Parenting tips : ಮಕ್ಕಳ ಜೊತೆ ಊಟ ಮಾಡುವುದರಿಂದ ಸಾಕಷ್ಟು ಲಾಭವಿದೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಅನೇಕ ವಿಷ್ಯಗಳನ್ನು ಇದರಿಂದ ಕಲಿಯುತ್ತಾರೆ. ಇದು ಅವರ ಜೀವನದಲ್ಲಿ ಮಹತ್ವದ ಪಾತ್ರವಹಿಸುತ್ತದೆ.

ಸಾಮಾನ್ಯವಾಗಿ ಬಹುತೇಕರ ಮನೆಗಳಲ್ಲಿ ಚಿಕ್ಕ ಮಕ್ಕಳಿಗೆ ಮೊದಲು ಊಟ ಮಾಡಿಸಿ ಮಲಗಿಸ್ತಾರೆ. ಆಮೇಲೆ ಪೋಷಕರು ಮತ್ತು ಮನೆಯಲ್ಲಿರುವ ದೊಡ್ಡ ಮಕ್ಕಳು ಒಟ್ಟಿಗೆ ಊಟ ಮಾಡ್ತಾರೆ. ಆದರೆ ಚಿಕ್ಕ ಮಕ್ಕಳನ್ನೂ ಕುಟುಂಬದ ಜೊತೆ ಕೂರಿಸಿಕೊಂಡು ಊಟ ಮಾಡಿಸುವ ಅಭ್ಯಾಸ ಬೆಳೆಸಿದರೆ, ಅವರ ಬೆಳವಣಿಗೆಗೆ ಹಲವು ರೀತಿಯಲ್ಲಿ ಪ್ರಯೋಜನ ಅನ್ನೋದು ನಿಮಗೆ ಗೊತ್ತಾ?

ಹಠ ಕಡಿಮೆಯಾಗುತ್ತೆ

ಕುಟುಂಬದ ಜೊತೆ ಕುಳಿತು ಊಟ ಮಾಡುವ ಪ್ರಿ-ಸ್ಕೂಲ್ ಮಕ್ಕಳಲ್ಲಿ ಆಹಾರದ ವಿಚಾರದಲ್ಲಿ ಹಠ ಮಾಡುವ ಪ್ರವೃತ್ತಿ ಕಡಿಮೆಯಾಗುತ್ತೆ. ಇಂತಹ ಮಕ್ಕಳು ಹಣ್ಣು ಮತ್ತು ತರಕಾರಿಗಳನ್ನು ತಿನ್ನುವ ಅಭ್ಯಾಸವನ್ನೂ ಬೆಳೆಸಿಕೊಳ್ಳಬಹುದು. ಮಕ್ಕಳಿಗೆ ಆಹಾರವನ್ನು ಮುಟ್ಟಿ, ಅದರ ರುಚಿ ನೋಡಿ, ಸ್ವತಃ ತಿನ್ನಲು ಅವಕಾಶ ನೀಡುವುದರಿಂದ ಅವರ ಇಂದ್ರಿಯಗಳ ಬೆಳವಣಿಗೆಗೂ ಸಹಾಯವಾಗುತ್ತೆ.

ನಿರ್ದಿಷ್ಟ ಸಮಯದ ಅಭ್ಯಾಸ

ಪ್ರತಿದಿನ ಕುಟುಂಬದ ಜೊತೆ ಊಟ ಮಾಡುವ ಅಭ್ಯಾಸದಿಂದ ಮಕ್ಕಳಿಗೆ ಸರಿಯಾದ ಸಮಯಕ್ಕೆ ಊಟ ಮಾಡುವ ರೂಢಿ ಬೆಳೆಯುತ್ತದೆ. ಇದರಿಂದ ಅವರ ಹಸಿವಿನ ಪ್ರಮಾಣವನ್ನು ಅರ್ಥಮಾಡಿಕೊಳ್ಳಲೂ ಪೋಷಕರಿಗೆ ಸಹಾಯವಾಗುತ್ತದೆ. ಮೊಬೈಲ್ ಅಥವಾ ಟಿವಿ ನೋಡುತ್ತಾ ಊಟ ಮಾಡುವ ಬದಲು, ಡೈನಿಂಗ್ ಟೇಬಲ್ನಲ್ಲಿ ಕುಳಿತು ಊಟ ಮಾಡಿದರೆ ಮಕ್ಕಳ ಗಮನ ಆಹಾರದ ಮೇಲಿರುತ್ತದೆ. ಜೊತೆಗೆ ಅಗತ್ಯಕ್ಕಿಂತ ಹೆಚ್ಚು ತಿನ್ನುವ ಅಪಾಯವೂ ಕಡಿಮೆಯಾಗಬಹುದು.

ಸಾಮಾಜಿಕ ಕೌಶಲ್ಯ ಕಲಿಕೆ

ಕುಟುಂಬದ ಎಲ್ಲರೂ ಸಂತೋಷದಿಂದ, ಒತ್ತಡವಿಲ್ಲದೆ ಒಟ್ಟಿಗೆ ಊಟ ಮಾಡುವುದರಿಂದ ಮಕ್ಕಳಲ್ಲಿ ಆಹಾರದ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುತ್ತದೆ. ಹೊಸ ಹೊಸ ರುಚಿಯ ಆಹಾರಗಳನ್ನು ಯಾವುದೇ ಒತ್ತಡವಿಲ್ಲದೆ ಪ್ರಯತ್ನಿಸಲು ಸಾಧ್ಯವಾಗುತ್ತದೆ. ಇದಲ್ಲದೆ, ಊಟದ ಸಮಯದಲ್ಲಿ ಪಾಲಿಸಬೇಕಾದ ಶಿಷ್ಟಾಚಾರಗಳನ್ನೂ ಮಕ್ಕಳು ಕಲಿಯುತ್ತಾರೆ. ಎಲ್ಲರ ಜೊತೆ ಹೇಗೆ ಕುಳಿತುಕೊಳ್ಳಬೇಕು, ಚಮಚ ಮತ್ತು ಫೋರ್ಕ್ ಬಳಸುವುದು ಹೇಗೆ, ಇತರರಿಗೆ ಸಣ್ಣಪುಟ್ಟ ಸಹಾಯ ಮಾಡುವುದು ಹೇಗೆ ಎಂಬುದನ್ನು ನಿಧಾನವಾಗಿ ಅರ್ಥಮಾಡಿಕೊಳ್ಳುತ್ತಾರೆ.

ನಿಮ್ಮ ಪ್ಲಾನ್‌ ಹೀಗಿರಲಿ

ಡಿನ್ನರ್ ಸಮಯವೇ ಆಗಬೇಕೆಂದಿಲ್ಲ. ಮಕ್ಕಳು ರಾತ್ರಿ ಊಟದ ಸಮಯದಲ್ಲಿ ಮಾತ್ರ ಕುಟುಂಬದ ಜೊತೆ ಸೇರಬೇಕು ಅಂತೇನಿಲ್ಲ. ಮಧ್ಯಾಹ್ನದ ಊಟ ಅಥವಾ ಭಾನುವಾರದ ಬೆಳಗಿನ ಉಪಾಹಾರದ ಸಮಯದಲ್ಲೂ ಎಲ್ಲರೂ ಒಟ್ಟಿಗೆ ಕುಳಿತು ತಿನ್ನಬಹುದು. ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿ. ಮಕ್ಕಳಿಗೆ ಪ್ರತ್ಯೇಕವಾದ ಸೂಕ್ತ ಕುರ್ಚಿಯ ವ್ಯವಸ್ಥೆ ಮಾಡಿ. ಅವರು ಕುರ್ಚಿಯಿಂದ ಕೆಳಗೆ ಬೀಳದಂತೆ ಮತ್ತು ಊಟ ಮಾಡುವಾಗ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಿ.

ಇಡೀ ಕುಟುಂಬ ತಿನ್ನುವ ಆಹಾರವನ್ನೇ ನೀಡಿ. ಮಕ್ಕಳಿಗೆ ಪ್ರತ್ಯೇಕವಾಗಿ ಬೇರೆ ಆಹಾರ ತಯಾರಿಸುವ ಬದಲು, ಮನೆಯವರೆಲ್ಲರೂ ತಿನ್ನುವ ಆಹಾರವನ್ನೇ ಅವರಿಗೂ ನೀಡಬಹುದು. ಆದರೆ ಮಕ್ಕಳ ವಯಸ್ಸಿಗೆ ಅನುಗುಣವಾಗಿ ಆಹಾರದ ಗಾತ್ರ ಮತ್ತು ವಿನ್ಯಾಸದಲ್ಲಿ ಬದಲಾವಣೆ ಮಾಡಬೇಕು. ಉದಾಹರಣೆಗೆ, ಚಿಕ್ಕ ಮಕ್ಕಳಿಗೆ ಗಟ್ಟಿಯಾದ ಕ್ಯಾರೆಟ್ ಅಥವಾ ಸೇಬನ್ನು ದೊಡ್ಡ ತುಂಡುಗಳಲ್ಲಿ ನೀಡುವ ಬದಲು, ಸುರಕ್ಷಿತವಾಗಿ ತಿನ್ನಲು ಅನುಕೂಲವಾಗುವಂತೆ ಮೃದುವಾಗಿ ಬೇಯಿಸಿ ಅಥವಾ ಸೂಕ್ತ ರೀತಿಯಲ್ಲಿ ತಯಾರಿಸಿ ಕೊಡಬಹುದು. ವಯಸ್ಸಿಗೆ ತಕ್ಕಂತೆ ಆಹಾರವನ್ನು ತಯಾರಿಸುವುದು ಮುಖ್ಯ.

ಒತ್ತಡ ಹಾಕಬೇಡಿ

ಮಕ್ಕಳು ತಟ್ಟೆಯಲ್ಲಿರುವ ಎಲ್ಲವನ್ನೂ ತಿನ್ನಲೇಬೇಕು ಎಂದು ಒತ್ತಾಯಿಸಬೇಡಿ. ಇದರಿಂದ ಅವರಿಗೆ ಊಟದ ಬಗ್ಗೆ ಒತ್ತಡ ಉಂಟಾಗಿ, ಆಹಾರದ ಮೇಲೆಯೇ ನಕಾರಾತ್ಮಕ ಭಾವನೆ ಬೆಳೆಯಬಹುದು. ಅವರ ಹಸಿವು ಮತ್ತು ಹೊಟ್ಟೆ ತುಂಬಿದ ಸೂಚನೆಗಳನ್ನು ಗೌರವಿಸಿ.

ಆಹಾರ ಚೆಲ್ಲಿದರೆ ಬೇಸರ ಬೇಡ

ಮಕ್ಕಳು ಊಟ ಮಾಡುವಾಗ ಬಟ್ಟೆ ಅಥವಾ ಟೇಬಲ್ ಮೇಲೆ ಆಹಾರ ಚೆಲ್ಲುವುದು ಸಹಜ. ಅದಕ್ಕಾಗಿ ಪದೇಪದೇ ಬೈಯಬೇಡಿ. ಆಹಾರವನ್ನು ಮುಟ್ಟಿ, ಅದರ ರಚನೆಯನ್ನು ತಿಳಿದುಕೊಂಡು, ಸ್ವತಃ ತಿನ್ನಲು ಕಲಿಯಲು ಅವರಿಗೆ ಅವಕಾಶ ನೀಡಿ. ಹೀಗೆ ಮಾಡಿದಾಗ ಊಟದ ಬಗ್ಗೆ ಆತ್ಮವಿಶ್ವಾಸ ಮತ್ತು ಸ್ವತಂತ್ರವಾಗಿ ತಿನ್ನುವ ಅಭ್ಯಾಸ ಬೆಳೆಸಿಕೊಳ್ಳಲು ಸಹಾಯವಾಗುತ್ತದೆ.