ಕಲ್ಪನಾ ಅವರ ಬದುಕಿನ ಕೊನೆಯ ದಿನಗಳ ಕುರಿತು ಜಯಲಕ್ಷ್ಮೀ ಹಂಚಿಕೊಂಡಿರುವ ಈ ನೆನಪುಗಳು ಕನ್ನಡ ಚಿತ್ರರಂಗದ ಅಭಿಮಾನಿಗಳಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿವೆ. ಇಲ್ಲಿ ಉಲ್ಲೇಖಿಸಿರುವ ಘಟನೆಗಳು ಸಂದರ್ಶನದಲ್ಲಿ ಕಲ್ಪನಾರ ಸಹ ನಟಿ ಹೇಳಿದ ಹೇಳಿಕೆಗಳಾಗಿವೆ. ನಿಜವಾಗಿಯೂ ಶಾಕಿಂಗ್!

ನಟಿ ಕಲ್ಪನಾ ಕೊನೆಯ ದಿನ ನಡೆದಿದ್ದೇನು? ಬಸವರಾಜ್ ಗುಡಿಗೇರಿ ಜೊತೆಗಿನ ಜಗಳದ ಸ್ಫೋಟಕ ಮಾಹಿತಿ ಇಲ್ಲಿದೆ!

ಕನ್ನಡ ಚಿತ್ರರಂಗದ ಮಿನುಗುತಾರೆ, ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ನಟಿ ಕಲ್ಪನಾ ಅವರ ಜೀವನದ ಕೊನೆಯ ದಿನದ ಘಟನೆ ಇಂದಿಗೂ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇದೀಗ ಹಿರಿಯ ನಟಿ ಹಾಗೂ ರಂಗಭೂಮಿ ಕಲಾವಿದೆ ಜಯಲಕ್ಷ್ಮೀ ಪಾಟೀಲ್ ಅವರು ಕಲ್ಪನಾ ಅವರ ಸಾವಿಗೂ ಹಿಂದಿನ ದಿನ ನಡೆದ ಘಟನೆಯ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ನಾಟಕ ಕಂಪನಿ ಮಾಲೀಕ ಬಸವರಾಜ್ ಗುಡಿಗೇರಿ ಮತ್ತು ಕಲ್ಪನಾ ನಡುವೆ ನಡೆದಿದ್ದ ವಾಗ್ವಾದದ ಕುರಿತು ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ನಾಟಕದ ಸಂಭಾಷಣೆಯಿಂದ ಶುರುವಾದ ವಿವಾದ!

ಕಲ್ಪನಾ ನಿಧನರಾಗುವುದಕ್ಕೂ ಹಿಂದಿನ ದಿನ ನಾಟಕವೊಂದರಲ್ಲಿ ಅಭಿನಯಿಸಿದ್ದರು. ಆ ಪ್ರದರ್ಶನದಲ್ಲಿ ಕಲ್ಪನಾ ಮತ್ತು ಬಸವರಾಜ್ ಗುಡಿಗೇರಿ ತಾಯಿ-ಮಗನ ಪಾತ್ರ ನಿರ್ವಹಿಸುತ್ತಿದ್ದರು. ನಾಟಕದ ವೇಳೆ ಕಲ್ಪನಾ, ‘ಹಾಲು ಕುಡಿ ರಾಮ’ ಎನ್ನುವ ಬದಲು ‘ಹುಲ್ಲು ಕುಡಿ ರಾಮ’ ಎಂದು ಸಂಭಾಷಣೆ ಹೇಳಿದರು. ಮುಂದಿನ ಸಾಲಿನಲ್ಲಿ ಕುಳಿತಿದ್ದ ಪ್ರೇಕ್ಷಕರಿಗೆ ಈ ತಪ್ಪು ತಿಳಿಯಿತು. ಬಸವರಾಜ್ ಕೂಡ, ‘ಏನಂದೆ, ನಾನು ಹುಲ್ಲು ಕುಡಿಯಬೇಕಾ?’ ಎಂದು ಮರುಪ್ರಶ್ನೆ ಮಾಡಿದರು.

ಇದರಿಂದ ಸಂಭಾಷಣೆಯಲ್ಲಿನ ತಪ್ಪು ಎಲ್ಲರ ಗಮನಕ್ಕೆ ಬಂತು. ಆದರೆ, ಕಲ್ಪನಾ ತಕ್ಷಣವೇ ಚಾಣಾಕ್ಷತನದಿಂದ ಪ್ರತಿಕ್ರಿಯಿಸಿ, ‘ನಾನು ಹಾಲು ಕುಡಿಯುತ್ತೇನೆ, ನೀನು ಹುಲ್ಲು ಕುಡಿ’ ಎಂದು ಹೇಳಿದರು. ಈ ಮಾತಿಗೆ ಪ್ರೇಕ್ಷಕರು ಶಿಳ್ಳೆ ಹೊಡೆದು ಚಪ್ಪಾಳೆ ತಟ್ಟಿದರು. ಇದರಿಂದ ವೇದಿಕೆಯ ಮೇಲಿದ್ದ ಬಸವರಾಜ್ ಅವರಿಗೆ ಮುಜುಗರವಾಯಿತು. ಕಲ್ಪನಾ ನೀಡಿದ ತಿರುಗೇಟಿನಿಂದ ಸಿಟ್ಟಾದ ಅವರು, ನಾಟಕ ಮುಗಿದ ಬಳಿಕ ಈ ವಿಚಾರವಾಗಿ ಜಗಳ ಆರಂಭಿಸಿದರು ಎಂದು ಜಯಲಕ್ಷ್ಮೀ ಹೇಳಿದ್ದಾರೆ.

ಚಪ್ಪಲಿ ವಿಚಾರಕ್ಕೆ ನಡೆದಿತ್ತಾ ಹಲ್ಲೆ?

ಜಯಲಕ್ಷ್ಮೀ ಪಾಟೀಲ್ ಅವರ ಹೇಳಿಕೆಯ ಪ್ರಕಾರ, ಕಲ್ಪನಾ ಧರಿಸಿದ್ದ ಹೈ ಹೀಲ್ಸ್ ಚಪ್ಪಲಿಯ ಬೆಲ್ಟ್ ಜಗಳದ ಸಂದರ್ಭದಲ್ಲಿ ಕಳಚಿಕೊಂಡಿತ್ತು. ಅದನ್ನು ಸರಿಪಡಿಸಿಕೊಳ್ಳಲು ಕಲ್ಪನಾ ಬಾಗಿದಾಗ, ಬಸವರಾಜ್ ತಪ್ಪಾಗಿ ಅರ್ಥೈಸಿಕೊಂಡು ಅವರು ಚಪ್ಪಲಿ ತೆಗೆದುಕೊಂಡಿದ್ದಾರೆ ಎಂದು ಭಾವಿಸಿ ಹಲ್ಲೆ ನಡೆಸಿದರು ಎನ್ನಲಾಗಿದೆ. ಕಲ್ಪನಾ ತಮ್ಮ ಮಾತನ್ನು ವಿವರಿಸಲು ಪ್ರಯತ್ನಿಸಿದರೂ, ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು ಎಂದು ಜಯಲಕ್ಷ್ಮೀ ನೆನಪಿಸಿಕೊಂಡಿದ್ದಾರೆ. ನಾಟಕ ಮುಗಿದ ನಂತರ ಕಲ್ಪನಾ ವಿಷಯವನ್ನು ವಿವರಿಸಿದಾಗ ಬಸವರಾಜ್ ಅವರಿಗೆ ತಪ್ಪು ತಿಳಿವಳಿಕೆಯಾಗಿದ್ದ ಸಂಗತಿ ಗೊತ್ತಾಯಿತು ಎಂದು ಅವರು ಹೇಳಿದ್ದಾರೆ.

ಆ ರಾತ್ರಿ ನಡೆದಿದ್ದೇನು?

ಕಲ್ಪನಾ ಅವರನ್ನು ಆ ರಾತ್ರಿ ಬಸವರಾಜ್ ಭೇಟಿಯಾಗಿ ಸಮಾಧಾನಪಡಿಸಿದ್ದರೆ, ಮುಂದಿನ ದುರಂತವನ್ನು ತಪ್ಪಿಸಬಹುದಿತ್ತೇನೋ ಎಂಬುದು ತಮ್ಮ ವೈಯಕ್ತಿಕ ಅಭಿಪ್ರಾಯ ಎಂದು ಜಯಲಕ್ಷ್ಮೀ ತಿಳಿಸಿದ್ದಾರೆ. ಆದರೆ, ಕೆಲವರು ಕಲ್ಪನಾ ಅವರನ್ನು ಮತ್ತೊಬ್ಬ ಯುವಕನ ಬೈಕ್‌ನಲ್ಲಿ ಕಳುಹಿಸಿದ್ದರು. ಬಸವರಾಜ್ ಕೆಲಸದ ನಿಮಿತ್ತ ಹುಬ್ಬಳ್ಳಿಗೆ ತೆರಳಿದ್ದರು ಎಂದು ಅವರು ವಿವರಿಸಿದ್ದಾರೆ.

ಕಲ್ಪನಾ ನಿಧನದ ಸುದ್ದಿ ಕೇಳಿ ನಿಂತುಹೋದ ನಾಟಕ!

ಸಂಕೇಶ್ವರದಲ್ಲಿ ರಾತ್ರಿ ನಾಟಕ ನಡೆಯುತ್ತಿದ್ದಾಗಲೇ ಕಲ್ಪನಾ ನಿಧನದ ಸುದ್ದಿ ಬಂದಿತ್ತು. ಆಘಾತಕ್ಕೊಳಗಾದ ಕಲಾವಿದರು ಪ್ರದರ್ಶನವನ್ನು ನಿಲ್ಲಿಸಿದರು. ಬೆಳಗ್ಗೆ ಕಲ್ಪನಾ ಅವರನ್ನು ಬೆಳಗಾವಿಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ತಾಯಿ ನೀಡಿದ್ದ ಕಿತ್ತಳೆ ಬಣ್ಣದ ಸೀರೆ ಧರಿಸಿ, ದೊಡ್ಡ ಕುಂಕುಮವಿಟ್ಟು, ಲಿಪ್‌ಸ್ಟಿಕ್ ಹಾಕಿದ್ದ ಕಲ್ಪನಾ ಅವರ ಕೊನೆಯ ದರ್ಶನದ ದೃಶ್ಯ ಇಂದಿಗೂ ಕಣ್ಣಮುಂದಿದೆ ಎಂದು ಜಯಲಕ್ಷ್ಮೀ ಭಾವುಕರಾಗಿ ಹೇಳಿದ್ದಾರೆ. ಬಳಿಕ ಕಲ್ಪನಾ ಅವರ ತಾಯಿ ಬಂದು ಪಾರ್ಥಿವ ಶರೀರವನ್ನು ಕೊಂಡೊಯ್ದರು ಎಂಬ ಮಾಹಿತಿ ದೊರೆಯಿತು ಎಂದೂ ಅವರು ಸ್ಮರಿಸಿದ್ದಾರೆ.

ಕಲ್ಪನಾ ಅವರ ಬದುಕಿನ ಕೊನೆಯ ದಿನಗಳ ಕುರಿತು ಜಯಲಕ್ಷ್ಮೀ ಹಂಚಿಕೊಂಡಿರುವ ಈ ನೆನಪುಗಳು ಕನ್ನಡ ಚಿತ್ರರಂಗದ ಅಭಿಮಾನಿಗಳಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿವೆ. ಇಲ್ಲಿ ಉಲ್ಲೇಖಿಸಿರುವ ಘಟನೆಗಳು ಸಂದರ್ಶನದಲ್ಲಿ ಜಯಲಕ್ಷ್ಮೀ ಪಾಟೀಲ್ ನೀಡಿದ ಹೇಳಿಕೆಗಳಾಗಿವೆ.