ಪ್ರೀತಿ ಮಾಡಲು ಅನುಮತಿ, ಅಪ್ರಾಪ್ತರ ಸೆಕ್ಸ್‌ಗೆ ಅನುಮತಿ ಇಲ್ಲ; ಹೈಕೋರ್ಟ್
ಪ್ರೀತಿ ಮಾಡಲು ಅನುಮತಿ ಇದೆ, ದೈಹಿಕ ಸಂಪರ್ಕಕ್ಕಿಲ್ಲ ಎಂದು ಹೈಕೋರ್ಟ್ ಹೇಳಿದೆ. ಈ ಮೂಲಕ ಪೋಕ್ಸೋ ಕಾಯ್ದೆಯಡಿ ಬಂಧಿತನಿಗೆ ಜಾಮೀನು ನೀಡಲು ನಿರಾಕರಿಸಿದೆ.
ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಸಂತ್ರಸ್ತೆ ಸ್ವಇಚ್ಛೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿರುವುದಾಗಿ ಪ್ರಮಾಣೀಕೃತ ಹೇಳಿಕೆ ನೀಡಿದ ಹೊರತಾಗಿಯೂ ಆರೋಪಿಗೆ ಜಾಮೀನು ನಿರಾಕರಿಸಿರುವ ಹೈಕೋರ್ಟ್, ‘ಹದಿನೆಂಟು ವರ್ಷದೊಳಗಿನ ಅಪ್ರಾಪ್ತರಿಗೆ ಪ್ರೀತಿ ಮಾಡಲು ಅನುಮತಿ ಇರಬಹುದೇನೋ ವಿನಾ ದೈಹಿಕ ಸಂಪರ್ಕ ಬೆಳೆಸಲು ಅಲ್ಲ’ ಎಂದು ತೀಕ್ಷ್ಣ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಬುಜ್ಜಿ ಅಲಿಯಾಸ್ ಬಾಬು (23) ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರ ನ್ಯಾಯಪೀಠ ಆದೇಶ ಮಾಡಿದೆ.
ಸಂತ್ರಸ್ತೆಯ ಸ್ವಯಂಕೃತ ಹೇಳಿಕೆಯನ್ನೇ ಮುಂದಿಟ್ಟು ಜಾಮೀನು ಕೋರಿದ ಆರೋಪಿಯ ಮನವಿಯನ್ನು ಒಪ್ಪದ ನ್ಯಾಯಪೀಠ, ‘ಪೋಕ್ಸೋ ಕಾಯ್ದೆ ಪ್ರಕಾರ 18 ವರ್ಷ ಒಳಗಿನವರು ಅಪ್ರಾಪ್ತರೆಂದು (Minor) ಪರಿಗಣಿಸಲ್ಪಡುತ್ತಾರೆ. ಈ ಪ್ರಕರಣದ ಸಂತ್ರಸ್ತೆ 18 ವರ್ಷ ಒಳಗಿನವರಾಗಿದ್ದಾರೆ. ಅವರು ಲೈಂಗಿಕ ಕ್ರಿಯೆಗೆ (Sex) ಸಮ್ಮತಿ ನೀಡಿದರೂ ಅದು ಸಮ್ಮತಿಯಾಗಿ ಪರಿಣಿಸಲ್ಪಡುವುದಿಲ್ಲ ಎಂಬುದಾಗಿ ಪೋಕ್ಸೋ ಕಾಯ್ದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಅದರಂತೆ ಅಪ್ರಾಪ್ತರ ಸಮ್ಮತಿ ಪರಿಗಣನೆಯಾಗುವುದಿಲ್ಲ’ ಎಂದು ಅಭಿಪ್ರಾಯಪಟ್ಟಿದೆ.
ಅಪ್ರಾಪ್ತರಿಗೆ ಕಾಂಡೋಮ್, ಗರ್ಭನಿರೋಧಕ ಮಾರಾಟ ನಿಷೇಧ: ವಿವಾದಕ್ಕೆ ಕಾರಣವಾಯ್ತು ಸುತ್ತೋಲೆ!
ಅಲ್ಲದೆ, ಜಾಮೀನು ಅರ್ಜಿ ತೀರ್ಮಾನಿಸುವಾಗ ನ್ಯಾಯಾಲಯ, ಪ್ರಕರಣದ ವಾಸ್ತವಾಂಶಗಳ ಕಂಡುಕೊಳ್ಳಲು (ಮೆರಿಟ್ ಅಥವಾ ಡಿಮೆರಿಟ್) ಸಣ್ಣ ಪ್ರಮಾಣದ ವಿಚಾರಣೆ (ಮಿನಿ ಟ್ರಯಲ್) ಮಾಡಲು ಸಾಧ್ಯವಿಲ್ಲ. ಅದು ಪ್ರಕರಣದ ವಿಚಾರಣೆ ಮೇಲೆ ಪೂರ್ವಾಗ್ರಹ ಬೀರಬಹುದು. ಸಂತ್ರಸ್ತೆಯ ಪ್ರಮಾಣಿಕೃತ ಹೇಳಿಕೆಯನ್ನು ವಿಚಾರಣೆ ವೇಳೆ ಪರೀಕ್ಷೆಗೆ ಗುರಿಪಡಿಸಬೇಕಿರುತ್ತದೆ. ವಿಚಾರಣಾ ನ್ಯಾಯಾಲಯ ವಿಚಾರಣೆ ಪೂರ್ಣಗೊಳಿಸಿ ತೀರ್ಮಾನ ಕೈಗೊಳ್ಳುವವರೆಗೂ, ಯಾವುದೇ ನ್ಯಾಯಾಲಯಕ್ಕೆ ಪೋಕ್ಸೋ ಪ್ರಕರಣದಲ್ಲಿ ಆರೋಪಿಯ ಪಾತ್ರದ ಬಗ್ಗೆ ನಿರ್ದಿಷ್ಟಅಭಿಪ್ರಾಯ ವ್ಯಕ್ತಪಡಿಸಲು ಮುಕ್ತ ಅವಕಾಶವಿಲ್ಲ ಎಂದು ನ್ಯಾಯಪೀಠ ಸ್ಪಷ್ಪಪಡಿಸಿದೆ.
ಪ್ರೇಮ ವ್ಯವಹಾರ ಪ್ರಕರಣ ವಿಭಿನ್ನವಾಗಿ ನಿಲ್ಲುತ್ತದೆ. ಅಪಾಪ್ತರಿಗೆ ಪ್ರೀತಿ (Love) ಮಾಡಲು ಅನುಮತಿ ಇರಬಹುದೇನೋ, ಆದರೆ ಖಂಡಿತವಾಗಿ ದೈಹಿಕ ಸಂಪರ್ಕ ಬೆಳೆಸಲು ಅಲ್ಲ. ದೈಹಿಕ ಸಂಪರ್ಕ ಬೆಳೆಸಲು ಅನುಮತಿ ಇದೆ ಎಂದಾದರೆ ಪೋಕ್ಸೊ ಕಾಯ್ದೆ ಜಾರಿ, ಪ್ರಕರಣ ದಾಖಲಾತಿ, ತನಿಖೆ ಮತ್ತು ವಿಚಾರಣೆಯ ಉದ್ದೇಶವೇ ವಿಫಲವಾಗುತ್ತದೆ. ಈ ಉದ್ದೇಶವನ್ನು ವಿಫಲಗೊಳಿಸುವ ನಿಟ್ಟಿನಲ್ಲಿ ನ್ಯಾಯಾಲಯಗಳು ತೀರ್ಪು ಕೈಗೊಳ್ಳಬಾರದು. ಹಾಗಾಗಿ, ಅರ್ಜಿದಾರನ ವಾದ ಒಪ್ಪಿ ಜಾಮೀನು ನೀಡಲಾಗದು ಎಂದ ಹೈಕೋರ್ಚ್, ಪ್ರಕರಣದ ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡ ನಂತರ ಸಾಂದರ್ಭಿಕ ಸನ್ನಿವೇಶಗಳು ಸಕಾರಾತ್ಮಕವಾಗಿ ಬದಲಾದರೆ ಜಾಮೀನಿಗೆ ಆರೋಪಿ ಕೋರ್ಚ್ ಮೊರೆ ಹೋಗಲು ಸ್ವತಂತ್ರನಿದ್ದಾನೆ ಎಂದು ತಿಳಿಸಿದೆ.
9 ವರ್ಷದ ಬಾಲಕಿ ಮೇಲೆ ಇಬ್ಬರು ಅಪ್ರಾಪ್ತರಿಂದ ರೇಪ್: ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್..!
ಪ್ರಕರಣದ ಹಿನ್ನೆಲೆ: ಪ್ರಕರಣದ ಆರೋಪಿ ವಿರುದ್ಧ ಬಾಲಕಿಯ ತಂದೆ ದೂರು ನೀಡಿದ್ದರು. ‘ಆರೋಪಿಯು 16 ವರ್ಷದ ಸಂತ್ರಸ್ತೆಯನ್ನು 2022ರ ಫೆ.14ರಂದು ನಂದಿಬೆಟ್ಟಸಮೀಪದ ನಿರ್ಜನ ಸ್ಥಳಕ್ಕೆ ಕರೆದೊಯ್ದ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದ. ನಂತರ ಸಂಬಂಧಿಕರ ಮನೆ ಬಾಡಿಗೆ ಪಡೆದು 2022ರ ಏ.4ರಿಂದ ಸಂತ್ರಸ್ತೆಯೊಂದಿಗೆ ನೆಲೆಸಿದ್ದ. ಏ.3ರಂದು ಬೆಳಗ್ಗೆ 9ಕ್ಕೆ ಸಂತ್ರಸ್ತೆಯನ್ನು ದೇವಸ್ಥಾನಕ್ಕೆ ಕರೆದೊಯ್ದು ತಾಳಿ ಕಟ್ಟಿಮದುವೆಯಾಗಿದ್ದ. ನಂತರ ಸತತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದ’ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು.ಜಾಮೀನು ಕೋರಿದ ಅರ್ಜಿಯನ್ನು ಅಧೀನ ನ್ಯಾಯಾಲಯ ತಿರಸ್ಕರಿಸಿದ್ದರಿಂದ ಆರೋಪಿ ಹೈಕೋರ್ಚ್ ಮೊರೆ ಹೋಗಿದ್ದ.
ಸಂತ್ರಸ್ತೆ ಹೇಳಿಕೆ:‘ದೊಡ್ಡಬಳ್ಳಾಪುರದ ಆಂಜನೇಯ ಸ್ವಾಮಿ ದೇವಸ್ಥಾನದ ಹೊರಗಡೆ ಆರೋಪಿ ನನಗೆ ಮಂಗಳ ಸೂತ್ರ ಕಟ್ಟಿದ್ದ. ನಂತರ ನಾವಿಬ್ಬರು ಗಂಡ-ಹೆಂಡತಿಯಂತೆ ಬದುಕಿದ್ದೆವು. ದಿನಬಿಟ್ಟು ದಿನ ಲೈಂಗಿಕ ಸಂಪರ್ಕ ಬೆಳೆಸಿದ್ದೆವು. ಅದಕ್ಕೆ ನನ್ನ ಸಮ್ಮತಿ ಇತ್ತು. ಆರೋಪಿ ನನ್ನೊಂದಿಗೆ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿಲ್ಲ. ನಾವಿಬ್ಬರು ಸಂತೋಷದಿಂದ ಜೀವಿಸುತ್ತಿದ್ದೆವು’ ಎಂದು ಅಧೀನ ನ್ಯಾಯಾಲಯದ ಮುಂದೆ ಸಂತ್ರಸ್ತೆ ಪ್ರಮಾಣಿಕೃತ ಹೇಳಿಕೆ ದಾಖಲಿಸಿದ್ದರು.
ಅದನ್ನು ಕೋರ್ಚ್‌ಗೆ ಸಲ್ಲಿಸಿದ ಅರ್ಜಿದಾರ ಪರ ವಕೀಲರು, ಸ್ವಯಂ ಪ್ರಮಾಣಿಕೃತ ಹೇಳಿಕೆ ಗಮನಿಸಿದರೆ ಪ್ರಕರಣದಲ್ಲಿ ಸಂತ್ರಸ್ತೆಯೊಂದಿಗೆ ಆರೋಪಿ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿಲ್ಲ. ಲೈಂಗಿಕ ಸಂಪರ್ಕ ಬೆಳೆಸಲು ಸಂತ್ರಸ್ತೆ ಒಪ್ಪಿಗೆ ನೀಡಿದ್ದರು. ಇದರಿಂದ ಪೋಕ್ಸೋ ಕಾಯ್ದೆ ಅನ್ವಯಿಸುವುದಿಲ್ಲ ಎಂಬುದಾಗಿ ಮೇಲ್ನೊಟಕ್ಕೆ ದೃಢಪಡಲಿದ್ದು, ಆರೋಪಿಗೆ ಜಾಮೀನು ನೀಡÜಬೇಕು ಎಂದು ಕೋರಿದ್ದರು.