ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಮತ್ತು ಮಹಾಲಕ್ಷ್ಮಿ ಜೋಡಿಯ ಬಗ್ಗೆ ಟ್ರೋಲ್ ಮಾಡಿದವರಿಗೆ, ಸುಖಮಯ ದಾಂಪತ್ಯದ ಮೂಲಕ ತಕ್ಕ ಉತ್ತರ ನೀಡಿದ್ದಾರೆ. ಮಗ ಸಚಿನ್ ಜೊತೆಗಿನ ಫೋಟೋ ಶೇರ್ ಮಾಡಿ, ವಿಚ್ಛೇದನದ ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ.

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರ್ (Ravindra Chandrasekaran) ಮತ್ತು ಕಿರುತೆರೆ ನಿರೂಪಕಿ ಮಹಾಲಕ್ಷ್ಮಿ ನೆನಪಿರಬಹುದು. ರೂಪವೇ ಎಲ್ಲ ಎನ್ನುವವರ ಮಧ್ಯೆ, ಈ ಜೋಡಿ ವಿಭಿನ್ನವಾಗಿ ಕಾಣಿಸಿಕೊಂಡು ಸಾಕಷ್ಟು ಟ್ರೋಲ್​ಗೆ ಒಳಗಾಗಿತ್ತು. ಸುಂದರಿಯಂತಿರುವ ಮಹಾಲಕ್ಷ್ಮಿ ಅವರು ರವೀಂದರ್​ ಅವರನ್ನು ಮದುವೆಯಾಗಿದ್ದು ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು. ಇವರಿಬ್ಬರ ದಾಂಪತ್ಯ ಹೆಚ್ಚು ದಿನ ನಿಲ್ಲಲ್ಲ ಎಂದವರೇ ಹೆಚ್ಚು. ಮಹಾಲಕ್ಷ್ಮಿ ಅವರು ಹಣಕ್ಕಾಗಿ ಮದುವೆಯಾಗಿದ್ದಾರೆ, ಸ್ವಲ್ಪ ದಿನದಲ್ಲಿಯೇ ಡಿವೋರ್ಸ್​ ಕೊಟ್ಟು ಇಡೀ ಆಸ್ತಿ ಲಪಟಾಯಿಸುತ್ತಾರೆ ಎಂದೆಲ್ಲಾ ಇಲ್ಲಸಲ್ಲದ ಮಾತುಗಳನ್ನು ಆಡಿಕೊಂಡವರಿಗೇನೂ ಕಮ್ಮಿ ಇಲ್ಲ. ಸೆಲೆಬ್ರಿಟಿಗಳು ಹೇಗಿರಬೇಕು, ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ಕೂಡ ಅವರ ಅಭಿಮಾನಿಗಳೇ ಡಿಸೈಡ್​ ಮಾಡುವಷ್ಟರ ಮಟ್ಟಿಗೆ ನಮ್ಮ ಸಮಾಜ ಬೆಳೆದಿದ್ದರಿಂದ, ಸ್ಫುರದ್ರೂಪಿ ಅಲ್ಲ ಎನ್ನಿಸಿದವರನ್ನು ಮದುವೆಯಾದರೆ, ವಿಕೃತ ಮನಸ್ಥಿತಿಯವರಿಗೆ ಮೊದಲು ಬರುವುದೇ ಹಣದ ಚಿಂತೆ. ಹಣಕ್ಕಾಗಿಯೇಮದುವೆಯಾಗಿದ್ದಾರೆ ಎನ್ನುವುದು.

ಆದರೆ, ಇವೆಲ್ಲವನ್ನೂ ಮೀರಿ ಈ ಜೋಡಿ ಸುಖವಾಗಿ ಸಂಸಾರ ಮಾಡುತ್ತಿದೆ. ಕೆಲ ದಿನಗಳ ಹಿಂದಷ್ಟೇ ನಾಲ್ಕು ವರ್ಷದ ವೈವಾಹಿಕ ಜೀವನದ ವಾರ್ಷಿಕೋತ್ಸವದ ಕುರಿತು ಜೋಡಿ ತಿರುಪತಿಯಲ್ಲಿ ತೆಗೆದ ಫೋಟೋ ಶೇರ್​ ಮಾಡಿಕೊಂಡಿತ್ತು. ನಾಲ್ಕು ವರ್ಷಗಳ ಹಿಂದೆ ಇಲ್ಲಿಯೇ ಮೀಟ್​ ಆಗಿದ್ದು, ಇಂದು ಅಲ್ಲಿಗೆ ಬಂದಿದ್ದೇವೆ ಎಂದಿದ್ದರು ದಂಪತಿ. ಇದೀಗ ಮಗನ ಜೊತೆ ಜೋಡಿ ಕಾಣಿಸಿಕೊಂಡಿದೆ.

ಮಹಾಲಕ್ಷ್ಮಿ ಮಗ

ಅಂದಹಾಗೆ ಮಹಾಲಕ್ಷ್ಮಿ ಅವರಿಗೆ ಇದು ಎರಡನೆಯ ಮದುವೆ. ಮೊದಲ ಮದುವೆ ಅನಿಲ್ ನೆರೆಡಿಮಿಲ್ಲಿ (Anil Neradimilli) ಅವರ ಜೊತೆ ಆಗಿತ್ತು. ಈ ದಾಂಪತ್ಯದಿಂದ ಇವರಿಗೆ ಮಗ ಇದ್ದಾನೆ. ದಂಪತಿ 2019ರಲ್ಲಿ ವಿಚ್ಛೇದನ ಪಡೆದಿದ್ದಾರೆ. ಮಗನ ಹೆಸರು ಸಚಿನ್​. 2022ರಲ್ಲಿ ರವೀಂದರ್​ ಜೊತೆ ಮಹಾಲಕ್ಷ್ಮಿ ಮದುವೆಯಾದರು. ಮದುವೆಯಾದಾಗಿನಿಂದಲೂ ಸಾಕಷ್ಟು ಏಳುಬೀಳುಗಳನ್ನು ಜೋಡಿ ಕಂಡಿದ್ದು, ಟ್ರೋಲರ್ಸ್​ ಕಾಟ ಇನ್ನೊಂದೆಡೆ. ಇವರಿಬ್ಬರ ಮೇಲೆ ಮಾಡಿದ ಮೀಮ್ಸ್​ಗಳು ಅದೆಷ್ಟೋ, ಅಸಹ್ಯ ಎನ್ನುವ ಕಮೆಂಟ್ಸ್​ ಅವೆಷ್ಟೋ. ಇವೆಲ್ಲವುಗಳ ಹೊರತಾಗಿಯೂ ಆಡಿದವರ ಮಾತು ಅವರ ಬಾಯಲ್ಲೇ ಎನ್ನುವಂತೆ ಸುಖಮಯವಾಗಿ ದಾಂಪತ್ಯ ಜೀವನ ನಡೆಸುತ್ತಿದೆ.

ಫೋಟೋ ಶೇರ್​

ಇದೀಗ ಮಗ ಸಚಿನ್​ ಜೊತೆ ಜೋಡಿ ಫೋಟೋ ತೆಗೆಸಿಕೊಂಡಿದ್ದು, ಅದನ್ನು ಮಹಾಲಕ್ಷ್ಮಿ ಅವರು ಶೇರ್​ ಮಾಡಿದ್ದಾರೆ. ಅಂದು ಆಡಿಕೊಂಡವರೇ ಇಂದು ಈ ಜೋಡಿಯನ್ನು ಹೊಗಳುತ್ತಿದ್ದಾರೆ. ಅಷ್ಟಕ್ಕೂ ರೂಪ, ಬಣ್ಣ ಎಲ್ಲಾ ನೋಡಿ ಭರ್ಜರಿಯಾಗಿ ಮದುವೆಯಾದವರು ಒಂದೇ ವರ್ಷದಲ್ಲಿ ಡಿವೋರ್ಸ್​ ಮಾಡಿಕೊಂಡ ಸಾಕಷ್ಟು ಉದಾಹರಣೆ ನಮ್ಮ ಕಣ್ಣ ಮುಂದೆಯೇ ಇವೆ. ಅವರ ನಡುವೆ ಈ ಜೋಡಿ ಉದಾಹರಣೆಯಾಗಿ ನಿಂತಿದ್ದಾರೆ. ಮಗನ ಜೊತೆ ನೂರ್ಕಾಲ ಸುಖವಾಗಿ ಬಾಳಿ ಎಂದು ಹಿತೈಷಿಗಳು ಹಾರೈಸುತ್ತಿದ್ದಾರೆ.

ಮಹಾಲಕ್ಷ್ಮಿ ಕೇವಲ ನಿರೂಪಕಿ ಜೊತೆ ಕಿರುತೆರೆ ನಟಿ ಕೂಡ. ರವೀಂದರ್ ಅವರ ಜೊತೆಯಲ್ಲಿ ಅನೇಕ ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದಾರೆ. ರವೀಂದರ್ ನಿರ್ಮಾಣ ಮಾಡಿದ ಧಾರಾವಾಹಿಯಲ್ಲಿ ಮಹಾಲಕ್ಷ್ಮಿ ನಟಿಸಿದ್ದಾರೆ. ಸೆಟ್​ನಲ್ಲಿಯೇ ಇವರ ಲವ್​ ಶುರುವಾಗಿ, ಮದುವೆಯವರೆಗೆ ಬಂದಿದೆ. ಇದೇ ಸಂದರ್ಭದಲ್ಲಿ ದಂಪತಿಗಳು ಬೇರ್ಪಟ್ಟಿದ್ದಾರೆ ಎಂಬ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಮಹಾಲಕ್ಷ್ಮೀ ಮತ್ತು ರವೀಂದರ್​ ಒಟ್ಟಿಗೆ ಇರುವ ಫೋಟೋಗಳನ್ನು ಪೋಸ್ಟ್​ ಮಾಡುವ ಮೂಲಕ ಸುಳ್ಳು ಸುದ್ದಿ ಹರಡುವವರಿಗೆ ತಿರುಗೇಟು ನೀಡಿದ್ದಾರೆ.