯಾಯಾಂಗ ಹೋರಾಟ ಮುಂದುವರಿಸಿದ್ದು, ಈ ಹೊಸ ಪೋಸ್ಟ್ ಸ್ಯಾಂಡಲ್‌ವುಡ್ ಅಂಗಳದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.

View post on Instagram