ದಾವಣಗೆರೆ ಮೂಲದ ಚಾರ್ಟೆಡ್ ಅಕೌಂಟೆಂಟ್ ನಿಖಿಲ್ ಜೈನ್, ತಾವು ಸಲಿಂ*ಗಿ ಎಂದು ಒಪ್ಪಿಕೊಂಡು 'ಮಿಸ್ಟರ್ ಗೇ ವರ್ಲ್ಡ್ ಇಂಡಿಯಾ 2025' ಕಿರೀಟವನ್ನು ಗೆದ್ದಿದ್ದಾರೆ. ತಮ್ಮ ಗುರುತನ್ನು ಮುಚ್ಚಿಡದೆ, LGBTQIA+ ಸಮುದಾಯದ ಕುರಿತಾದ ತಪ್ಪು ಕಲ್ಪನೆಗಳನ್ನು ಮುರಿಯಲು ಮತ್ತು ಜಾಗತಿಕ ವೇದಿಕೆಯಲ್ಲಿ ಸಮುದಾಯದ ಪರವಾಗಿ ಧ್ವನಿ ಎತ್ತಲು ಅವರು ಪಣತೊಟ್ಟಿದ್ದಾರೆ.
ಸಲಿಂ*ಗಿಗಳು, ಲೈಂ*ಗಿಕ ಅಲ್ಪಸಂಖ್ಯಾತರು, ಲೆಸ್ಬಿಯನ್ಸ್ ಇಂಥ ಜನರನ್ನು ನೋಡಿದಾಗ ಅವರ ಬಗ್ಗೆ ಅದೆಷ್ಟೋ ಮಂದಿ ಅಸಹ್ಯ ಭಾವನೆ ಮೂಡುವುದು ಸಹಜ. ಆದರೆ ಇವರನ್ನು ಮಾತನಾಡಿಸದರೆ ತಿಳಿಯುವ ಸತ್ಯವೇನೆಂದರೆ, ನಮಗೆ ದೇವರು ಕೊಟ್ಟ ಶಾಪ ಇದು. ನೀವು ಹಾಗೆ ಹುಟ್ಟಿದ್ದೀರಿ, ನಾವು ಹೀಗೆ ಹುಟ್ಟಿದ್ದೇವೆ, ಇದರಲ್ಲಿ ನಮ್ಮದೇನು ತಪ್ಪಿದೆ ಎನ್ನುವುದು. ಇದಾಗಲೇ ಲೈಂ*ಗಿಕ ಅಲ್ಪಸಂಖ್ಯಾತರು ವಿಭಿನ್ನ ಹುದ್ದೆಗಳನ್ನು ಏರಿದ್ದಾರೆ. ರಸ್ತೆ ಬದಿಗಳಲ್ಲಿ ಭಿಕ್ಷೆ ಬೇಡುವವರ ಸಂಖ್ಯೆ, ಅವರಲ್ಲಿ ಕೆಲವರು ನೀಡುವ ಹಿಂಸೆಯಿಂದಾಗಿ ಈ ಸಮುದಾಯದ ಮೇಲೆ ಕೆಟ್ಟ ಮನೋಭಾವ ಬೆಳೆದಿರುವುದು ನಿಜವಾದರೂ, ಅವರಲ್ಲಿಯೇ ಕೆಲವರು ಎಲ್ಲವನ್ನೂ ಮೀರಿ, ತಮ್ಮ ದೈಹಿಕ ನ್ಯೂನ್ಯತೆಗಳನ್ನೂ ಮೀರಿ ಅಪಾರ ಸಾಧನೆ ಮಾಡಿದ್ದಾರೆ. ಅಂಥವರಲ್ಲಿ ಒಬ್ಬರು ದಾವಣಗೆರೆಯ ಮೂಲದ ಚಾರ್ಟೆಡ್ ಅಕೌಂಟೆಂಟ್ (CA) ನಿಖಿಲ್ ಜೈನ್.
ಒಂದು ಗಂಡಿಗೆ ಒಂದು ಹೆಣ್ಣು ಎನ್ನುವ ಮಾತಿದೆ. ಆದರೆ ಪ್ರಕೃತಿ ಇದಕ್ಕೆ ವಿರುದ್ಧವಾದ ಸೃಷ್ಟಿಯನ್ನೂ ಮಾಡಿಬಿಡುತ್ತದೆ. ಅಂಥವರಲ್ಲಿ ಗಂಡಿಗೆ ಗಂಡು, ಹೆಣ್ಣಿಗೆ ಹೆಣ್ಣು ಅಟ್ರಾಕ್ಟ್ ಆಗುವ ಸಲಿಂ*ಗಿಗಳು. ಆದರೆ ಇದನ್ನು ಮುಚ್ಚಿಟ್ಟು ಮದುವೆಯಾಗಿ ಕೊನೆಗೆ ಸಂಗಾತಿಯ ಜೀವನವನ್ನೇ ಹಾಳು ಮಾಡುವ ಉದಾಹರಣೆಗಳೂ ಸಾಕಷ್ಟಿವೆ. ಹೆಣ್ಣನ್ನು ಕಂಡಾಗ ಗಂಡು ಅಥವಾ ಗಂಡನ್ನು ಕಂಡಾಗ ಹೆಣ್ಣು ಆಕರ್ಷಣೆಗೆ ಒಳಗಾಗದೇ ಇದ್ದರೆ ದಾಂಪತ್ಯ ಜೀವನ ನಡೆಯುವುದಾದರೂ ಹೇಗೆ? ಆದರೆ ಇಂಥ ಸುಳ್ಳುಗಳನ್ನು ಹೇಳಿ ಬದುಕಿ ಇನ್ನೊಬ್ಬ ಹೆಣ್ಣಿನ ಜೀವನ ಹಾಳು ಮಾಡಲು ಇಷ್ಟವಿಲ್ಲದೇ ನಾನು ಸಲಿಂ*ಗಿ (Gay) ಎಂದು ಒಪ್ಪಿಕೊಂಡು, ಇದೇ ಹೆಸರಿನಲ್ಲಿಯೇ ಸಾಧನೆ ಮಾಡುವ ಪಣತೊಟ್ಟೆ ಎಂದಿದ್ದಾರೆ. 'ಮಿಸ್ಟರ್ ಗೇ ವರ್ಲ್ಡ್ ಇಂಡಿಯಾ 2025' (Mr Gay World India 2025) ಕಿರೀಟವನ್ನು ಮುಡಿಗೇರಿಸಿಕೊಂಡ ನಿಖಿಲ್.
ಪ್ರಕೃತಿ ನೀಡಿದ್ದು, ನಮ್ಮ ತಪ್ಪೇನು
ಬಾಸ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ನಿಖಿಲ್ ಅವರು, ಸಲಿಂ*ಗಿಗಳ ಜೀವನದ ಬಗ್ಗೆ ಮಾತನಾಡಿದ್ದಾರೆ. ಬಾಲ್ಯದಲ್ಲಿಯೇ ಹಲವರಿಗೆ ಇದರ ಬಗ್ಗೆ ತಿಳಿಯುತ್ತದೆ. ಗಂಡಾಗಿದ್ದರೆ ಹೆಣ್ಣಿನ ಕಡೆ ಆಕರ್ಷಣೆ ಆಗುವುದೇ ಇಲ್ಲ. ಆದರೆ ಇದಕ್ಕೆ ಕಾರಣವೇನು, ಇದಕ್ಕೂ ಒಂದು ಶಬ್ದ ಇದ್ಯಾ ಎನ್ನುವುದು ತಿಳಿಯುವುದಿಲ್ಲ. ನನಗೂ ಹಾಗೆಯೇ ಆಯಿತು. ಹೆಣ್ಣುಗಳನ್ನು ಕಂಡರೆ ಪೂಜ್ಯ ಭಾವನೆ ಬರುತ್ತಿತ್ತೇ ವಿನಾ, ಆಕರ್ಷಣೆ ಬರುತ್ತಿರಲಿಲ್ಲ. ನನ್ನ ಸ್ನೇಹಿತರೆಲ್ಲಾ ಹೆಣ್ಣಿನ ಕಡೆಗೆ ಒಲವು ತೋರಿದರೆ ನನಗೆ ಮಾತ್ರ ಗಂಡಿನ ಕಡೆ ಒಲವು ಬರುತ್ತಿತ್ತು. ಇದೇನು ಎಂದು ಗೊತ್ತಾಗಲಿಲ್ಲ ಎಂದು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ ನಿಖಿಲ್. ಸೋಷಿಯಲ್ ಮೀಡಿಯಾ ಈಗ ಸ್ಟ್ರಾಂಗ್ ಆಗಿರುವ ಕಾರಣ, ಅದರಲ್ಲಿ ಸರ್ಚ್ ಮಾಡಿದಾಗಲೇ ಇದಕ್ಕೆ ಗೇ ಎನ್ನುತ್ತಾರೆ ಎನ್ನುವುದನ್ನು ಅರಿತೆ. ಇದನ್ನು ನನ್ನ ಕುಟುಂಬದವರು ಒಪ್ಪುವುದು ತೀರಾ ಕಷ್ಟವಾಯಿತು. ಸಮಾಜ ನಮ್ಮಂಥವರನ್ನು ನೋಡುವ ರೀತಿಯೇ ಬೇರೆ ಇರುತ್ತದೆ. ಆದರೆ ಪ್ರಕೃತಿ ನಮ್ಮ ದೇಹವನ್ನು ಆ ರೀತಿ ಮಾಡಿರುತ್ತದೆ. ನಾವು ಹೀಗೆಯೇ ಹುಟ್ಟಬೇಕು ಎಂದು ಕೇಳಿಕೊಂಡು ಬಂದಿರುವುದಿಲ್ಲ ಎನ್ನುವ ಮೂಲಕ ಇದೇ ದೇಹ ಸ್ಥಿತಿಯಿಂದಲೇ ಪ್ರಖ್ಯಾತಿ ಗಳಿಸುವ ಛಲದೊಂದಿಗೆ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಕಿರೀಟ ಪಡೆದಿದ್ದಾರೆ ನಿಖಿಲ್.
ಸಮುದಾಯದ ಪರವಾಗಿ ಧ್ವನಿ
ಇವರು ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದು, LGBTQIA+ ಸಮುದಾಯದ ಪರವಾಗಿ ಧ್ವನಿ ಎತ್ತುತ್ತಿದ್ದಾರೆ. PwC ಮತ್ತು GE ನಂತಹ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ನಿಖಿಲ್, ಸಾಹಸ, ಯೋಗ ಮತ್ತು ಕಲೆಗೆ ಆದ್ಯತೆ ನೀಡುತ್ತಾರೆ. LGBTQIA+ ಸಮುದಾಯದ ಕುರಿತಾದ ಸ್ಟೀರಿಯೊಟೈಪ್‌ಗಳನ್ನು ಮುರಿಯುವುದು ಮತ್ತು ಸಮುದಾಯಕ್ಕೆ ಬಲ ತುಂಬುವುದು ತಮ್ಮ ಉದ್ದೇಶ ಎನ್ನುವ ನಿಖಿಲ್ ಅವರು ಸ್ಕೂಬಾ ಡೈವಿಂಗ್, ಫ್ರೀ ಡೈವಿಂಗ್ ಮತ್ತು ಯೋಗದಲ್ಲಿ ಪರಿಣತಿ ಪಡೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿಯೂ ಇವರು ಸಕ್ರಿಯರಾಗಿದ್ದು, ಬೆಂಗಳೂರಿನಲ್ಲಿ ನಡೆಯುವ ಕ್ವೀರ್ (queer) ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತಾರೆ.


