ಹಿಂದಿ ಕಿರುತೆರೆ ನಟ ಮನೀಶ್ ನಾಗದೇವ್ ಮತ್ತು ಅವರ ಪತ್ನಿ ಮಲಿಕಾ ಜುನೇಜಾ ವಿವಾಹವಾದ ನಾಲ್ಕು ವರ್ಷಗಳ ನಂತರ ವಿಚ್ಛೇದನ ಪಡೆದಿದ್ದಾರೆ. ಭಿನ್ನಾಭಿಪ್ರಾಯಗಳಿಂದಾಗಿ ಪ್ರತ್ಯೇಕವಾಗಲು ನಿರ್ಧರಿಸಿದ ಈ ಜೋಡಿ, ಪರಸ್ಪರ ಒಪ್ಪಿಗೆಯ ಮೇರೆಗೆ ದೂರಾಗಿದ್ದಾರೆ.

ಮುಂಬೈ: ಒಂದೆಡೆ, ಸಿನಿಮಾ, ಕಿರುತೆರೆ ನಟ-ನಟಿಯರ ಮದುವೆಯ ಸಂಭ್ರಮ ಈ ಬಾರಿ ಹೆಚ್ಚಾಗಿದೆ. ಅದೇ ಇನ್ನೊಂದೆಡೆ ಡಿವೋರ್ಸ್​ ಕೂಡ ಸದ್ದು ಮಾಡುತ್ತಿದೆ. ಹಲವಾರು ಹಿಂದಿ ಸೀರಿಯಲ್​​ಗಳ ಮೂಲಕ ಫೇಮಸ್​ ಆಗಿರುವ ಕಿರುತೆರೆಯ ಜನಪ್ರಿಯ ನಟ ಮನೀಶ್ ನಾಗದೇವ್ (Manish Naggdev) ಮತ್ತು ಅವರ ಪತ್ನಿ ಮಲಿಕಾ ಜುನೇಜಾ (Malika Juneja) ವಿವಾಹವಾದ ನಾಲ್ಕು ವರ್ಷಗಳ ನಂತರ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆದಿದ್ದಾರೆ. ನವೆಂಬರ್ 2026ರ ಆರಂಭದಲ್ಲಿ ಇವರ ವಿಚ್ಛೇದನ ಪ್ರಕ್ರಿಯೆ ಕಾನೂನುಬದ್ಧವಾಗಿ ಪೂರ್ಣಗೊಂಡಿದೆ ಎಂದು ವರದಿಯಾಗಿದೆ. 'ಅನುಪಮಾ' (Anupamaa) ಮತ್ತು 'ಪವಿತ್ರ ರಿಶ್ತಾ' ಧಾರಾವಾಹಿಗಳ ಮೂಲಕ ಖ್ಯಾತರಾಗಿರುವ ಮನೀಶ್ ನಾಗದೇವ್, ಕಾರ್ಪೊರೇಟ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಮಲಿಕಾ ಜುನೇಜಾ ಅವರನ್ನು ಅಕ್ಟೋಬರ್ 2022ರಲ್ಲಿ ಪ್ರೀತಿಸಿ ವಿವಾಹವಾಗಿದ್ದರು.

ಸುಮಾರು ನಾಲ್ಕು ವರ್ಷಗಳ ದಾಂಪತ್ಯ ಜೀವನದ ಬಳಿಕ ಈ ಜೋಡಿ ಪ್ರತ್ಯೇಕವಾಗಲು ನಿರ್ಧರಿಸಿದೆ. ಇವರ ವಿಚ್ಛೇದನದ ಸುದ್ದಿ ಕಿರುತೆರೆ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ದಂಪತಿ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೂ ಸುಮಾರು ಆರು ತಿಂಗಳ ಕಾಲ ಪರಸ್ಪರ ಯಾವುದೇ ಮಾತುಕತೆ ನಡೆಸಿರಲಿಲ್ಲ. ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿದ್ದವು. ಈ ಭಿನ್ನಾಭಿಪ್ರಾಯಗಳು ಹೆಚ್ಚಾದಂತೆ ದಂಪತಿ ಮಾನಸಿಕವಾಗಿ ದೂರವಾಗಿದ್ದರು. ಕೊನೆಗೆ ಸಂಬಂಧವನ್ನು ಮುಂದುವರಿಸುವುದಕ್ಕಿಂತ ಪ್ರತ್ಯೇಕವಾಗಿರುವುದೇ ಉತ್ತಮ ಎಂಬ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಲಾಗಿದೆ.

ಮನೀಶ್​ ಹೇಳಿದ್ದೇನು|

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಮನೀಶ್, ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೂ ಕಳೆದ ಸುಮಾರು ಆರು ತಿಂಗಳಿನಿಂದ ಇಬ್ಬರ ನಡುವೆ ಮಾತುಕತೆ ಸಂಪೂರ್ಣವಾಗಿ ನಿಂತುಹೋಗಿತ್ತು ಎಂದು ಹೇಳಿದ್ದಾರೆ. ಸಣ್ಣಪುಟ್ಟ ವಿಚಾರಗಳಿಗೂ ಭಿನ್ನಾಭಿಪ್ರಾಯಗಳು ಮೂಡುತ್ತಿದ್ದವು ಮತ್ತು ಭಾವನಾತ್ಮಕವಾಗಿ ಇಬ್ಬರೂ ಬಹಳ ದೂರವಾಗಿದ್ದರು ಎಂದು ಅವರು ತಿಳಿಸಿದ್ದಾರೆ.

"ಇಬ್ಬರು ವ್ಯಕ್ತಿಗಳು ವೈಯಕ್ತಿಕವಾಗಿ ತುಂಬಾ ಒಳ್ಳೆಯವರಾಗಿರಬಹುದು, ಆದರೆ ಜೀವನ ಸಂಗಾತಿಗಳಾಗಿ ಪರಸ್ಪರ ಹೊಂದಾಣಿಕೆಯಾಗದೇ ಇರಬಹುದು" ಎಂದು ಮನೀಶ್ ಅಭಿಪ್ರಾಯಪಟ್ಟಿದ್ದಾರೆ. ಸಂಬಂಧ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದ ನಂತರ, ಯಾವುದೇ ಕೋಪ ಅಥವಾ ಆತುರವಿಲ್ಲದೆ ಬಹಳ ಯೋಚಿಸಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಆರಂಭದಲ್ಲಿ ಈ ನಿರ್ಧಾರವನ್ನು ಒಪ್ಪಿಕೊಳ್ಳುವುದು ಎರಡೂ ಕುಟುಂಬಗಳಿಗೆ ಕಷ್ಟಕರವಾಗಿತ್ತು. ಆದರೆ ದಂಪತಿ ಪರಿಸ್ಥಿತಿಯನ್ನು ಗೌರವಯುತವಾಗಿ ನಿಭಾಯಿಸಿದ ರೀತಿಯನ್ನು ಕಂಡು ಕುಟುಂಬಸ್ಥರು ಕೂಡ ಇವರ ನಿರ್ಧಾರವನ್ನು ಅರ್ಥಮಾಡಿಕೊಂಡು ಬೆಂಬಲಿಸಿದ್ದಾರೆ. ತಮ್ಮ ದಾಂಪತ್ಯ ಅಂತ್ಯಗೊಂಡಿದ್ದನ್ನು ಒಂದು ವೈಫಲ್ಯವಾಗಿ ನೋಡದೆ, ಜೀವನದ ಪಾಠವಾಗಿ ಸ್ವೀಕರಿಸಿ ಮುಂದೆ ಸಾಗುವುದಾಗಿ ಮನೀಶ್ ಹೇಳಿದ್ದಾರೆ