ತಮಿಳು ನಿರ್ಮಾಪಕ ರವೀಂದರ್ ಮತ್ತು ನಿರೂಪಕಿ ಮಹಾಲಕ್ಷ್ಮಿ ದಂಪತಿ ತಮ್ಮ ಬಾಹ್ಯ ರೂಪದ ಕಾರಣಕ್ಕೆ ಸದಾ ಟ್ರೋಲ್ ಆಗುತ್ತಿರುತ್ತಾರೆ. ಇದೀಗ ತಿರುಪತಿಗೆ ಭೇಟಿ ನೀಡಿರುವ ಮಹಾಲಕ್ಷ್ಮಿ, ತಮ್ಮ ಪ್ರೀತಿಯ ಬಗ್ಗೆ ಕುತೂಹಲಕಾರಿ ಪೋಸ್ಟ್ ಹಂಚಿಕೊಂಡಿದ್ದಾರೆ. ಪ್ರೀತಿ ಎಂದರೆ ಇತರರ ಕಮೆಂಟ್ ಅಲ್ಲ, ಪರಸ್ಪರ ಕಾಳಜಿ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

ಬೆಂಗಳೂರು: ಕಳೆದ 3-4 ವರ್ಷಗಳಿಂದ ಅತಿ ಹೆಚ್ಚು ಟ್ರೋಲ್​ಗೆ ಒಳಗಾಗಿರುವ ದಂಪತಿ ಎಂದರೆ ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರ್ (Ravindra Chandrasekaran) ಮತ್ತು ಕಿರುತೆರೆ ನಿರೂಪಕಿ ಮಹಾಲಕ್ಷ್ಮಿ. ಕಳೆದ ಸೆಪ್ಟೆಂಬರ್ 1ರಂದು ತಿರುಪತಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಾಗಿನಿಂದಲೂ ಇವರ ಮದುವೆ ವಿಚಾರಕ್ಕೆ ಬಹಳಷ್ಟು ಟ್ರೋಲ್​ ಆಗುತ್ತಲೇ ಇದ್ದಾರೆ. ಎಲ್ಲಿ ನೋಡಿದರೂ ಇವರದ್ದೇ ವಿಷಯ. ಈ ಜೋಡಿ ಏನೇ ಮಾಡಲಿ ಅದರ ಚರ್ಚೆ ಭಾರಿ ಜೋರಾಗಿ ನಡೆಯುತ್ತದೆ. ಇದಕ್ಕೆ ಕಾರಣ ಈ ಜೋಡಿಯ ಲುಕ್​. ಅತ್ಯಂತ ಸುಂದರಿಯಾಗಿರುವ ಮಹಾಲಕ್ಷ್ಮಿ ಅವರು, ತೀರಾ ದಪ್ಪ ಇರುವ ರವೀಂದರ್​ ಜೊತೆ ಮದುವೆಯಾಗಿದ್ದಾರೆ ಎನ್ನುವ ಕಾರಣಕ್ಕೆ ಬಾಹ್ಯ ರೂಪ ನೋಡಿ ಟ್ರೋಲ್​ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲಿಯೂ ಮದುವೆಯಾಗದ ಹುಡುಗರು ಈ ಜೋಡಿಯನ್ನು ನೋಡಿ ಹೊಟ್ಟೆ ಉರಿದುಕೊಳ್ಳುತ್ತಿದ್ದರೆ, ಹುಡುಗಿಯರು ಈಕೆ ಹಣಕ್ಕಾಗಿಯೇ ಮದುವೆಯಾಗಿದ್ದಾರೆ ಎನ್ನುತ್ತಿದ್ದಾರೆ. ರವೀಂದರ್​​ ಅವರ ಆಸ್ತಿ ನೋಡಿ ಮದುವೆಯಾಗಿದ್ದಾರೆ, ಈ ಜೋಡಿ ಒಟ್ಟಾಗಿ ಇರುವ ಚಾನ್ಸೇ ಇಲ್ಲ ಎಂದವರೇ ಹೆಚ್ಚು.

ಜೋಡಿಯ ಲವ್​ ಸ್ಟೋರಿ

ಅಂದಹಾಗೆ ಮಹಾಲಕ್ಷ್ಮಿ ನಿರೂಪಕಿ ಜೊತೆ ಕಿರುತೆರೆ ನಟಿ ಕೂಡ. ರವೀಂದರ್ ಅವರ ಜೊತೆಯಲ್ಲಿ ಅನೇಕ ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದಾರೆ. ರವೀಂದರ್ ನಿರ್ಮಾಣ ಮಾಡಿದ ಧಾರಾವಾಹಿಯಲ್ಲಿ ಮಹಾಲಕ್ಷ್ಮಿ ನಟಿಸಿದ್ದಾರೆ. ಸೆಟ್​ನಲ್ಲಿಯೇ ಇವರ ಲವ್​ ಶುರುವಾಗಿ, ಮದುವೆಯಾಗಿದ್ದಾರೆ. ದಂಪತಿ ಬೇರ್ಪಟ್ಟಿದ್ದಾರೆ ಎಂಬ ಸುಳ್ಳು ಸುದ್ದಿಗಳು ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತವೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಮಹಾಲಕ್ಷ್ಮೀ ಅವರು ತಾವು ಮತ್ತು ರವೀಂದರ್​ ಒಟ್ಟಿಗೆ ಇರುವ ಫೋಟೋಗಳನ್ನು ಪೋಸ್ಟ್​ ಮಾಡುವ ಮೂಲಕ ಸುಳ್ಳು ಸುದ್ದಿ ಹರಡುವವರಿಗೆ ತಿರುಗೇಟು ನೀಡುತ್ತಲೇ ಇದ್ದಾರೆ.

ಪ್ರೀತಿ ಕುರಿತು ಮಹಾಲಕ್ಷ್ಮಿ

ಇದೀಗ ಅವರು ಕುತೂಹಲದ ಪೋಸ್ಟ್​ ಒಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಮದುವೆಯಾಗಿ ನಾಲ್ಕು ವರ್ಷಗಳ ಬಳಿಕ ಈ ಫೋಟೋ ಶೇರ್​ ಮಾಡಿದ್ದಾರೆ. ತಮ್ಮಿಬ್ಬರ ಪ್ರೀತಿ ಶುರುವಾಗಿದ್ದು ತಿರುಪತಿಯಿಂದ ಎನ್ನುತ್ತಲೇ ಪುನಃ ತಿರುಪತಿಗೆ ಭೇಟಿ ನೀಡಿರುವ ಫೋಟೋ ಶೇರ್​ಮಾಡಿಕೊಂಡಿದ್ದಾರೆ. ಎಲ್ಲವೂ ತಿರುಪತಿಯಲ್ಲಿಯೇ ಆರಂಭವಾಯಿತು... ನಮ್ಮ ಪ್ರಯಾಣ, ನಮ್ಮ ಜೀವನ ಮತ್ತು ಸುಂದರವಾದ ಹೊಸ ಆರಂಭವು 4 ವರ್ಷಗಳ ಹಿಂದೆ (ಸೆಪ್ಟೆಂಬರ್ 2022) ಈ ಸ್ಥಳದಿಂದ ಪ್ರಾರಂಭವಾಯಿತು ಎಂದು ಬರೆದಿದ್ದಾರೆ ಮಹಾಲಕ್ಷ್ಮಿ.

ಪ್ರೀತಿ ಎಂದರೆ ಇತರರು ಏನು ನೋಡುತ್ತಾರೆ, ಹೇಳುತ್ತಾರೆ ಅಥವಾ ಕಾಮೆಂಟ್ ಮಾಡುತ್ತಾರೆ ಎಂಬುದರಲ್ಲ. ನಾವು ಹೇಗೆ ಭಾವಿಸುತ್ತೇವೆ, ನಾವು ಒಬ್ಬರನ್ನೊಬ್ಬರು ಎಷ್ಟು ಕಾಳಜಿ ವಹಿಸುತ್ತೇವೆ ಮತ್ತು ನಾವು ಒಬ್ಬರನ್ನೊಬ್ಬರು ಹೇಗೆ ರಕ್ಷಿಸುತ್ತೇವೆ ಎಂಬುದರ ಬಗ್ಗೆ ಎಂದು ತಮ್ಮಿಬ್ಬರ ಜೋಡಿ ಬಗ್ಗೆ ಟೀಕಿಸಿದವರಿಗೆ ಮುಟ್ಟಿಕೊಳ್ಳುವ ಉತ್ತರ ನೀಡಿದ್ದಾರೆ ಮಹಾಲಕ್ಷ್ಮಿ. ನಾವು ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ, ಕಾಳಜಿ ವಹಿಸುತ್ತೇವೆ ಮತ್ತು ರಕ್ಷಿಸುತ್ತೇವೆ ಎಂದಿದ್ದಾರೆ. ಸೌಂದರ್ಯವೆ ಎಲ್ಲಾ ಎಂದು ಮದುವೆಯಾಗಿ, ವರ್ಷದಲ್ಲಿಯೇ ಬೇರೆಬೇರೆಯಾಗುವ ದಂಪತಿಗೆ ತಿರುಗೇಟು ನೀಡುವಂತಿದೆ ಮಹಾಲಕ್ಷ್ಮಿ ಮತ್ತು ರವೀಂದರ್​ ಜೋಡಿ.