Asianet Suvarna News Asianet Suvarna News

ಒಬ್ಬೊಬ್ಬರಾಗಿ ಬಂದು ಅಮ್ಮನ ಮುದ್ದಾಡಿದ ಹುಲಿಮರಿಗಳು: ವೈರಲ್ ವೀಡಿಯೋ

ತಾಯಂದಿರ ದಿನ ಏನು ಎಂಬುದರ ಅರಿವಿರದ ಹುಲಿಮರಿಗಳು ಕೂಡ ಆ ದಿನ ವಿಶೇಷವಾಗಿ ಸಂಭ್ರಮಿಸಿವೆ ನೋಡಿ. ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

One by one, tiger cubs come and cuddle with mom watch viral video akb
Author
First Published May 15, 2023, 8:15 PM IST

ನಿನ್ನೆಯಷ್ಟೇ ವಿಶ್ವ ತಾಯಂದಿರ ದಿನ ಮುಗಿದು ಹೋಯ್ತು, ವಿಶ್ವದಾದ್ಯಂತ ಜನ ವಿವಿಧ ರೀತಿಯಲ್ಲಿ ತಾಯಂದಿರ ದಿನವನ್ನು ಆಚರಿಸಿದರು. ಲಕ್ಷಾಂತರ ಜನ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ತಾಯೊಂದಿರಿಗೆ ಕಳೆದ ಕ್ಷಣದ ಫೋಟೋ ಹಾಕಿ ಖುಷಿ ಪಟ್ಟರು. ತಾಯನ್ನು ಕಳೆದುಕೊಂಡ ಅನೇಕರು ತಮ್ಮ ತಾಯನ್ನು ನೆನೆದು ಭಾವುಕರಾದರು. ಇದು ಮಾನವರಾದ ನಮ್ಮ ಕತೆಯಾದರೆ ಇದೇ ದಿನ ತಾಯಂದಿರ ದಿನ ಏನು ಎಂಬುದರ ಅರಿವಿರದ ಹುಲಿಮರಿಗಳು ಕೂಡ ಆ ದಿನ ವಿಶೇಷವಾಗಿ ಸಂಭ್ರಮಿಸಿವೆ ನೋಡಿ. ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

38 ಸೆಕೆಂಡ್‌ಗಳ ಈ ವಿಡಿಯೋನ್ನು ವಿಶ್ವ ತಾಯಂದಿರ ದಿನದ ಅಂಗವಾಗಿ @buitengebieden ಎಂಬ ಟ್ವಿಟ್ಟರ್‌ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ವೀಡಿಯೋದಲ್ಲಿ ಕಾಣಿಸುವಂತೆ ಈಗಾಗಲೇ ಪುಟ್ಟ ಹುಲಿಮರಿಯೊಂದು ಎತ್ತರದ ಬಂಡೆಗಳ ತಪ್ಪಲಿನಲ್ಲಿ ಮಲಗಿದ್ದರೆ ಅಲ್ಲಿಗೆ ಬಂದ ತಾಯಿ ತನ್ನ ಪುಟ್ಟ ಕಂದನ ಹತ್ತಿರವೇ ಬಂದು ತಾನು ನೆಲದಲ್ಲಿ ಮಲಗಿ ವಿಶ್ರಾಂತಿ ಪಡೆಯುತ್ತದೆ. ಈ ವೇಳೆ ತಾಯಿಯನ್ನು ಹಿಂಬಾಲಿಸಿಕೊಂಡು ಅಲ್ಲಿಗೆ ಬಂದ ಇನ್ನೊಂದು ಹುಲಿಮರಿ ತಾಯಿಯ ಮುಖದ ಬಳಿ ಬಂದು ತಾಯಿಯನ್ನೊಮ್ಮೆ ಮುದ್ದಾಡಿ ಅದರ ಮುಖದ ಬಳಿಯೇ ಬಂದು ಮಲಗುತ್ತದೆ. ಇದಾದ ಬಳಿಕ ಅಲ್ಲಿಗೆ ಬರುವ ಇನ್ನೊಂದು ಮರಿಯೂ ಅಮ್ಮನ ಬಳಿ ಬಂದು ಒಂದುಕ್ಷಣ ಮುದ್ದಾಗಿ ಪಕ್ಕದಲ್ಲೇ ಮಲಗುತ್ತದೆ. ಅದಾದ ನಂತರ ಬರುವ ಇನ್ನೊಂದು ಮರಿಯೂ ಕೂಡ ಅಮ್ಮನ ಮುಖದ ಬಳಿ ಬಂದು ಮುದ್ದಾಡಿ ಅಮ್ಮನ ಮತ್ತೊಂದು ಪಕ್ಕದಲ್ಲಿ ಮಲಗುತ್ತದೆ. ನಾಲ್ಕು ಮರಿಗಳು ಒಂದೊಂದಾಗಿ ಬಂದು ಅಮ್ಮನನ್ನು ಮುದ್ದಾಡುತ್ತಿರುವ ದೃಶ್ಯ ನೋಡುಗರ ಮನಕ್ಕೆ ಮುದ ನೀಡುತ್ತಿದೆ.

ಸಫಾರಿಗೆ ಹೋದವರ ಮೇಲೆ ಅಟ್ಟಿಸಿಕೊಂಡು ಹೋದ ವ್ಯಾಘ್ರ: ಪ್ರವಾಸಿಗರು ಜಸ್ಟ್ ಮಿಸ್!

ಈ ವಿಡಿಯೋವನ್ನು 9 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು,  ಅನೇಕರು ಕಾಮೆಂಟ್ ಮಾಡಿದ್ದಾರೆ.  ಈ ವಿಡಿಯೋ ನೋಡಿದ ಅನೇಕರು ಹಲವು ಮಕ್ಕಳಿದ್ದ ಬಾಲ್ಯದ ತಮ್ಮ  ತುಂಬು ಕುಟುಂಬದ ನೆನಪು ಮಾಡಿಕೊಂಡಿದ್ದಾರೆ. ಅನೇಕರು ಈ ವಿಡಿಯೋ ನೋಡಿ ತಾಯಿಯರ ದಿನದ ಶುಭಾಶಯ ಕೋರಿದ್ದಾರೆ.

ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಬಂಗಾಳದ ಬಿಳಿ ಹುಲಿ ಆಗಮನ: ಅಬ್ಬಾ! ಘರ್ಜನೆ ಕೇಳಿ

ತಬ್ಬಲಿ ಹುಲಿಮರಿಗಳಿಗೆ ಹಾಲು ನೀಡುತ್ತಾ ಅಮ್ಮನಂತೆ ಆರೈಕೆ ಮಾಡ್ತಿದೆ ಚಿಂಪಾಂಜಿ

ಕೆಲ ದಿನಗಳ ಹಿಂದೆ ಲ್ಯಾಬ್ರಡಾರ್‌ ತಳಿಯ ಶ್ವಾನವೊಂದು ತಬ್ಬಲಿ ಹುಲಿಮರಿಗಳಿಗೆ ಅಮ್ಮನಂತೆ ಪ್ರೀತಿ ತೋರಿ ಆರೈಕೆ ಮಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದೇ ರೀತಿ ಚಿಂಪಾಂಜಿಯೊಂದು ಮೂರು ಹುಲಿ ಮರಿಗಳಿಗೆ ಬಾಟಲ್ ಹಾಲು ಕುಡಿಸುತ್ತಾ ಆರೈಕೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಮೆರಿಕಾದ ದಕ್ಷಿಣ ಕೆರೊಲಿನಾದ ಮಿರ್ಟಲ್ ಬೀಚ್ ಸಫಾರಿಯಲ್ಲಿ ಕಂಡು ಬಂದ ದೃಶ್ಯ ಇದಾಗಿದ್ದು, ಚಿಂಪಾಜಿಯೊಂದು ತನ್ನದಲ್ಲದ ಹುಲಿಯ ಮರಿಗಳನ್ನು ತನ್ನ ಮಕ್ಕಳಂತೆ ಆರೈಕೆ ಮಾಡುತ್ತಿದೆ. ತಾಯಿ ತೊರೆದ ಮುದ್ದಾದ ಮರಿಗಳಿಗೆ ಈ ಚಿಂಪಾಜಿ ಬಾಟಲ್ ಹಾಲು ನೀಡುತ್ತ ಮಡಿಲಲ್ಲಿ ಮಲಗಿಸಿಕೊಂಡು ಎತ್ತಿ ಆಡಿಸುತ್ತಾ ಮುದ್ದಾಡುತ್ತಿದೆ. ಹುಲಿ ಮರಿಗಳು ಕೂಡ ಈ ಚಿಂಪಾಜಿಯಲ್ಲೇ ತಮ್ಮ ತಾಯಿಯನ್ನು ಕಾಣುತ್ತಿವೆ. 

ಮನುಷ್ಯರು ಮಾತ್ರವಲ್ಲ ಪ್ರಾಣಿಗಳು ಕೂಡ ಪರಸ್ಪರ ಸ್ನೇಹ ಬಾಂಧವ್ಯ ಬಯಸುತ್ತವೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಮನುಷ್ಯನೇ ಕೆಲವೊಮ್ಮೆ ತನ್ನ ಮಕ್ಕಳ ಹೊರತಾಗಿ ಬೇರೆ ಮಕ್ಕಳನ್ನು ತನ್ನ ಮಕ್ಕಳಂತೆ ನೋಡಲಾರ ಅಂತಹದರಲ್ಲಿ ಪ್ರಾಣಿಯೊಂದು ತನ್ನದಲ್ಲದ ಮುದ್ದು ಹುಲಿ ಮರಿಗಳನ್ನು ತನ್ನ ಮರಿಗಳಿಗಿಂತ ಮಿಗಿಲಾಗಿ ಆರೈಕೆ ಮಾಡುತ್ತಿದೆ. ಎಲ್ಲರ ಹೃದಯವನ್ನು ಭಾವುಕವಾಗಿಸಿದೆ. ಈ ವಿಡಿಯೋ ನೋಡಿದ ಅನೇಕರು ಈ ತಾಯಿ ಪ್ರೀತಿ ತೋರುತ್ತಿರುವ ಚಿಂಪಾಜಿಯ ಗುಣಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಐಎಫ್ಎಸ್ ಅಧಿಕಾರಿ ಸಮರ್ಥ್‌ ಗೌಡ ಅವರು ಈ ವಿಡಿಯೋವನ್ನುತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಸುಂದರ ದೃಶ್ಯಕ್ಕೆ ಸೂಕ್ತವಾದ ಶೀರ್ಷಿಕೆ ನೀಡಬಹುದೇ ಎಂದು ಅವರು ಬರೆದುಕೊಂಡಿದ್ದಾರೆ.  ಯಾವುದೇ ಶರತ್ತುಗಳಿಲ್ಲದ ತುಂಬಾ ಶುದ್ಧವಾದ ಪ್ರೀತಿ ಇದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

Follow Us:
Download App:
  • android
  • ios