ಬಿಗ್‌ಬಾಸ್ ಶೋ ಸ್ಕ್ರಿಪ್ಟೆಡ್ ಎಂಬ ಆರೋಪಗಳ ನಡುವೆ, ಇತ್ತೀಚೆಗೆ ಕಿಚ್ಚ ಸುದೀಪ್ ಅವರು ಗಗನ್ ತಾಯಿಗೆ ಕ್ಷಮೆ ಕೇಳಿ ಭಾವುಕರಾಗಿದ್ದರು. ಇದನ್ನು ಕೆಲವರು ಟಿಆರ್‌ಪಿ ಗಿಮಿಕ್ ಎಂದು ಜಾಲತಾಣಗಳಲ್ಲಿ ಟೀಕಿಸಿದ್ದಾರೆ. ಆದರೆ, ಸುದೀಪ್ ಅವರ ಕಣ್ಣೀರನ್ನು ಸ್ಕ್ರಿಪ್ಟೆಡ್ ಎನ್ನುವವರ ಮನಸ್ಥಿತಿಯನ್ನು ನಟಿ ಸಂಗೀತಾ ಭಟ್ ತೀವ್ರವಾಗಿ ಖಂಡಿಸಿದ್ದಾರೆ.

ಬಿಗ್​ಬಾಸ್​ (Bigg Boss) ಅನ್ನೋದು ಒಂದು ಸ್ಕ್ರಿಪ್ಟೆಡ್​ ಷೋ ಎನ್ನುವ ಮಾತಿದೆ. ಅಲ್ಲಿ ಹೋಗಿ ಬಂದಿರುವ ಸ್ಪರ್ಧಿಗಳು ಇದೇನೂ ಸ್ಕ್ರಿಪ್ಟೆಡ್​ ಅಲ್ಲ, ಬದಲಿಗೆ ಜಗಳವಾಡುವಂಥ ವಾತಾವರಣ ಸೃಷ್ಟಿ ಮಾಡುತ್ತಾರಷ್ಟೇ. ಹೀಗೆಯೇ ಮಾತನಾಡಿ ಎಂದೇನೂ ಮೊದಲೇ ಹೇಳಿರುವುದಿಲ್ಲ ಎನ್ನುತ್ತಿದ್ದಾರೆ. ಕೆಲವು ಭಾಷೆಗಳ ಬಿಗ್​ಬಾಸ್​ನಲ್ಲಿ ಒಂದು ಹಂತ ಮೀರಿ ಹೋಗುವ ರೊಮಾನ್ಸ್​, ಅಶ್ಲೀಲತೆ ಮಟ್ಟ ತಲುಪುವ ಪ್ರೀತಿ, ಪ್ರೇಮ ಪ್ರಕರಣಗಳೆಲ್ಲವೂ ಸ್ಕ್ರಿಪ್ಟೆಡ್​ ಎಂಬ ಗಂಭೀರ ಆರೋಪವೂ ಇದೆ. ಟಿಆರ್​ಪಿ ಕುಸಿತ ಕಾಣುತ್ತಿದ್ದಂತೆಯೇ ಈ ರೀತಿಯ ಗಿಮಿಕ್​ಗಳನ್ನು ಮಾಡಲಾಗುತ್ತದೆ. ಇಂಥವೆಲ್ಲಾ ಬಂದಾಗ ಬಾಯಿ ಚಪ್ಪರಿಸಿಕೊಂಡು ನೋಡುವ ವರ್ಗ ಇರುವ ಹಿನ್ನೆಲೆಯಲ್ಲಿ, ಸಹಜವಾಗಿ ಷೋ ಮೇಲೆ ಆಸಕ್ತಿ ಮೂಡುತ್ತದೆ ಎಂದೆಲ್ಲಾ ಹೇಳುವವರು ಹಲವರು ಇದ್ದಾರೆ. ಇದೇ ಕಾರಣಕ್ಕೆ, ಬಿಗ್​ಬಾಸ್​​ ಷೋನಲ್ಲಿ ಏನೇ ನಡೆದರೂ ಅದು ಪೂರ್ವನಿಯೋಜಿತ ಎಂದೇ ಹಲವರು ಹೇಳುವುದು ಉಂಟು.

ಆದರೆ ಕೆಲವೊಮ್ಮೆ ಜನರ ಈ ಅನಿಸಿಕೆ, ನೈಜ ಘಟನೆಗಳನ್ನೂ ಸ್ಕ್ರಿಪ್ಟೆಡ್​, ಟಿಆರ್​ಪಿಗಾಗಿ ಮಾಡುವ ಗಿಮಿಕ್​ ಎಂದೆಲ್ಲಾ ಹೇಳಿಸಿಬಿಡುತ್ತದೆ. ಅದೇ ರೀತಿ ಬಿಗ್​ಬಾಸ್​ 13ರಂದು ಒಂದು ಹಂತದಲ್ಲಿ ಕಿಚ್ಚ ಸುದೀಪ್​ ಭಾವುಕರಾಗಿ ಕಣ್ಣೀರು ಹಾಕಿದ್ದರು. ಬಿಗ್ ಬಾಸ್ ರಿಯಾಲಿಟಿ ಶೋ ಸ್ಕ್ರಿಪ್ಟೆಡ್ ಎಂಬ ಪ್ರಶ್ನೆಯಿಂದ ಸುದೀಪ್ ಅವರು ಶೋ ಶುರು ಮಾಡಿದ್ದರು. ನಂತರ ಗಗನ್ ಚಿನ್ನಪ್ಪ ಮತ್ತು ತಾಂಡವ್ ನಡುವಿನ ಬಿಗ್ ಬಾಸ್ ಫೇವರಿಸಂ ಮಾಡುತ್ತಿದೆ ಎಂಬ ಹೇಳಿಕೆಗೆ ಸ್ಪಷ್ಟನೆ ಕೊಟ್ಟರು. ಇದಾದ ಬಳಿಕ, ಗಗನ್ ಕುಟುಂಬ ಹಾಗೂ ತಾಯಿ ವಿರುದ್ಧ ಗಾನವಿ ಹಗುರವಾಗಿ ಮಾತನಾಡಿದ್ದಕ್ಕೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಆ ಕ್ಷಣದಲ್ಲಿಲ ಸುದೀಪ್​ ಅವರು ತಮ್ಮ ತಾಯಿಯನ್ನು ನೆನೆದು ಭಾವುಕರಾದರು. ಶೋನಲ್ಲಿ ಗಾನವಿ ಆಡಿದ ಮಾತಿಗೆ ಗಗನ್ ತಾಯಿಗೆ ಸುದೀಪ್ ಕ್ಷಮೆ ಕೇಳಿ ಕಣ್ಣೀರು ಹಾಕಿದರು.

ಜಾಲತಾಣದಲ್ಲಿ ಪ್ರತಿಕ್ರಿಯೆ

ಆದರೆ, ಇದು ಸೋಷಿಯಲ್​ ಮೀಡಿಯಾದಲ್ಲಿ ಬೇರೆಯದ್ದೇ ರೀತಿಯಲ್ಲಿ ಧ್ವನಿಸಿತು. ಈ ಬಾರಿಯ ಬಿಗ್​ಬಾಸ್​​ ನೋಡುಗರ ಸಂಖ್ಯೆ ತೀವ್ರ ಮಟ್ಟದಲ್ಲಿ ಕುಸಿಯುತ್ತಿದೆ. ಇದೇ ಕಾರಣಕ್ಕೆ ಜನರನ್ನು ಹಿಡಿದಿಟ್ಟುಕೊಳ್ಳಲು ಸರ್ಕಸ್​ ಮಾಡಲಾಗುತ್ತಿದ್ದು, ಇದು ಕೂಡ ಅವುಗಳಲ್ಲಿ ಒಂದು ಎನ್ನುವ ಅಸಂಬದ್ಧ ಹೇಳಿಕೆಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಕೆಲವರು ಕೊಟ್ಟರು. ಮತ್ತೆ ಕೆಲವರು ಭಾವನೆಗಳನ್ನೂ ಸ್ಕ್ರಿಪ್ಟೆಡ್​ ಎನ್ನುವವರ ಬಗ್ಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಹೀಗೆ ಸುದೀಪ್​ ಭಾವುಕರಾದ ವಿಷಯ ವಿಭಿನ್ನ ರೀತಿಯಲ್ಲಿ ಗಮನ ಸೆಳೆಯಿತು.

ಅವರ ಮನಸ್ಥಿತಿ ತೋರಿಸುತ್ತದೆ

ಇದೀಗ ಬಿಗ್​ಬಾಸ್​ ಮನೆಯಿಂದ ಅನಾರೋಗ್ಯದ ಕಾರಣದಿಂದಾಗಿ ಹೊರಕ್ಕೆ ಬಂದಿರುವ ಸಂಗೀತಾ ಭಟ್​ ಅವರಿಗೆ ಪ್ರಶ್ನಿಸಲಾಗಿದೆ. ಈ ರೀತಿ ಮಾತನಾಡುವವರ ವಿರುದ್ಧ ಗರಂ ಆದ ನಟಿ, ಸುದೀಪ್​ ಸರ್​ ಅವರ ಇಮೋಷನ್​ ಅನ್ನು ಕಾಂಟೆಂಟ್​ಗಾಗಿ, ಸ್ಕ್ರಿಪ್ಟೆಡ್​ ಎನ್ನುವವರ ಮನಸ್ಥಿತಿ ತೋರಿಸುತ್ತದೆ ಎಂದಿದ್ದಾರೆ