Asianet Suvarna News Asianet Suvarna News

ಸೋಷಿಯಲ್‌ ಮೀಡಿಯಾದಲ್ಲಿ ರೊಮ್ಯಾಂಟಿಕ್‌ ಫೋಟೋ ಪೋಸ್ಟ್‌ ಮಾಡದ ಜೋಡಿಗಳೇ ಆದರ್ಶ ದಂಪತಿ!

ಸೋಷಿಯಲ್‌ ಮೀಡಿಯಾದಲ್ಲಿರೊಮ್ಯಾಂಟಿಕ್‌ ಫೋಟೋಗಳನ್ನು ಹಂಚಿಕೊಂಡು ನಮ್ಮಷ್ಟು ಚೆಂದದ ಜೋಡಿ ಬೇರಿಲ್ಲ ಎಂದು ಸಾರೋರೆಲ್ಲ ಸುಖೀ ದಂಪತಿಗಳು, ಸೋಷಿಯಲ್‌ ಮೀಡಿಯಾದಿಂದ ದೂರವಿರೋರು ಅತೃಪ್ತರು ಎಂದು ಭಾವಿಸಬೇಕಾಗಿಲ್ಲ.

Social media posts may not reveal reality of marital life
Author
Bangalore, First Published Mar 30, 2021, 2:12 PM IST

ಫೇಸ್‌ಬುಕ್‌,ಇನ್‌ಸ್ಟಾಗ್ರಾಮ್‌ಗಳಲ್ಲಿ ಪರಿಚಿತ ದಂಪತಿಯ ರೊಮ್ಯಾಂಟಿಕ್‌ ಫೋಟೋಶೂಟ್‌ಗಳನ್ನು ನೋಡಿದಾಗ ಹೊಟ್ಟೆಯುರಿಯೋದು ಸಹಜ.ಆದ್ರೆ ಸೋಷಿಯಲ್‌ ಮೀಡಿಯಾಗಳಲ್ಲಿ ಇಂಥ ಫೋಟೋಸ್‌ ಪೋಸ್ಟ್‌ ಮಾಡಿದ್ದಾರೆಂಬ ಕಾರಣಕ್ಕೆ ಅವರದ್ದು ಸುಖೀ ದಾಂಪತ್ಯ ಎಂದು ನಿರ್ಧರಿಸೋದು ಖಂಡಿತಾ ತಪ್ಪು.ಇಂಥ ದಂಪತಿಗಳೇ ನಿಜ ಜೀವನದಲ್ಲಿ ಹಾವು-ಮುಂಗುಸಿಗಳಂತೆ ಹೆಚ್ಚುಕಿತ್ತಾಡೋದು. ಮನಸ್ಸಿನಲ್ಲಿ ಒಬ್ಬರ ಮೇಲೆ ಇನ್ನೊಬ್ಬರಿಗೆ ಅಸಮಾಧಾನವಿದ್ರೂ ಸಮಾಜದ ಕಣ್ಣಿಗೆ ನಾವಿಬ್ರು ಮೇಡ್‌ ಫಾರ್‌ ಇಚ್‌ ಅದರ್ ಎಂಬುದನ್ನು ಬಿಂಬಿಸೋ ಸಲುವಾಗಿ ಸೋಷಿಯಲ್‌ ಮೀಡಿಯಾಗಳಲ್ಲಿ ರೊಮ್ಯಾಂಟಿಕ್ ಫೋಟೋಗಳನ್ನು ಅಪ್‌ಲೋಡ್‌ ಮಾಡಿ, ಉದ್ದುದ್ದ ಸಾಲುಗಳನ್ನು ಬರೆಯುತ್ತಾರೆ. ಕೆಲವರಂತೂ ಸ್ನೇಹಿತರು, ಬಂಧುಗಳು ನಮ್ಮನ್ನು ನೋಡಿ ಹೊಟ್ಟೆಯುರಿದುಕೊಳ್ಳಲಿ ಎಂಬ ಉದ್ದೇಶವಿಟ್ಟುಕೊಂಡೇ ಹಿಂಗೆ ಮಾಡುತ್ತಾರೆ. ಸಮಾಜದ ಕಣ್ಣಿಗೆ ನಾವಿಬ್ರು ರೊಮ್ಯಾಂಟಿಕ್‌ ಜೋಡಿ, ಆದರ್ಶ ದಂಪತಿ ಎಂದು ಬಿಂಬಿಸಿಕೊಂಡು ಸಂಬಂಧದ ಕುರಿತು ಮನಸ್ಸಿನಲ್ಲಿರೋ ಅಂಜಿಕೆಯನ್ನು ಮರೆಮಾಚಲು ಪ್ರಯತ್ನಿಸುತ್ತಾರೆ. ಆದ್ರೆ ನಿಮ್ಗೆ ಗೊತ್ತಾ? ಸೋಷಿಯಲ್‌ ಮೀಡಿಯಾಗಳಲ್ಲಿ ತಮ್ಮ ಸಂಬಂಧದ ಬಗ್ಗೆ ಪೋಸ್ಟ್‌, ಫೋಟೋಸ್‌ ಹಾಕಲು ನಾಚಿಕೆಪಡೋ ದಂಪತಿ ನಿಜವಾಗಿಯೂ ಖುಷಿ ಹಾಗೂ ಹೊಂದಾಣಿಕೆಯ ದಾಂಪತ್ಯ ಜೀವನ ನಡೆಸುತ್ತಿರುತ್ತಾರಂತೆ. ಹಾಗಾದ್ರೆ ನೆಮ್ಮದಿಯ ದಾಂಪತ್ಯ ಬದುಕು ಸವಿಯುತ್ತಿರೋ ದಂಪತಿ ಸೋಷಿಯಲ್‌ ಮೀಡಿಯಾದಿಂದ ಅಂತರ ಕಾಯ್ದುಕೊಳ್ಳೋದು ಯಾಕೆ? ಈ ಕಾರಣಗಳಿಂದ ಇರಬಹುದು ಅಲ್ಲವೆ?

ನಾನ್ಯಾಕೆ ಹಿಂಗೆ, ನನ್‌ ಮಗ ಯಾಕೆ ಹಂಗೆ!

ಸಮಾಜಕ್ಕೆ ಮನವರಿಕೆ ಮಾಡಿಸೋ ಅಗತ್ಯವಿಲ್ಲ
ನಮ್ಮ ದಾಂಪತ್ಯ ಬದುಕು ಚೆನ್ನಾಗಿದೆ,ಇಬ್ಬರ ನಡುವೆ ಉತ್ತಮ ಹೊಂದಾಣಿಕೆಯಿದೆ ಎಂಬುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ಅಥವಾ ಫೋಸ್ಟ್‌ಗಳನ್ನು ಹಾಕಿ ನಿರೂಪಿಸಬೇಕಾದ ಅಗತ್ಯವಿದೆಯಾ? ಅಷ್ಟಕ್ಕೂ ಇದು ನಿಮಗೂ, ನಿಮ್ಮ ಸಂಗಾತಿಗೂ ಸಂಬಂಧಪಟ್ಟ ವಿಷಯ. ನಿಮ್ಮಿಬ್ಬರಿಗೆ ತಿಳಿದಿದ್ರೆ ಸಾಕು. ಒಂದು ವೇಳೆ ನೀವು ಪದೇಪದೆ ಸೋಷಿಯಲ್‌ ಮೀಡಿಯಾಗಳಲ್ಲಿ ನಿಮ್ಮ ಸಂಗಾತಿಯೊಂದಿಗಿನ ರೊಮ್ಯಾಂಟಿಕ್‌ ಫೋಟೋಗಳನ್ನು ಪೋಸ್ಟ್‌ ಮಾಡುತ್ತಿದ್ದೀರಾ ಎಂದಾದ್ರೆ ನಿಮ್ಮ ಫ್ರೆಂಡ್ಸ್‌, ಫಾಲೋವರ್ಸ್‌ಗೆ ನಿಮ್ಮಿಬ್ಬರದು ಯಶಸ್ವಿ ದಾಂಪತ್ಯ ಎಂಬುದನ್ನು ಮನವರಿಕೆ ಮಾಡಿಸಲು ಪ್ರಯತ್ನಿಸುತ್ತಿದ್ದೀರಿ ಎಂದು ಅರ್ಥೈಸಿಕೊಳ್ಳಬಹುದು ಅಲ್ಲವೆ? ಖುಷಿ ಹಾಗೂ ಪ್ರಾಮಾಣಿಕತೆಯಿಂದ ದಾಂಪತ್ಯ ನಡೆಸುತ್ತಿರೋ ದಂಪತಿ ಎಂದಿಗೂ ತಮ್ಮಿಬ್ಬರ ಸಂಬಂಧದ ಬಗ್ಗೆ ಇನ್ನೊಬ್ಬರಿಗೆ ಮನವರಿಕೆ ಮಾಡಿಸಲು ಪ್ರಯತ್ನಿಸೋದಿಲ್ಲ.

Social media posts may not reveal reality of marital life

ಆತ್ಮಶ್ಲಾಘನೆ ಅಗತ್ಯವಿಲ್ಲ
ತನ್ನ ವೈಯಕ್ತಿಕ ಬದುಕಿನ ಕುರಿತು ಸೋಷಿಯಲ್‌ ಮೀಡಿಯಾಗಳಲ್ಲಿ ನಿರಂತರವಾಗಿ ಪೋಸ್ಟ್‌ಗಳನ್ನು ಹಾಕೋ ವ್ಯಕ್ತಿ ಆತ್ಮಶ್ಲಾಘನೆ ಹಾಗೂ ಬಡಾಯಿಕೊಚ್ಚಿಕೊಳ್ಳೋ ಪ್ರವೃತ್ತಿಯವನಾಗಿರುತ್ತಾನೆ ಎಂಬುದು ಅನೇಕ ಅಧ್ಯಯನಗಳಲ್ಲಿ ಸಾಬೀತಾಗಿದೆ. ಇಂಥ ವ್ಯಕ್ತಿಗಳು ತಾವು ಹಾಕಿದ ಪೋಸ್ಟ್‌ಗಳಿಗೆ ಎಷ್ಟು ಲೈಕ್ಸ್‌, ಕಮೆಂಟ್ಸ್‌ ಬರುತ್ತೆ ಎಂಬುದನ್ನು ಲೆಕ್ಕ ಹಾಕುತ್ತಾರೆ. ಇಂಥವರಿಗೆ ನಿಜ ಬದುಕಿನಲ್ಲಿ ಕಡಿಮೆ ಆತ್ಮೀಯರಿದ್ದು, ಸಾಮಾಜಿಕ ಜಾಲತಾಣವನ್ನೇ ತಮ್ಮ ಜಗತ್ತೆಂದು ನಂಬಿರುತ್ತಾರೆ. ಒಬ್ಬರನ್ನೊಬ್ಬರು ಅರ್ಥೈಸಿಕೊಂಡಿರೋ ದಂಪತಿಗಳಿಗೆ ನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಅಥವಾ ಸ್ಟೇಟಸ್‌ ಹಾಕಿ ಪರಸ್ಪರ ಮೆಚ್ಚಿಸಬೇಕಾದ ಅಗತ್ಯವಿರೋದಿಲ್ಲ.

ಪ್ರೀತಿ ಹೇಳು ಮಾತೇ ಬೇಕಿಲ್ಲ... ಒಂದು ಕಿರು ನೋಟ, ನಗು, ಸ್ಪರ್ಶವೂ ಸಾಕು

ವರ್ತಮಾನದಲ್ಲಿ ಜೀವಿಸುತ್ತಾರೆ
ಯಶಸ್ವಿ ದಂಪತಿಗಳು ಯಾವುದಾದರೊಂದು ಸ್ಥಳಕ್ಕೆ ಟೂರ್‌ಗೆ ಹೋದಾಗ ಅಲ್ಲಿಯ ಖುಷಿಯ ಕ್ಷಣಗಳ ಫೋಟೋಗಳು, ಮಾಹಿತಿಗಳನ್ನು ಆ ಕೂಡಲೇ ಸೋಷಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಳ್ಳೋದಿಲ್ಲ. ಬದಲಿಗೆ ಟೂರ್‌ನಿಂದ ಮನೆಗೆ ಹಿಂತಿರುಗಿದ ಬಳಿಕ ಹಂಚಿಕೊಳ್ಳುತ್ತಾರೆ. ಇದಕ್ಕೆ ಕಾರಣ ಆ ಖುಷಿಯ ಕ್ಷಣಗಳನ್ನು ಅವರಿಬ್ಬರೇ ಅನುಭವಿಸಲು ಇಷ್ಪಡುತ್ತಾರೆ. ಎಲ್ಲಿದ್ದೇವೆ, ಎಲ್ಲಿ ಊಟ ಮಾಡುತ್ತಿದ್ದೇವೆ ಎಂಬೆಲ್ಲ ಮಾಹಿತಿಯನ್ನು ಆ ಕೂಡಲೇ ಉಳಿದವರಿಗೆ ತಿಳಿಸಬೇಕಾದ ಅಗತ್ಯವಿಲ್ಲ ಎಂಬುದು ಅವರಿಗೆ ಚೆನ್ನಾಗಿ ತಿಳಿದಿರುತ್ತದೆ. ಅಲ್ಲದೆ, ಮಾಹಿತಿ, ಫೋಟೋಗಳನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತ ಕುಳಿತ್ರೆ ಆ ಕ್ಷಣದ ಖುಷಿಯನ್ನು ಮಿಸ್‌ ಮಾಡಿಕೊಳ್ಳುತ್ತೇವೆ ಎಂಬ ಕಾಮನ್‌ ಸೆನ್ಸ್‌ ಅವರಿಗಿರುತ್ತೆ. ಸರಳವಾಗಿ ಹೇಳಬೇಕೆಂದ್ರೆ ಅವರು ವರ್ತಮಾನದಲ್ಲಿ ಜೀವಿಸುತ್ತಾರೆ, ಆ ಕ್ಷಣವನ್ನು ಅನುಭವಿಸುತ್ತಾರೆ.

ಅಸುರಕ್ಷಿತ ಭಾವನೆ ಇರಲ್ಲ
ಸೋಷಿಯಲ್‌ ಮೀಡಿಯಾ ಅನ್ನೋದು ಇಂದು ಪ್ರತಿಷ್ಠೆಯ ಪ್ರದರ್ಶನಕ್ಕೆ ವೇದಿಕೆಯಾಗಿರೋದಂತೂ ನಿಜ. ಇನ್ನೊಬ್ಬರಿಗಿಂತ ನಾವು ಖುಷಿಯಾಗಿದ್ದೇವೆ ಎಂಬುದನ್ನು ತೋರಿಸಿಕೊಳ್ಳೋ ಪ್ರಯತ್ನದಲ್ಲಿ ಕೆಲವರಿರುತ್ತಾರೆ. ಇದೇ ಕಾರಣಕ್ಕೆ ಪದೇಪದೆ ಸಂಗಾತಿಗೆ ಸಂಬಂಧಿಸಿದ ಪ್ರತಿ ಮಾಹಿತಿ, ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಸೋಷಿಯಲ್‌ ಮೀಡಿಯಾದಿಂದಾಗಿ ಜನರಲ್ಲಿ ಅಸುರಕ್ಷಿತ ಭಾವನೆ ಹೆಚ್ಚುತ್ತಿದೆ. ಆನಿವರ್ಸರಿ, ಬರ್ತ್‌ಡೇಗೆ ಗಿಫ್ಟ್‌ ಜೊತೆ ಸೋಷಿಯಲ್‌ ಮೀಡಿಯಾದಲ್ಲಿ ಸ್ಟೇಟಸ್‌ ಹಾಕೋದು ಕೂಡ ಕಡ್ಡಾಯ ಎಂಬುದು ಕೆಲವು ದಂಪತಿಗಳ ಪಾಲಿಸಿ. ಆದ್ರೆ ದಾಂಪತ್ಯದಲ್ಲಿ ನೆಮ್ಮದಿ ಕಂಡುಕೊಂಡ ದಂಪತಿ ಯಾವುದೇ ಕಾರಣಕ್ಕೂ ಇನ್ನೊಬ್ಬರೊಂದಿಗೆ ತಮ್ಮ ಸಂಬಂಧವನ್ನು ಹೋಲಿಸಿ ನೋಡೋದಿಲ್ಲ. 

ಮನೆಯಲ್ಲಿಯೇ ನೋಡಿದ ಹುಡುಗಿ, ಹುಡುಗನನ್ನು ಮದುವೆಯಾಗೋ ಮುನ್ನ

ಸೋಷಿಯಲ್‌ ಮೀಡಿಯಾದ ಅಗತ್ಯವಿಲ್ಲ
ನೆಮ್ಮದಿಯ ದಾಂಪತ್ಯ ಬದುಕು ಸವಿಯುತ್ತಿರೋ ದಂಪತಿಗಳು ಸಂಬಂಧದಲ್ಲಿ ಪ್ರಾಮಾಣಿಕತೆಯನ್ನು ಕಾಯ್ದುಕೊಂಡಿರುತ್ತಾರೆ. ಅವರು ಸೋಷಿಯಲ್‌ ಮೀಡಿಯಾದಲ್ಲಿ ಬರೋ ಕಾಮೆಂಟ್ಸ್‌, ಲೈಕ್ಸ್‌ಗಳ ಆಧಾರದಲ್ಲಿ ತಮ್ಮ ದಾಂಪತ್ಯ ಬದುಕನ್ನು ಅಳೆಯಲು ಹೋಗೋದಿಲ್ಲ. ಇನ್ನೊಬ್ಬರನ್ನು ಮೆಚ್ಚಿಸೋದು ಇಲ್ಲವೆ ಹೊಟ್ಟೆಕಿಚ್ಚು ಪಡುವಂತೆ ಮಾಡೋ ಅಗತ್ಯ ಇವರಿಗಿಲ್ಲ. 

Follow Us:
Download App:
  • android
  • ios