ನಟ ಕಿಚ್ಚ ಸುದೀಪ್ ಮತ್ತು ಪ್ರಿಯಾ ದಂಪತಿ ತಮ್ಮ 25ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸುದೀಪ್ ಅವರ ಹಳೆಯ ವಿಡಿಯೋ ವೈರಲ್ ಆಗಿದ್ದು, ತಮ್ಮ ಕಷ್ಟದ ದಿನಗಳಲ್ಲಿ ಪತ್ನಿ ಪ್ರಿಯಾ ಮತ್ತು ಅಕ್ಕ ಹೇಗೆ ಆರ್ಥಿಕವಾಗಿ ನೆರವಾದರು ಎಂಬುದನ್ನು ಸ್ಮರಿಸಿದ್ದಾರೆ. ಪ್ರಿಯಾ ಅವರು ಸುದೀಪ್ಗೆ ಪೆಟ್ರೋಲ್ ಹಾಕಿಸಿ, ಹಣ ನೀಡಿ ಬೆಂಬಲಿಸಿದ್ದರು.
ಬೆಂಗಳೂರು: ನಟ 'ಕಿಚ್ಚ' ಸುದೀಪ್ ಹಾಗೂ ಪ್ರಿಯಾ ಸುದೀಪ್ ಅವರ ದಾಂಪತ್ಯಕ್ಕೆ ಮೊನ್ನೆಯಷ್ಟೇ 25 ವರ್ಷಗಳು. ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಈ ಜೋಡಿಗೆ ತಾಯಿ ದಿ.ಸರೋಜ ಸಂಜೀವ್ ಸ್ಮರಣೆಯೊಂದಿಗೆ, ತಂದೆ ಸಂಜೀವ್ ಕಟ್ಟಿದ ನಿವಾಸದಲ್ಲಿ ಹೋಮ ಹಾಗೂ ಕೆಲ ವಿಶೇಷ ಪೂಜೆಗಳನ್ನು ಮಾಡಿಸಿ ತಮ್ಮ 25ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ. ನಿನ್ನೆ ಪ್ರಿಯಾ (Priya Sudeep) ಅವರು ವಿಶೇಷ ವಿಡಿಯೋ ಶೇರ್ ಮಾಡಿಕೊಂಡಿದ್ದರು. ತಮ್ಮ ಕುಟುಂಬದ ಹಿರಿಯರು ನೀಡಿದ ಪ್ರೀತಿಯ ಉಡುಗೊರೆಗಳನ್ನು ಗೌರವದಿಂದ ಕಾಪಾಡಿಕೊಂಡು ಬಂದಿರುವ ಅವರು, ಸೀರೆಯ ಪ್ರತಿಯೊಂದು ಮಡಿಕೆ ಹಾಗೂ ಬಳೆಯ ಪ್ರತಿಯೊಂದು ಹೊಳಪಿನಲ್ಲೂ ಹಿರಿಯರ ನೆನಪು ಜೀವಂತವಾಗಿದೆ ಎಂಬ ಭಾವವನ್ನು ಹಂಚಿಕೊಂಡಿದ್ದರು.
ಪ್ರಿಯಾನೇ ನನಗೆ ಫೈನಾನ್ಶಿಯರ್
ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ಅವರು ಏಷ್ಯಾನೆಟ್ ಸುವರ್ಣ ಟಿವಿಗೆ ನೀಡಿದ್ದ ವಿಡಿಯೋ ಪುನಃ ವೈರಲ್ ಆಗುತ್ತಿದೆ. ದುಡ್ಡೇ ಇಲ್ಲದ ದಿನಗಳನ್ನು ನೆನಪಿಸಿಕೊಂಡಿದ್ದ ಕಿಚ್ಚ, ಅವರ (ಪ್ರಿಯಾ) ಬಳಿ ದುಡ್ಡಿತ್ತು. ನನ್ನ ಬಳಿ ಹಣವಿರಲಿಲ್ಲ. ಅವರೇ ನನಗೆ ಫೈನಾನ್ಶಿಯರ್ ಆಗಿದ್ದರು. ಗಾಡಿಗೆ ಪೆಟ್ರೋಲ್ ಹಾಕಿಸಿ ಅದನ್ನು ನನಗೆ ಕೊಟ್ಟು ಅವರು ಆಫೀಸ್ಗೆ ಹೋಗುತ್ತಿದ್ದರು ಎನ್ನುವುದನ್ನು ಈ ಸಂದರ್ಶನದಲ್ಲಿ ಸುದೀಪ್ ನೆನಪಿಸಿಕೊಂಡಿದ್ದಾರೆ.
ಈ ಸಂದರ್ಶನದಲ್ಲಿ ಸುದೀಪ್ ಸಾಕಷ್ಟು ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ. ನಾನು ಕಷ್ಟದಲ್ಲಿ ಇದ್ದಾಗ ಸಹಾಯಕ್ಕೆ ಬಂದಿದ್ದೇ ಪತ್ನಿ ಪ್ರಿಯಾ ಮತ್ತು ಅಕ್ಕ. ನಟನನ್ನಾಗಿಸುವ ನಿಟ್ಟಿನಲ್ಲಿ ಕುಟುಂಬ ಪಾತ್ರ ಬಹು ದೊಡ್ಡದಿದೆ. ಪ್ರತಿಯೊಬ್ಬರ ಪಾತ್ರವೂ ಇದೆ ಇಂಥವರದ್ದೇ ಅಂತ ಹೇಳಕ್ಕಾಗಲ್ಲ ಎಂದಿದ್ದಾರೆ. ತುಂಬಾ ಕಡಿಮೆ ವೆಚ್ಚದಲ್ಲಿ ‘ಸ್ಪರ್ಶ’ ಚಿತ್ರ ಮಾಡೋದಿಕ್ಕೆ ಹೊರಟ್ವಿ. ಅಂದುಕೊಂಡಂತೆ ಆಗಲಿಲ್ಲ. ಬಜೆಟ್ ಹೆಚ್ಚಾಯಿತು. ಆಗ ನನ್ನ ಅಕ್ಕ, ಅವರ ಬಳಿ ಇದ್ದ ಆಭರಣ ಮಾರಿ ಹಣ ಕೊಟ್ಟರು ಎನ್ನುವುದನ್ನು ಸುದೀಪ್ ನೆನಪಿಸಿಕೊಂಡಿದ್ದಾರೆ.
ಪ್ರಿಯಾ ಬಳಿ ಸಾಲ
'ಕೈಯಲ್ಲಿ ಒಂದು ಪೈಸೆ ಇರಲಿಲ್ಲ. ಬೇರೆ ಕಡೆ ಕೆಲಸ ಮಾಡುತ್ತಿದ್ದ ನನ್ನ ಪತ್ನಿ ಪ್ರಿಯಾ ಬಳಿ 25 ಸಾವಿರ ರೂಪಾಯಿ ಸಾಲ ಕೇಳಿ ಪಡೆದುಕೊಂಡೆ. ಎಲ್ಲ ಮುಗಿಸಿಕೊಂಡು ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಬಂದಾಗ ಮತ್ತೆ ದುಡ್ಡು ಖಾಲಿ. ಆಗ ಮಧು ಬಂಗಾರಪ್ಪ ಬಂದು 5 ಲಕ್ಷ ಸಾಲ ಕೊಟ್ಟರು. ಇದೆಲ್ಲವನ್ನು ಮರೆಯೋಕಾಗಲ್ಲ. ಇದರ ಜತೆಗೆ ‘ಹುಚ್ಚ’ ಸಿನಿಮಾ ತಂಡ. ಈ ಎಲ್ಲವೂ ಸೇರಿಯೇ ಈ ಸುದೀಪ್ ಹೀರೋ ಆಗಿದ್ದು. ಯಾರೋ ಒಬ್ಬರಿಂದಲ್ಲ' ಎಂದು ಹೇಳಿದ್ದಾರೆ. ಸಿನಿಮಾ ಕೆಲಸಗಳು ಶುರುವಾದಾಗ ಓಡಾಡಲು ಕಷ್ಟವಾಗುತ್ತಿತ್ತು ಎಂದು ಪತ್ನಿ ಪ್ರಿಯಾ ಆಗ ಬಳಸುತ್ತಿದ್ದ ಕೈನಟಿಕ್ ಹೋಂಡಾ ಗಾಡಿಯನ್ನು ನಾನು ಬಳಸುತ್ತಿದ್ದೆ. ಪೆಟ್ರೋಲ್ ಕೂಡ ಪ್ರಿಯಾ ಹಾಕಿಸಿ ಕೊಡುತ್ತಿದ್ದರು ಎಂದಿದ್ದಾರೆ.
ಇನ್ನು ಈಗ ಪ್ರಿಯಾ ಅವರೇ ನಿರ್ಮಾಣ ಸಂಸ್ಥೆ ತೆರೆದಿದ್ದಾರೆ. ಪತಿ ಸುದೀಪ್ ನಡೆದುಕೊಂಡು ಬರುತ್ತಿರುವ ಚಾರಿಟಿಗೆ ಸಪೋರ್ಟ್ ಆಗಿ ನಿಂತಿದ್ದಾರೆ. ಈ ಕುಟುಂಬ ಶಕ್ತಿ ಎಂದು ಹೇಳಿಕೊಂಡಿದ್ದಾರೆ.







